ಗದಗ: ನಗರದ ಗುರುದೇವ್‌ಸ್ ಜೆಜಿ ಪಿಯು ಕಾಲೇಜಿನ ವಿದ್ಯಾರ್ಥಿ ರಿಯಾನ್ ಅಹಮದ್ ಅವರು ರಾಷ್ಟ್ರೀಯ ಮಟ್ಟದ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಹಾಗೂ ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕೇರಳದ ತಿರುವನಂತಪುರದಲ್ಲಿರುವ ಇಂಟರ್‌ನ್ಯಾಷನಲ್ ಶೂಟಿಂಗ್ ಅಕಾಡೆಮಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಸ್ಪರ್ಧಿಗಳು ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ಅತ್ಯುತ್ತಮ ಏಕಾಗ್ರತೆ, ನಿಖರತೆ ಹಾಗೂ ಆತ್ಮವಿಶ್ವಾಸ ಪ್ರದರ್ಶಿಸಿದ ರಿಯಾನ್ ಅಹಮದ್ ಅವರು ಜೂನಿಯರ್, ಯೂತ್ ಹಾಗೂ ಸಬ್-ಯೂತ್ ವಿಭಾಗಗಳಲ್ಲಿ ತಲಾ ಒಂದು ಚಿನ್ನದ ಪದಕ ಗೆದ್ದು ಒಟ್ಟು ಮೂರು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದಲ್ಲದೆ, ಜನರಲ್ ವಿಭಾಗದಲ್ಲಿಯೂ ಬೆಳ್ಳಿ ಪದಕ ಗೆದ್ದು ತಮ್ಮ ಸಾಧನೆಗೆ ಮತ್ತೊಂದು ಗರಿ ಮೂಡಿಸಿದ್ದಾರೆ. ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಒಟ್ಟು ಮೂರು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದಿರುವುದು ರಿಯಾನ್ ಅವರ ಕ್ರೀಡಾ ಪ್ರತಿಭೆ ಮತ್ತು ನಿರಂತರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.

ರಿಯಾನ್ ಅಹಮದ್ ಅವರ ಈ ಸಾಧನೆಗೆ ಗುರುದೇವ್‌ಸ್ ಜೆಜಿ ಪಿಯು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ. ಅವರ ಮುಂದಿನ ಕ್ರೀಡಾ ಪಯಣ ಯಶಸ್ವಿಯಾಗಲಿ ಹಾಗೂ ರಾಷ್ಟ್ರಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.

ಯುವ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ, ಶಿಸ್ತು ಹಾಗೂ ಏಕಾಗ್ರತೆಯನ್ನು ಬೆಳೆಸುವಲ್ಲಿ ರಿಯಾನ್ ಅವರ ಸಾಧನೆ ಮಾದರಿಯಾಗಿದೆ.

(ವರದಿ ಮಹೇಶ ಮೇಟಿ)

LEAVE A REPLY

Please enter your comment!
Please enter your name here