ನಮ್ಮ ಮೂಲ ನೆಲೆಯ ವೀರ ಕಲೆ ಬಯಲಾಟ ಮತ್ತು ಪೌರಾಣಿಕ ರಂಗಭೂಮಿಯನ್ನು ದೈವಿಕ ಶಕ್ತಿಯಲಿ ಕಾಣುವ ಬಳ್ಳಾರಿ ವಿಜಯನಗರ ಜನರು
ಉತ್ತರ ಕರ್ನಾಟಕ ಅದರಲ್ಲೂ ನಮ್ಮ ಹೈದರಾಬಾದ್ ಪ್ರಾಂತ್ಯದಲ್ಲಿ ರಂಗಭೂಮಿ ಕೇವಲ ಒಂದು ಕಲೆಯಲ್ಲ ಅದು ನಮ್ಮ ನೆಲದ ದೈವಿಕ ಶಕ್ತಿಯ ಪ್ರತೀಕ. ಇಂದಿಗೂ ನಮ್ಮ ಹಳ್ಳಿಗಳ ನಾಟಕಗಳು ಸಂಸ್ಕೃತಿಯ ಕಳೆಯ ಜೊತೆಗೆ ಒಂದು ಊರಿನ ಒಂದತ್ವದ ಬಂಧತ್ವದ ಸಾಂಕೇತಿಕ ಸಾಕ್ಷಿಗಳು.
ರಂಗ ಪ್ರಯೋಗ ಅಂದರೆ ಅದೊಂದು ತಪ್ಪಸ್ಸು ಅದರಲ್ಲೂ ಈ ಪೌರಾಣಿಕ ಬಯಲಾಟ ನಾಟಕಗಳು ಎಂದರೆ ಭಕ್ತಿ ಪೂರ್ವಕವಾಗಿ ಕಾಣುವ ವೀರ ಕಲೆ. ದಕ್ಷಿಣಕ್ಕೆ ಯಕ್ಷಗಾನ ಹೇಗೋ ಉತ್ತರಕ್ಕೆ ಬಯಲಾಟ. ಈ ಕಲೆ ಕೇವಲ ಒಂದು ಮನೋರಂಜನೆ ಪಂಕ್ತಿಗೆ ಸೇರದೇ ಪಾತ್ರಗಳು ದೈವ ಸಂಭೂತದಲಿ ಲೀನವಾಗಿ ಬಹುದೊಡ್ಡ ಮಾನವೀಯ ಸಾರಾಂಶದ ಬೆಳಕಾಗಿ ಇದರ ಮುಖೇನ ನೋಡುಗರಿಗೆ ಮನುಜತೆಯ ಪಾಠದೊಂದಿಗೆ ಊರಿನ ಸಮೃದ್ಧಿಯ ಪ್ರತೀಕದ ಸಾಕ್ಷರವಾಗುತ್ತವೆ.
ಮೊದಲೆಲ್ಲ ಬೆಂಕಿಯ ಪೊಂಜಿನ ಬೆಳಕಿನಲಿ ರಂಗೇರಿ ಅದವಾಗಿ ಬೆಂಕಿಯಲಿ ಹಾಕಿಸಿದ ಹಲಗೆ ನಾದದ ಶಕ್ತಿಯಲಿ ನೈಜತೆಯ ಸೊಗಡಿನಲಿ ಕಟ್ಟಿಗೆಯ ರಂಗ ಸಜ್ಜಿಕೆಯ ಹಲಗೆಯ ಮೇಲೆ ಬಲವಾದ ಕುಣಿತದೊಂದಿಗೆ ಮರ್ದಿಸುತ್ತಿದ್ದ ಬಯಲಾಟ ಕಲೆಗೆ ಈಗ ಕ್ಯಾಸಿನೊ ತಬಲ ಡೊಲಕ್ ಜೊತೆಯಾಗಿ ಹಿಮ್ಮೇಳದ ರಂಗು ಹೆಚ್ಚಿಸಿವೆ ಆದರೂ ಬಯಲಾಟದ ವೀರ ಕಲೆಗೆ ಚರ್ಮದ ಹಲಗೆ ಹಿತ್ತಾಳೆ ತಾಳಗಳೇ ಇಂದಿಗೂ ರಂಗಭೂಮಿಯ ಯಶಸ್ವಿ ಪ್ರಯೋಗಕ್ಕೆ ಬಹುದೊಡ್ಡ ಮೇಳಗಳು.
ಮೊನ್ನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಗ್ರಾಮದಲ್ಲಿ ಜರುಗಿದ ಬಯಲಾಟ ನಾಟಕದಲ್ಲಿ ಒಂದೇ ಕುಟುಂಬದ ಮೂರು ತಲೆಮಾರಿನ ಕಲಾವಿದರುವ ಅಭಿನಯಿಸುವ ಮೂಲಕ ಐತಿಹಾಸಿಕ ಸಾಕ್ಷಿಯಾಗಿದ್ದಾರೆ. ಇದರ ಮೂಲಕ ಹವ್ಯಾಸ ರಂಗಭೂಮಿ ಕಲಾವಿದರು ಕಲೆಯನ್ನು ಎಷ್ಟೊಂದು ದೈವ ಸ್ಚರೂಪದಲ್ಲಿ ಕಾಣುತ್ತಾರೆ ಎಂಬುದುಕ್ಕೆ ಈ ಕೆಳಗಿನ ಚಿತ್ರಣವೇ ಸಾಕ್ಷಿ
ಬಯಲಾಟ ಕಲೆ ನಮ್ಮ ಬಳ್ಳಾರಿ ವಿಜಯನಗರ ಜಿಲ್ಲೆಗಳ ಮೂಲ ನೆಲೆಯ ಈ ನೆಲದ ಸಾಂಸ್ಕೃತಿಕ ಸಾಕ್ಷಿಯ ವೀರ ಕಲೆ
(ಬರಹ – ಕೆ.ನಾಗರಾಜ ಉಲವತ್ತಿ)





