ಡಾ ಬಸವರಾಜ್ ಇಟ್ನಾಳ
ಒಂದಾನೊಂದು ಕಾಲದಲ್ಲಿ ಬ್ರಹ್ಮದೇವರಿಗೆ ಒಬ್ಬ ಮಗನಿದ್ದನು. ಆತನ ಹೆಸರು ಕುಶ. ಈ ಕುಶನ ಮಗ ಕುಷಾಣಭ . ಈ ಕುಷಾಣಭನಿಗೆ ಒಂದು ನೂರು ಹೆಣ್ಣುಮಕ್ಕಳಿದ್ದರು. ತನಗೆ ಗಂಡು ಸಂತಾನವೇ ಇಲ್ಲವೆಂದು ಕೊರಗಿದ ಈತ ಪುತ್ರಕಾಮೇಷ್ಠಿ ಯಾಗ ಮಾಡಿ ತನ್ನ ತಂದೆ ಕುಶನ ಕೃಪೆಯಿಂದ ಒಬ್ಬ ಮಗ ಹುಟ್ಟುತ್ತಾನೆ. ಅದೆಂತ ಕೃಪೆ, ಅದೆಂತ ವರ ಅಂತ ನಾವು ಕೇಳುವುದಿಲ್ಲ, ತಾವೂ ಕೇಳಬಾರದೆಂದು ಸವಿನಯ ಪ್ರಾರ್ಥನೆ. ಇವೆಲ್ಲ ನಾನ್ ಬಯಾಲಾಜಿಕಲ್ ಟೆಕ್ನಾಲಜಿ. ಹೇಳುತ್ತೇವೆ, ಸುಮ್ಮನೆ ಕೇಳಬೇಕು. ಅಷ್ಟೇ.
ಹೀಗೆ ಹುಟ್ಟಿದವನೇ ಗಾಧಿ ಅಥವಾ ಸುಕ್ಷತ್ರಿಯ. ಈತನಿಗೆ ಕೂಡ ಒಬ್ಬಳೇ ಒಬ್ಬ ಮಗಳು. ಆಕೆಯೇ ಸತ್ಯವತಿ. ಸುಕ್ಷತ್ರಿಯನಿಗೂ ಪುತ್ರ ಭಾಗ್ಯವಿಲ್ಲ. ಪುತ್ರಿ ಸತ್ಯವತಿಯನ್ನು ವಿವಾಹವಾಗಲು ಬೃಗು ಮಹರ್ಷಿಯ ಮಗ ರುಚಿಕ ಆಸಕ್ತಿ ತೋರಿದಾಗ, ಕ್ಷತ್ರಿಯ ಹುಡುಗಿಯನ್ನು ಬ್ರಾಹ್ಮಣ ವಟುವಿಗೆ ಕೊಡಲು ಒಂದು ಸಾವಿರ ಬಿಳಿಯ ಕುದುರೆಗಳ ಕನ್ಯಾಶುಲ್ಕ ಪಡೆಯುತ್ತಾನೆ ಸುಕ್ಷತ್ರಿಯ. ಹೀಗೆ ಮದುವೆ ಆದ ರುಚಿಕನಿಗೂ ಕೂಡ ಅದೇ ಸಮಸ್ಯೆ -ಮಕ್ಕಳೇ ಆಗೋದಿಲ್ಲ. ಕೊನೆಗೆ ಭೃಗು ಮಹರ್ಷಿಗಳು ತನ್ನ ಮಗನ ಮನೆಗೆ ಬಂದು ವರ ನೀಡುತ್ತಾರೆ. ಆಗ ಸತ್ಯವತಿ ತನ್ನ ಮಾವನವರಿಂದ ತನಗೆ ಮಾತ್ರ ಪುತ್ರ ಭಾಗ್ಯದ ವರ ಕೇಳುವುದಿಲ್ಲ, ತನ್ನ ತಾಯಿಗೂ ಕೊಡಿ ಅಂತ ಕೇಳಿಕೊಳ್ಳುತ್ತಾಳೆ. ಯಾಕೆಂದರೆ ಆಕೆ ಏಕ ಮಾತ್ರ ಸಂತಾನವಾಗಿದ್ದು ತನ್ನ ತಂದೆ ತಾಯಿಗೆ ಪುತ್ರ ಸಂತಾನವೇ ಇಲ್ಲ ಎಂದು ಕೇಳಿಕೊಳ್ಳುತ್ತಾಳೆ. ಹೀಗಾಗಿ ಭೃಗು ಮಹರ್ಷಿಗಳು ಸೊಸೆ ಮತ್ತು ಬೀಗತಿ ಇಬ್ಬರಿಗೂ ಪುತ್ರ ಸಂತಾನ ಆಗುವಂತೆ ವರ ನೀಡುತ್ತಾರೆ. ತಾಯಿಗೆ ಕ್ಷತ್ರಿಯ ಮತ್ತು ಮಗಳಿಗೆ ಬ್ರಾಹ್ಮಣ ಪುತ್ರ ಸಂತಾನ ಆಗುವಂತೆ ಏನೋ ಒಂದು ಅರೇಂಜ್ಮೆಂಟು ಮಾಡುತ್ತಾರೆ. ಅದೇನೋ ಕನ್ಫ್ಯೂಷನ್ ಉಂಟಾಗಿ ವರಗಳಲ್ಲಿ ಅದೇನೋ ಗೊಂದಲ ಉಂಟಾಗಿ ಸತ್ಯವತಿಯ ತಾಯಿಗೆ ಬ್ರಾಹ್ಮಣ ಮಗ ವಿಶ್ವಾಮಿತ್ರ ಹುಟ್ಟಿಬಿಡುತ್ತಾನೆ.. ಸತ್ಯವತಿಗೆ ಕ್ಷತ್ರಿಯ ಮಗ ಜಮದಗ್ನಿ ಹುಟ್ಟುತ್ತಾನೆ.ಅದಕ್ಕೇ ಭೃಗು ಮಹರ್ಷಿಗಳು ತಮ್ಮ ಸೊಸೆಗೆ ಕ್ಷತ್ರಿಯ ಮಗನಾಗಿ ಅಲ್ಲ ಮೊಮ್ಮಗನಾಗಿ ಹುಟ್ಟುವಂತೆ ವರ ನೀಡುತ್ತಾರೆ. ಆ ಮೊಮ್ಮಗ ಪರಶುರಾಮ ವಿಷ್ಣುವಿನ ಅವತಾರ ಅಂತಾರೆ.
ಸರಿ ಈ ವಿಶ್ವಾಮಿತ್ರ ಇದ್ದಾನಲ್ಲ ಬಹಳ ಉತ್ತಮ ರಾಜನಾಗಿರಲು ಸಕಲ ಅಷ್ಟಐಶ್ವರ್ಯಗಳೇ ಇರಲು, ವಶಿಷ್ಠ ಮಹರ್ಷಿಯ ಆಶ್ರಮದ ಕಾಮಧೇನುವಿನ ಮುಂದೆ ತನ್ನ ಸಾಮ್ರಾಜ್ಯಕ್ಕೇನು ಬೆಲೆ ಇಲ್ಲ ಎಂಬುದನ್ನು ತಿಳಿದು, ತಾನು ಕೂಡ ಮಹರ್ಷಿ ಆಗಬೇಕೆಂದು ರಾಜ್ಯ ತೊರೆದು ಕಾಡು ಸೇರಿ ತಪಸ್ಸು ಕೈಕೊಳ್ಳುತ್ತಾರೆ. ಕಾಮಧೇನು ಏನು ಇನ್ನೊಂದು ಸ್ವರ್ಗವನ್ನೇ ಸೃಷ್ಠಿ ಮಾಡಿಬಿಡಬಲ್ಲಷ್ಟು ತಪಸ್ಶಕ್ತಿಯನ್ನು ಹೊಂದಲು ಕಠೋರ ತಪಸ್ಸನ್ನು ಕೈಕೊಳ್ಳುತ್ತಾರೆ.
ಅರೇ ಇನ್ನೊಂದು ಸ್ವರ್ಗ ಸೃಷ್ಟಿಯಾಗಿ ತನ್ನ ಸಿಂಹಾಸನವೇ ಅಲ್ಲಾಡಿ ನನ್ನ ಕಿಮ್ಮತ್ತು ಕವೆಡೆ ಕಿಮ್ಮತ್ತು ಆಗಿಬಿಟ್ಟರೆ ಹೇಗೆ ಎಂಬ ಭೀತಿಯಲ್ಲಿ ಇಂದ್ರನಿಗೆ ನಿದ್ದೆಯೇ ಬರೋದಿಲ್ಲ. ತನ್ನ ಅಸ್ತಿತ್ವವನ್ನೇ ಅಲ್ಲಾಡಿಸುವ ಬೆಳವಣಿಗೆಗೆ ಹೆದರಿದ ಇಂದ್ರ ಮೇನಕೆಯನ್ನು ಕರೆಯುತ್ತಾನೆ. ಸಮುದ್ರ ಮಂಥನದಲ್ಲಿ ಹುಟ್ಟಿದ ಅಸಾಧ್ಯ ಚಾಣಾಕ್ಷ ಚೆಲುವೆ ಈಕೆ. ಭೂಲೋಕಕ್ಕೆ ತೆರಳಿ ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸಿ ಆತನನ್ನು ಹನಿಟ್ರ್ಯಾಪಿಗೆ ಕೆಡವಿಕೊಂಡು, ಇನ್ನೊಂದು ಸ್ವರ್ಗ ಸ್ರಷ್ಠಿ ಆಗದಂತೆ ನೋಡಿಕೋ ಅಂತ ಇಂದ್ರ ಮೇನಕೆಗೆ ಸುಪಾರಿ ಕೊಡುತ್ತಾನೆ.
ಮೇನಕೆ ಬಂದವಳೇ ಕಣ್ಣು ಮುಚ್ಚಿ ಧ್ಯಾನಸ್ಥನಾಗಿ ಕುಳಿತ ವಿಶ್ವಾಮಿತ್ರನ ಮುಂದೆ ತರಹೇವಾರಿ ಬಿನ್ನಾಣ, ಸಂಗೀತ ನೃತ್ಯ ಇತ್ಯಾದಿ ಮಾಡುತ್ತಾ ತನ್ನ ಮೋಹದ ಬಲೆ ಬೀಸಿದರೂ ಕೆಲಸವಾಗದಾಗ, ಗಾಳಿಗೆ ಈಕೆಯ ಬಟ್ಟೆಗಳೇ ಹಾರಿ ಹೋಗಿ ಆಕೆಯ ಬೆತ್ತಲೆ ದೇಹದ ಎದುರು ತಮ್ಮೊಳಗಿನ ಗಂಡಸು ಬಂಡೆದ್ದು ಸ್ವರ್ಗವೇ ಬಂದು ಎದುರು ಕುಣಿಯುತ್ತಿರುವಾಗ ತಪಸ್ಸೇಕೆ ಅಂದುಕೊಂಡು, ಎಲ್ಲಾ ಬಿಟ್ಟು ಮೇನಕೆಯೊಂದಿಗೆ ಸಂಗಮಿಸುತ್ತಾರೆ ವಿಶ್ವಾಮಿತ್ರರು.
ಈ ಹನಿಟ್ರ್ಯಾಪಿಗೆ ಹುಟ್ಟಿದ ಕೂಸು ಶಕುಂತಲೆ. ತನ್ನ ಸುಪಾರಿ ಕೆಲಸ ಮುಗಿದ ತಕ್ಷಣ ಕೂಸನ್ನು ವಿಶ್ವಾಮಿತ್ರರ ಕೈಗಿಟ್ಟು ಸ್ವರ್ಗಕ್ಕೆ ನಿರ್ಗಮಿಸುತ್ತಾಳೆ ಮೇನಕೆ. ತಾನು ಖೆಡ್ಡಾಗೆ ಬಿದ್ದಾಯಿತು ಎಂಬುದನ್ನು ಅರಿತ ವಿಶ್ವಾಮಿತ್ರ ಶಕುಂತಲೆಯನ್ನು ಕಾಡಲ್ಲಿ ಬಿಟ್ಟು ಮುಂದಿನ ತಪಸ್ಸಿಗೆ ಹೊರಡುತ್ತಾರೆ.
ಆ ಕೂಸನ್ನು ಬೆಳೆಸಿದ್ದು ಕಣ್ವ ಮಹರ್ಷಿಗಳು. ಕಣ್ವರ ಆಶ್ರಮದಲ್ಲಿ ಈ ಶಕುಂತಲೆಯನ್ನು ಕಂಡು ಪ್ರೇಮ ಪಾಶದಲ್ಲಿ ಬಿದ್ದ ದುಷ್ಯಂತನ ಕತೆ ಗೊತ್ತಲ್ಲವಾ? ಸರಿ ಈ ದುಷ್ಯಂತ ಮತ್ತು ಹನಿಟ್ರ್ಯಾಪ್ ಕೂಸು ಶಕುಂತಲೆಯ ಮಗ ಭರತ . ಈ ಭರತನ ಹೆಸರೇ ನಮ್ಮ ದೇಶಕ್ಕೆ ಇಟ್ಟಿರುವುದು. ಹೀಗಾಗಿ ಹನಿ ಟ್ರ್ಯಾಪ್ ಇಲ್ಲದೇ ಇದ್ದಲ್ಲಿ ಶಕುಂತಲೆಯೆ ಹುಟ್ಟುತ್ತಿರಲಿಲ್ಲ, ಶಕುಂತಲೆ ಹುಟ್ಟದಿದ್ದರೆ ಭರತನೂ ಹುಟ್ಟುತ್ತಿರಲಿಲ್ಲ. ಭರತ ಹುಟ್ಟದಿದ್ದರೆ ನಾವು ಭಾರತೀಯರೇ ಆಗುತ್ತಿರಲಿಲ್ಲ ಅಲ್ಲವೇ?
ಹಿಂಗಾಗಿ ಹನಿ ಟ್ರ್ಯಾಪೇಣ ಭಾರತಮ್ ! ಭಾರತದ ಮೂಲವೇ ಹನಿಟ್ರ್ಯಾಪ್.
ಪಾಪದ ಸಮಾಚಾರ ಏನು ಗೊತ್ತ ? ವಿಶ್ವಾಮಿತ್ರರಿಗೆ ಇಂದ್ರನ ಮೇಲೆ ಒಂದು ಸ್ಟೇ ತರಲು ಸಾಧ್ಯವಾಗಲಿಲ್ಲ ನೋಡಿ. ಹೀಗಾಗಿ ಅಂದಿನಿಂದ ಇಂದಿನ ವರೆಗೂ ಕೇವಲ ಹನಿ ಟ್ರ್ಯಾಪ್ ಸುದ್ದಿಯೇ ಸುದ್ದಿ, ಅದೇ ಚರ್ವಿತ ಚರ್ವಣ. ಸಮಾಚಾರೇಣ ಚರ್ವಿತ ಚರ್ವಣಮ್.(ಡಾ ಬಸವರಾಜ್ ಇಟ್ನಾಳ ಸೋಷಿಯಲ್ ಮೀಡಿಯಾ)





