ಬೆಂಗಳೂರು:ರಾಜಕಾರಣ ನನಗೆ ಅಷ್ಟಾಗಿ ಅರ್ಥವಾಗದ ಒಗಟು. ಆದರೆ ಚಳವಳಿಯ ನಾಯಕನಾಗಿ ರಾಜಕಾರಣಿಗಳ ಜೊತೆ ಒಡನಾಟ ಅನಿವಾರ್ಯ. ಚಳವಳಿ ಎಂದರೆ ಸರ್ಕಾರದ/ಪ್ರಭುತ್ವದ/ ವ್ಯವಸ್ಥೆಯ ವಿರುದ್ಧ ಸದಾ ಸಂಘರ್ಷಕ್ಕೆ ಇಳಿಯುವುದು ಎಂದು ನಾನು ಅರ್ಥ ಮಾಡಿಕೊಂಡಿಲ್ಲ. ಸರ್ಕಾರದ ಮುಖ್ಯಸ್ಥರೊಂದಿಗೆ ಸದಾ ಒಂದು ಮಾತುಕತೆಯ ದಾರಿಯನ್ನು ತೆರೆದಿಟ್ಟುಕೊಳ್ಳಲೇಬೇಕಾಗುತ್ತದೆ. ಈ ಅನುಸಂಧಾನವಿಲ್ಲದೇ ಹೋದರೆ ಚಳವಳಿ ನಾವೇ ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳ ಸಹಾನುಭೂತಿಯನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಅವರೊಂದಿಗೆ ಒಡನಾಡುವ ಅವಕಾಶ ಕಳೆದ ಮೂರು ದಶಕಗಳಿಂದಲೂ ಒದಗಿ ಬಂದಿದೆ.

ಹಲವು ಮುಖ್ಯಮಂತ್ರಿಗಳನ್ನು ನಾನು ನೋಡಿದ್ದೇನೆ. ಆದರೆ ಸಿದ್ಧರಾಮಯ್ಯ Siddaramaiah Chief Minister of Karnataka ಅವರಂಥ ಮುಖ್ಯಮಂತ್ರಿಯನ್ನು ಎಂದೂ ನೋಡಲಿಲ್ಲ. ಕಪಟ, ಮೋಸ, ನಾಟಕೀಯತೆ ಇರದ ನಾಯಕ ಅವರು. ನನ್ನ ಚಳವಳಿಯ ಅನುಭವದಲ್ಲಿ ಸಿದ್ಧರಾಮಯ್ಯ ಅವರನ್ನು ಭೇಟಿಯಾದಷ್ಟು ಇನ್ಯಾವ ಮುಖ್ಯಮಂತ್ರಿಯನ್ನೂ ಭೇಟಿ ಆಗಿರಲಿಲ್ಲ. ಅವರಂತೆ ಕನ್ನಡ ಚಳವಳಿಯನ್ನು ಅರ್ಥ ಮಾಡಿಕೊಂಡವರು ಇನ್ನೊಬ್ಬರಿಲ್ಲ. ನಮ್ಮ ಹಲವಾರು ಕಾರ್ಯಕ್ರಮಗಳಿಗೆ ಅವರು ಬಂದರು, ಆಗಲೂ ಅಷ್ಟೇ ಯಾವ ನಾಟಕೀಯತೆಯೂ ಇಲ್ಲ, ಲಾಭ ನಷ್ಟಗಳ ಲೆಕ್ಕಾಚಾರವೂ ಇರಲಿಲ್ಲ. ಅವರು ಮಾತುಗಳೂ ಹಾಗೇ ಇರುತ್ತಿದ್ದವು, ಒಬ್ಬ ರಾಜಕಾರಣಿಯಂತಲ್ಲ ಬದಲಾಗಿ ಒಬ್ಬ ಕನ್ನಡ ಚಳವಳಿಗಾರನಂತೆ.

2023ರಲ್ಲಿ ಕನ್ನಡ ನಾಮಫಲಕಗಳನ್ನು ಅಂಗಡಿ ಮುಂಗಟ್ಟುಗಳ ಮುಂದೆ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬ ದೊಡ್ಡ ಆಂದೋಲನವನ್ನು ನಾವು ಹಮ್ಮಿಕೊಂಡೆವು. 2023ರ ಡಿಸೆಂಬರ್‌ 27ರಂದು ಒಂದು ನಿರ್ಣಾಯಕ ಚಳವಳಿ ನಡೆದುಹೋಯಿತು. ಬೆಂಗಳೂರಿನ ಹಲವೆಡೆ ಸಾವಿರಾರು ಕನ್ನಡವಿಲ್ಲದ ನಾಮಫಲಕಗಳನ್ನು ಕರವೇ ಕಾರ್ಯಕರ್ತರು ಕಿತ್ತೆಸೆದರು. ಇದಾದ ನಂತರ ನನ್ನ ಮೇಲೆ ಹದಿನೇಳು ಮೊಕದ್ದಮೆಗಳನ್ನು ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಿಸಲಾಯಿತು. ಹದಿನಾರು ದಿನಗಳ ಕಾಲ ಜೈಲು ಶಿಕ್ಷೆಯನ್ನೂ ಅನುಭವಿಸಿದೆ. ಚಳವಳಿಯ ಅಗ್ನಿಕುಂಡದಲ್ಲಿ ಬಿಸಿಬಿಸಿ ಮಾತುಗಳು ಸಹಜ. ನಾನು ಸಿದ್ಧರಾಮಯ್ಯ ಅವರನ್ನು ಕಟುವಾಗಿ ಟೀಕಿಸಿದೆ.

ಅದಾದ ನಂತರ ಮತ್ತೆ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದಾಗ, ಅವರು ನನ್ನ ಮೇಲೆ ಸಿಟ್ಟು ಮಾಡಿಕೊಂಡ ಹಾಗೆ ಕಾಣಲೇ ಇಲ್ಲ. ಎಂದಿನ ಪ್ರೀತಿ, ಮಮಕಾರ. ನಾರಾಯಣಗೌಡ ಎಂದು ಬೆನ್ನು ತಟ್ಟಿ ಮಾತನಾಡುವ ಅವರ ಪರಿಗೆ ಬೆರಗಾಗಿ ಹೋದೆ. ಸಿದ್ಧರಾಮಯ್ಯ ಅವರನ್ನು ನಾವು ಕಂಡಿದ್ದು ಫೈರ್‌ ಬ್ರಾಂಡ್‌ ರಾಜಕಾರಣಿಯ ಹಾಗೆಯೇ. ಆದರೆ ಅವರ ಮನಸು ಮೃದುವಾಗಿಯೇ ಇರುತ್ತದೆ. ರಾಜಕೀಯ ಜೀವನದಲ್ಲಿ ಟೀಕೆಗಳನ್ನು ಸದಾಶಯದಿಂದ ಸ್ವೀಕರಿಸಬೇಕು ಮತ್ತು ಅದನ್ನು ಎದೆಯೊಳಗೆ ವಿಷದಂತೆ ಇಟ್ಟುಕೊಳ್ಳಬಾರದು ಎಂಬ ಸಿದ್ಧರಾಮಯ್ಯ ಅವರ ನಿಲುವು ಅವರನ್ನು ಇನ್ನಷ್ಟು ಪ್ರೀತಿಸುವಂತೆ, ಗೌರವಿಸುವಂತೆ ಮಾಡಿತು.

ಕನ್ನಡ ಚಳವಳಿಯ ಬೇಡಿಕೆಗಳನ್ನು ಇಟ್ಟುಕೊಂಡು ಅವರ ಬಳಿ ಹೋದಾಗಲೆಲ್ಲ ನಾನು ಒಂದು ಮಾತನ್ನು ಹೇಳುತ್ತಿದ್ದೆ; ʻʻಈ ಕೆಲಸವನ್ನು ನೀವಷ್ಟೇ ಮಾಡಲು ಸಾಧ್ಯ, ನೀವೇ ನಿಮ್ಮ ಅಧಿಕಾರಾವಧಿಯಲ್ಲಿ ಮಾಡಬೇಕುʼʼ. ಈ ಮಾತಿನಲ್ಲಿ ಉತ್ಪ್ರೇಕ್ಷೆ ಏನೂ ಇರಲಿಲ್ಲ. ನಮ್ಮ ಬೇಡಿಕೆ ಈಗಿನ ರಾಜಕಾರಣಿಗಳಿಗೆ ಅರ್ಥವೂ ಆಗುವುದಿಲ್ಲ. ಸಿದ್ಧರಾಮಯ್ಯ ಅವರಿಗಷ್ಟೇ ಸಾಧ್ಯವಾದ ಕೆಲಸಗಳು ಅವು. ಕೆಲವು ಅವರಿಂದ ಆದವು, ಕೆಲವು ಆಗಲಿಲ್ಲ.

ಕನ್ನಡ ನಾಮಫಲಕ ಚಳವಳಿಯಿಂದಾಗಿ ನಾನು, ನನ್ನ ಕಾರ್ಯಕರ್ತರು ಕೇಸು ಹಾಕಿಸಿಕೊಂಡು, ಜೈಲು ಶಿಕ್ಷೆ ಅನುಭವಿಸಿದೆವು. ಆದರೆ ಸಿದ್ಧರಾಮಯ್ಯ ಸರ್ಕಾರ ನಾಮಫಲಕಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಿತು. ಶೇ.60 ರಷ್ಟು ಗಾತ್ರದಲ್ಲಿ ಕನ್ನಡ ಅಗ್ರಸ್ಥಾನದಲ್ಲಿಇರಬೇಕು ಎಂದು ಆದೇಶಿಸಿತು. ಇದನ್ನು ಈಗಿನ ಸಮಕಾಲೀನ ರಾಜಕಾರಣಿಗಳಲ್ಲಿ ಇನ್ಯಾರು ಮಾಡಲು ಸಾಧ್ಯವಿತ್ತು?

ನಮ್ಮ ಮೆಟ್ರೋದಲ್ಲಿ ಹಿಂದಿಯನ್ನು ತುರುಕಿದಾಗಲೂ ಅಷ್ಟೇ. ನಾವು ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದೆವು. ಒಂದೇ ದಿನ ಆಗ ಇದ್ದ ಎಲ್ಲ ಮೆಟ್ರೋ ನಿಲ್ದಾಣಗಳಿಗೆ ನುಗ್ಗಿ ಹಿಂದಿ ಫಲಕಗಳನ್ನು ಕಿತ್ತುಹಾಕಿದೆವು, ಮಸಿ ಬಳಿದೆವು. ಸಿದ್ಧರಾಮಯ್ಯ ಅವರು ಸ್ವತಃ ಮೆಟ್ರೋದಲ್ಲಿ ಹಿಂದಿ ಬಳಸುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಹಿಂದಿಯನ್ನು ಕಿತ್ತು ಹಾಕಿದರು. ಇದನ್ನು ಇನ್ಯಾರು ಮಾಡಲು ಸಾಧ್ಯವಿತ್ತು?

ಸಿಬಿಎಸ್‌ ಸಿ ಮತ್ತು ಇತರ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ, ಕನ್ನಡ ಬಾವುಟವನ್ನು ಅಧಿಕೃತಗೊಳಿಸುವ ಸಾಂವಿಧಾನಿಕ ಯತ್ನ, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉದ್ಯೋಗ ಮೀಸಲಾತಿ ಹೀಗೆ ಸಿದ್ಧರಾಮಯ್ಯ ಅವರು ಎಷ್ಟೋ ವಿಷಯಗಳಲ್ಲಿ ಕನ್ನಡ ಚಳವಳಿಯ ಜೊತೆ ನಿಂತರು.

ಅವರಿಗೆ ʻಎರಡು ನುಡಿʼ ನೀತಿಯನ್ನು ಜಾರಿಗೊಳಿಸುವ ಆಸೆ ಇತ್ತು. ʻʻವೈಯಕ್ತಿಕವಾಗಿ ನಾನು ದ್ವಿಭಾಷಾ ನೀತಿಯ ಪರ. ಆದರೆ ಸಚಿವ ಸಂಪುಟದಲ್ಲಿ ಅದು ತೀರ್ಮಾನವಾಗಬೇಕುʼʼ ಎಂದು ಅವರು ನನ್ನೊಂದಿಗೆ ಎರಡು ಮೂರು ಬಾರಿ ಹೇಳಿದ್ದರು. ನಾನು ಒಮ್ಮೆ ಸಿಟ್ಟಿನಲ್ಲಿ, ʻʻಎರಡು ನುಡಿʼ ನೀತಿಯ ವಿರುದ್ಧ ಇರುವ ಸಚಿವರು ಯಾರು ಅಂತನಾದರೂ ಹೇಳಿ ಸರ್. ನಾವು ವಿಚಾರಿಸಿಕೊಳ್ಳುತ್ತೇವೆ ಎಂದು ಹೇಳಿದ್ದೆ. ಸಿದ್ಧರಾಮಯ್ಯ ಅವರು ದೊಡ್ಡದಾಗಿ ನಕ್ಕು, ಬೆನ್ನು ತಟ್ಟಿ ಕಾರು ಹತ್ತಿ ಹೋಗಿದ್ದರು.

ಕನ್ನಡಿಗರಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಾತಿ ನೀಡಬೇಕು ಎಂಬ ದೊಡ್ಡ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆ ನಡೆಸಿತು. ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಶೇ. 100ರಷ್ಟು, ಇತರ ಹುದ್ದೆಗಳಲ್ಲಿ ಶೇ.80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಈ ಸಂಬಂಧ ಒಂದು ವಿಸ್ತ್ರತವಾದ ಮನವಿ ಪತ್ರವನ್ನು ತೆಗೆದುಕೊಂಡು ಹೋಗಿ ಸಿದ್ಧರಾಮಯ್ಯ ಅವರ ಕೈಗೆ ಇತ್ತಾಗ, ಅವರು ಅದನ್ನು ಸಂಪೂರ್ಣ ಓದಿದರು. ನಂತರ ಅಲ್ಲಿದ್ದ ರಾಜಕಾರಣಿಯೊಬ್ಬರು ಏನೋ ಹೇಳಲು ಬಂದಾಗ, ಇವರು ಏನು ಕೇಳ್ತಾ ಇದ್ದಾರೆ ಗೊತ್ತೇನ್ರೀ? ಇವರ ಬೇಡಿಕೆ ಈಡೇರಿಸೋದಕ್ಕೆ ಸರ್ಕಾರಿ ಆದೇಶ ಮಾಡಲು ಸಾಧ್ಯವಿಲ್ಲ, ಕಾಯ್ದೆಯನ್ನೇ ಮಾಡಬೇಕು ಎಂದರು. ಆಯ್ತು, ನಾನು ನಮ್ಮ ಕಾನೂನು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡ್ತೀನಿ ಎಂದರು ನನಗೆ ಹೇಳಿದರು.

ವಿಶೇಷವೆಂದರೆ ಸಿದ್ಧರಾಮಯ್ಯ ಅವರು ನಮ್ಮ ಬೇಡಿಕೆ ಆಧಾರದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಪ್ರಸ್ತಾಪವನ್ನು ನೇರವಾಗಿ ಸಚಿವ ಸಂಪುಟ ಸಭೆಗೆ ತಂದೇಬಿಟ್ಟರು. ಸಚಿವ ಸಂಪುಟ ಸಭೆಯಲ್ಲಿ ಅದಕ್ಕೆ ಒಪ್ಪಿಗೆಯೂ ಸಿಕ್ಕಿಬಿಟ್ಟಿತು. ನಮಗೋ ಪರಮಾಶ್ಚರ್ಯ.

ಆದರೆ ನಂತರ ಸಾಫ್ಟ್‌ ವೇರ್‌ ಕ್ಷೇತ್ರದ ಕೆಲವು ಕನ್ನಡದ್ರೋಹಿಗಳು ಸರ್ಕಾರದ ವಿರುದ್ಧ ಅಭಿಯಾನವನ್ನೇ ಆರಂಭಿಸಿದರು. ಸರ್ಕಾರದ ಮೇಲೆ ಒತ್ತಡ ಹೇರಲು ಆರಂಭಿಸಿದರು. ಸರ್ಕಾರದ ಮಂತ್ರಿಗಳೇ ಈ ಗೊತ್ತುವಳಿಯ ವಿರುದ್ಧ ನಿಲ್ಲುವಂತೆ ಮಾಡಿದರು. ಸರ್ಕಾರ ಉದ್ಯೋಗ ಮೀಸಲಾತಿ ಪ್ರಸ್ತಾಪವನ್ನು ಹಿಂದಕ್ಕೆ ಪಡೆದುಕೊಂಡಿತು.

ಈಗಲೂ ನನಗೆ ಅನ್ನಿಸೋದು, ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲೇ ಇದು ಆಗಿದ್ದರೆ ಖಂಡಿತ ಹಿಂದೆ ಸರಿಯುತ್ತಿರಲಿಲ್ಲ. ಯಾರದ್ದೇ ವಿರೋಧವಿದ್ದರೂ ಅದನ್ನು ಎದುರಿಸಿ ಜಾರಿಗೆ ತರುವ ಶಕ್ತಿ ಅವರಿಗಿತ್ತು. ಎರಡನೇ ಅವಧಿಯಲ್ಲಿ ಅವರು ಅಷ್ಟೊಂದು ಬಲಿಷ್ಠ ಮುಖ್ಯಮಂತ್ರಿಯಾಗಿ ಕಾಣಲಿಲ್ಲ. ಅವರ ಸಂಪುಟ ಸದಸ್ಯರೇ ಹಲವು ತೀರ್ಮಾನಗಳಿಗೆ ಅಡ್ಡಗಾಲಾಗುತ್ತಿದ್ದರು.

ಇದೇನೇ ಇರಲಿ, ಕನ್ನಡದ ವಿಷಯ ಬಂದಾಗ ಅವರು ತಮ್ಮ ಕನ್ನಡಪ್ರೇಮವನ್ನು ಬಿಟ್ಟುಕೊಡುತ್ತಿರಲಿಲ್ಲ ಎಂಬುದಂತೂ ಸ್ಪಷ್ಟ. ಒಂದು ಪ್ರಯತ್ನವಂತೂ ಅವರಿಂದ ಇದ್ದೇ ಇರುತ್ತಿತ್ತು. ಹತ್ತನೇ ತರಗತಿ ಅಂಕಪಟ್ಟಿಯಿಂದ ಮೂರನೇ ಭಾಷೆಯನ್ನು ಕೈಬಿಡುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತೀರ್ಮಾನಕ್ಕೂ ಅವರು ಒತ್ತಾಸೆಯಾಗಿ ನಿಂತಿದ್ದರು. ಸದ್ಯಕ್ಕೆ ಅದು ತಾಂತ್ರಿಕ ಕಾರಣಕ್ಕೆ, ಹೈಕೋರ್ಟ್‌ ಮಧ್ಯಪ್ರವೇಶದಿಂದಾಗಿ ಈ ವರ್ಷ ಅನ್ವಯಗೊಳ್ಳಲಿಲ್ಲ. ಮುಂದಿನ ವರ್ಷ ಜಾರಿಯಾಗುವ ನಿರೀಕ್ಷೆ ನಮ್ಮದು.

ಅಧಿಕಾರ ಹಸ್ತಾಂತರದ ಚರ್ಚೆಗಳು ತಾರಕಕ್ಕೆ ಏರಿದ್ದ ಸಂದರ್ಭ. ಸಿದ್ಧರಾಮಯ್ಯ ಅವರೊಂದಿಗೆ ಮಾತನಾಡುವಾಗ, ನೀವು ರಾಜೀನಾಮೆ ಕೊಡ್ತಾ ಇದ್ದೀರಾ ಸರ್‌ ಎಂದು ಕೇಳಿದ್ದೆ. ʻʻಅವರು (ಹೈಕಮಾಂಡ್) ಹೇಳಿದಾಗ ಕೊಡ್ತೀನಿ, ನನ್ನದೇನೂ ಹಠ ಇಲ್ಲʼʼ ಎಂದು ನಿರ್ಭಾವುಕತೆಯಿಂದ ಹೇಳಿದ್ದರು. ಅಷ್ಟು ಸಲೀಸಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಪದವಿಯನ್ನು ಯಾರಾದರೂ ಬಿಟ್ಟು ಹೋಗಲು ಸಾಧ್ಯನಾ ಎಂಬ ಪ್ರಶ್ನೆ ನನ್ನ ತಲೆಯಲ್ಲಿ ಮೊಳೆತಿತ್ತು.

ಆದರೆ ಸಿದ್ಧರಾಮಯ್ಯ ಹೇಳಿದಂತೆಯೇ ಮಾಡಿದರು. ಕೊಟ್ಟ ಮಾತು ಉಳಿಸಿಕೊಂಡರು. ಅಧಿಕಾರಕ್ಕೆ ಅಂಟಿಕೊಂಡು ಕೂರಲಿಲ್ಲ. ಇಷ್ಟು ಸರಳವಾಗಿ ಎಲ್ಲ ಮುಗಿದುಹೋಯಿತಾ ಎನಿಸುತ್ತದೆ. ಆದರೆ ಸಿದ್ಧರಾಮಯ್ಯ ಅವರು ಕರ್ನಾಟಕದ ರಾಜಕೀಯದಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಬೀರಿರುವ ಪ್ರಭಾವ ಸರಳವಾಗಿದ್ದೇನೂ ಅಲ್ಲ. ಅನ್ನಭಾಗ್ಯದಂಥ ಯೋಜನೆಯನ್ನು ಈಗಲೂ ಟೀಕಿಸುವ ಜನರು ಇದ್ದಾರೆ. ಅವರು ಹೊಟ್ಟೆ ತುಂಬಿದ ಜನರು. ಬಡತನ, ಹಸಿವಿನ ಅನುಭವ ಇಲ್ಲದವರು. ಸಿದ್ಧರಾಮಯ್ಯ ಹಳ್ಳಿಗಾಡಿನಿಂದ ಬಂದವರು. ಆ ಹಳ್ಳಿಗಾಡಿನ ಸರಳತೆ, ಜೀವನಪ್ರೀತಿ, ಇತರರ ಕಷ್ಟಗಳಿಗೆ ಮರುಗುವ ಗುಣವನ್ನು ಅವರು ಎಂದೂ ಕಳೆದುಕೊಂಡಿಲ್ಲ. ಮತದಾರರೇ ನನ್ನ ದೇವರು ಎಂದು ಅವರು ಹೇಳಿದ್ದು ಕ್ಲೀಷೆಯಂತೆ ಕೇಳಿಸಬಹುದು. ಆದರೆ ಅವರು ಮತದಾರರಿಗೆ ಯಾವತ್ತಿಗೂ ಉತ್ತರದಾಯಿಯಾಗಿಯೇ ಇದ್ದರು. ಅದಕ್ಕೆ ಉದಾಹರಣೆ ಅವರು ತಂದು ಭಾಗ್ಯಗಳು, ಕಲ್ಯಾಣ ಯೋಜನೆಗಳು.

ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿ ನಮಗೆ ಸಿಗುವುದಿಲ್ಲ. ಆದರೆ ಅಪ್ಪಟ ಕನ್ನಡಪ್ರೇಮಿಯಾಗಿ ಅವರು ನಮ್ಮ ಜೊತೆಯೇ ಇದ್ದಾರೆ. ಅವರಿಂದ ಕಲಿಯುವ ಪಾಠಗಳು ಸಾಕಷ್ಟಿವೆ. ಹೀಗಾಗಿ ಅವರ ಒಡನಾಟ ಎಂದಿಗೂ ಮುಗಿಯುವುದಿಲ್ಲ.

ಒಂದು ಮಾತನ್ನು ಯಾವುದೇ ಅಳುಕಿಲ್ಲದೇ ಹೇಳಬಹುದು. ಕನ್ನಡ ನಾಡು, ನುಡಿ ವಿಷಯದಲ್ಲಿ ಸಿದ್ಧರಾಮಯ್ಯ ಅವರಂಥ ಇನ್ನೊಬ್ಬ ಮುಖ್ಯಮಂತ್ರಿಯನ್ನು ನಾವು ನೋಡಿಲ್ಲ. ʻಕನ್ನಡ ರಾಮಯ್ಯʼ ಎಂಬ ಹೆಸರಿಗೆ ಅವರು ಅನ್ವರ್ಥ.

  • ಟಿ.ಎ.ನಾರಾಯಣಗೌಡ
    ರಾಜ್ಯಾಧ್ಯಕ್ಷರು
    ಕರ್ನಾಟಕ ರಕ್ಷಣಾ ವೇದಿಕೆ

LEAVE A REPLY

Please enter your comment!
Please enter your name here