ಗೌರಿ ಲಂಕೇಶ್ ಹಾಗೂ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಸಂಘಪರಿವಾರದ ನಂಟಿರುವವರ ಕೈವಾಡವಿದೆ ಎಂದಿದ್ದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಕಿಡಿ ಕಾರಿದ್ದಾರೆ. 3 ದಿನದಲ್ಲಿ ಸಾಕ್ಷ್ಯ ನೀಡಿ ಇಲ್ಲವೇ ರಾಜೀನಾಮೆ ಕೊಡಿ ಎಂದು ಸವಾಲು ಹಾಕಿದ್ದಾರೆ. ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಇದೇ ರೀತಿಯ ಹೇಳಿಕೆಗಳಿಗಾಗಿ ನಿಮ್ಮ ಸರ್ವೋಚ್ಚ ನಾಯಕ ರಾಹುಲ್ ಗಾಂಧಿ ಅವರು ಇಂದಿಗೂ ಮಾನನಷ್ಟ ಮೊಕದ್ದಮೆಗಳ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂಬುದನ್ನು ನಿಮಗೆ ನೆನಪಿಸಲು ಬಯಸುತ್ತೇನೆ ಎಂದೂ ತಿವಿದಿದ್ದಾರೆ.
ಗೌರಿ ಲಂಕೇಶ್, ಎಂ.ಎಂ. ಕಲಬುರ್ಗಿ, ದಾಬೋಲ್ಕರ್ ಹತ್ಯೆ ಪ್ರಕರಣಗಳ ಬಗ್ಗೆ ಕೇರಳದಲ್ಲಿ ಮುಸ್ಲಿಂ ಲೀಗ್ ಕಾರ್ಯಕ್ರಮದಲ್ಲಿ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ತಾಪ ವಿಚಾರ ಸಂಬಂಧ ಸಂಸದ ತೇಜಸ್ವಿ ಸೂರ್ಯ ಕಿಡಿ ಕಾರಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಿಯಾಂಕ್ ಖರ್ಗೆಯವರೇ ಗೌರಿ ಲಂಕೇಶ್ ಮತ್ತು ಪ್ರೊ. ಕಲಬುರ್ಗಿ ಹತ್ಯೆ ಪ್ರಕರಣಗಳಲ್ಲಿ ನ್ಯಾಯ ದೊರಕಿಸಬೇಕೆಂಬ ಹೋರಾಟವು ರಾಜಕೀಯ ಭಾಷಣ ಮಾಡುವುದಕ್ಕಿಂತ ಹೆಚ್ಚಿನ ಗಂಭೀರತೆ ಮತ್ತು ಬದ್ಧತೆ ನಿರೀಕ್ಷಿಸುತ್ತದೆ. ಕಾನೂನಿನ ಆಳ್ವಿಕೆಗೆ ಅನುಗುಣವಾಗಿ ನ್ಯಾಯ ದೊರಕಿಸುವುದು ಗೃಹ ಸಚಿವರಾಗಿ ನಿಮ್ಮ ಜವಾಬ್ದಾರಿಯೇ ಹೊರತು ರಾಜಕೀಯ ವೇದಿಕೆಗಳಿಂದ ಪೂರ್ವಾಗ್ರಹಪೀಡಿತ ತೀರ್ಪುಗಳನ್ನು ನೀಡುವುದಲ್ಲ ಎಂದವರು ವಾಗ್ದಾಳಿ ನಡೆಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ 2018ರಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದ್ದು, 2022ರಲ್ಲಿ ವಿಚಾರಣೆ ಆರಂಭವಾಗಿದೆ. ಇದೀಗ ಪ್ರಕರಣವು ಏಳನೇ ನ್ಯಾಯಾಧೀಶರ ಮುಂದೆ ವಿಚಾರಣೆಯಲ್ಲಿದೆ. ಆರೋಪಿಗಳೆಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರೊ. ಕಲಬುರ್ಗಿ ಪ್ರಕರಣದಲ್ಲಿ, 2026ರ ಸೆಪ್ಟೆಂಬರ್ ವೇಳೆಗೆ 139 ಸಾಕ್ಷಿಗಳ ಪೈಕಿ ಕೇವಲ 33 ಸಾಕ್ಷಿಗಳ ವಿಚಾರಣೆ ಮಾತ್ರ ಪೂರ್ಣಗೊಂಡಿದೆ. ಇವು ತೀರ ವಿಳಂಬವಾಗಿದ್ದು, ಇವುಗಳಿಗೆ ಉತ್ತರ ನೀಡಲೇಬೇಕು. ಈ ಹತ್ಯೆಗಳ ಬಳಿಕದ ಬಹುತೇಕ ಅವಧಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. ಎಸ್ಐಟಿಗಳನ್ನು ರಾಜ್ಯ ಸರ್ಕಾರವೇ ರಚಿಸಿದ್ದು, ಪರಿಣಾಮಕಾರಿ ವಿಚಾರಣೆಯನ್ನು ಖಚಿತಪಡಿಸುವಲ್ಲಿ ಗೃಹ ಇಲಾಖೆಯ ಪಾತ್ರದ ಬಗ್ಗೆ ಉತ್ತರ ನೀಡಬೇಕಿದೆ.
ಇದಲ್ಲದೆ, ಕರ್ನಾಟಕದ ಹಾಲಿ ಗೃಹ ಸಚಿವರಾಗಿರುವ ನೀವು, “ಕೇಸ್ ನಡೆಯುತ್ತಿದೆ, ಇನ್ನೂ ಆರು ತಿಂಗಳಲ್ಲಿ ಇದನ್ನು ಮುಗಿಸಿ, ಈ ಎಲ್ಲ ಜನರನ್ನು ಜೈಲಿಗೆ ಹಾಕುತ್ತೇನೆ” ಎಂದು ಹೇಳಿರುವುದು, ನ್ಯಾಯಾಲಯ ಯಾವ ರೀತಿಯ ತೀರ್ಪು ನೀಡಬೇಕು ಎಂಬುದನ್ನು ನೀವು ಸೂಚಿಸುತ್ತಿರುವಂತೆ ಕಾಣುತ್ತದೆ. ನಿಮ್ಮ ಅಧಿಕಾರಾವಧಿಯಲ್ಲಿ ನಡೆಯುತ್ತಿರುವ ವಿಚಾರಣೆಗಳ ನ್ಯಾಯಸಮ್ಮತತೆ ಮತ್ತು ಸ್ವತಂತ್ರತೆಯ ಬಗ್ಗೆ ಇದು ಗಂಭೀರ ಆತಂಕಗಳನ್ನು ಹುಟ್ಟುಹಾಕುತ್ತದೆ.
‘ಆರೋಪಗಳಿಗೆ ಸಾಕ್ಷ್ಯ ನೀಡಿ, ಇಲ್ಲವೇ ರಾಜೀನಾಮೆ ಕೊಡಿ’
ನೀವು “ಸಂಘ”ದ ಬಗ್ಗೆ ಪ್ರಸ್ತಾಪಿಸಿರುವಾಗ, ಈ ಪ್ರಕರಣಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿರುವ ಸಂಬಂಧಪಟ್ಟ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿ. ನಿಮ್ಮ ಆರೋಪಗಳಿಗೆ ಪೂರಕವಾದ ಸಾಕ್ಷ್ಯಗಳನ್ನು ಮೂರು ದಿನಗಳೊಳಗೆ ಒದಗಿಸಿ ಅಥವಾ ರಾಜೀನಾಮೆ ನೀಡಿ. ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಇದೇ ರೀತಿಯ ಹೇಳಿಕೆಗಳಿಗಾಗಿ ನಿಮ್ಮ ಸರ್ವೋಚ್ಚ ನಾಯಕ ರಾಹುಲ್ ಗಾಂಧಿ ಅವರು ಇಂದಿಗೂ ಮಾನನಷ್ಟ ಮೊಕದ್ದಮೆಗಳ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂಬುದನ್ನು ನಿಮಗೆ ನೆನಪಿಸಲು ಬಯಸುತ್ತೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ಏನು ಹೇಳಿದ್ದರು?
ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಎಂ.ಎಂ. ಕಲಬುರ್ಗಿ ಅವರ ಹತ್ಯೆಗಳ ಹಿಂದೆ ಸಂಘಪರಿವಾರದೊಂದಿಗೆ ನಂಟು ಹೊಂದಿರುವವರ ಕೈವಾಡವಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದರು. ಈ ಎರಡೂ ಪ್ರಕರಣಗಳ ತನಿಖೆಯನ್ನು ಸರ್ಕಾರ ಗಂಭೀರವಾಗಿ ಮುಂದುವರಿಸುತ್ತಿದೆ. ಹತ್ಯೆಗಳಿಗೆ ಕಾರಣರಾದವರನ್ನು ಮುಂದಿನ ಆರು ತಿಂಗಳೊಳಗೆ ಬಂಧಿಸಲಾಗುವುದು ಎಂದು ಅವರು ಭರವಸೆ ನೀಡಿದ್ದರು.
ನವೆಂಬರ್ 8ರಂದು ಕೇರಳದ ಕೊಚ್ಚಿಯಲ್ಲಿ ನಡೆದ ಮುಸ್ಲಿಂ ಯೂತ್ ಲೀಗ್ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಗೌರಿ ಲಂಕೇಶ್, ಎಂ.ಎಂ. ಕಲಬುರ್ಗಿ, ನರೇಂದ್ರ ದಾಭೋಳ್ಕರ್ ಹಾಗೂ ಗೋವಿಂದ ಪಾನ್ಸರೆ ಹತ್ಯೆ ಪ್ರಕರಣಗಳನ್ನು ಪ್ರಸ್ತಾಪಿಸಿದರು.
ಈ ಹತ್ಯೆಗಳ ಹಿಂದೆ ಸಂಘ ಪರಿವಾರಕ್ಕೆ ಸಂಬಂಧಿಸಿದ ವ್ಯಕ್ತಿಗಳಿದ್ದಾರೆ ಎಂದು ಆರೋಪಿಸಿದ ಅವರು, ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಮುಂದಿನ ಆರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಂಡು ಆರೋಪಿಗಳು ಜೈಲು ಸೇರುವಂತೆ ಮಾಡುವುದಾಗಿ ಭರವಸೆ ನೀಡಿದರು.
ಇದರ ಜೊತೆಗೆ ಆರ್ಎಸ್ಎಸ್ನ ಕಾರ್ಯವೈಖರಿ, ನೋಂದಣಿ ಹಾಗೂ ಹಣಕಾಸಿನ ಪಾರದರ್ಶಕತೆ ಕುರಿತೂ ಪ್ರಶ್ನೆಗಳನ್ನು ಎತ್ತಿದರು. ಆದರೆ ಹತ್ಯೆಗಳ ಹಿಂದೆ ನಿರ್ದಿಷ್ಟ ಸಂಘಟನೆಯ ಕೈವಾಡವಿದೆ ಎಂಬುದು ಸಚಿವರ ಆರೋಪವಾಗಿದ್ದು, ಅದನ್ನು ನ್ಯಾಯಾಲಯದ ಅಂತಿಮ ತೀರ್ಪು ಎಂದು ಪರಿಗಣಿಸಲಾಗುವುದಿಲ್ಲ.
2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ಮನೆಯ ಹೊರಗೆ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ನಡೆಸಿದ್ದು, 2018ರಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು. ತನಿಖೆಯಲ್ಲಿ ಹಲವು ವ್ಯಕ್ತಿಗಳ ವಿರುದ್ಧ ಕೊಲೆ ಮತ್ತು ಸಂಘಟಿತ ಅಪರಾಧಕ್ಕೆ ಸಂಬಂಧಿಸಿದ ಆರೋಪಗಳನ್ನು ಹೊರಿಸಲಾಗಿತ್ತು.
2022ರಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾದರೂ ಪ್ರಕರಣದ ಅಂತಿಮ ತೀರ್ಪು ಇನ್ನೂ ಹೊರಬಂದಿಲ್ಲ. ಅಕ್ಟೋಬರ್ 2026ರ ವರದಿಯ ಪ್ರಕಾರ, ಪ್ರಕರಣವು ಎಂಟನೇ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಬಂದಿದ್ದು, 17 ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ. ನ್ಯಾಯಾಧೀಶರ ವರ್ಗಾವಣೆ, ವಿವಿಧ ಅರ್ಜಿಗಳು ಹಾಗೂ ಸಾಕ್ಷಿಗಳ ವಿಚಾರಣೆಯ ವಿಳಂಬದಿಂದ ಪ್ರಕರಣ ನಿಧಾನಗತಿಯಲ್ಲಿ ಸಾಗುತ್ತಿ
ಕನ್ನಡದ ಹಿರಿಯ ಸಂಶೋಧಕ, ಸಾಹಿತಿ ಹಾಗೂ ವಿಚಾರವಾದಿ ಎಂ.ಎಂ. ಕಲಬುರ್ಗಿ ಅವರನ್ನು 2015ರ ಆಗಸ್ಟ್ 30ರಂದು ಧಾರವಾಡದ ಅವರ ನಿವಾಸದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಈ ಹತ್ಯೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ನಡೆದ ತನಿಖೆಯಲ್ಲಿ ಗೌರಿ ಲಂಕೇಶ್ ಮತ್ತು ಕಲಬುರ್ಗಿ ಹತ್ಯೆ ಪ್ರಕರಣಗಳ ನಡುವೆ ವಿಧಿವಿಜ್ಞಾನ ಸಂಬಂಧಗಳು ಪತ್ತೆಯಾಗಿದ್ದವು.
ತನಿಖಾ ವರದಿಗಳ ಪ್ರಕಾರ, ಈ ಪ್ರಕರಣಗಳಲ್ಲಿ ಬಳಸಲಾದ ಗುಂಡುಗಳು ಮತ್ತು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಬ್ಯಾಲಿಸ್ಟಿಕ್ ಸಾಕ್ಷ್ಯಗಳಲ್ಲಿ ಸಾಮ್ಯತೆ ಕಂಡುಬಂದಿತ್ತು. ಮಹಾರಾಷ್ಟ್ರದ ವಿಚಾರವಾದಿಗಳ ಹತ್ಯೆ ಪ್ರಕರಣಗಳೊಂದಿಗೂ ಶಸ್ತ್ರಾಸ್ತ್ರಗಳ ಸಂಬಂಧವನ್ನು ತನಿಖಾಧಿಕಾರಿಗಳು ಪರಿಶೀಲಿಸಿದ್ದರು





