ಚಿತ್ರದುರ್ಗ: ಸಾರ್ವಜನಿಕ ವಲಯದ ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳಾದ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ತಕ್ಷಣ ಜಾರಿಗೆ ತರಬೇಕು ಹಾಗೂ ತಾರತಮ್ಯಪೂರ್ಣ Performance Linked Incentive (PLI) ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ, ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ವತಿಯಿಂದ ಚಿತ್ರದುರ್ಗದ SBI ಆವರಣದಲ್ಲಿ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಯಿತು.
ಕೇಂದ್ರ ಸರ್ಕಾರವು ಬ್ಯಾಂಕ್ ನೌಕರರ ನ್ಯಾಯಯುತ ಬೇಡಿಕೆಗಳ ಬಗ್ಗೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್ ನೌಕರರು ಹೆಚ್ಚುತ್ತಿರುವ ಕೆಲಸದ ಒತ್ತಡ ಮತ್ತು ಜವಾಬ್ದಾರಿಗಳ ನಡುವೆ ಕಾರ್ಯನಿರ್ವಹಿಸುತ್ತಿದ್ದು, 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರುವ ಬೇಡಿಕೆ ಇನ್ನೂ ಈಡೇರದಿರುವುದು ಅನ್ಯಾಯ ಎಂದು ಮುಖಂಡರು ಹೇಳಿದರು.
ಪ್ರತಿಭಟನಾ ಸಭೆಯನ್ನು UFBU ಸಂಚಾಲಕ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕಾಮ್ರೇಡ್ ವೀರೇಶ್ T.C.P., ಕಾಮ್ರೇಡ್ ಶ್ರೀಧರ್, ಕಾಮ್ರೇಡ್ ಶಕ್ತಿ ಪ್ರಸಾದ್ J.T., ಕಾಮ್ರೇಡ್ ಮುರುಳೀಧರ್ S.P. ಹಾಗೂ ಕಾಮ್ರೇಡ್ ಮಹೇಶ್ ಉದ್ದೇಶಿಸಿ ಮಾತನಾಡಿದರು.
PLI ವ್ಯವಸ್ಥೆಯಲ್ಲಿರುವ ತಾರತಮ್ಯವನ್ನು ನಿವಾರಿಸಿ, ಸಾರ್ವಜನಿಕ ವಲಯದ ಬ್ಯಾಂಕ್ ನೌಕರರಿಗೆ ನ್ಯಾಯಸಮ್ಮತ, ಪಾರದರ್ಶಕ ಹಾಗೂ ಸಮಾನ PLI ವ್ಯವಸ್ಥೆ ಜಾರಿಗೆ ತರಬೇಕು ಎಂದು ಮುಖಂಡರು ಒತ್ತಾಯಿಸಿದರು.
ಬೇಡಿಕೆಗಳನ್ನು ತಕ್ಷಣ ಪರಿಹರಿಸದಿದ್ದರೆ UFBU ವತಿಯಿಂದ ಹೋರಾಟವನ್ನು ಹಂತ ಹಂತವಾಗಿ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು. ಮುಂದಿನ ಹಂತದಲ್ಲಿ ಒಂದು ದಿನದ ಮುಷ್ಕರ, ನಂತರ ಮೂರು ದಿನಗಳ ಮುಷ್ಕರ ಹಾಗೂ ಅಗತ್ಯವಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ತಿಳಿಸಲಾಯಿತು.
ಪ್ರತಿಭಟನೆಯಲ್ಲಿ ಮನೋಜ್, ರಾಜಪ್ಪ, ಅಬ್ರಾರ್ ಅಹ್ಮದ್, ನಾಗರಾಜ್, ಹಂಪಣ್ಣ, ವೀರೇಶ್, ಕನ್ನಬಾಬು, ರಾಧಮ್ಮ, ಅಕ್ಷತಾ, ದುರ್ಗಪ್ಪ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ನೌಕರರು ಹಾಗೂ UFBU ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಯು ಬ್ಯಾಂಕ್ ನೌಕರರ ಒಗ್ಗಟ್ಟು, ಹೋರಾಟದ ಮನೋಭಾವ ಮತ್ತು ನ್ಯಾಯಯುತ ಬೇಡಿಕೆಗಳಿಗಾಗಿ ನಿರಂತರ ಹೋರಾಟದ ಸಂಕಲ್ಪವನ್ನು ಪ್ರತಿಬಿಂಬಿಸಿತು.





