ವಿಜಯಪುರ:
3500ಕ್ಕೂ ಹೆಚ್ಚು ಹಮಾಲರು ಮತ್ತು 172ಕ್ಕೂ ಅಧಿಕ ಟಾಂಗಾವಾಲಾ ಕುಟುಂಬಗಳ ಬದುಕಿಗೆ ಆಸರೆಯಾಗಲು ಒತ್ತಾಯ; ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಧರಣಿಗೆ ನಿರ್ಧಾರ
ವಿಜಯಪುರ: ನಗರದ ಅತ್ಯಂತ ಶ್ರಮಜೀವಿಗಳಾದ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಹಮಾಲರು ಮತ್ತು ಟಾಂಗಾವಾಲಾಗಳ ವಸತಿ ಯೋಜನೆಯಡಿಯಲ್ಲಿ ಮನೆಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ತಕ್ಷಣವೇ ಮಂಜೂರು ಮಾಡಬೇಕು ಎಂದು ದಲಿತ ಸ್ವರಾಜ್ಯ ಸೇನೆ – ಕರ್ನಾಟಕ ಸಂಘಟನೆಯು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವನ್ನು ತೀವ್ರವಾಗಿ ಒತ್ತಾಯಿಸಿದೆ.
ನಗರದಲ್ಲಿ ತಲೆಮಾರುಗಳಿಂದ ವಾಸಿಸುತ್ತಾ, ಕಠಿಣ ದೈಹಿಕ ಶ್ರಮದ ಮೂಲಕ ನಗರದ ಆರ್ಥಿಕತೆಗೆ ಬೆನ್ನೆಲುಬಾಗಿ ನಿಂತಿರುವ 3500ಕ್ಕೂ ಅಧಿಕ ಹಮಾಲ ಕಾರ್ಮಿಕರು ಹಾಗೂ 172ಕ್ಕೂ ಹೆಚ್ಚಿರುವ ಟಾಂಗಾವಾಲಾಗಳ ಕುಟುಂಬಗಳು ಇಂದು ಸ್ವಂತ ಸೂರಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿವೆ. ಈ ಶ್ರಮಿಕ ವರ್ಗಕ್ಕೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಕೂಡಲೇ ನಿವೇಶನ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ಪ್ರಮುಖರು ಪ್ರಕಟಣೆಯ ಮೂಲಕ ಕೋರಿದ್ದಾರೆ.
ವಿಜಯಪುರ ನಗರವು ವೇಗವಾಗಿ ಬೆಳೆಯುತ್ತಿರುವುದರ ಹಿಂದೆ ದಿನದ ಇಪ್ಪತ್ತನಾಲ್ಕು ಗಂಟೆಯೂ ದುಡಿಯುವ ಹಮಾಲರ ಮತ್ತು ಟಾಂಗಾವಾಲಾಗಳ ಬೆವರ ಹನಿಗಳಿವೆ. ಮಾರುಕಟ್ಟೆಗಳು, ಗೋದಾಮುಗಳು, ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ತೂಕದ ಮೂಟೆಗಳನ್ನು ಹೊತ್ತು ಸಾಗಿಸುವ ಹಮಾಲರು ಹಾಗೂ ನಗರದ ಸಾಂಪ್ರದಾಯಿಕ ಸಾರಿಗೆಯನ್ನು ಜೀವಂತವಾಗಿಟ್ಟಿರುವ ಟಾಂಗಾವಾಲಾಗಳು ಇಂದಿಗೂ ಬಾಡಿಗೆ ಮನೆಗಳಲ್ಲಿ, ಗೂಡಂಗಡಿಗಳಲ್ಲಿ ಮತ್ತು ಅಸುರಕ್ಷಿತ ಆಶ್ರಯ ತಾಣಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇವರ ಕಲ್ಯಾಣಕ್ಕಾಗಿ ಸರ್ಕಾರವು ಜಾರಿಗೆ ತಂದಿರುವ ವಸತಿ ಯೋಜನೆಯು ಕೇವಲ ಕಾಗದದ ಮೇಲಷ್ಟೇ ಉಳಿದಿದ್ದು, ಭೂಮಿಯ ಮಂಜೂರಾತಿಯ ಪ್ರಕ್ರಿಯೆಯು ಆಮೆಗತಿಯಲ್ಲಿ ಸಾಗುತ್ತಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ. ಈ ಆಡಳಿತಾತ್ಮಕ ಉದಾಸೀನತೆಗೆ ಸಂಘಟನೆಯು ತೀವ್ರ ಆತಂಕ ವ್ಯಕ್ತಪಡಿಸಿದೆ.
ಬಹುತೇಕರು ತೀರಾ ಬಡತನದ ರೇಖೆಗಿಂತ ಕೆಳಗಿನ ಜೀವನ ಸಾಗಿಸುತ್ತಿದ್ದಾರೆ. ಈ ಜನರಿಗೆ ಸ್ವಂತದೊಂದು ಮನೆಯನ್ನು ಹೊಂದುವುದು ಇಂದಿಗೂ ಒಂದು ಕನಸಾಗಿಯೇ ಉಳಿದಿದೆ. ಜಿಲ್ಲಾಡಳಿತವು ನಗರಕ್ಕೆ ಹೊಂದಿಕೊಂಡಂತೆ ಅಥವಾ ಹೊರವಲಯದಲ್ಲಾದರೂ ಸೂಕ್ತವಾದ ಭೂಮಿಯನ್ನು ಗುರುತಿಸಿ, ಈ ಶ್ರಮಿಕರ ವಸತಿ ಯೋಜನೆಗೆ ಮೀಸಲಿಡುವುದು ಪ್ರಥಮಾದ್ಯತೆಯ ಕರ್ತವ್ಯವಾಗಬೇಕು.“ವಸತಿ ಎನ್ನುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದ್ದು, ಇದನ್ನು ಒದಗಿಸುವುದು ಕಲ್ಯಾಣ ಸರ್ಕಾರದ ಜವಾಬ್ದಾರಿಯಾಗಿದೆ. ಹಮಾಲ ಹಾಗೂ ಟಾಂಗಾವಾಲಾ ಕಾರ್ಮಿಕರ ಮಕ್ಕಳು ಸೂಕ್ತ ವಸತಿ ಮತ್ತು ಮೂಲಸೌಕರ್ಯಗಳಿಲ್ಲದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಸ್ವತಃ ಈ ವಿಷಯವನ್ನು ಪ್ರಥಮ ಆದ್ಯತೆಯೆಂದು ಪರಿಗಣಿಸಿ, ತಾಂತ್ರಿಕ ತೊಂದರೆಗಳನ್ನು ನಿವಾರಿಸಿ, ಭೂಮಿ ಮಂಜೂರಾತಿ ಪ್ರಕ್ರಿಯೆಯನ್ನು ಸರಳಿಕರಣಗೊಳಿಸಬೇಕು”
ದಲಿತ ಸ್ವರಾಜ್ಯ ಸೇನೆ – ಕರ್ನಾಟಕ.ಕಾರ್ಮಿಕ ಮತ್ತು ವಸತಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಈ ಯೋಜನೆ ನೆನೆಗುದಿಗೆ ಬಿದ್ದಿರುವುದು ಎದ್ದು ಕಾಣುತ್ತಿದೆ. ಸಾವಿರಾರು ಕುಟುಂಬಗಳ ಬದುಕನ್ನು ಹಸನುಗೊಳಿಸಬಲ್ಲ ಈ ಯೋಜನೆಗೆ ಸರ್ಕಾರಿ ಜಮೀನನ್ನು ಗುರುತಿಸುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲೇನಲ್ಲ. ಆದರೆ, ಭೂಮಾಫಿಯಾ ಮತ್ತು ಇತರೆ ವಾಣಿಜ್ಯ ಉದ್ದೇಶಗಳಿಗೆ ಸುಲಭವಾಗಿ ಸಿಗುವ ಭೂಮಿ, ದೇಶದ ಬೆನ್ನೆಲುಬಾಗಿರುವ ಶ್ರಮಿಕ ವರ್ಗಕ್ಕೆ ಸಿಗುತ್ತಿಲ್ಲ ಎಂಬುದು ವ್ಯವಸ್ಥೆಯ ದುರಂತವಾಗಿದೆ. ಈ ತಾರತಮ್ಯ ಧೋರಣೆಯನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಎಂದು ಮತ್ತು
ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು ಶೀಘ್ರವಾಗಿ ಸ್ಪಂದಿಸದಿದ್ದರೆ ನೊಂದ ಹಮಾಲರು ಹಾಗೂ ಟಾಂಗಾವಾಲಾ ಕುಟುಂಬಗಳೊಂದಿಗೆ ನಗರದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಗೌಡಪ್ಪ ಬಡಿಗೇರ, ಅಮೃತ್ ಮಾವಿನ ಹಳ್ಳಿ, ಪರಶುರಾಮ್ ಕರವಿನಾಳ, ತಿಪ್ಪಣ್ಣ ಡಿ, ಮಹೆಬೂಬ್ ಮುಜಾವರ್, ಗುರುಪಾದ್ ಬಿರಾದಾರ, ಅರುಢ ಸ್ವಾಮಿ ಕಬಾಡೆ, ಪ್ರಕಾಶ್ ಶಬರದ, ಪ್ರಭು ಸಿಂಧೆ, ಪ್ರಶಾಂತ್ ಗದ್ದರಗಿ, ಸುಭಾಷ್ ಪಾಂಡ್ರೆ ಇತರರಿದ್ದರು.





