ಕರ್ನಾಟಕದ ಭವಿಷ್ಯದ ಆರ್ಥಿಕ ಪ್ರಗತಿಗೆ ಹೊಸ ಭಾಷ್ಯ ಬರೆಯಲಿರುವ ಮಹತ್ವಾಕಾಂಕ್ಷಿ ಕ್ವಿನ್ ಸಿಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಮಾರ್ಚ್ ಒಳಗೆ ನಿವೇಶನ ಹಂಚಿಕೆ ಆರಂಭಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಭ್ರಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯಾಭಿವೃದ್ಧಿ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ಸೂಚಿಸಿದ್ದಾರೆ.

ಯೋಜನೆಗೆ ಸಂಬಂಧಿಸಿದ ಎಲ್ಲ ಕಾರ್ಯಗಳನ್ನು ತ್ವರಿತಗೊಳಿಸಲು ಪ್ರತ್ಯೇಕ ತಂಡ ರಚಿಸಿ, 24×7 ಮಾದರಿಯಲ್ಲಿ ಕಾರ್ಯನಿರ್ವಹಿಸಲು ಹಾಗೂ ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲಿಸಲು ನಿರ್ದೇಶಿಸಿದ್ದಾರೆ.

5,000 ಎಕರೆ ಪ್ರದೇಶದಲ್ಲಿ ರೂಪುಗೊಳ್ಳಲಿರುವ ಕ್ವಿನ್ ಸಿಟಿಯನ್ನು ಜಾಗತಿಕ ಮಟ್ಟದ ಉದ್ದಿಮೆಗಳು, ಪ್ರತಿಷ್ಠಿತ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಆಸ್ಪತ್ರೆಗಳು, ನಾವೀನ್ಯತಾ ಕೇಂದ್ರಗಳು ಮತ್ತು ನವೋದ್ಯಮಗಳ ಆಕರ್ಷಕ ತಾಣವನ್ನಾಗಿ ಅಭಿವೃದ್ಧಿಪಡಿಸುವುದು ನಮ್ಮ ಸಂಕಲ್ಪ. ಇದಕ್ಕೆ ಪೂರಕವಾಗಿ ವಿಶ್ವದರ್ಜೆಯ ರಸ್ತೆ ಸಂಪರ್ಕ, ವಸತಿ ಸೌಲಭ್ಯಗಳು, ವಿದ್ಯುತ್ ಸಂಪರ್ಕ, ಉದ್ಯಾನಗಳು, ಕ್ರೀಡಾ ಸಂಕೀರ್ಣ ಸೇರಿದಂತೆ ಅತ್ಯಾಧುನಿಕ ಮೂಲಸೌಕರ್ಯಗಳನ್ನು ತ್ವರಿತವಾಗಿ ಕಲ್ಪಿಸಲು ಆದ್ಯತೆ ನೀಡಿದ್ದೇನೆ ಎಂದು ಹೇಳಿಕೆ ನೀಡಿದರು.

ನಮ್ಮ ಗುರಿ ಕೇವಲ ಒಂದು ನಗರವನ್ನು ನಿರ್ಮಿಸುವುದಲ್ಲ; ₹50,000 ಕೋಟಿ ಹೂಡಿಕೆಯನ್ನು ಆಕರ್ಷಿಸಿ, ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರೊಂದಿಗೆ ಕರ್ನಾಟಕವನ್ನು ಜಾಗತಿಕ ಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವುದಾಗಿದೆ ಎಂದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್, ಆಯುಕ್ತೆ ಶ್ರೀಮತಿ ಖುಷ್ಬೂ ಗೋಯೆಲ್, ತಾಂತ್ರಿಕ ಸಲಹೆಗಾರರಾದ ಶ್ರೀ ಅರವಿಂದ ಗಲಗಲಿ, ಕೆಐಎಡಿಬಿ ಸಿಇಒ ಶ್ರೀ ಗೋವಿಂದ ರೆಡ್ಡಿ, ವಿಶೇಷ ಜಿಲ್ಲಾಧಿಕಾರಿ ಶ್ರೀ ರಘುನಂದನ್, ಮುಖ್ಯ ಎಂಜಿನಿಯರ್ ಶ್ರೀ ವೀರಭದ್ರಯ್ಯ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here