ಬಳ್ಳಾರಿ,ನ.20:
ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಉದ್ದಿಮೆಗಳ ನಾಮಫಲಕಗಳು ಹಾಗೂ ಮುದ್ರಿತ ಜಾಹೀರಾತುಗಳಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ಭಾಷೆಯನ್ನು ಬಳಸಬೇಕು. ನವೆಂಬರ್ 24ರೊಳಗಾಗಿ ಈ ನಿಯಮವನ್ನು ಪಾಲಿಸದಿದ್ದರೆ ಉದ್ದಿಮೆಗಳ ಪರವಾನಿಗೆ ರದ್ದುಪಡಿಸಿ, ಬೀಗಮುದ್ರೆ ಹಾಕಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಪಿ.ಎಸ್. ಮಂಜುನಾಥ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಕರ್ನಾಟಕದಲ್ಲಿ ಕನ್ನಡವು ಆಡಳಿತ ಭಾಷೆಯಾಗಿದ್ದು, ಸರ್ಕಾರದ ಕಾಯ್ದೆಯನ್ವಯ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕ ಮತ್ತು ಮುದ್ರಣ ಜಾಹೀರಾತುಗಳಲ್ಲಿ ಶೇ.60ರಷ್ಟು ಸ್ಥಳಾವಕಾಶವನ್ನು ಕನ್ನಡಕ್ಕೆ ಮೀಸಲಿಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ಪಾಲಿಸಬೇಕಾದ ನಿಯಮಗಳು:
ನಾಮಫಲಕದ ಮೇಲ್ಭಾಗದಲ್ಲಿ ಕನ್ನಡ ಭಾಷೆ ಪ್ರದರ್ಶಿತವಾಗಬೇಕು. ಅನ್ಯಭಾಷೆಯ ಅಕ್ಷರಗಳಿಗಿಂತ ಕನ್ನಡದ ಅಕ್ಷರಗಳು ದೊಡ್ಡದಾಗಿ ಮತ್ತು ಪ್ರಧಾನವಾಗಿ ಕಾಣುವಂತಿರಬೇಕು. ಜಾಹೀರಾತು ಮುದ್ರಣದಾರರೂ ಸಹ ಜಾಹೀರಾತುಗಳನ್ನು ಮುದ್ರಿಸುವಾಗ ಶೇ.60ರಷ್ಟು ಕನ್ನಡ ಬಳಕೆಯ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.ನವೆಂಬರ್ 24 ರ ಗಡುವಿನೊಳಗೆ ನಾಮಫಲಕಗಳನ್ನು ಬದಲಾಯಿಸಿಕೊಳ್ಳದಿದ್ದಲ್ಲಿ, ಪಾಲಿಕೆ ವತಿಯಿಂದಲೇ ಅಂತಹ ನಾಮಫಲಕ ಹಾಗೂ ಜಾಹೀರಾತುಗಳನ್ನು ತೆರವುಗೊಳಿಸಲಾಗುವುದು. ಅಲ್ಲದೆ, ನಿಯಮಾನುಸಾರ ದಂಡ ವಿಧಿಸಿ, ಪರವಾನಿಗೆ ರದ್ದುಗೊಳಿಸುವ ಮೂಲಕ ಉದ್ದಿಮೆಗಳನ್ನು ಸ್ಥಗಿತಗೊಳಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.





