ತಂದೆಯ ಪುಣ್ಯತಿಥಿಯಂದೇ ಮನೆಗೆ ನುಗ್ಗಿ ಫೋಟೋ ಒಡೆದುಹಾಕಿ, ನಮ್ಮ ಮಗುವನ್ನೇ ಕಿತ್ತುಕೊಂಡರು!” – ನಟಿ ಜಯಪ್ರದಾ ವಿರುದ್ಧ ವಿಜಯಲಕ್ಷ್ಮಿ ಗಂಭೀರ ಆರೋಪ. ಅಸಲಿಗೆ ಜಯಪ್ರದ ವಿಜಯಲಕ್ಷ್ಮಿ ಅವರಿಗೆ ಏನಾಗಬೇಕು ಗೊತ್ತಾ!
ಬೆಳ್ಳಿತೆರೆಯ ಮೇಲೆ ಕಣ್ಣೀರ ಕಥೆಗಳನ್ನು ನೋಡಿ ನಾವು ಮರುಗುತ್ತೇವೆ. ಆದರೆ, ಅದೇ ಬಣ್ಣದ ಲೋಕದ ತಾರೆಗಳ ನೈಜ ಬದುಕಿನಲ್ಲಿ ನಡೆಯುವ ಘೋರ ದುರಂತಗಳು ಸಿನಿಮಾಗಿಂತಲೂ ಭೀಕರವಾಗಿರುತ್ತವೆ. ಬಹುಭಾಷಾ ನಟಿ ವಿಜಯಲಕ್ಷ್ಮಿ ಅವರ ಬದುಕಿನಲ್ಲಿ ನಡೆದ ಒಂದು ಘಟನೆ ಎಂಥವರ ಕರುಳನ್ನೂ ಹಿಂಡುವಂತಿದೆ. ‘ರಾಜೇಶ್ ರಿವೀಲ್ಸ್’ ಯೂಟ್ಯೂಬ್ ಚಾನೆಲ್‌ನಲ್ಲಿ ಕಣ್ಣೀರಿಡುತ್ತಾ ವಿಜಯಲಕ್ಷ್ಮಿ ಬಿಚ್ಚಿಟ್ಟಿರುವ ಈ ರಹಸ್ಯ, ಭಾರತೀಯ ಚಿತ್ರರಂಗದ ಮತ್ತೋರ್ವ ಖ್ಯಾತ ನಟಿ ಜಯಪ್ರದಾ ಅವರ ಕಡೆಗೆ ಬೊಟ್ಟು ಮಾಡಿದೆ. ಅಷ್ಟಕ್ಕೂ ವಿಜಯಲಕ್ಷ್ಮಿ ಮತ್ತು ಜಯಪ್ರದಾ ಅವರಿಗೆ ಇರುವ ಸಂಬಂಧವೇನು? ಆ ಮಗುವಿನ ಕಥೆಯೇನು? ಇಲ್ಲಿದೆ ಎದೆಗುಂಡಿಗೆ ನಡುಗಿಸುವ ಆ ರೋಚಕ ಸತ್ಯ.
ಅಸಲಿಗೆ ಆ ಮಗು ಯಾರದ್ದು? ಜಯಪ್ರದಾಗೆ ಆ ಮಗು ಸಿಕ್ಕಿದ್ದೇಗೆ?
ನಟಿ ವಿಜಯಲಕ್ಷ್ಮಿ ಅವರ ಪ್ರಾಣಕ್ಕಿಂತಲೂ ಮುದ್ದಾದ ಅಕ್ಕ ಉಷಮ್ಮ. ವಿಜಯಲಕ್ಷ್ಮಿ ಅವರು ಇಂದು ಮದುವೆಯಾಗದೆ, ತಮ್ಮ ಸ್ವಂತ ಬದುಕನ್ನೇ ಮುಡಿಪಾಗಿಟ್ಟು ಸೇವೆ ಮಾಡುತ್ತಿರುವುದು ಇದೇ ಉಷಮ್ಮನಿಗೆ. ಈ ಉಷಮ್ಮ ಒಂದು ಕಾಲದಲ್ಲಿ ಚೆನ್ನಾಗಿದ್ದವರು. ಆದರೆ, ಈಗ ಸ್ಮರಣಶಕ್ತಿ ಕಳೆದುಕೊಂಡು, ಹಾಸಿಗೆ ಹಿಡಿದು ಜೀವಚ್ಛವದಂತೆ ಬದುಕುತ್ತಿದ್ದಾರೆ. ಈ ಉಷಮ್ಮ ಹೆತ್ತು ಹೊತ್ತ ಮಗುವೇ ಇಂದು ನಟಿ ಜಯಪ್ರದಾ ಅವರ ಬಳಿ ಬೆಳೆಯುತ್ತಿದೆ! ಹೌದು, “ನಮ್ಮ ಅಕ್ಕ ಹೆತ್ತು ಕೊಟ್ಟ ಮಗುವನ್ನೇ, ಇಂದು ಜಯಪ್ರದಾ ಅವರು ‘ಇದು ನನ್ನ ಮಗು’ ಎಂದು ಇಟ್ಟುಕೊಂಡಿದ್ದಾರೆ” ಎನ್ನುವ ಸ್ಫೋಟಕ ಸತ್ಯವನ್ನು ಸಂದರ್ಶನದಲ್ಲಿ ವಿಜಯಲಕ್ಷ್ಮಿ ಹೊರಹಾಕಿದ್ದಾರೆ. ವಿಜಯಲಕ್ಷ್ಮಿ ಅವರ ಬಾವ (ಉಷಮ್ಮ ಅವರ ಗಂಡ) ಹಾಗೂ ಜಯಪ್ರದಾ ಅವರ ನಡುವಿನ ಕೌಟುಂಬಿಕ ಒಪ್ಪಂದ ಅಥವಾ ಸಂಬಂಧದಿಂದಾಗಿ, ಹೆತ್ತ ತಾಯಿಯ ಮಡಿಲಿನಿಂದ ಮಗುವನ್ನು ಕಿತ್ತುಕೊಂಡು ಹೋಗಲಾಗಿದೆ.
ತಂದೆಯ ಪುಣ್ಯತಿಥಿಯಂದೇ ನಡೆದ ಆ ಭೀಕರ ಘಟನೆ!
ಒಂದು ಕಡೆ ಅಕ್ಕನ ಅನಾರೋಗ್ಯ, ಮತ್ತೊಂದು ಕಡೆ ಆರ್ಥಿಕ ಸಂಕಷ್ಟ. ಇದರ ನಡುವೆ ವಿಜಯಲಕ್ಷ್ಮಿ ಅವರ ಕುಟುಂಬದ ಮೇಲೆ ನಡೆದ ದೌರ್ಜನ್ಯ ಅಷ್ಟಿಷ್ಟಲ್ಲ. ವಿಜಯಲಕ್ಷ್ಮಿ ಅವರು ತಮ್ಮ ತಂದೆಯ ಡೆತ್ ಅನಿವರ್ಸರಿ (ಪುಣ್ಯತಿಥಿ) ಕಾರ್ಯವನ್ನು ಶ್ರದ್ಧಾಭಕ್ತಿಯಿಂದ ಮಾಡುತ್ತಿದ್ದರು. ತಂದೆಯನ್ನು ಕಳೆದುಕೊಂಡ ನೋವಿನಲ್ಲಿ ಇಡೀ ಕುಟುಂಬ ಕಣ್ಣೀರಿನಲ್ಲಿತ್ತು. ಅದೇ ದಿನ, ಅದೇ ಸಮಯಕ್ಕೆ ಸರಿಯಾಗಿ ವಿಜಯಲಕ್ಷ್ಮಿ ಅವರ ಬಾವ (ಉಷಮ್ಮನ ಗಂಡ) ಮನೆಗೆ ನುಗ್ಗಿದ್ದಾರೆ.
ಅಲ್ಲಿಗೆ ಬಂದು ಅಮಾನವೀಯವಾಗಿ ವರ್ತಿಸಿದ ಆತ, ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಒಡೆದು, ಧ್ವಂಸ ಮಾಡಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಪೂಜೆಗೆಂದು ಇಟ್ಟಿದ್ದ ಅವರ ಹೆತ್ತ ತಂದೆಯ ಫೋಟೋವನ್ನೇ ಒಡೆದುಹಾಕಿ ವಿಕೃತಿ ಮೆರೆದಿದ್ದಾರೆ. “ಸೀಮೆ ಎಣ್ಣೆ ತಂದು ಸುರಿದವರ ಮೇಲೆ ಸುರಿಯುತ್ತಿದ್ದಾರೆ, ನಮ್ಮ ಮನೆಗೆ ಬಂದು ಗಲಾಟೆ ಮಾಡುತ್ತಾರೆ, ನಮ್ಮ ತಂದೆ ಫೋಟೋ ಹೊಡೆದುಹಾಕಿ ನಮ್ಮ ಬಾವ ಹೋದರು” ಎಂದು ವಿಜಯಲಕ್ಷ್ಮಿ ಅವರು ಗದ್ಗದಿತರಾಗಿ ಆ ಕರಾಳ ದಿನವನ್ನು ನೆನಪಿಸಿಕೊಂಡಿದ್ದಾರೆ.
ಒಂದು ಬಾರಿ ಮಗುವನ್ನು ತೋರಿಸಿ ಎಂದು ಬೇಡಿಕೊಂಡರೂ ಕರುಣೆ ತೋರದ ಜಯಪ್ರದಾ!
ತನ್ನ ಹೊಟ್ಟೆ ಸೀಳಿ ಜನ್ಮ ನೀಡಿದ ಮಗುವನ್ನು ನೋಡಲು ಯಾವ ತಾಯಿಗೆ ತಾನೇ ಆಸೆ ಇರುವುದಿಲ್ಲ? ಉಷಮ್ಮ ಇಂದು ಹಾಸಿಗೆ ಹಿಡಿದಿದ್ದಾರೆ. ಅವರಿಗೆ ಹಳೆಯ ಯಾವ ನೆನಪುಗಳೂ ಇಲ್ಲದಂತಹ ಸ್ಥಿತಿಯಲ್ಲಿದ್ದಾರೆ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ತನ್ನ ಅಕ್ಕನಿಗೆ, ಆಕೆಯ ಮಗುವನ್ನು ಒಂದು ಬಾರಿಯಾದರೂ ತೋರಿಸಬೇಕು ಎಂದು ವಿಜಯಲಕ್ಷ್ಮಿ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೆ ಜಯಪ್ರದಾ ತೋರಿದ ಕಠೋರತೆ ಎಂಥವರನ್ನೂ ಬೆಚ್ಚಿಬೀಳಿಸುತ್ತದೆ.
“ನಮ್ಮ ಅಕ್ಕ ಹೆತ್ತುಕೊಟ್ಟ ಮಗು ಅದು. ಆ ಮಗುವನ್ನು ನೋಡಲು ನಾವು ಹೋದಾಗ ನಮ್ಮನ್ನು ನೋಡಕ್ಕೂ ಬಿಡಲಿಲ್ಲ. ಜಯಪ್ರದಾ ಅವರು ನಮ್ಮ ಬಳಿ ಒಂದು ಮಾತು ಕೂಡ ಆಡಲಿಲ್ಲ. ಉಷಕ್ಕ ಈ ತರಹ ಹಾಸಿಗೆ ಹಿಡಿದಿದ್ದಾಳೆ, ದಯವಿಟ್ಟು ಒಂದೇ ಒಂದು ಸಾರಿ ಮಗುವನ್ನು ಅವಳಿಗೆ ತೋರಿಸಿ (Show the child once) ಎಂದು ಅಂಗಲಾಚಿದರೂ ನಮಗೆ ಮಗುವನ್ನು ತೋರಿಸಲಿಲ್ಲ” ಎಂದು ಕಣ್ಣೀರು ಹಾಕಿದ್ದಾರೆ ವಿಜಯಲಕ್ಷ್ಮಿ.
ಒಂದು ಜೀವ ತನ್ನ ಕೊನೆಯುಸಿರು ಎಳೆಯುವ ಮುನ್ನ ತನ್ನ ಮಗುವಿನ ಮುಖ ನೋಡಲು ತಹತಹಿಸುತ್ತಿದೆ. ಆ ತಾಯಿಯ ಕರುಳಿನ ಕೂಗಿಗೆ ಬೆಲೆ ಕೊಡದೆ, ಮಗುವನ್ನು ದೂರ ಇಟ್ಟಿರುವ ಜಯಪ್ರದಾ ಮತ್ತು ಅವರ ಬಾವನ ನಿರ್ದಯ ವರ್ತನೆ ವಿಜಯಲಕ್ಷ್ಮಿ ಅವರ ಮನಸ್ಸಿನಲ್ಲಿ ಆಳವಾದ ಗಾಯ ಮಾಡಿದೆ. ಮನುಷ್ಯತ್ವವೇ ಸತ್ತೋಗಿರುವ ಇಂತಹ ಘಟನೆಗಳು, ಸ್ಟಾರ್ ನಟ-ನಟಿಯರ ಬದುಕಿನ ಹಿಂದಿನ ಕತ್ತಲನ್ನು, ಸಂಬಂಧಗಳ ಬೆಲೆ ಕಳೆದುಕೊಂಡಿರುವ ವಾಸ್ತವವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುತ್ತಿದೆ.(ಸೋಷಿಯಲ್ ಮೀಡಿಯಾ)





