ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಆಯುಕ್ತನಾಗಿ ಪ್ರಭಾರದಲ್ಲಿದ್ದು ದಿನಾಂಕ30/10/2026 ರಂದು ಬಿಡುಗಡೆಗೊಂಡಿದ್ದೇನೆ. ಈ ಅವಧಿಯಲ್ಲಿ ಸಮೀಕ್ಷೆಯ ಬಗ್ಗೆ ಒಂದಷ್ಟು ಅನುಭವಗಳು.
ಮೀಸಲಾತಿಯೆಂಬುದು ಡಾ.ಬಾಬಸಾಹೇಬ್ ಅಂಬೆಡ್ಕರ್ ರವರ ಕೊಡುಗೆ ಎಂದರೆ ತಪ್ಪಿಲ್ಲ. ಇಂದು ಇಂತಹ ಉತ್ತಮ ಸ್ಥಿತಿಯಲ್ಲಿ ನಾನಿದ್ದೇನೆ ಎಂದರೆ ಅದಕ್ಕೆ ಅಂಬೆಡ್ಕರವರ ಮೀಸಲಾತಿಯೇ ಕಾರಣ. ಮೀಸಲಾತಿ ಸೌಲಭ್ಯ ಪಡೆದ ನನ್ನಂತಹ ಕೊಟ್ಯಾಂತರ ಕುಟುಂಬಗಳ ಮನೆಯ ಬೆಳಕಾದವರು ಮತ್ತು ಸಮಾಜದ ಬೆಳಕಾದವರು ಅಂಬೇಡ್ಕರ್. ಸಮ ಸಮಾಜ ನಿರ್ಮಾಣವಾದಲ್ಲಿ ಮೀಸಲಾತಿ ಪ್ರಮುಖವಾದ ಪಾತ್ರವಹಿಸುತ್ತಿದೆ. ಸಮಸಮಾಜದ ಪರಿಕಲ್ಪನೆಗೆ ವಿಮುಖವಾದ ಜನರು ಮೀಸಲಾತಿ ಬೇಡವೆಂದು ಇತ್ತೀಚೆಗೆ ಅಭಿಯಾನವನ್ನೆ ಪ್ರಾರಂಭಿಸಿರುವುದು ಸಮಾಜದ ಮನುಷ್ಯತ್ವ ಮತ್ತು ನೈತಿಕತೆಯ ಅಧಃಪತನವನ್ನು ತೋರಿಸುತ್ತಿದೆ. ಈ ಬಗ್ಗೆ ಮಾತನಾಡುವ ಜನರು ಹೇಳುವ ಮಾತೊಂದಿದೆ ಮೀಸಲಾತಿಯಿಂದ ಪ್ರತಿಭಾವಂತರಿಗೆ ಅವಕಾಶ ತಪ್ಪಿ ಅನರ್ಹರಿಗೆ ಅವಕಾಶಗಳು ಸಿಕ್ಕು ಆಡಳಿತ ಕುಸಿಯುತ್ತಿದೆ ಎಂಬುದು. ಸಾರ್ವಜನಿಕ ಆಡಳಿತ ವ್ಯವಸ್ಥೆಯಲ್ಲಿ ತಳಮಟ್ಟದ ಆಡಳಿತದಲ್ಲಿ(field level) ಸಾಮಾನ್ಯ ವರ್ಗದಲ್ಲಿ ಆಯ್ಕೆ ಆದವರಿಗಿಂತ ಮೀಸಲಾತಿಯ ಸಹಾಯ ಪಡೆದು ಬಂದವರೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂಬುದನ್ನು ನಾನು ಎದೆತಟ್ಟಿ ಹೇಳಬಲ್ಲೆ. ಮೀಸಲಾತಿ ಪಡೆಯುವವರೆಲ್ಲ ದಡ್ಡರೆಂದು ತಪ್ಪುಭಾವಿಸಿರುವುದು ಕಾರಣವಿರಬಹುದು. ಮೀಸಲಾತಿ ಪಡೆಯುವವರು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದವರಿಗಿಂತ ಒಂದೆರಡು ಪರ್ಷೆಂಟ್ ಕಡಿಮೆ ಅಂಕ ಪಡೆದವರಷ್ಟೆ ಆಗಿರುತ್ತಾರೆಯೇ ಹೊರತು ಅನರ್ಹರೇನಲ್ಲ. ಅಂಕಗಳಿಂದಲೆ ಬುದ್ದಿವಂತಿಕೆಯನ್ನಳೆಯಲಾಗದು ಎಂಬ ಶೈಕ್ಷಣಿಕ ವಿಚಾರದಾರೆಗಳಿವೆ. ಥಾಮಸ್ ಆಳ್ವ ಎಡಿಸನ್, ಐನ್ ಸ್ಟೆನ್ ನಂತಹ ನೂರಾರು ಸಾದಕರು ಶಾಲಾ ಶಿಕ್ಷಣದಲ್ಲಿ ಫೇಲಾದವರೆ. ನನ್ನದೆ ಒಂದು ಉದಾಹರಣೆ ಹೇಳಬಹುದಾದರೆ ಶಾಲೆಯಲ್ಲಿ ಅತಿ ದಡ್ಡ ವಿಧ್ಯಾರ್ಥಿ. ಕೆ.ಎ.ಎಸ್ ಅಧಿಕಾರಿಯಾಗುವ ಮುನ್ನ ಕಂಪ್ಯೂಟರ್ ನೋಡದ ಮುಟ್ಟದ ಹಾಗು ಗೊತ್ತಿಲ್ಲದವನಾಗಿದ್ದೆ. ಕಲಾವಿಭಾಗದ ವಿಧ್ಯಾರ್ಥಿಯಾಗಿದ್ದೆ. ಕನ್ನಡ ಸಂಸ್ಕೃತಿ ನಿರ್ದೇಶಕನಾಗಿದ್ದಾಗ ರಾಜ್ಯದಲ್ಲಿ ಮೊದಲ ಇಲಾಖೆಯಾಗಿ ಇ-ಕಚೇರಿ ವ್ಯವಸ್ಥೆ ಅನುಷ್ಟಾನ ಮಾಡಿದೆ. ನನ್ನ ಬ್ಯಾಚ್ ನಲ್ಲಿ ಮತ್ತು ಹಿಂದು ಮುಂದಿನ ಬ್ಯಾಚ್ ನಲ್ಲಿ ಕಂಪ್ಯೂಟರ್ ಇಂಜಿನಿಯರ್ ಆದವರೆ ಇದ್ದರು. ಉತ್ತಮ ರ್ಯಾಂಕ್ ಬಂದವರೆ ಆಗಿದ್ದರು. ಅವರಿಂದ ಆಗಲಿಲ್ಲವೇಕೆ ?. ವಿಪರ್ಯಾಸವೆಂದರೆ ಸಾಮಾನ್ಯ ವರ್ಗ ಎಂದುಕೊಂಡವರು ಸಹ ಇತರರಿಗಿಂತ ಶೇಕಡವಾರು ಹೆಚ್ಚು EWS ಮೀಸಲಾತಿ ಪಡೆದಿರುವುದನ್ನು ಕಾಣಬಹುದು. ದೇಶದಲ್ಲಿ ಶೇ 60 ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಹಿಂದುಳಿದ ವರ್ಗದವರಿಗೆ ಶೇ 27 ಆದರೆ ಶೇಕಡ 10 ಕ್ಕಿಂತಲೂ ಕಡಿಮೆ ಜನಸಂಖ್ಯೆ ಇರುವ ಸಾಮಾನ್ಯ ವರ್ಗದವರಿಗೆ ಶೇ 10 ರಷ್ಟು ಮೀಸಲಾತಿ ಇರುವುದು ವಿಪರ್ಯಾಸ. ಇದಕ್ಕಿಂತಲು ದುರಂತವೆಂದರೆ ಮೀಸಲಾತಿಯ ಸೌಲಭ್ಯ ಪಡೆದು ಆರ್ಥಿಕವಾಗಿ ಸಧೃಡರಾದ ಹಲವರು ಮೀಸಲಾತಿ ವಿರೋದಿಸುವವರಿದ್ದಾರೆ. ಅವರ ಮನಸ್ಥಿತಿಯು ಸಹ ಕ್ಷಮಾರ್ಹವಲ್ಲ. ಇವೆಲ್ಲ ಸಾಮಾನ್ಯ ದಿನನಿತ್ಯದ ಚರ್ಚೆಯ ವಿಷಯಗಳು ಇಲ್ಲಿ ಆತ್ಮಕತೆಗೇನು ಸೂಕ್ತವೆ ? ಅನಿಸಿರಬಹುದು. ಹೌದು ಆರ್ಥಿಕ ಸಂಕಷ್ಟಗಳ ನಡುವೆ ಯಾವ ಸೌಲಭ್ಯಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಬಂದು ಆತ್ಮಚರಿತ್ರೆ ರಚಿಸುವ ಮಟ್ಟಿನ ಏಳ್ಗೆಗೆಗೆ ಬೆನ್ನೆಲುಬಾದದ್ದು ಡಾ. ಬಿ ಆರ್ ಅಂಬೆಡ್ಕರ್ ರವರು ಸಂವಿದಾನದಲ್ಲಿ ಕಲ್ಪಿಸಿದ ಮೀಸಲಾತಿ ಸೌಲಭ್ಯವೇ ಆದ್ದರಿಂದ ಇದನ್ನು ನೆನೆಸಲೇಬೇಕಿದೆ. ಕೇವಲ ಮೀಸಲಾತಿ ಸೌಲಭ್ಯ ಪಡೆದದ್ದಲ್ಲದೆ ಹಿಂದುಳಿದ ವರ್ಗಗಳ ಮೀಸಲಾತಿ ಕಲ್ಪಿಸಲು ಶ್ರಮಿಸುವ ಹಿಂದುಳಿದ ವರ್ಗಗಳ ಆಯೋಗದಲ್ಲಿ ಸಂಧಿಗ್ದ ಸಮಯದಲ್ಲಿ ಸದಸ್ಯ ಕಾರ್ಯದರ್ಶಿಯಾಗಿ ನಾಲ್ಕು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಡಾ.ಜಯಪ್ರಕಾಶ್ ಹೆಗಡೆರವರ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗ ಮತ್ತು ಶ್ರೀ ಮಧುಸೂಧನ್ ನಾಯಕ್ ರವರ ಅದ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗದಲ್ಲಿ ಎರಡು ಬಾರಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದಲ್ಲದೆ, ಪಂಚಮಶಾಲಿ ಹೋರಾಟದ ಸಂಧರ್ಭದಲ್ಲಿ ಮಧ್ಯಂತರ ವರದಿ ನೀಡಿದ್ದೇವೆ.
ಮೀಸಲಾತಿ ವಿರೋಧಿಸುವವರ ವಿರೋಧದ ನಡುವೆಯೂ 54 ಪ್ರಶ್ಣಾವಳಿಗಳನ್ನು ತಯಾರಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಅನ್ನು ಯಶಸ್ವಿಯಾಗಿ ನಡೆಸಿ ರಾಜ್ಯದ 6.14 ಕೋಟಿ ಜನಸಂಖ್ಯೆಯ ದತ್ತಾಂಶ ಸಂಗ್ರಹಣೆಯನ್ನು ಮೊಬೈಲ್ ಆಪ್ ಬಳಸಿ ಆಧಾರ ಸಂಖ್ಯೆ ಆಧಾರದ ಮೂಲಕ ರಾಜ್ಯದ ಸುಮಾರು 1.65 ಲಕ್ಷ ಕುಟುಂಬಗಳನ್ನು ತಲುಪಿ ದತ್ತಾಂಶ ಸಂಗ್ರಹಿಸಲಾಗಿದೆ. ಇಂತಹ ಐತಿಹಾಸಿಕ ಕಾರ್ಯದ ಮುಂಚೂಣಿಯಲ್ಲಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮೀಸಲಾತಿ ಸೌಲಭ್ಯ ಪಡೆದಿದ್ದಕ್ಕೆ ನನ್ನ ಅಲ್ಪ ಋಣ ಸಂದಾಯವೆಂದೆ ಭಾವಿಸಿದ್ದೇನೆ. ಇಂತಹ ಅವಕಾಶವೊಂದು ಅನಿರೀಕ್ಷಿತವಾಗಿ ಒದಗಿ ಬಂದುದು ನನಗೆ ಅಪಾರ ಅನುಭವವನ್ನು ನೀಡಿದೆ ಅದರ ಹಿನ್ನೆಲೆಯಲ್ಲಿ ಕೆಲವು ಅಂಶಗಳನ್ನು ದಾಖಲಿಸುವುದು ಸೂಕ್ತವೆಂದು ಭಾವಿಸಿದ್ದೇನೆ.
ಬಿಬಿಎಂಪಿ ವಿಶೇಷ ಆಯುಕ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಉತ್ತರಾಖಂಡ್ ಚುನಾವಣೆ ವೀಕ್ಷಕನನ್ನಾಗಿ ನಿಯೋಜಿಸಲಾಗಿತ್ತು. ಜನವರಿ 27 ಬೆಳಿಗ್ಗೆ 11 ಗಂಟೆಗೆ ಪಯಣಿಸಲು ವಿಮಾನದ ಟಿಕೆಟ್ ಬುಕ್ ಆಗಿತ್ತು. ಹಿಂದಿನ ದಿನ ಬಿಬಿಎಂಪಿ ವಿಶೇಷ ಆಯುಕ್ತ ಹುದ್ದೆಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಹುದ್ದೆಗೆ ವರ್ಗಾವಣೆಯಾಗಿತ್ತು. ಒಂದು ತಿಂಗಳು ಚುನಾವಣ ಕಾರ್ಯವಿದ್ದರಿಂದ, ಮುಗಿಸಿ ಬಂದು ವರದಿ ಮಾಡಿಕೊಂಡರಾಯಿತು ಎಂದು ನಿರ್ಣಯಿಸಿ ಹೊರಡಲು ಲಗೇಜ್ ಪ್ಯಾಕ್ ಮಾಡಿಕೊಳ್ಳತೊಡಗಿದ್ದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಶ್ರೀಮತಿ ರಶ್ಮಿ ಮೇಡಂ ಕರೆ ಮಾಡಿ “ದಯಾನಂದ್ ಸಚಿವರು ಒಳ್ಳೆಯವರಿದ್ದಾರೆ ಅವರಿಗೆ ತಿಳಿಸಿ ಬೆಳಿಗ್ಗೆ ವರದಿ ಮಾಡಿಕೊಳ್ಳಿ” ಎಂದು ತಾಕೀತು ಮಾಡಿದರು. ಒಂದು ತಿಂಗಳು ಚುನಾವಣ ಕಾರ್ಯವಿದ್ದರಿಂದ, ಚುನಾವಣಾ ಕಾರ್ಯ ಮುಗಿಸಿ ಬಂದು ವರದಿ ಮಾಡಿಕೊಳ್ಳುವುದಾಗಿ ತಿಳಿಸಿದರು ಒಪ್ಪದೆ “ನೊ ನೊ ನಾಳೆ ಬೆಳಿಗ್ಗೆ ವರದಿ ಮಾಡಿಕೊಂಡೆ ಹೋಗಿ ಇ-ಆಫೀಸ್ ಇದೆ ಅಲ್ಲಿಂದಲೆ ಕೆಲಸ ಮಾಡಿ ಎಂದರು”. ಪ್ರಾಮಾಣಿಕತೆ ಮತ್ತು ಸರಳತೆಗೆ ಹೆಸರಾಗಿದ್ದ ಮಂಗಳೂರಿನಲ್ಲಿ ಅಪರ ಜಿಲ್ಲಾಧಿಕಾರಿಯಾಗಿದ್ದನಿಂದ ಪರಿಚತರಾಗಿದ್ದ ಈ ಹಿಂದೆ ಮುಜುರಾಯಿ ಸಚಿವರಾಗಿದ್ದಾಗ ನನ್ನನ್ನು ತಾವೆ ಒತ್ತಾಯಿಸಿ ಮುಜುರಾಯಿ ಇಲಾಖೆ ಆಯುಕ್ತನಾಗಿ ವರ್ಗಾವಣೆ ಮಾಡಿಸಿಕೊಂಡಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿವರಾಗಿದ್ದ ಮಾನ್ಯ ಶ್ರೀ ಶ್ರೀನಿವಾಸ ಪೂಜಾರಿಯವರು ಕರೆ ಮಾಡಿ ” ದಯಾನಂದ್ರೆ ನಾವು ಆಸೆಪಟ್ಟು ನಿಮ್ಮನ್ನ ನಮ್ಮ ಇಲಾಖೆಗೆ ಹಾಕೊಸ್ಕೊಂಡಿದ್ದೀವಿ ಪ್ರಧಾನ ಕಾರ್ಯದರ್ಶಿ ರಶ್ಮಿ ಮೇಡಂರವರು ಕೂಡ ನಿಮ್ಮನ್ನು ಶಿಪಾರಸ್ಸು ಮಾಡಿದ್ರು. ಚುನಾವಣ ಕಾರ್ಯ ಮಾಡಿ ಬೇಡ ಅಂತಲ್ಲ. ನಾಳೆ ಬೆಳಿಗ್ಗೆ ಕುಮಾರ ಕೃಪಕ್ಕೆ ಬೆಳಿಗ್ಗೆ 8 ಕ್ಕೆ ಬರ್ತೇನೆ ಹಾಗೇ ತಾವು ಏರ್ಪೋರ್ಟ್ ಗೆ ಹೊಗ್ತಾ ಭೇಟಿ ಮಾಡೋಣ ಮತ್ತು ಹಾಗೆ ಕರ್ತವ್ಯಕ್ಕೆ ವರದಿ ಮಾಡ್ಕೊಂಡೆ ಹೋಗಬೇಕು. ಇಲ್ಲ ಎಂಬ ಶಬ್ದವೇ ಇಲ್ಲ” ಎಂದು ಪೋನಿಟ್ಟರು. ಸ್ನೇಹಿತ ವಸಂತ್ ಕುಮಾರ್ ಆಯುಕ್ತರಾಗಿದ್ದರು ಅವರು ಕರೆ ಮಾಡಿ ವರದಿ ಮಾಡಿಕೊಳ್ಳಬೇಡ ನಾನೆ ಮುಂದುವರೆಯುತ್ತೇನೆ ಎಂದು ಒತ್ತಾಯಿಸತೊಡಗಿದೆನು. ಇಕ್ಕಟ್ಟಿನ ನಡುವೆ ಬೆಳಿಗ್ಗೆ ಸಚಿವರನ್ನು ಕುಮಾರಕೃಪದಲ್ಲಿ ಭೇಟಿ ಮಾಡಿ ಕಚೇರಿಗೆ ತೆರಳಿ ವರದಿ ಮಾಡಿಕೊಂಡು ಏರ್ಪೋರ್ಟ್ಗೆ ತೆರಳಿ ಚುನಾವಣ ಕಾರ್ಯದ ಜೊತೆಗೆ ಉತ್ತರಾಖಂಡ್ ನಿಂದಲೆ ಇಲಾಖೆಯ ಕರ್ತವ್ಯ ನಿರ್ವಹಿಸತೊಡಗಿದೆ. ಅನೀರೀಕ್ಷಿತವಾದರು ಹಿಂದುಳಿದ ವರ್ಗದವನೆ ಆದ ನನಗೆ ಆ ವರ್ಗದ ಮಕ್ಕಳ ಮತ್ತು ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ದಿಯ ಬಗ್ಗೆ ಕಾರ್ಯನಿರ್ವಹಿಸಲು ಬಹುದೊಡ್ಡ ಅವಕಾಶವೇ ದೊರೆತಂತಾಯಿತು.
ಬಜೆಟ್ ನಲ್ಲಿ ವಸತಿ ನಿಲಯದ ವಿಧ್ಯಾರ್ಥಿಗಳ ಘಟಕ ವೆಚ್ಚವನ್ನು ರೂ 1750 ರಿಂದ 1850 ರುಪಾಯಿಗಳಿಗೆ ಹೆಚ್ಚಿಸಲಾಗಿತ್ತು. ಈ ಅವಕಾಶವನ್ನು ಬಳಸಿಕೊಂಡು ಮಾನ್ಯ ಪ್ರಧಾನ ಕಾರ್ಯದರ್ಶಿಗಳ ಮಾರ್ಗದರ್ಶನದಲ್ಲಿ ಪುಡ್ ಚಾರ್ಟ್ ಬದಲಿಸಲಾಯಿತು. ನಿಲಯಾರ್ಥಿಗಳಿಗೆ ಭಾನುವಾರ ಚಿಕನ್ ಕೊಡಲಾಗುತಿತ್ತು. ಸಾಮಾನ್ಯವಾಗಿ ಮಕ್ಕಳು ಬಾನುವಾರ ಊರಿಗೆ ಹೋಗುವುದು ಅಥವಾ ಹೊರಗೆ ಹೊಗಿ ಊಟಮಾಡಿ ಬರುವುದರಿಂದ ಕೆಲವರು ಮಾತ್ರ ವಸತಿ ನಿಲಯದಲ್ಲಿ ಇರುತ್ತಿದ್ದರು. ಚಿಕನ್ ನೀಡುವುದು ನಾಮಕಾವಸ್ಥೆಯಾಗಿತ್ತು. ಆದ್ದರಿಂದ ವಾರದ ಮಧ್ಯದಲ್ಲಿ ಕಡ್ಡಾಯಗೊಳಿಸಲಾಯಿತು. ತರಭೇತಿ ನೀಡಿ ಪರಿಶೀಲನೆ ನಡೆಸುವ ಮೂಲಕ ಊಟದ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಿ ದೂರುಗಳು ಕಡಿಮೆಯಾದವು. ವಸತಿ ನಿಲಯಗಳಲ್ಲಿ ವಿಧ್ಯಾರ್ಥಿಗಳ ಮಂಜೂರಾತಿ ಸಂಖ್ಯೆಗಿಂತ ದುಪ್ಪಟ್ಟು ಭೇಡಿಕೆ ಇದ್ದುದರಿಂದ ಇರುವ ಸೌಲಭ್ಯದಲ್ಲಿಯೇ ಸಂಖ್ಯೆ ವಿಸ್ತರಿಸಲು ಸಚಿವರನ್ನು ಒಪ್ಪಿಸಿ, ಪ್ರಸ್ಥಾವನೆ ಸಲ್ಲಿಸಿ, ಸರ್ಕಾರದಿಂದ ಅನುಮೋದನೆ ಪಡೆದು ಶೇ 25 ರಷ್ಟು ವಸತಿ ನಿಲಯಗಳಲ್ಲಿ ವಿಧ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ ಆದೇಶವಾಯಿತು. ಇದರಿಂದ ಸುಮಾರು ಮುವತ್ತು ಸಾವಿರ ವಿಧ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶ ದೊರೆತಂತಾಯಿತು.
ಮುಖ್ಯವಾಗಿ ಆಯುಕ್ತರಾದವರು ಹಿಂದುಳಿದ ವರ್ಗಗಳ ಆಯೋಗದ ಸಧಸ್ಯ ಕಾರ್ದರ್ಶಿಯಾಗುವುದರಿಂದ ದೊರೆತ ಅವಕಾಶ ವಿಶೇವಾದದ್ದು. ಡಾ.ಅಂಬೆಡ್ಕರ್ ರವರು ಸಂವಿಧಾನದ ವಿಧಿ 15(4) ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ವಿಧಿ 16(4) ರಲ್ಲಿ ಜೀವನೋಪಾಯ ಸ್ಥಿತಿಗಳ ಮೇಲೆ ನೀಡಿದ ಮೀಸಲಾತಿಯನ್ನು ವಿದಿ 342 ರಲ್ಲಿ ರಾಜ್ಯ ತನ್ನದೆ ಆದ ಆಯೋಗವನ್ನು ಹೊಂದಿ ಮೀಸಲಾತಿಯ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಪಡೆದು ಮೀಸಲಾತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಮೌನ ಸಾಮಾಜಿಕ ಕ್ರಾಂತಿಯ ಹರಿಕಾರರಾದ ಡಾ.ಡಿ ದೇವರಾಜ ಅರಸು ರವರ ಸಮ ಸಮಾಜ ನಿರ್ಮಾಣದ ಪರಿಕಲ್ಪನೆಯಂತೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಡಾ.ಎಲ್.ಜಿ ಹಾವನೂರರವರನ್ನು 1972 ರಲ್ಲಿ ನೇಮಿಸಿ 1976 ರಲ್ಲಿ ವರದಿ ಪಡೆದು ಅನುಷ್ಟಾನಕ್ಕಾಗಿ ಎಲ್.ಜಿ ಹಾವನೂರರವರನ್ನೆ ಸಚಿವರನ್ನಾಗಿ ನೇಮಿಸಿ ಮೀಸಲಾತಿಯನ್ನು ಅನುಷ್ಟಾನಗೊಳಿಸಲಾಗಿತ್ತು. ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ಥಾಪನೆಗೊಂಡು ಹಿಂದುಳಿದ ಬಡ ಮಕ್ಕಳಿಗಾಗಿ ವಸತಿ ನಿಲಯಗಳು ಸ್ಥಾಪನೆಗೊಂಡವು. ಇದು ಹಿಂದುಳಿದ ವರ್ಗದ ಜನರ ಹಿತದ ದೃಷ್ಟಿಯಿಂದ ಕರ್ನಾಟಕ ಇತಿಹಾದಲ್ಲಿಯೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಅಂಶಗಳಾಗಿವೆ. ನಂತರ ಇಂದಿರಾಸಾಹ್ನಿ ಪ್ರಕರಣದ ಆದೇಶದಂತೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚನೆಗೊಂಡಿತು. ಸಮಾಜವಾದಿ ಚಿಂತನೆಯ ನೇತಾರರಾದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಶ್ರೀ ಕಾಂತರಾಜ್ ರವರನ್ನು ನೇಮಿಸಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ 2015 ಅನ್ನು ನಡೆಸಲು ಅವಕಾಶ ಮಾಡಿಕೊಟ್ಟರು. ಇದು ಭಾರತದಲ್ಲಿಯೇ ಮೊದಲ ರಾಜ್ಯವೆಂಬ ಹಿಗ್ಗಳಿಕೆ ಕಾರಣವಾಯಿತು. ಈ ನಿಟ್ಟಿನಲ್ಲಿ ಇಡೀ ದೇಶಕ್ಕೆ ಮಾರ್ಗವೊಂದನ್ನು ರೂಪಿಸಿಕೊಟ್ಟಿತು.
ಶ್ರೀ ಕಾಂತರಾಜ್ ರವರು ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಿ ವಿಶ್ಲೇಷಿಸಿ ವರದಿ ತಯಾರು ಮಾಡಿದ್ದರು ಸಹ ನಾನಾ ಕಾರಣಗಳಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿರಲಿಲ್ಲ. ನಂತರ ಸರ್ಕಾರ ಬದಲಾವಣೆಗೊಂಡು ಶ್ರೀ ಜಯಪ್ರಕಾಶ್ ಹೆಗಡೆಯವರ ಅಧ್ಯಕ್ಷತೆಯಲ್ಲಿ ಆಯೋಗ ರಚನೆಯಾಗಿ ನಾನು ಸದಸ್ಯ ಕಾರ್ಯದರ್ಶಿಯಾಗಿದ್ದೆ. ಅದಾಗಲೆ ಕಾಂತರಾಜ್ ಆಯೋಗ ಸಮೀಕ್ಷೆ ನಡೆಸಿ ಆರು ವರ್ಷಗಳೆ ಆಗಿದ್ದವು. ಪಂಚಮಸಾಲಿ ಸಮುದಾಯದವರು 2ಎ ವರ್ಗಕ್ಕೆ ಸೇರಿಸಬೇಕೆಂದು ಹಾಗೂ ಕುರುಬರು ಎಸ್ ಟಿ ಗೆ ಸೇರಿಸಬೇಕೆಂದು ಅತ್ಯಂತ ತೀವ್ರವಾದ ಹೋರಾಟ ನಡೆಯುತಿತ್ತು. ಆಯೋಗ ವರದಿ ಪುನರ್ ರಚಿಸಬೇಕೆ ಅಥವಾ ಏನು ಮಾಡಬೇಕೆಂಬ ಗೊಂದಲದಲ್ಲಿತ್ತು. ಆ ನಡುವೆ ಬೆಂಗಳೂರು ನಗರದ ಜಿಲ್ಲಾಧಿಕಾರಿಗಳನ್ನು ಮತದಾರರ ಪಟ್ಟಿಗೆ ಸಂಬಂದಿಸಿದಂತೆ ಚಿಲುಮೆ ಹಗರಣದಲ್ಲಿ ಅಮಾನತ್ತು ಮಾಡಲಾಗಿತ್ತು. ವಿವಿಧ ಕಾರಣಗಳಿಗೆ ಅವರ ಹಿಂದಿನ ಜಿಲ್ಲಾಧಿಕಾರಿಗಳು ಸಹ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಜೈಲು ಸೇರಿದ್ದು ಮತ್ತೊಬ್ಬರು ಜೈಲು ಸೇರಿ ನಂತರ ಆತ್ಮಹತ್ಯೆ ಮಾಡಿಕೊಂಡ ಕಾರಣದಿಂದ ಹಾಗೂ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದರಿಂದ ಕೇಂದ್ರ ಚುನಾವಣಾ ಆಯೋಗ ಕೆಲವು ಅಧಿಕಾರಿಗಳ ಪಟ್ಟಿ ತರಿಸಿಕೊಂಡು ಅವರಲ್ಲಿ ನನ್ನನ್ನು ಜಿಲ್ಲಾಧಿಕಾರಿಯಾಗಿ ನೇಮಿಸಲು ಸರ್ಕಾರಕ್ಕೆ ಆದೇಶಿಸಿದ್ದರಿಂದ ವರ್ಗಾವಣೆ ಆಗಿ ಜಿಲ್ಲಾಧಿಕಾರಿಯಾಗಿ ವರದಿ ಮಾಡಿಕೊಳ್ಳಬೇಕಾಯಿಯು. ಆದರೆ ಅಂದಿನ ಮುಖ್ಯಮಂತ್ರಿಗಳಾದ ಮಾನ್ಯ ಬಸವಾರಾಜ್ ಬೊಮ್ಮಾಯಿಯವರು “ಪಂಚಮಸಾಲಿ ಸಮುದಾಯದವರ ಹೋರಾಟ ಗಂಭೀರ ಸ್ವರೂಪ ಪಡೆದುಕೊಂಡಿರುವುದರಿಂದ ಹಿಂದುಳಿದ ವರ್ಗಗಳ ಆಯೋಗ ಮಧ್ಯಂತರ ವರದಿ ನೀಡುವ ಅಗತ್ಯ ಇದೆ ಆದ್ದರಿಂದ ದಯಾನಂದ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತನಾಗಿಯೂ ಮುಂದುವರೆಯಲೆಂದು” ಮಾನ್ಯ ಮುಖ್ಯ ಕಾರ್ಯದರ್ಶಿಹಳಿಗೆ ಸೂಚಿಸಿದ್ದರಿಂದ ಬೆಂಗಳೂರು ಜಿಲ್ಲಾಧಿಕಾರಿ ಹುದ್ದೆಯ ಜೊತೆಗೆ ಆಯುಕ್ತನಾಗಿಯು ಮುಂದುವರೆಯಬೇಕಾಯಿತು.
ಸರ್ಕಾರದ ಕೊರಿಕೆಯಂತೆ ಆಯೋಗ ಅಧ್ಯಯನ ನಡೆಸಿ ಮದ್ಯಂತರ ವರದಿಯನ್ನು ಸಲ್ಲಿಸಿದೆವು. ಸರ್ಕಾರ ಬದಲಾವಣೆಗೊಂಡು ಸಿದ್ದಾರಾಮಯ್ಯನವರು ಮುಖ್ಯಮಂತ್ರಿಗಳಾದಾಗ ಮತ್ತೆ ಮುಖ್ಯಕಾರ್ಯದರ್ಶಿಗಳು ಆಯುಕ್ತರ ಹುದ್ದೆಯಿಂದ ಬಿಡುಗಡೆ ಮಾಡಿಸಲು ಪ್ರಯತ್ನಿಸಿದರಾದರು ಕಾಂತರಾಜು ವರದಿಯನ್ನು ಸಲ್ಲಿಸುವ ಅಗತ್ಯವಿರುವುದರಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತನಾಗಿ ಮುಂದುವರೆಯಲೆಂದು ಮತ್ತೊಮ್ಮೆ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದರಿಂದ, ಒಂದು ಮುಕ್ಕಾಲು ವರ್ಷ ಅಂದರೆ ಜಿಲ್ಲಾಧಿಕಾರಿಯಾಗಿದ್ದಷ್ಟು ದಿನಗಳು ಆಯುಕ್ತಾನಾಗಿಯೂ ಮುಂದುವರೆದಿದ್ದೆ. ಘನ ಸರ್ಕಾರದ ಅನುಮೋದನೆ ಪಡೆದು ಕಾಂತರಾಜುರವರ ಅಧ್ಯಕ್ಷತೆಯಲ್ಲಿ ಸಂಗ್ರಹಿಸಿದ್ದ 5.98 ಕೋಟಿ ಜನಸಂಖ್ಯೆಯ ದತ್ತಾಂಶವನ್ನು ಉಪಯೋಗಿಸಿಕೊಂಡು ಅಧ್ಯಯನ ನಡೆಸಿ ಸಾರ್ವಜನಿಕ ಸುನಾವಣೆ ನಡೆಸಿ ತಜ್ಞರ ಸಮಿತಿ ರಚಿಸಿ ಅಧ್ಯಯನ ನಡೆಸಿ ಹಿಂದುಳಿದಿರುವಿಕೆಗೆ ಸಂಬಂದಿಸಿದ ದತ್ತಾಂಶಗಳನ್ನು ವಿಶ್ಲೇಷಿಸಿ ಆಯೋಗ ವತಿಯಿಂದ ವರದಿಯನ್ನು ತಯಾರಿಸಿ ದಿನಾಂಕ:29/02/2024 ರಂದು ಸರ್ಕಾರಕ್ಕೆ ಸಲ್ಲಿಸಲಾಯಿತು. ನಂತರ ಬೆಂಗಳೂರು ಜಿಲ್ಲಾಕಾಧಿಕಾರಿ ಹುದ್ದೆಯೊಂದಿಗೆ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಹಿನ್ನೆಲೆಯಲ್ಲಿ ಸೋರಿಕೆಯನ್ನು ನಿಯಂತ್ರಿಸಿ ರಾಜಸ್ವ ಸಂಗ್ರಹ ಹೆಚ್ಚಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳೆ ಪೋನ್ ಮೂಲಕ ಸೂಚನೆ ನೀಡಿ ನೋಂದಣಿ ಇಲಾಖೆಯ ಐಜಿಆರ್ ಹುದ್ದೆಯ ಹೆಚ್ಚುವರಿ ಪ್ರಭಾರ ನೀಡಿ ಆದೇಶಿಸಿದರು. ಬೆಂಗಳೂರು ಜಿಲ್ಲಾಧಿಕಾರಿಯ ಹುದ್ದೆಯೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ, ಮತ್ತು ನೋಂದಣಿ ಇಲಾಖೆಯ ನೋಂದಣಿ ಮಹಾಪರೀವೀಕ್ಷಕ ಹುದ್ದೆಯ ಜವಬ್ದಾರಿಯು ಬಂದಿತ್ತು.
ಮೂರು ತಿಂಗಳ ನಂತರ ಸಚಿವರಾದ ಮಾನ್ಯ ಕೃಷ್ಣಬೈರೇಗೌಡರವರ ಅಭಿಲಾಷೆಯಂತೆ ನೋಂದಣಿಯಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ನಿಯಂತ್ರಣ ಮಾಡಲು ಇ-ಖಾತೆ ಅನುಷ್ಟಾನದ ಉದ್ದೇಶದಿಂದ ಪೂರ್ಣಪ್ರಮಾಣದಲ್ಲಿ ಜಿಲ್ಲಾಧಿಕಾರಿ ಹುದ್ದೆಯಿಂದ ಐಜಿಆರ್ ಹುದ್ದೆಗೆ ವರ್ಗಾವಣೆಗೊಂಡಿದ್ದೆ ಅದರೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರ ಹುದ್ದೆಯಿಂದಲೂ ಬಿಡುಗಡೆಗೊಂಡಿದ್ದೆ. ಐಜಿಆರ್ ಆಗಿ ಏಳೆಂಟು ತಿಂಗಳಲ್ಲಿ ಭೂ ಆಡಳಿದಲ್ಲಿ ಐತಿಹಾಸಿಕ ಹಾಗೂ ಕ್ರಾಂತಿಕಾರಕವಾದ ಇ-ಖಾತೆ ಕಡ್ಡಾಯಗೊಳಿಸಿ 2024 ಅಕ್ಟೋಬರ್ 30ರಿಂದ ಜಾರಿಗೊಳಿಸಲಾಯಿತು. ಇ-ಖಾತೆ ಇದ್ದಲ್ಲಿ ಮಾತ್ರ ನೋಂದಣಿ ಎಂಬ ನಿರ್ಧಾರ ಕೈಗೊಂಡು ಅನುಷ್ಟಾನ ಮಾಡಲಾಯಿತು. ಇದರಿಂದ ಅಕ್ರಮವಾಗಿ ನೋಂದಣಿ ಮಾಡಿ ಸರ್ಕಾರಿ ಮತ್ತು ಖಾಸಗಿ ಜಮೀನುಗಳ ಭೂಕಬಳಿಕೆ ಮಾಡುವುದು ಹಾಗೂ ಅಕ್ರಮ ರೆವೆನ್ಯೂ ಬಡಾವಣಿಗಳ ಅಭಿವೃದ್ದಿಗೆ ತಿಲಾಂಜಲಿ ಇಡಲಾಯಿತು. ಮತ್ತೆ ಏಳೆಂಟು ತಿಂಗಳ ನಂತರ ಗೃಹ ಮಂಡಳಿಗೆ ವರ್ಗಾವಣೆಯಾಯಿತು.
ಗೃಹ ಮಂಡಳಿಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿ ಒಂದೆರಡು ತಿಂಗಳಾಗಿರಬೇಕು ಮಾನ್ಯ ಮುಖ್ಯ ಕಾರ್ಯದರ್ಶಿಗಳು ಕರೆ ಮಾಡಿ “ದಯಾನಂದ್ ನೀವು ಸಲ್ಲಿಸಿದ್ದ ಹಿಂದುಳಿದ ವರ್ಗಗಳ ಆಯೋಗದ ವರದಿ ಕ್ಯಾಬಿನೇಟ್ಗೆ ಎರಡು ಬಾರಿ ಬಂದಿತ್ತು. ಸಂಬಂದಪಟ್ಟ ಕಾರ್ಯದರ್ಶಿಗಳು ಆಯುಕ್ತರು ಏನು ಸರಿಯಾಗಿ ವಿವರಿಸಲಿಲ್ಲ. ಮುಜುಗರ ಆಗಿದೆ. ಸುಮಾರು ಸಚಿವರು ಬಯ್ತಿದಾರೆ. ಒಂದು ವಾರ ಬಿಸಿಡಬ್ಲ್ಯೂ ಕಮೀಷನರ್ಗೆ ರಜೆ ಕೊಡ್ತೇನೆ. ನೀವು ಬಂದು ಚಾರ್ಜ್ ತಗೊಂಡು ಗುರುವಾರ ಕ್ಯಾಬಿನೇಟ್ ಇದೆ. ಇನ್ನು ನಾಲ್ಕು ದಿವಸ ಟೈಂ ಇದೆ. ಬಂದು ಕ್ಯಾಬಿನೇಟ್ ನಲ್ಲಿ ಸರಿಯಾಗಿ ರಿಪೋರ್ಟ್ ಸಬ್ಮಿಟ್ ಮಾಡಿ, ಎಕ್ಸ್ಪ್ಲೇನ್ ಮಾಡಿ” ಎನ್ನುತ್ತಿದ್ದಂತೆ “ಮೇಡಂ ದಯವಿಟ್ಟು ಬೇಡಿ. ಆಯುಕ್ತರು ನನ್ನ ಬ್ಯಾಚ್ಮೇಟ್” ಎಂದು ವಿನಂತಿಸತೊಡಗಿದೆ. “ಸರ್ಕಾರ ಹಾಕಿದ್ರೆ ನೀವು ಮಾಡ್ಲೇಬೇಕು” ಎಂದರು. ಸರ್ಕಾರ ಹಾಕಿದ್ರೆ ನಾನು ಹೇಗೆ ಬೇಡ ಅನ್ನಲಾಗುತ್ತದೆ ಎಂದು ಉಸುರುತ್ತಿದ್ದಂತೆ ಪೋನ್ ಕಟ್ಟಾಗಿತ್ತು. ಅಂದೆ ಸಂಜೆ ಅಲ್ಲಿಯ ಆಯುಕ್ತರಿಗೆ ವರ್ಗಾವಣೆ ಮಾಡಿ ನನಗೆ ಪ್ರಭಾರದ ಆದೇಶವಾಗಿತ್ತು. ಸರ್ಕಾರದ ಆದೇಶ ಪಾಲನೆ ಮಾಡಿದ್ದೆ. ಕ್ಯಾಬಿನೇಟ್ ನಲ್ಲಿ ವರದಿ ಚರ್ಚೆಯಾಗಿ ಈಗಾಗಲೇ ಸಮೀಕ್ಷೆ ನಡೆಸಿ ಹತ್ತು ವರ್ಷಗಳಾದ್ದರಿಂದ ಮರುಸಮೀಕ್ಷೆ ಮಾಡಿ ದತ್ತಾಂಶ ಸಂಗ್ರಹಿಸಲಿ ಮತ್ತು ಪರಿಶೀಲಿಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ದಿನಾಂಕ:13/08/2025 ರಂದು ಸಚಿವ ಸಂಪುಟದ ಅನುಮೋದನೆಯಂತೆ ಸರ್ಕಾರದಿಂದ ಆದೇಶವಾಯಿತು.
ಮರು ಸಮೀಕ್ಷೆ ನಮ್ಮ ಮುಂದೆ ದೊಡ್ಡ ಸವಾಲಾಗಿತ್ತು. 1935 ರ ಜಾತಿ ಗಣತಿಯ ನಂತರ ದೇಶಕ್ಕೆ ಮಾದರಿಯಾಗಿ ಸಾಮಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 ಅನ್ನು ಮಾಡಲಾಗಿತ್ತು. ಇದರ ಮಾದರಿಯನ್ನಾಧರಿಸಿ ತೆಲಂಗಾಣ ಮತ್ತು ಬಿಹಾರ ರಾಜ್ಯಗಳು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ ವರದಿಯನ್ನೆ ಬಿಡುಗಡೆ ಮಾಡಿದ್ದವು. ಅವುಗಳನ್ನು ಪರಿಶೀಲಿಸಿಕೊಂಡು ಸಂಬಂದಿಸಿದ ತೆಲಂಗಾಣ ಅಧಿಕಾರಿಗಳೊಂದಿಗೆ ಒಮ್ಮೆ ಸಭೆ ನಡೆಸಿ ಮತ್ತೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಅನ್ನು ಪ್ರಾರಂಭ ಮಾಡಿದೆವು. ಆಯೋಗದ ಮುಂದೆ ಹಲವು ಸವಾಲುಗಳಿದ್ದವು ಅವುಗಳಲ್ಲಿ ಪ್ರಮುಖವಾದವುಗಳೆಂದರೆ,
- ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ನಡೆಸಲು ಮೂರು ತಿಂಗಳ ಕಾಲಾವಕಾಶವನ್ನು ಸೂಚಿಸಿ ಸರ್ಕಾರ ಅನುಮತಿ ನೀಡಿತ್ತು. ಡಿಸೆಂಬರ್ ನಲ್ಲಿ ವರದಿ ನೀಡಲು ಸೂಚಿಸಿತ್ತು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 ಅನ್ನು ಪೂರ್ಣಗೊಳಿಸಲು ಸುಮಾರು ಎರಡು ವರ್ಷಗಳಾಗಿದ್ದವು. ಆದ್ದರಿಂದ ಮೂರು ತಿಂಗಳಲ್ಲಿ ಆರುವರೆ ಕೋಟಿ ಜನರ ದತ್ತಾಂಶ ಸಂಗ್ರಹಿಸುವುದು ನಂತರ ವಿಶ್ಲೇಷಣೆ ಮಾಡಿ ವರದಿ ಸಲ್ಲಿಸುವುದು ಮೊದಲ ಸವಾಲಾಗಿತ್ತು.
- ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 ವರದಿಯ ಬಗ್ಗೆ ದೂರುಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆವಹಿಸುವುದಾಗಿತ್ತು. ಕಾರಣ ಸದರಿ ವರದಿಯಲ್ಲಿ ವಿವಿಧ ಜಾತಿಗಳ ಜನಸಂಖ್ಯೆ ಅದರಲ್ಲು ಬಲಿಷ್ಟ ಜಾತಿಗಳ ಜನಸಂಖ್ಯೆಯನ್ನು ಕಡಿಮೆ ತೋರಿಸಿದ್ದಾರೆ. ಸಮೀಕ್ಷೆಯನ್ನು ಸರಿಯಾಗಿ ನಡೆಸಿಲ್ಲ ಎಲ್ಲೊ ಕುಳಿತು ಸಮೀಕ್ಷೆ ಮಾಡಿದ್ದಾರೆಂಬುದು ಆರೋಪವಾಗಿತ್ತು.
- ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 ರಲ್ಲಿ ಸಮೀಕ್ಷಾ ಬ್ಲಾಕ್ ಗಳನ್ನು ಮತ್ತು ಮನೆಪಟ್ಟಿಯನ್ನು 2011 ರ ಜನಗಣತಿ ಬ್ಲಾಕ್ ಗಳನ್ನು ಬಳಸಿಕೊಂಡು ಸಮೀಕ್ಷೆ ನಡೆಸಲಾಗಿತ್ತು. ಆನಂತರ ಜನಗಣತಿಯಾಗದ್ದರಿಂದ 2011 ರ ಜನಗಣತಿ ಈಗ ಹದಿನೈದು ವರ್ಷಗಳಾದ್ದರಿಂದ ಪ್ರಸ್ತುತವಲ್ಲ ಆದ್ದರಿಂದ ಹೊಸದಾಗಿ ಬ್ಲಾಕ್ ರಚನೆ ಮತ್ತು ಮನೆಪಟ್ಟಿ ಮಾಡುವುದು ದೊಡ್ಡ ಸವಾಲಾಗಿತ್ತು.
- ಡಿಜಿಟಲ್ ಯುಗವಾದ್ದರಿಂದ ಎಕರೆಯಗಲದ ಪ್ರಶ್ಣಾವಳಿ ಪಟ್ಟಿಹಿಡಿದು ಕೈಬರಹದಲ್ಲಿ ಸಂಗ್ರಹಿಸುವ ಅದನ್ನು ಗಣಕೀಕರಿಸುವ ಕಾರ್ಯ ಅಸಂಭವವಾಗಿತ್ತು. ಆದ್ದರಿಂದ ಸಾಪ್ಟ್ವೇರ್ ಮತ್ತು ಇತರ ತಯಾರಿ ಮತ್ತು ಗಣತಿದಾರರ ಕೊರತೆ ಮತ್ತು ಹಲವರ ವಿರೋಧದ ನಡುವೆ ಸಮೀಕ್ಷೆ ನಡೆಸಬೇಕಿತ್ತು.
- ಮೀಸಲಾತಿ ವಿರೋದಿ ಮನಸ್ಥಿತಿಗಳು ಮತ್ತು ಈಗಾಗಗಲೇ ಮೀಸಲಾತಿ ಪಡೆದು ಬಲಿಷ್ಟರಾದವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 ಅನ್ನು ತಡೆಯುವ ಉದ್ದೇಶದಿಂದ ಮಾನ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದವು. ಪ್ರತಿ ಕಾನೂನು ಹೊರಾಟದೊಂದಿಗೆ ಸಮೀಕ್ಷೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕಿತ್ತು.
ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮೀಕ್ಷೆಯಲ್ಲಿ ಮತದಾರರ ಪಟ್ಟಿಯಲ್ಲಿರುವ ಮತಗಟ್ಟೆಯನ್ನು ಬ್ಲಾಕ್ ಗಳಾಗಿ ಪರಿಗಣಿಸಿ ಸಮೀಕ್ಷೆಯನ್ನು ಆಗತಾನೆ ನಡೆಸಲಾಗಿತ್ತು ಆದರೆ ನಮ್ಮ ಸಮೀಕ್ಷೆ ಸಂಧರ್ಭದಲ್ಲಿ ಮತದಾರರಪಟ್ಟಿಯಲ್ಲಿರುವ ದೋಷದ ಬಗ್ಗೆ ವಿಶೇಷವಾಗಿ ಬೆಂಗಳೂರಿನ ಮಹದೇವಪುರ ವಿಧಾನಸಭಾಕ್ಷೇತ್ರದ ಮತದಾರರ ಪಟ್ಟಿಯ ಲೋಪದ ಬಗ್ಗೆ ಕೇಂದ್ರ ಸರ್ಕಾರದ ವಿರೋದ ಪಕ್ಷದ ನಾಯಕರು ಹೊರಾಟವನ್ನೆ ಪ್ರಾರಂಭ ಮಾಡಿದ್ದರಿಂದ ಮತದಾರರ ಪಟ್ಟಿಯನ್ನು ಮುಟ್ಟುವಂತಿರಲಿಲ್ಲ. ಹಾಗಿದ್ದರೆ ಸಮೀಕ್ಷಾ ಬ್ಲಾಕ್ ಮತ್ತು ಮನೆಪಟ್ಟಿ ಹೇಗೆ ಎಂಬುದೊಂದು ದೊಡ್ಡ ಸವಾಲಾಗಿತ್ತು. ಹಾಗೂ ನಾಗಮೋಹನದಾಸ್ ಸಮೀಕ್ಷೆಯಲ್ಲಿ ಸಮೀಕ್ಷಾದಾರರಿಗೆ ಗೌರವದನ ನೀಡಿಲ್ಲವೆಂಬ ಕಾರಣಕ್ಕೆ ಮತ್ತು ನಿರಂತರ ಸಮೀಕ್ಷೆಗಳಿಂದ ದಿನನಿತ್ಯದ ಕಾರ್ಯನಿರ್ವಹಿಸಲು ಆಗುತ್ತಿಲ್ಲವೆಂದು ನೌಕರರ ವಿರೋದವಿತ್ತು.
ಈ ಎಲ್ಲಾ ಸವಾಲುಗಳನ್ನು ಮಾನ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮತ್ತು ಇಲಾಖೆಯ ಮಾನ್ಯ ಕಾರ್ಯದರ್ಶಿಗಳು ಹಲವು ಸುತ್ತುಗಳು ಚರ್ಚೆ ನಡೆಸಿ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ತಕ್ಷಣವೆ ಮುಂದಿನ ದಸರಾ ರಜೆ ಅವಧಿಯಲ್ಲಿ ಸಮೀಕ್ಷೆ ನಡೆಸಲು ಸಹಕರಿಸುವಂತೆ ಸೂಚನೆ ನೀಡಿದ್ದರು. ಸಮೀಕ್ಷೆಗೆ ಸಂಬಂದಿಸಿದಂತೆ ರೂಪುರೇಷೆ ತಯಾರಿಸಿ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದು ರಾಜ್ಯಾದ್ಯಂತ ದಿನಾಂಕ: 22.09.2025 ರಿಂದ 31.10.2025ರ ವರೆಗೆಸಮೀಕ್ಷಾ ಕಾರ್ಯ ನಡೆಸಲು ಯೋಜಿಸಿ ಅದರಂತೆ ಅನುಷ್ಟಾನಗೊಳಿಸಲಾಯಿತು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 ವರದಿಯ ಬಗ್ಗೆ ವಿವಿಧ ಜಾತಿಗಳ ಜನಸಂಖ್ಯೆ ಅದರಲ್ಲು ಬಲಿಷ್ಟ ಜಾತಿಗಳ ಸಂಖ್ಯೆಯನ್ನು ಕಡಿಮೆ ತೋರಿಸಿದ್ದಾರೆ. ಸಮೀಕ್ಷೆಯನ್ನು ಸರಿಯಾಗಿ ನಡೆಸಿಲ್ಲ. ಎಲ್ಲೊ ಕುಳಿತು ಸಮೀಕ್ಷೆ ಮಾಡಿದ್ದಾರೆಂಬುದು ಆರೋಪವಾಗಿತ್ತು. ಈ ಆರೋಪ ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಿ ನಿಂಬಿಕೆಯನ್ನುಂಟು ಮಾಡಲು ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಿ ಸಮೀಕ್ಷೆಯ ದತ್ತಾಂಶವನ್ನು ಸಂಗ್ರಹಿಸುವ ಮೂಲಕ ನಂಬಿಕಾರ್ಹವಾದ ದತ್ತಾಂಶವೆಂದು ಪರಿಗಣಿಸಲು ಅನುವಾಗುವಂತೆ ಎಚ್ಚರಿಕೆವಹಿಸಲಾಯಿತು.
ಇ-ಆಡಳಿತ ಇಲಾಖೆಯ ಇಡಿಸಿಎಸ್ ವತಿಯಿಂದ ಸಮೀಕ್ಷೆ ನಡೆಸಲು ಸಮೀಕ್ಷಾ ಆಪ್ ತಯಾರಿ ಕಾರ್ಯಾರಂಭವಾಯಿತು. ಆಯೋಗದಲ್ಲಿ ವಿವಿಧ ಕ್ಷೇತ್ರಗಳ ತಜ್ಞರಾದ ಶ್ರೀ ಕೆ.ಎಸ್. ಜೇಮ್ಸ್ ಹಿರಿಯ ಸಂದರ್ಶಕ ವಿದ್ವಾಂಸರು, ನ್ಯೂಕಾಂಬ್ ಇನ್ಸ್ಟಿಟ್ಯೂಟ್,
ತುಲೇನ್ ವಿಶ್ವವಿದ್ಯಾಲಯ,ಶ್ರೀ ಸುರೀಂದರ್ ಎಸ್. ಜೋಧ್ಕ, ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರು,
ಶ್ರೀ ಅರ್ಜುನ್ ಜಯದೇವ್, ಬೆಂಗಳೂರಿನ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ (APU) ಅರ್ಥಶಾಸ್ತ್ರದ ಪ್ರಾಧ್ಯಾಪಕರು ಮತ್ತು ‘ಸೆಂಟರ್ ಫಾರ್ ದಿ ಸ್ಟಡಿ ಆಫ್ ದಿ ಇಂಡಿಯನ್ ಎಕಾನಮಿ’ಯ ನಿರ್ದೇಶಕರು, ಶ್ರೀ. ಮಾಮಿಡಿಪುಡಿ ರಾಮಕೃಷ್ಣ ಶರಣ್, ಮೇರಿಲ್ಯಾಂಡ್ ವಿಶ್ವವಿದ್ಯಾಲಯ, ಕಾಲೇಜ್ ಪಾರ್ಕ್ನ ಕೃಷಿ ಮತ್ತು ಸಂಪನ್ಮೂಲ ಅರ್ಥಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು, ಶ್ರೀ ನವೀನ್ ಭಾರತಿ ಸಹಾಯಕ ಪ್ರಾಧ್ಯಾಪಕರು, ಐಐಟಿ ಬಾಂಬೆ, ಶ್ರೀಮತಿ ಛಾಯಾ ದೆಗಾಂವ್ಕರ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (KKRDB),ಶಿಕ್ಷಣ ಸುಧಾರಣಾ ಸಮಿತಿಯ ಅಧ್ಯಕ್ಷರು, ಶ್ರೀ ಕೆಂಪಯ್ಯ ಸಿ. ಹೆಚ್ಚುವರಿ ನಿರ್ದೇಶಕರು (ನಿವೃತ್ತ), ಅರ್ಥಶಾಸ್ತ್ರ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬೆಂಗಳೂರು, ಶ್ರೀ ಅಮಿತ್ ಬಸೋಲೆ ಅರ್ಥಶಾಸ್ತ್ರದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಸುಸ್ಥಿರ ಉದ್ಯೋಗ ಕೇಂದ್ರ, ಡಾ. ಕೆ. ನಾರಾಯಣ ಗೌಡ ಮಾಜಿ ಕುಲಪತಿಗಳು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು, ಡಾ. ಪುಟ್ಟಸ್ವಾಮಯ್ಯ, ಅರ್ಥಶಾಸ್ತ್ರ ಪ್ರಾಧ್ಯಾಪಕರು, ಅರ್ಥಶಾಸ್ತ್ರ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಡಾ. ರಾಜೇಶ್
ಸಮಾಜಶಾಸ್ತ್ರದ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ ಮುಂತಾದ ತಜ್ಞರ ಸಮಿತಿ ರಚಿಸಿ ವಿವಿಧ ಇಲಾಖೆಗಳಿಗೆ ಯಾವ ಮಾಹಿತಿ ಅಗತ್ಯ ಎಂಬುದರ ಬಗ್ಗೆ ಮಾಹಿತಿ ಪಡೆದು ಹಿಂದಿನ ಸಮೀಕ್ಷೆಯ ಪ್ರಶ್ನಾವಳಿಗಳನ್ನು ಪರಿಶೀಲಿಸಿ, 54 ಪ್ರಶ್ಣೆಗಳನ್ನು ಅಂತಿಮಗೊಳಿಸಲಾಯಿತು. ಅದಕ್ಕನುಗುಣವಾಗಿ ಇಡಿಸಿಎಸ್ ನವರಿಂದ ‘ಸಮೀಕ್ಷಾ ಆಪ್’ ಅಭಿವೃದ್ಧಿಪಡಿಸಿಸಲಾಯಿತು. ಅದರೊಂದಿಗೆ ಮನೆಪಟ್ಟಿಗೆ ಅಗತ್ಯವಿದ್ದ, ಘಟಕ ರಚನೆಗೆ ಬೇಕಾದ ತಂತ್ರಾಂಶವನ್ನು ಜಿಯೋಲೋಕೆಷನ್ ಆದರಿಸಿ ಮನೆ ತಲೆ ಪೃಥ ಆಪ್ ಅನ್ನು ಅಭಿವೃದ್ದಿಪಡಿಸಲಾಯಿತು.
ಕೆಪಿಟಿಸಿಎಲ್ ಇಲಾಖೆಯ ಸಹಕಾರದೊಂದಿಗೆ ಮೀಟರ್ ರೀಡರವರ ಮೂಲಕ ಮನೆ ಮನೆಗೆ ಭೇಟಿ ನೀಡಿ ವಾಸದ ಮನೆಗಳಲ್ಲಿರುವ ವಿದ್ಯುತ್ ಮೀಟರ್ ನಂಬರುಗಳನ್ನು ಆಧರಿಸಿ ಜಿಯೋಲೊಕೇಷನ್ ಅನ್ನು ತಂತ್ರಾಂಶದಲ್ಲಿ ನಮೂದಿಸ(capture)ಲಾಯಿತು ಮನೆಪಟ್ಟಿಯನ್ನು ಡಿಜಿಟಲ್ ರೂಪದಲ್ಲಿ ತಯಾರಿಸಿ. ಆ ಪಟ್ಟಿಯನ್ನಾಧರಿಸಿ 150 ರಿಂದ 200 ಮನೆಗಳ ಜಿಯೋಲೊಕೇಶನ್ ಗಳ ಗುಂಪನ್ನು ಆಧರಿಸಿ ಸಮೀಕ್ಷಾ ಘಟಕಗಳನ್ನು ರಚಿಸಲಾಯಿತು. ಪೃಥ ಆಪ್ ಬಳಸಿ ಮನೆಯಿಂದ ಮನೆಗೆ ಸುಲಭವಾಗಿ ತಲುಪಿ ಸಮೀಕ್ಷಾ ಆಪ್ ಮೂಲಕ 152348 ಸಮೀಕ್ಷಾದಾರರನ್ನು ಬಳಸಿ ಸಮೀಕ್ಷೆ ನಡೆಸಲಾಯಿತು.
ಮೀಸಲಾತಿ ವಿರೋದಿ ಮತ್ತು ಈಗಾಗಗಲೇ ಮೀಸಲಾತಿ ಪಡೆದು ಬಲಿಷ್ಟರಾದವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 ಅನ್ನು ವಿರೋದಿಸಿ ಅನುಷ್ಟಾನವಾಗದಂತೆ ತಡೆದಿದ್ದ ಮನಸ್ಥಿತಿಯ ವ್ಯಕ್ತಿಗಳು ಮಾನ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿ ಸಮೀಕ್ಷೆಯನ್ನು ನಿಲ್ಲಿಸುವಂತೆ ಜನರ ವಯಕ್ತಿಕ ಮಾಹಿತಿ ಪಡೆದು ದುರುಪಯೋಗಪಡಿಸಿಕೊಳ್ಳುತ್ತಾರೆಂದು ಹಿರಿಯ ವಕೀಲರುಗಳ ಮೂಲಕ ವಾದವನ್ನು ಮಂಡಿಸಿದ್ದರು. ಸರ್ಕಾರ ಮತ್ತು ಆಯೋಗದ ವತಿಯಿಂದಲೂ ಕಾನೂನು ಹೋರಾಟವನ್ನೆ ಮಾಡಬೇಕಾಯಿತು. ಅದರ ಪ್ರತಿಫಲವಾಗಿ ಮಾನ್ಯ ಉಚ್ಚ ನ್ಯಾಯಾಲಯವು ಮಾಹಿತಿಯನ್ನು ಬಹಿರಂಗಪಡಿಸದಂತೆ ಷರತ್ತು ವಿಧಿಸಿ, ಆಸಕ್ತಿ ಇಲ್ಲದವರಿಗೆ ಒತ್ತಾಯಿಸದಂತೆ ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲವೆಂದು ತಿಳಿಸಿ, ಸಮೀಕ್ಷೆ ನಡೆಸಲು ಅನುಮತಿ ನೀಡಿತು. ಆದ ಕಾರಣದಿಂದಲೇ ಸುಧಾಮೂರ್ತಿಯಂತಹವರು ನೇರವಾಗಿಯೇ ನಾವು ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲವೆಂದು ತಿಳಿಸಿ ಭಾಗವಹಿಸಲು ನಿರಾಕರಿಸಿದರು. ಇಂತಹವರು ಆರು ಲಕ್ಷಕ್ಕು ಹೆಚ್ಚು ಜನರು ಸಮೀಕ್ಷೆಯಲ್ಲಿ ಭಾಗವಹಿಸದೆ ನಿರಾಕರಿಸಿದರು. ಇವೆಲ್ಲಾ ಅಡೆತಡೆಗಳ ನಡುವೆ ಸಮೀಕ್ಷಾ ಕಾರ್ಯವೂ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. ಬೆಂಗಳೂರು ನಗರ ಜಿಲ್ಲೆಯಲ್ಲಿ ಜಿಬಿಎ ಆಯುಕ್ತರುಗಳ ನೇತೃತ್ವದಲ್ಲಿ ನಡೆಯಿತು ಅಂತಿಮವಾಗಿ 6.14 ಕೋಟಿ ಜನಸಂಖ್ಯೆಯನ್ನು ತಲುಪಿ ದತ್ತಾಂಶವನ್ನು ಸಂಗ್ರಹಿಸಲಾಯಿತು.
ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶ ಪ್ರಾಥಮಿಕ ದತ್ತಾಂಶವಾದರೆ, ವಿವಿಧ ಇಲಾಖೆಗಳಿಂದ ಲಭ್ಯ ಸೆಕೆಂಡರಿ ದತ್ತಾಂಶವನ್ನು ಸಹ ನಿರಂತರವಾಗಿ ಸಭೆ ನಡೆಸಿ ತರಭೇತಿ ನೀಡಿದ ಪ್ರತಿಫಲವಾಗಿ ಆಪ್ ಮೂಲಕ ದತ್ತಾಂಶವನ್ನು ಸಂಗ್ರಹಿಸಲು ಸಾದ್ಯವಾಯಿತು. ಪ್ರೊ. ಸತೀಶ್ ದೇಶಪಾಂಡೆ, ನಿವೃತ್ತ ಪ್ರಾಧ್ಯಾಪಕರು, ದೆಹಲಿ ವಿಶ್ವವಿದ್ಯಾಲಯ, ಶ್ರೀಮತಿ ಛಾಯಾ ದೆಗಾಂವ್ಕರ್ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (KKRDB), ಶಿಕ್ಷಣ ಸುಧಾರಣಾ ಸಮಿತಿಯ ಅಧ್ಯಕ್ಷರು, ಡಾ. ಚಂದ್ರಶೇಖರ್ ಆರ್.ವಿ. ಸಹಾಯಕ ಪ್ರಾಧ್ಯಾಪಕರು, ನ್ಯಾಷನಲ್ ಸ್ಕೂಲ್ ಆಫ್ ಲಾ, ಬೆಂಗಳೂರು, ಶ್ರೀ ನವೀನ್ ಭಾರತಿ ಸಹಾಯಕ ಪ್ರಾಧ್ಯಾಪಕರು, ಐಐಟಿ ಬಾಂಬೆ.
ರವರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಿ ನಿರಂತರ ಸಭೆಗಳನ್ನು ನಡೆಸಿ ಚರ್ಚಿಸಲಾಯಿತು ಸಾರ್ವಜನಿಕವಾಗಿ ನೋಟೀಸ್ ಜಾರಿಗೊಳಿಸಿ ವಿವಿಧ ಸಂಘ ಸಂಸ್ಥೆಗಳ ಮತ್ತು ಸಮುದಾಯಗಳ ಅಭಿಪ್ರಾಯ ಸಂಗ್ರಹಿಸಲಾಯಿತು. ಅಂತಿಮವಾಗಿ ವರದಿ ತಯಾರಿಸಿ ದಿನಾಂಕ: 27/05/2025 ರಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಯಿತು.
ಸರ್ಕಾರದ ವಿವಿಧ ಯೋಜನೆಗಳನ್ನು ರೂಪಿಸುವಾಗ ದತ್ತಾಂಶಗಳ ಪಾತ್ರ ಬಹಳ ಮಹತ್ವದ್ದು. ಇಂತಹ ಸಮೀಕ್ಷೆಗಳಲ್ಲಿ ಸಂಗ್ರಹಿಸುವ ದತ್ತಾಂಶಗಳು ಕೇವಲ ಮೀಸಲಾತಿಗೆ ಮಾತ್ರ ಸೀಮಿತವಾಗದೆ ವಿವಿಧ ಇಲಾಖೆಗಳ ಯೋಜನೆಗಳನ್ನು ರೂಪಿಸಲು ಆಧಾರವಾಗುತ್ತವೆ. ವರದಿಗಳು ಒಂದು ಕಾಲಘಟ್ಟದ ನಂತರ ಸಾಮಾಜಿಕ ಬದಲಾವಣೆ ಮತ್ತು ಪರಿಣಾಮವನ್ನು ತಿಳಿಸುವ ಮೈಲಿಗಲ್ಲಾಗುವುದರಿಂದಲೆ ಇತಿಹಾಸದಲ್ಲಿ ಕೇಂದ್ರ ಅಥವಾ ರಾಜ್ಯದ ಆಯೋಗಗಳ ವರದಿಗಳು ಸರ್ವಕಾಲದಲ್ಲು ಚರ್ಚಿತವಾಗುವ ವಿಷಯಗಳಾಗಿರುತ್ತವೆ. ಆದ್ದರಿಂದಲೆ ಹಾವನೂರು ವರದಿಯಾಗಲಿ ಮಂಡಲ್ ವರದಿಯಾಗಲಿ ಇಂದಿಗೂ ಜೀವಂತವಾಗಿವೆ. ಇಂತಹ ಐತಿಹಾಸಿಕವಾದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಸಮೀಕ್ಷೆ ನಡೆಸಿ ವರದಿ ತಾಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ ಕಾಯಕದಲ್ಲಿ ಸದಸ್ಯಕಾರ್ಯದರ್ಶಿಯಾಗಿ ನಾನು ಸಹ ಒಬ್ಬ ಕಾರಣೀಭೂತನಾಗಿದ್ದೆ ಎಂಬುದೆ ನನ್ನ ಹೆಮ್ಮೆ.





