ಕರ್ನೂಲು (ಆಂಧ್ರಪ್ರದೇಶ): ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಕಲ್ವರ್ಟ್ಗೆ (ಡಿವೈಡರ್) ಢಿಕ್ಕಿ ಹೊಡೆದ ಪರಿಣಾಮ ಯಕ್ಷಧ್ರುವ ಪಟ್ಲ ಫೌಂಡೇಶನ್ ಪದಾಧಿಕಾರಿ, ಹಾಪ್ಕಾಮ್ಸ್ ನ ಪ್ರಧಾನ ವ್ಯವಸ್ಥಾಪಕ (ಜಿಎಂ) ರವಿಚಂದ್ರಶೆಟ್ಟಿ (43) ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ನಸುಕಿನ ಜಾವ ಸಂಭವಿಸಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಪಟ್ಲ ಫೌಂಡೇಶನ್ ಆಧಾರ ಸ್ತಂಭಗಳಾದ ಮಂಗಳೂರಿನ ಪ್ರದೀಪ್ ಆಳ್ವ, ಪುರುಷೋತ್ತಮ ಭಂಡಾರಿ ಹಾಗೂ ಸಿಎ ಸುಧೇಶ್ ರೈ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ
ಘಟನೆಯ ವಿವರ:
ರವಿಶೆಟ್ಟಿ ಅವರು ತಮ್ಮ ಸ್ನೇಹಿತರೊಂದಿಗೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನಕ್ಕಾಗಿ ಪ್ರವಾಸ ಹೊರಟಿದ್ದರು. ಕರ್ನೂಲು ಜಿಲ್ಲೆಯ ಮಂತ್ರಾಲಯದ ರಾಷ್ಟ್ರೀಯ ಹೆದ್ದಾರಿಯ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಡಿವೈಡರ್ಗೆ ಬಲವಾಗಿ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರವಿಶೆಟ್ಟಿ ಅವರು ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದರು.
ಘಟನೆ ನಡೆದ ತಕ್ಷಣವೇ ಸ್ಥಳೀಯರು ಸ್ಪಂದಿಸಿ, ಕಾರಿನಲ್ಲಿದ್ದ ಗಾಯಾಳುಗಳನ್ನು ಎಮ್ಮಿಗನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಲ್ವರು ಉದ್ಯಮಿಗಳು ತುಳುನಾಡಿನ ಯಕ್ಷಗಾನ ಕಲಾವಿದರ ಏಳಿಗೆಗಾಗಿ ಹುಟ್ಟಿಕೊಂಡ ಯಕ್ಷಧ್ರುವ ಪಟ್ಲ ಫೌಂಡೇಶನ್ ನಲ್ಲಿ ಕಳೆದ ಒಂದು ದಶಕದಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಬಂಟರ ಸಂಘ, ವಿಶ್ವ ಹಿಂದೂ ಪರಿಷತ್, ಪಟ್ಲ ಫೌಂಡೇಶನ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ರವಿ ಶೆಟ್ಟಿ ಅವರ ನಿಧನಕ್ಕೆ ಯಕ್ಷಲೋಕ ಕಂಬನಿ ಮಿಡಿದಿದೆ.
(ಜಿತೇಂದ್ರ ಕುಂದೇಶ್ವರ)





