ಬೆಂಗಳೂರು ನಗರ ಜಿಲ್ಲೆ ಅಕ್ಟೋಬರ್ :: ಜವಳಿ ಕ್ಷೇತ್ರದ ರಫ್ತಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ 2030ರ ವೇಳೆಗೆ 100 ಬಿಲಿಯನ್ ಡಾಲರ್‌ ರಫ್ತು ವಹಿವಾಟಿನ ಗುರಿ ತಲುಪಬೇಕು ಎಂದು ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯ ನಿರ್ದೇಶಕರಾದ ಎ.ಬಿ. ಬಸವರಾಜು ತಿಳಿಸಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (KASSIA) ಸಭಾಂಗಣದಲ್ಲಿ ಆಯೋಜಿಸಿಲಾಗಿದ್ದ ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ “ಜಾಗತಿಕ ಮಾರುಕಟ್ಟೆಗಾಗಿ ಜವಳಿ” ವಿಷಯದ ಕುರಿತು ಜಿಲ್ಲಾ ಮಟ್ಟದ ಆಂತರಿಕ ಸಲಹಾತ್ಮಕ ಕಾರ್ಯಾಗಾರವನ್ನು ಉದ್ದೇಶಿಸಿ ಮಾತಾನಾಡಿದ ಅವರು ನಗರ ಜಿಲ್ಲೆಯಲ್ಲಿ ಮೂರು ಕಾರ್ಯಗಾರವನ್ನು ಹಮ್ಮಿಕೊಳ್ಳಗುತ್ತಿದ್ದು , ಇದು ಎರಡನೇ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಜವಳಿ ಕ್ಷೇತ್ರದ ಭವಿಷ್ಯದ ಅವಕಾಶಗಳ ಕುರಿತು ಮಾಹಿತಿ ನೀಡಲಾಯಿತು.

“ರಾಜ್ಯಾದ್ಯಂತ ಜವಳಿ ಉದ್ಯಮಿಗಳು ಹಾಗೂ  ವಿದ್ಯಾರ್ಥಿಗಳನ್ನು ರಫ್ತು ಕ್ಷೇತ್ರದತ್ತ ಪ್ರೇರೇಪಿಸಲು ಇಲಾಖೆಯು ಆಯೋಜಿಸುತ್ತಿರುವ 10ನೇ ಹಾಗೂ ಬೆಂಗಳೂರಿನ 2ನೇ ಕಾರ್ಯಕ್ರಮ ಇದಾಗಿದೆ. ಪ್ರಸ್ತುತ ಉಕ್ರೇನ್ ಮತ್ತು ಗಲ್ಫ್ ರಾಷ್ಟ್ರಗಳ ಯುದ್ಧದಂತಹ ಜಾಗತಿಕ ಸವಾಲುಗಳಿದ್ದರೂ, ದೇಶದ ಆರ್ಥಿಕತೆಗೆ ವಿದೇಶಿ ವಿನಿಮಯದ ತೀವ್ರ ಅಗತ್ಯವಿದೆ. ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಜೊತೆಗೆ ಜವಳಿ ರಫ್ತು ಪ್ರಮಾಣ ಗಣನೀಯವಾಗಿ ಹೆಚ್ಚಾಗಬೇಕಿದ್ದು, ಕೇಂದ್ರ ಸರ್ಕಾರದ ರಫ್ತು ಗುರಿಗಳನ್ನು ಮುಟ್ಟಲು ಯುವ ಜನಾಂಗ ಧೈರ್ಯವಾಗಿ ಈ ರಂಗಕ್ಕೆ ಕಾಲಿಡಬೇಕು,” ಎಂದರು. ರಫ್ತು ಕ್ಷೇತ್ರಕ್ಕೆ ಪ್ರವೇಶಿಸುವ ಯುವಕರಿಗೆ ಇಲಾಖೆ ಮತ್ತು ನಿವೃತ್ತ ಅನುಭವಿ ಅಧಿಕಾರಿಗಳ ಮೂಲಕ ಅಗತ್ಯ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದು ಭರವಸೆ ನೀಡಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ, ದಕ್ಷಿಣ ವಿಭಾಗದ  ಜಂಟಿ ನಿರ್ದೇಶಕರಾದ ಯೋಗೇಶ್ ಅವರು ಮಾತನಾಡಿ, ಜವಳಿ ಉತ್ಪನ್ನಗಳ ರಫ್ತು ಉತ್ತೇಜನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕೇಂದ್ರ ಸರ್ಕಾರದ ವತಿಯಿಂದ ರಾಷ್ಟ್ರಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದ್ದು, ಇದರ ಪ್ರಯೋಜನವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಿ ಕಾರ್ಯಾಗಾರಗಳನ್ನು ಆಯೋಜಿಸಬೇಕು. ಪ್ರಸ್ತುತ ರಾಜ್ಯದಲ್ಲಿ ಸುಮಾರು ಶೇ.65ರಷ್ಟು ಜವಳಿ ಉದ್ಯಮಗಳು ರೆಡಿಮೇಡ್ ಗಾರ್ಮೆಂಟ್ಸ್ ಕ್ಷೇತ್ರಕ್ಕೆ ಸಂಬಂಧಿಸಿದ್ದು, ಈ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಸೂಕ್ತ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.

ವಿ.ಟಿ.ಪಿ.ಸಿ ನಿರ್ದೇಶಕರಾದ ರಮೇಶ್ ರವರು 2030ರ ವೇಳೆಗೆ ಭಾರತದ ರಫ್ತು ಗುರಿಯನ್ನು 2 ಟ್ರಿಲಿಯನ್ ಡಾಲರ್‌ಗೆ ಏರಿಸುವ ಯೋಜನೆಯಿದೆ ಎಂದು ವಿವರಿಸಿದರು. ದೇಶದ ಒಟ್ಟು ರಫ್ತಿನಲ್ಲಿ ಕರ್ನಾಟಕದ ಪಾಲು ಶೇ.24 ರಷ್ಟಿದ್ದರೂ (ಸುಮಾರು 207 ಬಿಲಿಯನ್ ಡಾಲರ್), ಅದರಲ್ಲಿ ಸೇವಾ ವಲಯದ ಪಾಲು ಶೇ.41 ಹಾಗೂ ಸರಕುಗಳ (Merchandise) ಪಾಲು ಕೇವಲ ಶೇ.8 ರಷ್ಟಿದೆ. ಈ ಅಂತರವನ್ನು ತುಂಬಲು ಜವಳಿ ಕ್ಷೇತ್ರಕ್ಕೆ ಅಪಾರ ಅವಕಾಶಗಳಿವೆ ಎಂದು ತಿಳಿಸಿದರು. ರಾಜ್ಯ ಸರ್ಕಾರದ ನೂತನ ಜವಳಿ ನೀತಿ ಹಾಗೂ ಕೇಂದ್ರ ಸರ್ಕಾರದ ಮುಕ್ತ ವ್ಯಾಪಾರ ಒಪ್ಪಂದಗಳ  ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ದಕ್ಷಿಣ ಪ್ರಾದೇಶಿಕ ಮುಖ್ಯಸ್ಠರಾದ (EPCH) ಪಿ.ಎಲ್ . ಶ್ರೀದೇವಿ ರವರು ಮಾತನಾಡಿ  ಜವಳಿ ಕ್ಷೇತ್ರದಲ್ಲಿ ವಿನ್ಯಾಸ, ಹೊಸ ತಂತ್ರಜ್ಞಾನ, ರಫ್ತು ಹಾಗೂ ಜಾಗತಿಕ ಮಾರುಕಟ್ಟೆಯ ಬೇಡಿಕೆಗಳಿಗೆ ಅನುಗುಣವಾಗಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯ. ಸರ್ಕಾರದ ಯೋಜನೆಗಳು, ತರಬೇತಿ ಮತ್ತು ವಿವಿಧ ಸೌಲಭ್ಯಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸಂಬಂಧಿಸಿದವರು ಇಲಾಖೆಯ ವೆಬ್‌ಸೈಟ್‌ ಹಾಗೂ ಅಧಿಕೃತ ಮೂಲಗಳನ್ನು ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಕಾರ್ಯಗಾರದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರಾದ ಎನ್. ಶಶಿಧರ್., ಆರ್. VTPC ನಿರ್ದೇಶಕರಾದ ರಮೇಶ್., ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಂಗಳೂರು ನಗರ ಜಿಲ್ಲೆಯ ಜಂಟಿ ನಿರ್ದೇಶಕರಾದ ಸಿ.ಎಸ್. ಬಾಬು ನಾಗೇಶ್., KASSIA.ನ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಸಿ ಸೇರಿದಂತೆ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here