ಪ್ರಜಾಪ್ರಭುತ್ವ ದೇಶವಾದ ಭಾರತದ ಇತಿಹಾಸದಲ್ಲಿ ಹಲವು ಕಾರಣಗಳಿಗಾಗಿ ಮಹಾನ್ ಎನಿಸುವ ವಿಷಯಾಧಾರಿತ ಹೋರಾಟಗಳು ಜರುಗಿವೆ.ಮೊದಲು ಸ್ವಾತಂತ್ರ್ಯಕ್ಕಾಗಿ ನಂತರ ಸಮಾನತೆಗಾಗಿ, ದುಡಿಮೆಯ ಹಕ್ಕಿಗಾಗಿ, ಕುಡಿಯುವ ನೀರಿಗಾಗಿ ಮತ್ತು ಶೋಷಣೆಗಳ ವಿರುದ್ಧ ಹತ್ತು ಹಲವು ಹೋರಾಟಗಳು ನಡೆದಿವೆ ಮತ್ತು ಈಗಲೂ ನಡೆಯುತ್ತಿವೆ.ಇಲ್ಲಿ ಗಾಂಧೀಜಿ, ನೆಹರೂ ಅವರ ಹೋರಾಟದ ಮಾದರಿಯೂ ಇದೆ, ಜೊತೆಗೆ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಹಾಗೂ ಸುಭಾಷ್ ಚಂದ್ರಬೋಸ್ ಅವರ ರೀತಿಯ ಹೋರಾಟದ ಮಾದರಿಯೂ ಅಸ್ತಿತ್ವದಲ್ಲಿ ಇದೆ.ಈ ಪೈಕಿ ಅಹಿಂಸಾ ಮಾದರಿಯ ಹೋರಾಟಕ್ಕೆ ನಮ್ಮ ದೇಶದಲ್ಲಿ ದೊಡ್ಡ ಇತಿಹಾಸ ಇದೆ. ಅಸಹಕಾರ ಚಳುವಳಿ, ಉಪವಾಸ ಸತ್ಯಾಗ್ರಹ, ಹರತಾಳ ಮಾದರಿಯ ಹೋರಾಟಗಳಿಗೆ ಇಲ್ಲಿ ಜಯ ಸಿಕ್ಕಿದ್ದು, ಆ ಹೋರಾಟದ ಕಾರಣಗಳಿಂದ ಜನರಿಗೆ ಒಳಿತಾಗಿದೆ.ಆದರೆ ಈಗ ಪ್ರಶ್ನೆ ಇರುವುದು ಸತ್ಯಾಗ್ರಹದ್ದಲ್ಲ. ಬದಲಿಗೆ ಸತ್ಯಾಗ್ರಹಕ್ಕೆ ಪ್ರಭುತ್ವವು ಸ್ಪಂದಿಸುತ್ತಿರುವ ಬಗೆಗೆ.ಕಾರಣ ಕೇಂದ್ರ ಯುಪಿಎ ಮತ್ತು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿಪಕ್ಷಗಳಿಂದ ಮತ್ತು ಹೋರಾಟಗಾರರಿಂದ ಹಲವು ರೀತಿಯ ಹೋರಾಟಗಳು ಜರುಗಿವೆ. ಈ ಎಲ್ಲ ಸಂದರ್ಭದಲ್ಲೂ ಕೂಡಾ ಅವರ ಹೋರಾಟಗಳಿಗೆ ಪ್ರಭುತ್ವವು ಸ್ಪಂದಿಸಿದೆ ಮತ್ತು ಮಾನವೀಯವಾಗಿ ಹೋರಾಟಗಾರರೊಡನೆ ಮಾತನಾಡುವ ಮತ್ತು ಅವರ ಸಮಸ್ಯೆಗಳನ್ನು ಆಲಿಸುವ ಕೆಲಸವನ್ನು ಮಾಡಿತ್ತು.ನೆಹರೂ ಅವರ ನೇತೃತ್ವದ ಸರ್ಕಾರದಲ್ಲಿ ಪ್ರತ್ಯೇಕ ಆಂಧ್ರಪ್ರದೇಶ ರಾಜ್ಯಕ್ಕಾಗಿ ಒತ್ತಾಯಿಸಿದ ಪೊಟ್ಟಿ ಶ್ರೀರಾಮುಲು ಅವರ 58 ದಿನಗಳ ಉಪವಾಸ ಸತ್ಯಾಗ್ರಹ, ಲೋಹರಿ ಜಲವಿದ್ಯುತ್ ಯೋಜನೆಯನ್ನು ವಿರೋಧಿಸಿ ಮತ್ತು ಗಂಗಾ ನದಿಯ ರಕ್ಷಣೆಗಾಗಿ ಜಿ.ಡಿ ಅಗರ್ವಾಲ್ ಅವರು ಮಾಡಿದ ಉಪವಾಸ ಸತ್ಯಾಗ್ರಹ ಹಾಗೂ ಮಯನ್ಮಾರ್ ನಲ್ಲಿ ಪ್ರಜಾಪ್ರಭುತ್ವ ವಾತಾವರಣ ರಚನೆ ಆಗುವ ಉದ್ದೇಶದಿಂದ ಆಂಗ್ ಸಾನ್ ಸೂಕಿ ಅವರು ಮಾಡಿದ ಹೋರಾಟಗಳು ಮತ್ತು ಅದಕ್ಕೆ ದೊರೆತ ಸಕಾರಾತ್ಮಕ ಸ್ಪಂದನೆಯನ್ನು ನಾವಿಲ್ಲಿ ಗಮನಿಸಬಹುದು.ಇನ್ನೂ ಆಧುನಿಕ ಕಾಲಘಟ್ಟದಲ್ಲಿ ಗಾಂಧಿ ಟೋಪಿಯನ್ನು ಧರಿಸಿ ಯುಪಿಎ ಸರ್ಕಾರದ ವಿರುದ್ಧ ಹೋರಾಟ ಮಾಡಿ, ಈಗೆಲ್ಲೋ ಕಾಣದಂತೆ ಮಾಯವಾಗಿರುವ ಅಣ್ಣಾ ಹಜಾರೆ ಅಂತಹವರ ಹೋರಾಟಕ್ಕೂ ಸಹ ಸರ್ಕಾರ ಸ್ಪಂದಿಸಿತ್ತು. ಇನ್ನು ರಾಜ್ಯ ಸರ್ಕಾರದ ಮಟ್ಟದಲ್ಲಿ ptcl ಹೋರಾಟ, ಒಳ ಮೀಸಲಾತಿ ಹೋರಾಟ, ಪೌರ ಕಾರ್ಮಿಕರ ಘನತೆಯ ವೇತನಕ್ಕಾಗಿ ಜರುಗಿದ ಹೋರಾಟ ಮತ್ತು ಇನ್ನಿತರೆ ಹೋರಾಟದ ಸಂದರ್ಭಗಳಲ್ಲಿ ಪ್ರತಿ ಬಾರಿಯೂ ಹೋರಾಟಗಾರರ ಬೇಡಿಕೆಗಳನ್ನು ಖುದ್ದಾಗಿ ಆಲಿಸಿ, ಆ ಕುರಿತಾಗಿ ಪರಿಹಾರ ಕ್ರಮ ರೂಪಿಸುವ ಕೆಲಸವನ್ನು ಮಾಡಲಾಗಿದೆ.
ರಾಜಕೀಯ ಪ್ರೇರಿತ ವಿಷಯದ ಆಚೆಗೂ ಸಹ ಹೋರಾಟಗಳಿಗೆ ಸಿಕ್ಕ ಸ್ಪಂದನೆಯನ್ನು ಗಮನಿಸಿದಾಗ, ಅದರಲ್ಲಿ ಪ್ರಜಾಪ್ರಭುತ್ವದ ದನಿಗಳಿಗೆ ಹೆಚ್ಚಿನ ಮನ್ನಣೆಯೇ ಇತ್ತು. ಆದರೆ ದೇಶದ ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸಲು ಕೇಂದ್ರ ಶಿಕ್ಷಣ ಸಚಿವರ ವಿರುದ್ಧ ನಡೆಯುತ್ತಿರುವ ಕೆಲವು ದಿನಗಳಿಂದ ಸೋನಮ್ ವಾಂಗ್ವುಕ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದ ವಿಷಯವು ದೇಶದಲ್ಲೇ ದೊಡ್ಡ ಸಂಗತಿಯಾಗಿ ಮಾರ್ಪಟ್ಟಿರುವಾಗ ಈ ಬಗ್ಗೆ ಸಂಪೂರ್ಣ ಕುರುಡಾಗಿ ಮತ್ತು ಅಮಾನವೀಯತೆಯಿಂದ ವರ್ತಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರವು ಕನಿಷ್ಠ ಪಕ್ಷ ಅವರ ಬಳಿ ಸುಳಿದಿಲ್ಲ. ಮಾತನ್ನೂ ಕೂಡಾ ಆಡಿಸಿಲ್ಲ.ಕೇವಲ ಬಂಡವಾಳಶಾಹಿಗಳ ತೊಗಲು ಗೊಂಬೆಯಾಗಿ ಕೆಲಸ ಮಾಡುವ ಇವರಿಗೆ ಬಹುಶಃ ಹೋರಾಟಗಾರರ ಬಳಿ ಹೋಗಿ ಮಾತನಾಡಿಸಿ ಎಂಬ ಸೂಚನೆಯು ಇನ್ನೂ ಬಂಡವಾಳ ಶಾಹಿಗಳಿಂದ ಬಂದಿಲ್ಲ ಎಂದು ಕಾಣುತ್ತದೆ.
ಅಥವಾ ಇವರ ದಪ್ಪ ಚರ್ಮದ ರೀತಿ ಹಾಗಿದೆ.ಈ ಹಿಂದೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಬಿಜೆಪಿ ಸರ್ಕಾರವೂ ಸಹ ಯಾವುದೇ ಹೋರಾಟಗಳಿಗೆ ಮನ್ನಣೆ ನೀಡದೇ ಅಮಾನವೀಯ ನಡೆದುಕೊಂಡದ್ದನ್ನು ನಾವಿಲ್ಲಿ ನೆನೆಯಬಹುದು.ಇದೀಗ ದೆಹಲಿ ಹೈಕೋರ್ಟ್ ನವರು ಸೋನಮ್ ಅವರ ಜೀವ ಉಳಿಸಿ ಮತ್ತು ಅವರ ಹೋರಾಟಕ್ಕೆ ಸ್ಪಂದಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.ಬಹುಶಃ ನ್ಯಾಯಾಂಗವೇ ಪ್ರವೇಶ ಮಾಡಿ, ಹೋರಾಟಗಾರರ ದನಿ ಆಲಿಸಿ ಎಂದು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಹೇಳುತ್ತಿದೆ ಎಂದರೆ ಇವರು ಇನ್ನೆಷ್ಟು ಭಂಡಗೆಟ್ಟಿರಬೇಕು ಅಲ್ಲವೇ?

LEAVE A REPLY

Please enter your comment!
Please enter your name here