ದಾವಣಗೆರೆ – ಬಿಸಿಊಟ ತಯಾರಕರ ಕೆಲಸಕ್ಕೆ ಕುತ್ತು ತರಲು ಯತ್ತಿಸುತ್ತಿರುವುದರ ವಿರುದ್ಧ ಇದೇ ದಿನಾಂಕ 13 ರ ಶುಕ್ರವಾರ ರಾಜ್ಯದಾದ್ಯಂತ ಶಾಲೆಗಳಲ್ಲಿ ಬಿಸಿಊಟ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಐಟಿಯುಸಿ ಸಂಯೋಜಿತ ಬಿಸಿಯೂಟ ತಯಾರಕರ ಫೆಡರೇಶನ್ ನ ರಾಜ್ಯಾಧ್ಯಕ್ಷ ಕಾಂ ಆವರಗೆರೆ ಚಂದ್ರು ತಿಳಿಸಿದ್ದಾರೆ.
ರಾಜ್ಯದ ಶಿಕ್ಷಕರ ಸಂಘವೊಂದು ಮಧ್ಯಾಹ್ನ ಉಪಹಾರ ಯೋಜನೆ ರಾಜ್ಯ ನಿರ್ದೇಶಕರಿಗೆ ಮನವಿ ಸಲ್ಲಿಸಿ ಬಿಸಿಊಟ ತಯಾರಿಕೆಯಲ್ಲಿ ಶಿಕ್ಷಕರು ಗಮನ ಕೊಡಬೇಕಾಗಿರುವುದನ್ನು ಬಿಡಿಸಲು ರಾಜ್ಯಾದ್ಯಂತ ಬಿಸಿಊಟ ತಯಾರಿಕೆಯನ್ನು ಕ್ಲಸ್ಟರ್ ಕಿಚನ್ ಸೆಂಟರ್ ಮೂಲಕ ಎನ್ ಜಿ ಓ /ಖಾಸಗಿ ಸಂಘ ಸಂಸ್ಥೆಗಳಿಗೆ ವಹಿಸುವಂತೆ ಕೋರಿದ್ದರಿಂದ ಅದನ್ನೇ ನೆಪವಾಗಿಟ್ಟುಕೊಂಡು ಮಧ್ಯಾಹ್ನ ಉಪಹಾರ ನಿರ್ದೇಶಕರು, ಕಳೆದ 25 ವರ್ಷಗಳಿಂದ ಕಡಿಮೆ ವೇತನದಲ್ಲಿ ಬಿಸಿಊಟ ತಯಾರಕರಾಗಿ ಕೆಲಸ ನಿರ್ವಹಿಸುತ್ತಿರುವ ಬಿಸಿಊಟ ತಯಾರಕ ಮಹಿಳೆಯರನ್ನು ಕೆಲಸದಿಂದ ಬಿಡಿಸಿ ಖಾಸಗಿ ಸಂಸ್ಥೆಗಳಿಗೆ ಕೊಡುವ ಹುನ್ನಾರ ನಡೆಸಿದ್ದಾರೆ ಎಂದು ಆವರಗೆರೆ ಚಂದ್ರು ಆರೋಪಿಸಿದ್ದಾರೆ.
ರಾಜ್ಯಾದ್ಯಂತ ಬಿಸಿಯೂಟ ತಯಾರಕರು ತಮ್ಮ ಕೆಲಸವನ್ನು ಉಳಿಸಿಕೊಳ್ಳುವುದಕ್ಕಾಗಿ ಇದೇ ನವಂಬರ್ 13 ಶುಕ್ರವಾರದಂದು ಶಾಲೆಗೆ ಹೋಗದೆ ಅಡುಗೆ ಬಂದ್ ಮಾಡಿ ಪ್ರತಿಭಟನೆ ನಡೆಸುವರು.
ರಾಜ್ಯದ ಎಲ್ಲಾ ಬಿಸಿಊಟ ತಯಾರಕರು ಅಂದು ಶಾಲೆಗೆ ಹೋಗದೆ ಮನೆಯಲ್ಲಿದ್ದುಕೊಂಡೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕೆಂದು ಸಂಘಟನೆ ಕರೆ ನೀಡಿದೆ.
ಮಧ್ಯಾಹ್ನ ಉಪಹಾರ ಯೋಜನೆ ರಾಜ್ಯ ನಿರ್ದೇಶಕರು ಬಿಸಿಊಟ ಮಹಿಳೆಯರ ಕೆಲಸದ ಬಗ್ಗೆ ಕಿಂಚಿತ್ತು ಯೋಚಿಸದೆ ಸ್ವಯಂ ನಿರ್ಧಾರ ತೆಗೆದುಕೊಂಡು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಶಿಕ್ಷಣಾಧಿಕಾರಿಗಳಿಂದ ಮತ್ತು ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರಿಂದ ಇದರ ಬಗ್ಗೆ ಅಭಿಪ್ರಾಯ ಕೇಳಿರುವುದು ಖಂಡನೀಯವಾಗಿದೆ.
ಆದ್ದರಿಂದ ರಾಜ್ಯಾದ್ಯಂತ ಇದೇ ಶುಕ್ರವಾರ ಮಧ್ಯಾಹ್ನ ಉಪಹಾರ ಯೋಜನೆ ಅಧಿಕಾರಿಗಳ ಈ ನಡೆಯ ವಿರುದ್ಧ ಒಂದು ದಿನ ಅಡುಗೆ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಜಿಜಿ ಅಕ್ಕಮ್ಮ, ರಾಜ್ಯ ಖಜಾಂಚಿ ಬೆಳಗೆರೆ ರುದ್ರಮ್ಮ, ರಾಜ್ಯ ಉಪ ಪ್ರಧಾನ ಕಾರ್ಯದರ್ಶಿ ವಿಜಯನಗರ ಪುಷ್ಪಾ , ರಾಜ್ಯ ಸಂಘಟನಾ ಕಾರ್ಯದರ್ಶಿ ಸರೋಜಾ , ರಾಜ್ಯ ಸಮಿತಿ ಸದಸ್ಯರಾದ ಮಳಲ್ಕೆರೆ ಜಯಮ್ಮ ಮತ್ತಿತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





