ವಿಜಯಪುರ: ನಗರದ ಕಣಕಿ ಬಜಾರ್ನ ಕುಂಬಾರ ಗಲ್ಲಿ ಕೊಳಚೆ ಪ್ರದೇಶದ ನಿವಾಸಿಗಳು ಎದುರಿಸುತ್ತಿರುವ ತೀವ್ರ ಅಭಿವೃದ್ಧಿ ಕೊರತೆ ಮತ್ತು ಮೂಲಭೂತ ಸಮಸ್ಯೆಗಳನ್ನು ಆಲಿಸಲು ದಲಿತ ಸ್ವರಾಜ್ಯ ಸೇನೆ -ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಇಂದು ಸ್ಥಳಕ್ಕೆ ಮಹತ್ವದ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ತಮ್ಮ ಬಡಾವಣೆಯ ಶೋಚನೀಯ ಸ್ಥಿತಿಯ ಕುರಿತು ಅಸಹಾಯಕತೆ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿಗಳು, ತಮಗೆ ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಬೀದಿ ದೀಪ ಸೇರಿದಂತೆ ಸೂಕ್ತ ವಿದ್ಯುತ್ ಸಂಪರ್ಕವನ್ನು ಒದಗಿಸಲು ಮನವಿ ಮಾಡಿದರು.
ಸ್ಥಳೀಯರ ಕುಂದುಕೊರತೆಗಳನ್ನು ಆಲಿಸಿದ ಸಂಘಟನೆಯ ಅಧ್ಯಕ್ಷ ಗೌಡಪ್ಪ ಬಡಿಗೇರ ಹಾಗೂ ಇತರ ಮುಖಂಡರು ಮಾತನಾಡಿ, ಸದರಿ ಪ್ರದೇಶವು ಪುರಾತತ್ವ ಕಾಯ್ದೆ 1959(32)ರ ವ್ಯಾಪ್ತಿಗೆ ಒಳಪಡುವುದರಿಂದ ಸ್ಮಾರಕಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕಾನೂನು ತೊಡಕಿದೆ. ಆದರೆ ಮಂಡಳಿಯ ನಿಯಮಗಳಂತೆ ನಗರ ವ್ಯಾಪ್ತಿಯಲ್ಲಿ ಪರ್ಯಾಯ ಜಾಗವನ್ನು ಗುರುತಿಸಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಅವಕಾಶವಿದೆ ಎಂದು ತಿಳಿಸಿದರು. ಅಲ್ಲದೆ, ಸ್ಲಂ ನಿವಾಸಿಗಳ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಾನಂದ ರಾಠೋಡ್ ಮತ್ತು ಅಭಿಯಂತರ ಪ್ರಲ್ಹಾದ ಪಾಟೀಲ್ ಹಾಜರಿದ್ದು, ನಿವಾಸಿಗಳ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಪರಿಶೀಲಿಸಿದರು.
ಭೇಟಿಯ ವೇಳೆ ಸಂಘಟನೆಯ ಸಂಚಾಲಕರಾದ ಅಮೃತ ಮಾವಿನಹಳ್ಳಿ, ಪರಶುರಾಮ್ ಕರವಿನಾಳ, ತಿಪ್ಪಣ್ಣ ಡಿ., ಸುಭಾಷ್ ಪಾಂಡ್ರೆ, ಪ್ರಭು ಸಿಂಧೆ ಸೇರಿದಂತೆ ಪ್ರಮುಖ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು. ದಲಿತ ಸ್ವರಾಜ್ಯ ಸೇನೆಯ ಈ ಭೇಟಿಯು ನಿವಾಸಿಗಳಲ್ಲಿ ಸೂಕ್ತ ಪರಿಹಾರ ದೊರೆಯುವ ಹೊಸ ಭರವಸೆಯನ್ನು ಮೂಡಿಸಿದೆ.





