ಬೆಂಗಳೂರು:ಸಾಹಿತ್ಯ ಈ ಕಾಲದಲ್ಲಿ ಚಳವಳಿಗೆ ಕಾಣ್ಕೆಯನ್ನು ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಬರಹಗಾರರು ಕೆಲಸ ಮಾಡಬೇಕು ಎಂದು ಖ್ಯಾತ ಸಾಹಿತಿ ಕುಂ ವೀರಭದ್ರಪ್ಪ ಕರೆನೀಡಿದರು.
ಕನ್ನಡ ಸಾಹಿತ್ಯ ಪರಿಷತ್‌ ಆವರಣದಲ್ಲಿರುವ ಕುವೆಂಪು ಸಭಾಂಗಣದಲ್ಲಿ ಚಿನ್ನೇನಹಳ್ಳಿ ಸ್ವಾಮಿಯವರ “ಕಾಲೆಳತೆಯ ದುಃಖ” ಕಾದಂಬರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಿನ ಸಾಹಿತಿಗಳು ಸಾಮಾಜಿಕ ವರ್ತಮಾನಗಳಿಗೆ ವಿಮುಖರಾಗುತ್ತಿದ್ದಾರೆ ಅಥವಾ ವ್ಯವಸ್ಥಗೆ ಅನಿಷ್ಟಗಳಿಗೆ ಹೊಂದಿಕೊಂಡು ಬರೆಯುತ್ತಿದ್ದಾರೆ. ಹಿಂದಿನ ಚಳವಳಿಗಳಿಗೆ ಸಾಹಿತ್ಯಿಕವಾದ ಕೊಡುಗೆ ಬಹಳಷ್ಟಿತ್ತು. ಆದರೆ ಈಗ ಅದು ಕಾಣೆಯಾಗಿರುವುದನ್ನು ನೋಡುತ್ತಿದ್ದೇವೆ ಎಂದರು.
ಚಿನ್ನೇನಹಳ್ಳಿ ಸ್ವಾಮಿಯವರ ಕಾದಂಬರಿ ಈ ನಿಟ್ಟಿನಲ್ಲಿ ಯೋಚಿಸುವಂತೆ ಮಾಡುತ್ತದೆ. ತಮಗೆ ಅನುಕೂಲವಿಲ್ಲದಿದ್ದರೂ ಯಾರೋ ಕುಡಿಯುವ ನೀರಿಗಾಗಿ ರೈತ ತನ್ನ ತಲೆತಲಾಂತರದಿಂದ ಬಂದಂತಹಾ ಕೃಷಿ ಭೂಮಿಯನ್ನು ಕೈ ಬಿಡುತ್ತಿದ್ದಾನೆ. ಸರ್ಕಾರಗಳು ರೈತನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ ಎಂದರು. ಈಗಾಗಲೇ ರಾಷ್ಟ್ರಮಟ್ಟದಲ್ಲಿ ಯುವಸಮುಧಾಯ ದೊಡ್ಡ ಚಳವಳಿಯನ್ನು ಹುಟ್ಟುಹಾಕಿದೆ. ಆದರೆ ಅದಕ್ಕೆ ಪೂರಕವಾಗಿ ಸಾಹಿತಿಗಳು ಕೈಜೋಡಿಸುತ್ತಿಲ್ಲ ಎಂದರು ಮಾತ್ರವಲ್ಲದೇ ಕರ್ನಾಟಕದ ಬಿಡದಿಯಲ್ಲಿ ವಶಪಡಿಸಿಕೊಳ್ಳುತ್ತಿರುವ ಕೃಷಿ ಭೂಮಿಯ ವಿರುದ್ದ ರೈತರು ದನಿಯೆತ್ತಿದ್ದಾರೆ. ರೈತರು ದನುಗೂಡಿಸಬೇಕು ಎಂದರು.
ಯಗಚಿ ಜಲಾಶಯದ ಸುಂದರ ಪ್ರತಿಕೃತಿಯನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರೋ ಎನ್‌ ಎಲ್‌ ಮುಕುಂದರಾಜ್‌ ಅವರು ಈಗಿನ ಸಾಹಿತಿಗಳು ಹೆಚ್ಚು ಅಧ್ಯಯನಶೀಲರಾಗಬೇಕು. ಕಾದಂಬರಿ ಪ್ರಕಾರಕ್ಕೆ ಕನ್ನಡದಲ್ಲಿ ಕೇವಲ ನೂರು ವರ್ಷಗಳ ಇತಿಹಾಸವಿದೆ, ಆದರೂ ಈಗ ವಿಫುಲವಾಗಿ ಕತೆ ಹಾಗು ಕಾದಂಬರಿ ಪ್ರಕಾರ ಬೆಳೆಯುತ್ತಿರುವುದನ್ನು ಕಾಣಬಹುದು ಎಂದರು.
ಕಾಲಳತೆಯ ದುಃಖ ಕಾದಂಬರಿಯನ್ನು ಬಿಡುಗಡೆ ಮಾಡಿದ ಡಾ ಹೆಚ್‌ ಎಲ್‌ ಪುಷ್ಟ ಅವರು ಮಾತನಾಡಿ ಚಿನ್ನೇನಹಳ್ಳಿ ಸ್ವಾಮಿಯವರು ಯಗಚಿ ಜಲಾಶಯಕ್ಕಾಗಿ ಮುಳುಗಿದ ಊರಾದ ಯಮಸಂದಿ ಎಂಬ ಗ್ರಾಮವನ್ನು ಕೇಂದ್ರವಾಗಿಟ್ಟುಕೊಂಡು ಕಾದಂಬರಿ ರಚಿಸಿದ್ದಾರೆ. ಅಲ್ಲಿನ ಜನರ, ಯುವಜನತೆಯ ದುಃಖದುಮ್ಮಾನಗಳಿಗೆ ದನಿಯಾಗಿದ್ದಾರೆ ಎಂದರು.
ಕೃತಿ ಕುರಿತು ಮಾತಾಡಿದ ಪತ್ರಕರ್ತರಾದ ರಘುನಾಥ ಚ ಹ ಚಿನ್ನೇನಹಳ್ಳಿ ಸ್ವಾಮಿಯವರು ಒಂದು ಪುಟ್ಟ ಕಾದಂಬರಿಯ ಮೂಲಕ ಸಾಹಿತ್ಯ ಕ್ಷೇತ್ರದ ಗಮನ ಸೆಳೆದಿದ್ದಾರೆ. ಮುಳುಗಡೆಯಾಗೋದು ಭೂಮಿ ಮಾತ್ರವಲ್ಲ, ಜನರ ಸಂಬಂಧಗಳು, ವಾಣಿಜ್ಯ ವ್ಯವಹಾರಗಳು ಕೂಡ ನಿಗೂಢ ರೀತಿಯಲ್ಲಿ ಕಣ್ಮರೆಯಾಗುತ್ತವೆ ಎಂದರು. ಒಂದು ಶಕ್ತವಾದ ಗದ್ಯಶೈಲಿಯ ಮೂಲಕ ಚಿನ್ನೇನಹಳ್ಳಿ ಸ್ವಾಮಿ ಗಮನ ಸೆಳೆಯುತ್ತಾರೆ ಎಂದರು.
ಸಾಹಿತಿ ದಯಾ ಗಂಗನಘಟ್ಟ ಮಾತನಾಡಿ ಮುಳುಗಡೆ ಪ್ರದೇಶದಲ್ಲಿ ಭೂಮಿ ಮುಳಿಉಗಡೆಯಾದಾಗ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳುತ್ತದೆ. ಆದರೆ ಆ ಹಣದ ಮೇಲೆ ಆ ಬಾಗದ ಮಹಿಳೆಯರಿಗೆ ಯಾವ ಒಡೆತನವೂ ಇರುವುದಿಲ್ಲ, ಅಷ್ಟೇ ಅಲ್ಲದೇ ಆ ಬಾಗದಲ್ಲಿ ಎಲ್ಲರೂ ಭೂಮಿ ಹೊಂದಿಯೇ ಜೀವನ ನಡೆಸುತ್ತಿರುವುದಿಲ್ಲ. ಆದರೆ ಅಂತಹಾ ಭೂರಹಿತರನ್ನು ಕಡೆಗಣಿಸಲಾಗುತ್ತಿದೆ ಎಂದರು.
ಕೃತಿಕಾರರಾದ ಚಿನೇನಹಳ್ಳಿ ಸ್ವಾಮಿ ಮಾತನಾಡಿ ಸಾಹಿತ್ಯಕ್ಷೇತ್ರದಲ್ಲಿ ಬಡ ಸಾಹಿತಿಗಳಿಗೆ ಪ್ರೋತ್ಸಾಹ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗು ಚಿಂತಕರು ಯೋಚಿಸಬೇಕಿದೆ ಎಂದರು
ಸಾಹಿತಿ ಚಲಂ ಹಾಡ್ಲಹಳ್ಳಿ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಡಾ ಎ ಎಂ ನಾಗೇಶ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here