ಬೆಂಗಳೂರು ನಗರ ಜಿಲ್ಲೆ  ಮೇ. 6 :- ಬೆಂಗಳೂರು ನಗರದಲ್ಲಿ  ಜಿಲ್ಲೆ ಯಲ್ಲಿ ಗೋವುಗಳ ಅಕ್ರಮ  ಸಾಗಣೆ  ಅಥವಾ ಹತ್ಯೆ ಮಾಡಿದಲ್ಲಿ ಏಳು ವರ್ಷ ಜೈಲು,  ಹಾಗೂ  ರೂ 10 ಲಕ್ಷ ಗಳ ವರೆಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ  ಅವರು  ಎಚ್ಚರಿಕೆ ನೀಡಿದ್ದಾರೆ.

ಬಕ್ರೀದ್ ಸಂದರ್ಭದಲ್ಲಿ ಒಂಟೆ, ಗೋವುಗಳ ಸಾಗಣೆ ಮತ್ತು ಹತ್ಯೆ ಮಾಡುವುದನ್ನು ತಡೆಗಟ್ಟುವ ಬಗ್ಗೆ  ಇಂದು ನಡೆದ  ಸಭೆಯನ್ನು ಉದ್ದೇಶಿಸಿ  ಮಾತನಾಡಿದ ಅವರು  ಜಿಲ್ಲೆ ಗೆ ಬರುವ ವಾಹನಗಳ  ತಪಾಸಣೆ ನಡೆಸಿ ಗೋವು, ಒಂಟೆಗಳ ಅಕ್ರಮ ಸಾಗಣೆ ಕಂಡುಬಂದಲ್ಲಿ   ಯಾವುದೇ ಮುಲಾಜಿಲ್ಲದೆ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

‘ಒಂಟೆ, ಗೋವುಗಳ ಹತ್ಯೆ ಮಾಡುವುದು, ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಪ್ರಾಣಿಗಳನ್ನು ಕಳ್ಳ ಸಾಗಣೆ ಮಾಡುವುದು ಅಪರಾಧವಾಗಿದ್ದು, ಇದರ ಬಗ್ಗೆ  ಸಾರ್ವಜನಿಕರಲ್ಲಿ ಕರಪತ್ರ  ಹಾಗೂ ಆಟೊರಿಕ್ಷ  ಪ್ರಚಾರ ಮೂಲಕ ಅರಿವು ಮೂಡಿಸಬೇಕು.

ಪೊಲೀಸ್ ಇಲಾಖೆಯು  ಸಾರಿಗೆ ಇಲಾಖೆ (RTO) ಸಹಯೋಗದೊಂದಿಗೆ  ಬೆಂಗಳೂರು ನಗರಕ್ಕೆ ಆಗಮಿಸುವ ಸಾಗಾಣಿಕೆ ವಾಹನಗಳನ್ನು ತಪಾಸಣೆ ನಡೆಸಿ ಅನಧಿಕೃತ ಗೋವು / ಒಂಟೆಗಳನ್ನು ಸಾಗಿಸುತ್ತಿದ್ದಲ್ಲಿ ಸದರಿ ವಾಹನಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲು ಮತ್ತು ವಾಹನದಲ್ಲಿರುವ ಗೋವುಗಳನ್ನು ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ಗೋಶಾಲೆಗೆ ಅದೇ ವಾಹನದಲ್ಲಿ ಸಾಗಿಸಲು ಸೂಚನೆ  ನೀಡಿದರು.

ನಗರದ ಹೊರ ವಲಯಗಳಲ್ಲಿ, ಮೈಸೂರು ರಸ್ತೆ (ಕುಂಬಳಗೂಡು), ತುಮಕೂರು ರಸ್ತೆ (ಎಕ್ಸಿಬ್ಯೂಷನ್ ಕೇಂದ್ರ) ಮಾಗಡಿ ರಸ್ತೆ (ತಾವರೆಕೆರೆ), ಹೊಸೂರು ರಸ್ತೆ (ಅತ್ತಿ ಬೆಲೆ), ಹಳೆ ಮದ್ರಾಸ್ ರಸ್ತೆ (ಹೊಸಕೋಟೆ ಹತ್ತಿರ)  ಸೇರದ ಒಟ್ಟು 10  ತಪಾಸಣಾ ಕೇಂದ್ರಗಳನ್ನು ಸಾರಿಗೆ ಇಲಾಖೆ ನೇತೃತ್ವದಲ್ಲಿ ನಿರ್ಮಿಸಿ, ಎಲ್ಲಾ ಕೇಂದ್ರಗಳಲ್ಲಿ ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸಲು ಸೂಚಿಸಿದರು.

ಅಕ್ರಮವಾಗಿ ಒಂಟೆ, ಗೋಹತ್ಯೆ ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ಬೆಂಗಳೂರು ನಗರ ಪಾಲಿಕೆಗಳ ಸಹಾಯವಾಣಿ 1533ಕ್ಕೆ ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಿದರು.

ಹಬ್ಬದ ಸಂದರ್ಭಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕದಂತೆ ಎಚ್ಚರವಹಿಸಬೇಕು. ಪ್ರಾಣಿ ವಧೆಯಿಂದ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಯನ್ನು ನಿಯಮಾನುಸಾರ ನಿರ್ವಹಣೆ ಮಾಡಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ  ಬೆಂಗಳೂರು ನಗರ ಜಿಲ್ಲೆಯ ಪಶುಪಾಲನ ಇಲಾಖೆಯ ಉಪ ನಿರ್ದೇಶಕ ಡಾ. ಪರಮೇಶ್ವರ್ ರವರು ಹಾಗೂ  ಜಿ. ಬಿ. ಎ ಉಪ ನಿರ್ದೇಶಕರಾದ ಡಾ. ಚಂದ್ರಯ್ಯ  ರವರು  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here