ಬೆಂಗಳೂರು:

ಪತ್ನಿಯ ಪ್ರಾಣ ಉಳಿಸಲು ತನ್ನ ದೇಹದ ಒಂದು ಭಾಗವನ್ನೇ ದಾನ ಮಾಡಿದ್ದ ಪತಿ..! ಆದರೆ, ವಿಧಿಯ ಕ್ರೂರ ಆಟದ ಮುಂದೆ ಆತನ ಪ್ರೀತಿಯೂ ಸೋತುಹೋಯಿತು. ಕಣ್ಣೆದುರೇ ಪತ್ನಿ ಕೊನೆಯುಸಿರೆಳೆದಾಗ ಏನೂ ಮಾಡಲಾಗದ ಪತಿಯ ಆಕ್ರಂದನ ಮುಗಿಲು ಮುಟ್ಟಿತು..!

6 ವರ್ಷಗಳ ಹಿಂದೆ ಕಿಡ್ನಿ ಕೊಟ್ಟು ಉಳಿಸಿದ್ದ ಪತ್ನಿಯ ಜೀವ..!

ಬೆಂಗಳೂರಿನ ಲಗ್ಗೆರೆಯ ಶಿವಾಜಿ ರಾವ್ ಮತ್ತು ವೀಣಾ ಬಾಯಿ ಅನ್ಯೋನ್ಯ ದಂಪತಿ. ಆರು ವರ್ಷಗಳ ಹಿಂದೆ ವೀಣಾ ಬಾಯಿ ಅವರ ಎರಡೂ ಕಿಡ್ನಿಗಳು ವಿಫಲವಾಗಿ ಬದುಕುಳಿಯುವುದೇ ಕಷ್ಟವಾಗಿತ್ತು. ಆಗ ಕಿಡ್ನಿ ದಾನಕ್ಕೆ ಯಾರೂ ಸಿಗದಿದ್ದಾಗ, ಪತ್ನಿಯ ಜೀವ ಉಳಿಸಲು ಸ್ವತಃ ಶಿವಾಜಿ ರಾವ್ ತಮ್ಮ ಒಂದು ಕಿಡ್ನಿಯನ್ನೇ ದಾನ ಮಾಡಿದ್ದರು.

ಪತಿಯ ತ್ಯಾಗದಿಂದ ವೀಣಾ ಬಾಯಿ ಅವರಿಗೆ ಮರುಜನ್ಮ ಸಿಕ್ಕಿತ್ತು. ಮಕ್ಕಳೊಂದಿಗೆ ಸುಂದರವಾಗಿ ಸಂಸಾರ ಸಾಗಿಸುತ್ತಿದ್ದ ಈ ಜೋಡಿಯ ಬದುಕಿನಲ್ಲಿ ಮತ್ತೆಂದೂ ಇಂತಹ ದುರಂತ ಎದುರಾಗಬಹುದು ಎಂದು ಯಾರೂ ಊಹಿಸಿರಲಿಲ್ಲ.

ಸಿದ್ದಗಂಗಾ ಮಠದಿಂದ ವಾಪಸ್ ಬರುವಾಗ ಕಾದಿತ್ತು ವಿಧಿಯ ಅಟ್ಟಹಾಸ..!

ನಿನ್ನೆ ಪತಿ ಶಿವಾಜಿ ರಾವ್, ಪತ್ನಿ ವೀಣಾ ಬಾಯಿ ಹಾಗೂ ಮಗನೊಂದಿಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಿ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಮನೆಗೆ ಮರಳುತ್ತಿದ್ದರು.

ಆದರೆ, ನೆಲಮಂಗಲ ತಾಲೂಕಿನ ಎಡೆಹಳ್ಳಿ ಬಳಿ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ತೀವ್ರತೆಗೆ ವೀಣಾ ಬಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪತ್ನಿಗೆ ಮರುಜನ್ಮ ನೀಡಿದ್ದ ಪತಿಯ ಕಣ್ಣೆದುರೇ ಕಸಿದುಕೊಂಡಿತು ಸಾವು..!

ಆರು ವರ್ಷಗಳ ಹಿಂದೆ ತನ್ನ ಕಿಡ್ನಿಯನ್ನೇ ನೀಡಿ ಪತ್ನಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದ ಶಿವಾಜಿ ರಾವ್, ಇಂದು ಕಣ್ಣೆದುರೇ ಪತ್ನಿಯನ್ನು ಕಳೆದುಕೊಂಡು ದಿಕ್ಕೇ ತೋಚದಂತಾಗಿದ್ದಾರೆ.

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತವೆಸಗಿ ಪರಾರಿಯಾದ ವಾಹನದ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ಪತ್ನಿಗಾಗಿ ತನ್ನ ಕಿಡ್ನಿಯನ್ನೇ ನೀಡಿದ ಆ ಪತಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ..? ಆದರೆ ವಿಧಿ ಮಾತ್ರ ಆತನ ಬದುಕಿನ ಅತಿ ಅಮೂಲ್ಯ ಜೀವವನ್ನೇ ಕಸಿದುಕೊಂಡಿದೆ.

LEAVE A REPLY

Please enter your comment!
Please enter your name here