ಬೆಂಗಳೂರು:
ದೇಶದಲ್ಲಿ ಇಂದು ಎಸ್ ಐ ಆರ್ ನಡೆಯುತ್ತಿದೆ. ಈ ದೇಶದ ಕೋಟ್ಯಂತರ ಜನರ ಮಾತಿದೆ ಆದರೆ ಪುರಾವೆಯ ಗುರುತು ಇಲ್ಲ ಎಂದು ಲೇಖಕ ಮತ್ತು ಪತ್ರಕರ್ತರಾದ ರಘುನಾಥ್ ಚಹ ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಪ್ರವೀಣ್ ಬಿ ಎಂ ಅವರ ಮಾತಿಲ್ಲ ಗುರುತು ಇದೆ ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಪ್ರಸಕ್ತ ದೇಶದ ರಾಜಕೀಯ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳಲು ಈ ಕವನ ಸಂಕಲನ ನೆರವಾಗುತ್ತದೆ. ಇಂದು ಜನರ ಮಾತಿಗೆ ಗುರುತು ಇಲ್ಲದಂತಾಗಿದೆ ಎಂಬ ಆತಂಕ ಇಲ್ಲಿಯ ಕವನ ಸಂಕಲನದಲ್ಲಿ ವ್ಯಕ್ತವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇಂದಿನ ಸವಾಲನ್ನು ಎದುರಿಸಲು ಈ ಕವನ ಸಂಕಲನ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಲೆಮಾರಿ ಜೀವನದ ಕವಿ ಪ್ರವೀಣ್ ಕಾವ್ಯವನ್ನೇ ಜೀವನ ಮಾಡಿಕೊಂಡು ಅದರಲ್ಲೇ ಜೀವಿಸುತ್ತಿರುವವರು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲೇಖಕ ಹಾಗೂ ಪ್ರಾಧ್ಯಾಪಕ ಡಾ ರವಿಕುಮಾರ್ ಬಾಗಿ ಅವರು ಪ್ರವೀಣ್ ಭಾವನಾತ್ಮಕ ಜೀವಿ. ಹಲವಾರು ಪ್ರಗತಿಪರ ಸಂಘಟನೆಗಳ ಜೊತೆ ತೊಡಗಿಕೊಂಡಿದ್ದು ಅದು ಇಲ್ಲಿಯ ಕವನ ಸಂಕಲನದಲ್ಲೂ ವ್ಯಕ್ತವಾಗುತ್ತದೆ. ಇಲ್ಲಿಯ ಕವನಗಳು ವ್ಯವಸ್ಥೆಯ ಪ್ರತಿಭಟನೆಯ ಸಂಕೇತವಾಗಿವೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಲೇಖಕಿ ಡಾ ಹೆಚ್ ಎಲ್ ಪುಷ್ಪ ಅವರು ಕವಿ ಪ್ರವೀಣ್ ಅವರ ಅಲೆದಾಟ ಮತ್ತು ಹುಡುಕಾಟ ಇಲ್ಲಿಯ ಕವನ ಸಂಕಲನದಲ್ಲಿ ಅಭಿವ್ಯಕ್ತವಾಗಿವೆ. ಇಲ್ಲಿಯ ಕವಿತೆಗಳು ಒಂದರಿಂದ ಮತ್ತೊಂದು ಕವಿತೆಯೊಂದಿಗೆ ಎಡತಾಕುತ್ತವೆ. ಅವುಗಳು ವಾಚ್ಯವಾಗದೆ ಪ್ರತಿಮೆ ಮತ್ತು ರೂಪಕಗಳ ಮೂಲಕ ಅಭಿವ್ಯಕ್ತವಾಗಿವೆ. ಕವಿಯ ಸೂಕ್ಷ್ಮ ಸಂವೇದನೆಯು ಇಲ್ಲಿಯ ಕವನ ಸಂಕಲನದಲ್ಲಿ ವ್ಯಕ್ತವಾಗಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮೈಸೂರು ಸಾಹಿತ್ಯ ಸಂಭ್ರಮದ ಶುಭ ಸಂಜಯ್ ಅರಸ್, ದಾವಣಗೆರೆಯ ರವಿ ಬೇತೂರ್ ಉಪಸ್ಥಿತರಿದ್ದರು. ಸಂಸ್ಕೃತಿ ಪ್ರಕಾಶನದ ಸಂಸ ಸುರೇಶ್ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕ ಡಾ ರುದ್ರೇಶ್ ಅದರಂಗಿ ನಿರೂಪಿಸಿದರು.
ಪ್ರವೀಣ್ ಅವರ ಮಾತಿಲ್ಲ ಗುರುತು ಇದೆ ಕವನ ಸಂಕಲನವನ್ನು ಚಿತ್ರಕಲಾ ಪರಿಷತ್ ನಲ್ಲಿ ನಡೆದ ಸಮಾರಂಭದಲ್ಲಿ ಲೇಖಕ ಮತ್ತು ಪತ್ರಕರ್ತರಾದ ರಘುನಾಥ್ ಚಹ ಅವರು ಬಿಡುಗಡೆ ಮಾಡಿದರು. ದಾವಣಗೆರೆಯ ರವಿ ಬೇತೂರ್, ಚಿಂತಕ ಮತ್ತು ಪ್ರಾಧ್ಯಾಪಕ ಡಾ ರವಿಕುಮಾರ್ ಬಾಗಿ, ಕರ್ನಾಟಕ ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಡಾ ಹೆಚ್ ಎಲ್ ಪುಷ್ಪ, ಮೈಸೂರಿನ ಶುಭ ಸಂಜಯ್ ಅರಸ್ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here