ವಿಜಯಪುರ : ವಿಜಯಪುರ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕ 371 ಜೆ ಮೀಸಲಾತಿಯಿಂದ ಕೈಬಿಟ್ಟಿದ್ದರಿಂದ ಜಿಲ್ಲೆಯ ಉದ್ಯೋಗಾಕಾಂಕ್ಷಿ ಯುವಕರಿಗೆ ಸರಕಾರಿ ಉದ್ಯೋಗದಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ದೊಡ್ಡ ಅನ್ಯಾಯವಾಗಿದೆ. ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರು ಶಾಸಕರು, ಮತ್ತು ಸಂಸದರ ನಿರ್ಲಕ್ಷವೇ ಕಾರಣ ಎಂದು ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಆರೋಪಿಸಿದರು.
ಅವರು ನಗರದ ರೈತ ಭಾರತ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರು ಶಾಸಕರು ಮತ್ತು ಸಂಸದರು ಮೀಸಲಾತಿ ಜಾರಿಯಾಗುವ ಸಂದರ್ಭದಲ್ಲಿ ಮೌನವಹಿಸಿದ್ದರಿಂದ ಜಿಲ್ಲೆಯ ಯುವಜನರು ಉದ್ಯೋಗ ಅರಸಿ ಮುಂಬೈ ಗೋವಾದತ್ತ ವಲಸೆ ಹೋಗುತ್ತಿದ್ದಾರೆ, ಉನ್ನತ ಶಿಕ್ಷಣ ಕಲಿತರು ಸರಕಾರಿ ಉದ್ಯೋಗ ದೊರಕದೆ ವಿದ್ಯಾರ್ಥಿ ಯುವಜನರ ಬಾಳು ಬೀದಿಗೆ ಬಂದಿದೆ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ, ಸೇರಿದಂತೆ ಜಿಲ್ಲೆಯನ್ನು ಪ್ರತಿನಿಧಿಸುವ ಎಲ್ಲ ಶಾಸಕರು ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಬಿಟ್ಟು ಹೋದ ವಿಜಯಪುರ ಜಿಲ್ಲೆಗೆ 371ಜೆ ಮೀಸಲಾತಿ ಒದಗಿಸುವಂತೆ ಶಿಫಾರಸ್ಸು ಕಳುಹಿಸಿಕೊಡಬೇಕು ಎಂದು ಆಗ್ರಹಿಸಿದರು.
2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಮೀಸಲಾತಿ ಒದಗಿಸುವ ಭರವಸೆ ನೀಡಿತ್ತು, ಲೋಕ ಸಭಾ ಚುನಾವಣೆ ಮುಗಿದ ನಂತರ ಇದರ ಬಗ್ಗೆ ಚಕಾರ ಎತ್ತದೆ ಇರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ ಅವರು ಕೂಡಲೇ ಮೀಸಲಾತಿ ಒದಗಿಸಿ ಜಿಲ್ಲೆಯ ಯುವಕರಿಗೆ ಸರಕಾರಿ ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯ ತಡಗಟ್ಟಬೇಕೆಂದು ಒತ್ತಾಯಿಸಿದರು.
ರೈತ ಭಾರತ ಪಕ್ಷದ ಜಿಲ್ಲಾಧ್ಯಕ್ಷ ಅನಿಲ ಇಕ್ಕಡೆ ಅವರು ಮಾತನಾಡಿ, ವಿಜಯಪುರ ಜಿಲ್ಲೆಯು 371 ಜೆ ವಿಶೇಷ ಸ್ಥಾನ ಮಾನ ಪಡೆಯಲು ಎಲ್ಲ ಅರ್ಹತೆ ಹೊಂದಿದೆ. ಜೊತೆಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಹಾಗೂ ಕಲಬುರಗಿ ಉಚ್ಚ ನ್ಯಾಯಾಲಯ ಪೀಠದ ಆಧೀನದಲ್ಲಿ ಜಿಲ್ಲೆಯು ಒಳಪಟ್ಟಿದೆ. ಹೀಗಿದ್ದರೂ ಕೂಡಾ ಮೀಸಲಾತಿಯಿಂದ ಕೈಬಿಟ್ಟಿದ್ದು ಖಂಡನೀಯವಾದುದು ಕೂಡಲೇ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರು, ಶಾಸಕರು, ಸಂಸದರು ಮೀಸಲಾತಿ ಜಿಲ್ಲೆಗೆ ಮೀಸಲಾತಿ ಒದಗಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಜಿಲ್ಲೆಯ ಯುವ ಜನರ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಸಕರು ಸಚಿವರುಗಳಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಕಳುಹಿಸಿಕೊಡಬೇಕು. ಜೊತೆಗೆ ಕೇಂದ್ರದಲ್ಲಿ 371ಜೆ ಮೀಸಲಾತಿ ಅಡಿ ಬಿಟ್ಟು ಹೋದ ವಿಜಯಪುರ ಜಿಲ್ಲೆಯನ್ನು ಸೇರಿಸಲು ಸಂಸದರಾದ ರಮೇಶ ಜಿಗಜಿಣಗಿ, ಬಾಗಲಕೋಟ ಸಂಸದ ಪಿ.ಸಿ. ಗದ್ದಿಗೌಡರ, ವಿಜಯಪುರದವರೇ ಆದ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ರಾಜಸಭಾ ಸದಸ್ಯೆ ಸುಧಾಮೂರ್ತಿ ಜವಾಬ್ದಾರಿ ತಗೆದುಕೊಳ್ಳಬೇಕು. ಒಂದು ವೇಳೆ ಶಾಸಕರು, ಸಚಿವರು, ಸಂಸದರು, ರಾಜ್ಯ ಸಭಾ ಸದಸ್ಯರು, ವಿಧಾನ ಪರಿಷತ್ತಿನ ಸದಸ್ಯರುಗಳಿಗೆ ಜಿಲ್ಲೆಗೆ 371ಜೆ ಮೀಸಲಾತಿ ಒದಗಿಸಲು ಆಗದಿದ್ದರೆ ಸಾಮೂಹಿಕ ರಾಜಿನಾಮೆ ಕೊಡಬೇಕೆಂದು ಒತ್ತಾಯಿಸಿದರು.
ಲೋಕ ಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರುಗಳಾದ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಸಿ.ಎಸ್.ನಾಡಗೌಡ, ವಿಠಲ ಕಟಕದೊಂಡ, ವಿಧಾನ ಪರಿಷತ್ತಿನ ಸದಸ್ಯರುಗಳಾದ ಸುನೀಲಗೌಡ ಬಿ. ಪಾಟೀಲ, ಪ್ರಕಾಶ ಹುಕ್ಕೇರಿ, ತಿಪ್ಪಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಬಿಲ್ಕಿಸ್ ಬಾನು, 371ಜೆ ಮೀಸಲಾತಿ ಅಡಿ ಬಿಟ್ಟು ಹೋದ ವಿಜಯಪುರ ಜಿಲ್ಲೆಯನ್ನು ಸೇರಿಸುವಂತೆ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಹುಣಶ್ಯಾಳ ಪಿ.ಬಿ.ಯ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ, ಜಿಲ್ಲೆಯು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಒಳಪಡುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಪ್ರತಿವರ್ಷ ವಿಶೇಷ ಅನುದಾನ ದೊರಕುವುದು. ಇದರಿಂದ ಜಿಲ್ಲೆಯ ಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಅನುಕೂಲವಾಗುತ್ತದೆ. ಉದ್ದಿಮೆದಾರರಿಗೆ ತೆರಿಗೆಯಲ್ಲಿ ರಿಯಾಯಿತಿ, ಪುಸ್ತಕ ಪ್ರಕಾಶಕರು ಹಾಗೂ ಸಾಹಿತಿಗಳಿಗೆ ವಿಶೇಷ ಆರ್ಥಿಕ ನೆರವು, ಸ್ಥಳೀಯ ಪತ್ರಿಕೆಗಳಿಗೆ ಹೆಚ್ಚುವರಿ ಜಾಹೀರಾತು. ಜಿಲ್ಲೆಯ ಎಲ್ಲ ಶಾಸಕರು, ಸಂಸದರು ವಿಧಾನ ಪರಿಷತ್ತಿನ ಸದಸ್ಯರಿಗೆ ಕಲ್ಯಾಣ ಕರ್ನಾಟಕ ಮಂಡಳಿಯ ಸದಸ್ಯತ್ವ ದೊರಕುವುದು, ಜೊತೆಗೆ ಜಿಲ್ಲೆಯ ಶಾಸಕರು ಮಂಡಳಿಯ ಸಂಪುಟ ದರ್ಜೆಯ ಅಧ್ಯಕ್ಷರಾಗುವ ಅವಕಾಶ ದೊರಕುವುದು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅನೇಕ ಸೌಲಭ್ಯಗಳು ದೊರಕಲಿವೆ ಕೂಡಲೇ ವಿಜಯಪುರ ಜಿಲ್ಲೆಗೆ 371ಜೆ ಮೀಸಲಾತಿ ಒದಗಿಸಿ ಜಿಲ್ಲೆಯ ಜನ ನೀಡಿರುವ ಅಧಿಕಾರದ ಋಣ ತೀರಸಬೇಕೆಂದು ಸಚಿವರು ಶಾಸಕರು ಸಂಸದರಿಗೆ ಆಗ್ರಹಿಸಿದರು.





