ಬಾಗಲಕೋಟೆ:
ಜಿಲ್ಲೆಯಲ್ಲಿನ ನಿರ್ವಾನಗೇಡಿ ಅಧಿಕಾರಿಗಳ ಚಳಿ ಬಿಡಿಸುವ ಕೆಲಸ ಶನಿವಾರ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ನಡೆದ ಸಭೆಯಲ್ಲಿ ನಡೆದಿದೆ.
ಚಾಲುಕ್ಯರ ರಾಜಧಾನಿ ಬಾದಾಮಿ ಇತಿಹಾಸ ಪ್ರಸಿದ್ದ ಪ್ರವಾಸಿ ತಾಣ. ಇಲ್ಲಿನ ಐತಿಹಾಸಿಕ ಸ್ಮಾರಕಗಳ ಸುತ್ತಲಿನ ಮನೆಗಳನ್ನು ಸ್ಥಳಾಂತರಿಸಬೇಕು. ಆ ಮೂಲಕ ಪ್ರವಾಸಿ ತಾಣ ಅಭಿವೃದ್ಧಿ ಪಡಿಸಬೇಕು ಎನ್ನುವ ಕೂಗು ನಿರಂತರವಾಗಿದೆ.
ಪ್ರವಾಸಿ ತಾಣದ ಅಭಿವೃದ್ಧಿಗೆ ಕೇಂದ್ರ ಅಗತ್ಯ ಅನುದಾನ ಕೊಡಲು ಸಿದ್ದವಿದ್ದು, ಸೂಕ್ತ ಪ್ರಸ್ತಾವನೆಗಳ ಸಲ್ಲಿಕೆ ಆಗುತ್ತಿಲ್ಲ ಎನ್ನುವುದು ಸಂಸದರ ವಾದವಾಗಿದೆ. ಆದರೆ ಜಿಲ್ಲಾಡಳಿತ ಈ ವಿಷಯದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿರುವುದನ್ನು ಸಹಿಸಲಾಗದ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಇಂತಹ ಅಧಿಕಾರಿಗಳಿಂದ ಅಭಿವೃದ್ಧಿ ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಆಕ್ರೋಶಗೊಂಡು ಸಭೆಯಿಂದ ಹೊರ ನಡೆಯಲು ಮುಂದಾದಾಗ ಉಸ್ತುವಾರಿ ಸಚಿವರ ಸಮಾಧಾನ ಪಡಿಸಿದ ಪ್ರಸಂಗ ನಡೆದಿದೆ.
ಮೂಲ ಸೌಕರ್ಯಗಳ ಕೊರತೆ:
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಗಲಕೋಟೆ ಜಿಲ್ಲೆ ಗಮನ ಸೆಳೆದ ತಾಣವಾಗಿದೆ. ಇಲ್ಲಿನ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ಇತಿಹಾಸ ಪ್ರಸಿದ್ದ ಪ್ರವಾಸಿ ತಾಣಗಳು.
ಪ್ರವಾಸಿಗರನ್ನು ನಿರೀಕ್ಷಿತ ಮಟ್ಟದಲ್ಲಿ ಸೆಳೆಯಲು ಸಾಧ್ಯವಾಗುತ್ತಿಲ್ಲ. ಮೂಲ ಸೌಕರ್ಯಗಳನ್ನು ಕಲ್ಪಿಸಲು ಆಗುತ್ತಿಲ್ಲ ಎನ್ನುವ ಕೊರಗು ಎಲ್ಲರನ್ನು ಕಾಡುತ್ತಲೇ ಇದೆ.
ಸರ್ಕಾರಗಳ ದಿವ್ಯ ನಿರ್ಲಕ್ಷದ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಿಲ್ಲೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ಸಾಧ್ಯವಾಗುತ್ತಿಲ್ಲ. ಅಸಾಧ್ಯವನ್ನು ಸಾಧ್ಯವಾಗಿಸಲು ಜನಪ್ರತಿನಿಧಿಗಳು ಮನಸ್ಸು ಮಾಡಿದರೂ ಅದಕ್ಕೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದೆ ಇರುವುದು ವಿಷಾದನೀಯ.
ಜನಪ್ರತಿನಿಧಿಗಳ ಮಧ್ಯೆ ಜುಗಲ್ ಬಂದಿ:
ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ದೇಶಿ ಕಲೆ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಆರಂಭಗೊಂಡಿದ್ದ ಚಾಲುಕ್ಯ ಉತ್ಸವ ಕಳೆದ ಹತ್ತು ವರ್ಷಗಳಿಂದ ನಿಂತೇ ಹೋಗಿತ್ತು. ಅದಕ್ಕೆ ಈ ವರ್ಷ
ಮತ್ತೆ ಚಾಲನೆ ಸಿಕ್ಕಾಗ ಎಲ್ಲರಲ್ಲೂ ಅದೇನೋ ಅವ್ಯಕ್ತ ಸಂತಸ ಮನೆ ಮಾಡಿತ್ತು. ಉತ್ಸವ ಎಂದಿನಂತೆ ಕೇವಲ ಸಂಭ್ರಮಕ್ಕೆ ಸೀಮಿತವಾಗಿರಲಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ಚಾಲುಕ್ಯ ಉತ್ಸವ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಸದ ಪಿ.ಸಿ. ಗದ್ದಿಗೌಡರ ನಡುವೆ ಬಹುದೊಡ್ಡ ಜುಗಲ್ ಬಂದಿಯೇ ನಡೆಯಿತು. ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ನಮ್ಮಲ್ಲೂ ಇತಿಹಾಸ ಪ್ರಸಿದ್ದ ಪ್ರವಾಸಿ ತಾಣಗಳಿದ್ದರೂ ಅವುಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ಮೂಲಕ ಸೂಕ್ತ ಪ್ರಸ್ತಾವನೆಗಳು ಬರುತ್ತಿಲ್ಲ. ಒಂದೊಮ್ಮೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದಲ್ಲಿ, ಕೇಂದ್ರದಿಂದ ಅಗತ್ಯ ಅನುದಾನ ಕೊಡಿಸುವ ಪ್ರಯತ್ನ ಮಾಡುವೆ ಎನ್ನುವ ಭರವಸೆ ಮಾತುಗಳನ್ನಾಡಿದರು.
ಮಾತಿಗೆ ಸಿಮೀತವಾಯ್ತು ಪ್ರಸ್ತಾವನೆ:
ಸಂಸದರ ಈ ಮಾತುಗಳಿಂದ ಉತ್ತೇಜಿತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅವರ ಸಂಪುಟದ ಸದಸ್ಯರು ಶಾಸಕರು ಕೂಡಲೇ ಪ್ರಸ್ತಾವನೆ ಕಳುಹಿಸುತ್ತೇವೆ. ನೀವು ಅನುದಾನ ಕೊಡಿಸಿ ಎನ್ನುವ ಮಾತುಗಳನ್ನು ಆಡಿದರು. ಚಾಲುಕ್ಯ ಉತ್ಸವ ಮುಗಿದು ಆರು ತಿಂಗಳುಗಳೆ ಗತಿಸಿದರೂ ಇದುವರೆಗೂ ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಬೆಳವಣಿಗೆ ಕುರಿತು ಜಿಲ್ಲೆಯಿಂದ ರಾಜ್ಯಕ್ಕೆ, ರಾಜ್ಯದಿಂದ ಕೇಂದ್ರಕ್ಕೆ ಒಂದೆ ಒಂದು ಪ್ರಸ್ತಾವನೆ ಹೋಗಿಲ್ಲ. ಇದರ ಮಧ್ಯೆ ಸಂಸದ ಪಿ.ಸಿ. ಗದ್ದಿಗೌಡರ ಅಧಿಕಾರಿಗಳ ಸಭೆಯೊಂದನ್ನು ತೆಗೆದುಕೊಂಡು ಪ್ರಸ್ತಾವನೆ ಕಳುಹಿಸುವಂತೆ ತಾಕೀತು ಮಾಡಿದ್ದರು. ಏನು ಪ್ರಯೋಜನವಾಗಿಲ್ಲ.
ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆ:
ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ ಬಾದಾಮಿಯ ಪ್ರವಾಸಿ ತಾಣಗಳ ಸುತ್ತಲಿನ ಪ್ರದೇಶಗಳ ಸ್ಥಳಾಂತರ ವಿಷಯದಲ್ಲಿ ಅಧಿಕಾರಿಗಳು ನಡೆದುಕೊಂಡ ರೀತಿಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿ, ಇಂತಹ ಅಧಿಕಾರಿಗಳಿಂದ ಏನೂ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಜಿಲ್ಲೆಯಲ್ಲಿನ ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆ ತಿವಿಯುವ ಕೆಲಸ ಮಾಡಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ
ಅಧಿಕಾರಿಗಳ ನಿರ್ಲಕ್ಷ ಅನಾವರಣಗೊಂಡಿದೆ. ಇಂತಹ ಅಧಿಕಾರಿಗಳ ದಿಸೆಯಿಂದಲೇ ಇಂದು ಜಿಲ್ಲೆಯ ಅಭಿವೃದ್ಧಿಯೂ ಆಗುತ್ತಿಲ್ಲ. ಅಕ್ರಮ ವ್ಯವಹಾರಗಳೂ ನಿಲ್ಲುತ್ತಿಲ್ಲ. ಪಾಪ , ಅಭಿವೃದ್ಧಿ ಮಾಡಬೇಕು ಎನ್ನುವ ಜನಪ್ರತಿನಿಧಿಗಳು ಏನು ಮಾಡಬೇಕು ಎನ್ನುವುದು ಸದ್ಯ
ಯಕ್ಷಪ್ರಶ್ನೆಯಾಗಿದೆ.(
- ವಿಠ್ಠಲ ಆರ್. ಬಲಕುಂದಿ)





