• ದಾವಣಗೆರೆ: ವೈದ್ಯಕೀಯ ವೃತ್ತಿಯನ್ನು ಕೇವಲ ಹಣ ಸಂಪಾದನೆಯ ಮಾರ್ಗವನ್ನಾಗಿ ಮಾಡದೆ, ಸೇವಾ ಮನೋಭಾವದಿಂದ ಜನರ ಆರೋಗ್ಯ ಕಾಪಾಡುವ ಪವಿತ್ರ ವೃತ್ತಿಯನ್ನಾಗಿ ಪರಿಗಣಿಸಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.
    ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಸೋಮವಾರ ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಪಿಜಿ ಸೆಂಟರ್‌ ವತಿಯಿಂದ 29ನೇ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ವೈದ್ಯರ ಬಳಿ ಬಡವರು, ರೈತರು, ಕೂಲಿಕಾರರು ಸೇರಿದಂತೆ ವಿವಿಧ ವರ್ಗದ ಜನರು ಚಿಕಿತ್ಸೆಗಾಗಿ ಬರುತ್ತಾರೆ. ಅವರ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮಾನವೀಯತೆಯಿಂದ ಉತ್ತಮ ಚಿಕಿತ್ಸೆ ನೀಡುವುದು ವೈದ್ಯರ ಜವಾಬ್ದಾರಿ ಎಂದರು.
    ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆಯುರ್ವೇದ ಚಿಕಿತ್ಸೆಯತ್ತ ಜನರ ಒಲವು ಹೆಚ್ಚುತ್ತಿದೆ. ಆಯುರ್ವೇದದ ಚಿಕಿತ್ಸಾ ಪದ್ಧತಿಯ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚುತ್ತಿದ್ದು, ಈ ಕ್ಷೇತ್ರದಲ್ಲಿ ವೈದ್ಯರಿಗೆ ಉತ್ತಮ ಅವಕಾಶಗಳಿವೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ, ಜ್ಞಾನ ಮತ್ತು ಕೌಶಲ್ಯವನ್ನು ಸಮಾಜದ ಆರೋಗ್ಯ ಸೇವೆಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ರಾಜ್ಯ ಸರ್ಕಾರ ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿಗಳು ದೇಶ ಹಾಗೂ ವಿದೇಶಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ತಮಗೆ ದೊರೆತಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದರ ಜತೆಗೆ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
    ವೈದ್ಯಕೀಯ ಪದವಿ ಪಡೆದು ವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ನವ ವೈದ್ಯರು ತಮ್ಮ ತಂದೆ-ತಾಯಿಯ ತ್ಯಾಗ ಮತ್ತು ಪರಿಶ್ರಮವನ್ನು ಎಂದಿಗೂ ಮರೆಯಬಾರದು. ಮಕ್ಕಳನ್ನು ವೈದ್ಯರನ್ನಾಗಿ ಮಾಡಲು ಪೋಷಕರು ಹಲವು ಕಷ್ಟಗಳನ್ನು ಎದುರಿಸುತ್ತಾರೆ. ಆದ್ದರಿಂದ ತಂದೆ-ತಾಯಿಯನ್ನು ಗೌರವದಿಂದ ನೋಡಿಕೊಳ್ಳುವುದೇ ವೈದ್ಯ ವೃತ್ತಿಗೆ ಸಲ್ಲಿಸುವ ಮೊದಲ ಗೌರವವಾಗಿದೆ ಎಂದು ಸಚಿವರು ಹೇಳಿದರು.
    ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರೂ ತಮ್ಮ ತಂದೆ-ತಾಯಿ, ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಹೆಮ್ಮೆ ತರುವ ರೀತಿಯಲ್ಲಿ ನಡೆದುಕೊಳ್ಳಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಮೂಲಕ ತಾವು ಶಿಕ್ಷಣ ಪಡೆದ ಸಂಸ್ಥೆಗೆ ಕೀರ್ತಿ ತರಬೇಕು. ಉತ್ತಮ ವೈದ್ಯರಾಗುವುದರ ಜತೆಗೆ, ಸಮಾಜಕ್ಕೆ ಮಾದರಿಯಾಗುವ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ನವ ವೈದ್ಯರಿಗೆ ಕರೆ ನೀಡಿದರು.
    ಶಾಸಕ ಸಮಥ್೯ ಶಾಮನೂರು ಮಾತನಾಡಿ, ವೈದ್ಯಕೀಯ ಪದವಿ ಪಡೆದ ಬಳಿಕ ವೈದ್ಯರು ಕೇವಲ ಕ್ಲಿನಿಕ್‌ ಅಥವಾ ಆಸ್ಪತ್ರೆಗಳಿಗೆ ಸೀಮಿತರಾಗದೆ, ಸಮುದಾಯದ ಆರೋಗ್ಯ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
    ದೇಶದ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಸಮುದಾಯ ವೈದ್ಯಕೀಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನರು ಅನೇಕ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ನಿರ್ಲಕ್ಷಿಸುತ್ತಾರೆ. ಗ್ಯಾಂಗ್ರಿನ್, ಎಕ್ಸಿಮಾ ಸೇರಿದಂತೆ ಹಲವು ಕಾಯಿಲೆಗಳು ಉಲ್ಬಣಗೊಂಡು ಗಂಭೀರ ಹಂತ ತಲುಪಿದ ನಂತರ ವೈದ್ಯರ ಬಳಿ ಬರುವ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಗಳಿಗೆ ಕಡಿವಾಣ ಹಾಕಲು ವೈದ್ಯರು ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
    ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಯೋಗ ದಿನಾಚರಣೆ ಸೇರಿದಂತೆ ವಿವಿಧ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ವಾರದ ಕಾಲ ತರಬೇತಿ ಹಾಗೂ ಆರೋಗ್ಯ ಜಾಗೃತಿ ಶಿಬಿರಗಳನ್ನು ನಡೆಸುವ ಮೂಲಕ ಜನರಿಗೆ ಆರೋಗ್ಯದ ಕುರಿತು ಅರಿವು ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ಹೇಳಿದರು.
    ವೈದ್ಯಕೀಯ ಪದವಿ ಪಡೆಯುವಲ್ಲಿ ವಿದ್ಯಾರ್ಥಿಗಳ ಪರಿಶ್ರಮದ ಜತೆಗೆ ಅವರ ತಂದೆ-ತಾಯಿ, ಕುಟುಂಬದ ಸದಸ್ಯರು ಹಾಗೂ ಬೋಧಕರ ಪಾತ್ರವೂ ಮಹತ್ವದ್ದಾಗಿದೆ. ಹಲವು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಗುರುಗಳ ಪರಿಶ್ರಮವನ್ನು ನವ ವೈದ್ಯರು ಸದಾ ಸ್ಮರಿಸಬೇಕು ಎಂದು ಕಿವಿಮಾತು ಹೇಳಿದರು.
    2026ನೇ ಸಾಲಿನಲ್ಲಿ ವೈದ್ಯಕೀಯ ಪದವಿ ಪಡೆದಿರುವ ಎಲ್ಲ ನವ ವೈದ್ಯರು ಆಯುರ್ವೇದ ಚಿಕಿತ್ಸಾ ಪದ್ಧತಿಯ ಮಹತ್ವವನ್ನು ಜನರಿಗೆ ತಲುಪಿಸಿ, ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು. ತಮ್ಮ ಜ್ಞಾನವನ್ನು ಸಮಾಜದ ಆರೋಗ್ಯ ಸುಧಾರಣೆಗೆ ಬಳಸಿಕೊಂಡು ಉತ್ತಮ ವೈದ್ಯರಾಗಿ ರೂಪುಗೊಳ್ಳಬೇಕು ಎಂದು ಅವರು ಆಶಿಸಿದರು.
    ಈ ಸಂದರ್ಭದಲ್ಲಿ ಬಸವಾಪಟ್ಟಣ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಜಿ ನಾಗರಾಜ್, ಮುಖ್ಯ ಅತಿಥಿಗಳಾದ ಡಾ, ಮಧು, ಡಾ.ಬಣಾಪುರ ಮಠ್, ಡಾ. ಸತೀಶ್, ಡಾ. ಸುಬ್ಬರಾವ್, ಶ್ರೀಶೈಲ ಬ್ಯಾಡಗಿ, ಕಾಲೇಜಿನ ಪ್ರಾoಶುಪಾಲರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
    –ಕೋಟ್–
    ವೈದ್ಯರು ಕೇವಲ ಹಣ, ಆಸ್ತಿ ಗಳಿಸುವುದಕ್ಕಷ್ಟೇ ಆದ್ಯತೆ ನೀಡಬಾರದು. ತಮ್ಮ ಸೇವೆಯಿಂದ ರೋಗಿಗಳು ಗುಣಮುಖರಾಗಿ, ಅವರ ಕುಟುಂಬದವರು ಸಂತೃಪ್ತಿಯಿಂದ ವೈದ್ಯರನ್ನು ನೆನಪಿಸಿಕೊಳ್ಳುವಂತಾಗಬೇಕು. ಜನರ ಬಾಯಲ್ಲಿ ವೈದ್ಯರ ಸೇವೆ ಸದಾ ನೆನಪಿನಲ್ಲಿ ಉಳಿಯುವಂತೆ ಕಾರ್ಯನಿರ್ವಹಿಸಿದಾಗ ಮಾತ್ರ ವೈದ್ಯಕೀಯ ವೃತ್ತಿಗೆ ನಿಜವಾದ ಗೌರವ ದೊರೆಯುತ್ತದೆ.

-ಕೆ.ಎಸ್.ಬಸವಂತಪ್ಪ, ಸಚಿವ.

ರೋಗ ಬಂದ ನಂತರ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ರೋಗ ತಡೆಗಟ್ಟುವಿಕೆ ಹಾಗೂ ಆರೋಗ್ಯಕರ ಜೀವನಶೈಲಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇದನ್ನು ಸಮಾಜದ ಎಲ್ಲ ವರ್ಗದ ಜನರಿಗೆ ತಲುಪಿಸುವ ಜವಾಬ್ದಾರಿ ನವ ವೈದ್ಯರ ಮೇಲಿದೆ.ಎಂದು ಶಾಸಕ
-ಸಮಥ್೯ ಶಾಮನೂರು, ಹೇಳಿದರು.

LEAVE A REPLY

Please enter your comment!
Please enter your name here