ದಾವಣಗೆರೆ, ನವೆಂಬರ್ 18: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯು ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್. ಆರ್.ಮೆಹರೋಜ್ ಖಾನ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಲೋಪದೋಷಗಳ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಉಪಾಧ್ಯಕ್ಷರು, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೆಎಸ್ ಆರ್ ಟಿಸಿ ಡಿಸಿಗೆ ನೋಟಿಸ್, ಸಾರಿಗೆ ಅಧಿಕಾರಿಗಳಿಗೆ ತಾಕೀತು: ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 17.48 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ₹523.28 ಕೋಟಿ ಮೌಲ್ಯದ ಟಿಕೆಟ್ ವಿತರಿಸಲಾಗಿದೆ. ಆದರೆ, ಹೊನ್ನಾಳಿ, ಚನ್ನಗಿರಿ ಮತ್ತು ನ್ಯಾಮತಿ ತಾಲೂಕುಗಳ ಗ್ರಾಮೀಣ ಭಾಗಗಳಿಗೆ ಶಾಲಾ-ಕಾಲೇಜು ಮತ್ತು ಕಚೇರಿ ಸಮಯದಲ್ಲಿ ಬಸ್‌ಗಳ ತೀವ್ರ ಕೊರತೆಯಿರುವ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಗೆ ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಗೈರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮೆಹರೋಜ್ ಖಾನ್, ಮುಂದಿನ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲು ಸೂಚಿಸಿದರು. ಅಲ್ಲದೆ, ಒಂದು ವಾರದೊಳಗೆ ಬಸ್ ಸಂಚಾರದ ಸಮಸ್ಯೆ ಬಗೆಹರಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಕ್ರಮ ಅಕ್ಕಿ ದಾಸ್ತಾನು ಜಪ್ತಿ, 38 ಎಫ್‌ಐಆರ್: ಅನ್ನಭಾಗ್ಯ ಯೋಜನೆಯಡಿ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಆಹಾರ ಇಲಾಖೆ ಅಧಿಕಾರಿಗಳು, ಇದುವರೆಗೆ 1,689 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ಅವ್ಯವಹಾರ ನಡೆಸಿದ 5 ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಗೊಳಿಸಲಾಗಿದ್ದು, 38 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಅಂತ್ಯೋದಯ ಕಾರ್ಡ್‌ಗಳ ದುರ್ಬಳಕೆ ತಡೆಯಲು ಹಾಗೂ ಮನೆಮನೆಗೆ ತೆರಳಿ ಕೆವೈಸಿ ಪೂರ್ಣಗೊಳಿಸಲು ಉಪಾಧ್ಯಕ್ಷರು ನಿರ್ದೇಶನ ನೀಡಿದರು.
ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಪ್ರಗತಿ:ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಶೇ. 97.24 ರಷ್ಟು ಸಾಧನೆಯಾಗಿದ್ದು, 36 ಕಂತುಗಳಲ್ಲಿ ಒಟ್ಟು ₹2,545.31 ಕೋಟಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ಜಮೆಯಾಗಿದ್ದ ₹3.65 ಕೋಟಿ ಹಣದಲ್ಲಿ ₹98.79 ಲಕ್ಷ ಹಣವನ್ನು ಬ್ಯಾಂಕ್‌ಗಳ ಮೂಲಕ ಹಿಂಪಡೆಯಲಾಗಿದ್ದು, ಉಳಿದ ಮೊತ್ತವನ್ನು ಶೀಘ್ರ ವಸೂಲಿ ಮಾಡಲು ಲೀಡ್ ಬ್ಯಾಂಕ್ ಅಧಿಕಾರಿಗಳ ಸಭೆ ಕರೆಯುವಂತೆ ಸೂಚಿಸಲಾಯಿತು.

ಗೃಹಜ್ಯೋತಿ ಯೋಜನೆಯಲ್ಲಿ ಶೇ. 96.26 ರಷ್ಟು ಪ್ರಗತಿಯಾಗಿದ್ದು, ಬಾಡಿಗೆ ಮನೆ ಬದಲಾವಣೆ ಮತ್ತು ಬೇಸಿಗೆಯ ವಿದ್ಯುತ್ ಬಿಲ್ ವ್ಯತ್ಯಾಸದಿಂದ ಬಾಕಿ ಉಳಿದಿರುವ 12,450 ಫಲಾನುಭವಿಗಳ ಸಮಸ್ಯೆ ಬಗೆಹರಿಸಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಯಿತು.

ಯುವನಿಧಿ ಮತ್ತು ಶಿಷ್ಟಾಚಾರ ಪಾಲನೆ: ಯುವನಿಧಿ ಯೋಜನೆಯಡಿ 15,565 ಪದವೀಧರರು ಹಾಗೂ ಡಿಪ್ಲೊಮಾದಾರರಿಗೆ ₹52.01 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದೆ. ಜನವರಿ ತಿಂಗಳಲ್ಲಿ ವಿಶೇಷ ಕೌಶಲ್ಯ ತರಬೇತಿ ಮತ್ತು ಉದ್ಯೋಗ ಮೇಳ ಆಯೋಜಿಸಲು ಸೂಚಿಸಲಾಯಿತು. ಇದೇ ವೇಳೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ಶಿಷ್ಟಾಚಾರದಂತೆ ಆಹ್ವಾನಿಸಿ ವೇದಿಕೆಯಲ್ಲಿ ಸೂಕ್ತ ಗೌರವ ನೀಡಬೇಕು ಎಂದು ಮೆಹರೋಜ್ ಖಾನ್ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಸಾಹಿತ್ಯ ಎಂ. ಆಲದಕಟ್ಟಿ, , ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಾಮನೂರು ಟಿ. ಬಸವರಾಜು, ಉಪಾಧ್ಯಕ್ಷರಾದ ರಾಜೇಶ್ವರಿ, ಅನೀಶ್ ಪಾಷ, ಕೆ. ಎನ್. ಮಂಜುನಾಥ, ಮಂಜಾನಾಯ್ಕ ಹಾಗೂ ಸದಸಸಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ದಾವಣಗೆರೆ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ – 2026.

ದಾವಣಗೆರೆ,ನವೆಂಬರ್. 18 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ದಾವಣಗೆರೆ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2026 ನವೆಂಬರ್ 20 ರಿಂದ 22 ರವರೆಗೆ ಜಿಲ್ಲಾ ಪೊಲೀಸ್ ಕವಾಯತು ಮೈದಾನ, ದಾವಣಗೆರೆ ಯಲ್ಲಿ ಆಯೋಜಿಸಲಾಗಿದೆ.
ನವೆಂಬರ್ 20 ರಂದು ಬೆಳಿಗ್ಗೆ 8:00 ಗಂಟೆಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ವಿಜೇತರಾದ ಎನ್.ಎಸ್. ನಾಗರಾಜ್ ರಾವ್ ಅವರು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ ಹಾಗೂ ಮುಖ್ಯ ಅತಿಥಿಗಳಾಗಿ ದಾವಣಗೆರೆ ಪೂರ್ವ ವಲಯ ಪೊಲೀಸ್ ಮಹಾ ನಿರ್ದೇಶಕರಾದ ಎನ್. ಸತೀಶ್ ಕುಮಾರ್ ಇವರು ಆಗಮಿಸಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್. ಟಿ ಅವರು ತಿಳಿಸಿದ್ದಾರೆ.

ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಕ್ರೀಡಾ ಕೂಟ ಆಯೋಜನೆ.

ದಾವಣಗೆರೆ, ನವೆಂಬರ್. 18(ಕರ್ನಾಟಕ ವಾರ್ತೆ ): ವಿಶ್ವ ವಿಕಲಚೇತನರ ದಿನಾಚರಣೆ 2026ರ ಪ್ರಯುಕ್ತ ನವೆಂಬರ್ 20 ರಂದು ನಗರದ ಮೋತಿ ವೀರಪ್ಪ ಕಾಲೇಜು ಮೈದಾನ, ಗುಂಡಿ ಸರ್ಕಲ್ ಹತ್ತಿರ ದಾವಣಗೆರೆ ಇಲ್ಲಿ ಜಿಲ್ಲಾ ವಿಕಲಚೇತನರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಲಾಗುತ್ತಿದ್ದು,ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಸಹಾಯವಾಣಿ ಕೇಂದ್ರ ಸಂಖ್ಯೆ : 08192- 263939 ಹಾಗೂ ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಕಚೇರಿಯನ್ನ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ತಿಳಿಸಿದ್ದಾರೆ.

ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ.
ದಾವಣಗೆರೆ, ನವೆಂಬರ್. 18, (ಕರ್ನಾಟಕ ವಾರ್ತೆ):2020-21ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿಯ ಶೇ. 24.10 ಯೋಜನೆ ಹಾಗೂ ಟಿ.ಎಸ್.ಪಿ. ಅನುದಾನದಡಿಯಲ್ಲಿ ಮಲೇ ಬೆನ್ನೂರು ಪುರಸಭೆ ವ್ಯಾಪ್ತಿಯ ಪರಿಶಿಷ್ಟ ಪಂಗಡದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಕಲ್ಪಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮಲೇಬೆನ್ನೂರು ಪುರಸಭೆ ಕಾರ್ಯಾಲಯ ಕಚೇರಿ ಅಥವಾ ದೂರವಾಣಿ ಸಂಖ್ಯೆ 08192-268858 ಗೆ ಸಂಪರ್ಕಿಸಬಹುದು ಎಂದು ಮಲೇಬೆನ್ನೂರು ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ದಾವಣಗೆರೆ ತಾಲ್ಲೂಕು ಸ್ಥಿರಾಸ್ತಿಗಳ ಮಾರ್ಗದರ್ಶಿ ಸೂಚಿಬೆಲೆ ಪರಿಷ್ಕರಣೆ –ಆಕ್ಷೇಪಣೆ ಆಹ್ವಾನ.
ದಾವಣಗೆರೆ, ನವೆಂಬರ್. 18(ಕರ್ನಾಟಕ ವಾರ್ತೆ ): ದಾವಣಗೆರೆ ಹಿರಿಯ ಉಪನೋಂದಣಿ ಕಚೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ 2026-27ನೇ ಸಾಲಿನ ಮಾರ್ಗದರ್ಶಿ ಸೂಚಿ ಮಾರುಕಟ್ಟೆ ಬೆಲೆಯನ್ನು ಪರಿಷ್ಕರಿಸಲಾಗಿದೆ. ಸಾರ್ವಜನಿಕರು ತಮ್ಮ ಲಿಖಿತ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಲು ನವೆಂಬರ್ 14 ರಿಂದ ಮುಂದಿನ 15 ದಿನಗಳಗೆ ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು ದಾವಣಗೆರೆ ಉಪನೋಂದಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಉಪ ನೊಂದಣಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here