ಬೆಂಗಳೂರು: ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ತಾರಕಕ್ಕೇರಿದೆ!
“ನಾನು ಅಮಿತ್ ಶಾ ಮಾತು ಕೇಳುತ್ತಿದ್ದೇನೋ, ನಾನೇ ಸ್ವಯಂಪ್ರೇರಿತವಾಗಿ ಆರೋಪ ಮಾಡುತ್ತಿದ್ದೇನೋ ಎನ್ನುವುದನ್ನು ಬದಿಗಿಟ್ಟು, ನಾನು ಎತ್ತಿದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ” ಎಂದು ಎಚ್ಡಿಕೆ ಖಡಕ್ ಆಗಿ ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ್ದಾರೆ.
ಏನಿದು ವಿವಾದ?
ಪ್ರಿಯಾಂಕ್ ಖರ್ಗೆ ಅವರು ನಿರಂತರವಾಗಿ ಆರೆಸ್ಸೆಸ್ ವಿರುದ್ಧ ಮಾತನಾಡುತ್ತಾ, ಬಿಜೆಪಿ-ಜೆಡಿಎಸ್ ನಾಯಕರು ಆರೆಸ್ಸೆಸ್ ಏಜೆಂಟ್ ಎಂದು ಆರೋಪ ಮಾಡುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ – “ಆರೆಸ್ಸೆಸ್ ಬಿಡಿ, ಮೊದಲು ರಾಜ್ಯದ ಕೆಪಿಎಸ್ಸಿ ಹಗರಣದ ಬಗ್ಗೆ ಮಾತನಾಡಿ. ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ನಿಮ್ಮ ಸರ್ಕಾರದ ಬಗ್ಗೆ ಉತ್ತರ ಕೊಡಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಎಸ್ಸಿ ನೇಮಕಾತಿಯಲ್ಲಿ ಅಕ್ರಮ, ಪಿಎಸ್ಐ ಹಗರಣದ ನಂತರವೂ ಎಚ್ಚೆತ್ತುಕೊಳ್ಳದ ಸರ್ಕಾರ, ಈಗ ಯುವಕರಿಗೆ ಮತ್ತೆ ಮೋಸ ಮಾಡುತ್ತಿದೆ ಎಂದು ಎಚ್ಡಿಕೆ ಆರೋಪಿಸಿದ್ದಾರೆ.
“ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರು ಹೇಳಿ ವಿಷಯವನ್ನು ಡೈವರ್ಟ್ ಮಾಡಬೇಡಿ, ಎತ್ತಿದ ಪ್ರಶ್ನೆಗಳಿಗೆ ನೇರ ಉತ್ತರ ಕೊಡಿ” ಎಂದು ಎಚ್ಡಿಕೆ ಪ್ರಿಯಾಂಕ್ ಖರ್ಗೆಗೆ ನೇರ ಸವಾಲು ಹಾಕಿದ್ದಾರೆ.





