ಬೆಂಗಳೂರು:ದಿನಾಂಕ 23-04-2026 ರಂದು ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಬಹಳ ಸಂಕೀರ್ಣ ಹಾಗೂ ಕಷ್ಟದ ರಾಜಕೀಯ-ಸಾಮಾಜಿಕ ಕಾಲಘಟ್ಟದಲ್ಲಿ ನಾವೆಲ್ಲರೂ ಈಗ ಬದುಕುತ್ತಿದ್ದೇವೆ.

ಜಾತ್ಯತೀತ ಪ್ರಜಾಪ್ರಭುತ್ವದ ನಾವು ಒಪ್ಪಿರುವ ಸಂವಿಧಾನದ ಆಶಯಗಳನ್ನು ಕೋಮುವಾದಿ ಫ್ಯಾಸಿಸ್ಟ್ ಧೋರಣೆಗಳ ಮೂಲಕ ಹತ್ತಿಕ್ಕುವ ದುಷ್ಟ ಪ್ರಯತ್ನಗಳು ನಡೆಯುತ್ತಿವೆ.

ಬ್ರಿಟೀಷ್ ವಸಾಹತುಶಾಹಿಗಳಿಂದ 1947ರಲ್ಲಿ ಬಿಡುಗಡೆ ಪಡೆದು ಸ್ವತಂತ್ರಗೊಂಡ ನಾವುಗಳು ಈಗ ಭಾರತ ಗಣರಾಜ್ಯ ಒಕ್ಕೂಟದ ಸದಸ್ಯ ರಾಜ್ಯಗಳಾಗಿದ್ದೇವೆ. ಭಾಷಾವಾರು ಆಧಾರದಲ್ಲಿ ನಮ್ಮನಮ್ಮ ಭಾಷಾ ರಾಜ್ಯ ಘಟಕಗಳು ರಚನೆಯಾಗಿವೆ. ಎಲ್ಲಾ ಸದಸ್ಯ ರಾಜ್ಯ ಘಟಕಗಳಿಗೆ ಸಮಾನ ಅವಕಾಶ, ಸಮಾನ ಗೌರವವನ್ನು ಅಂದು ಖಾತ್ರಿಪಡಿಸಲಾಗಿತ್ತು. ಆದರೆ ಈ ಒಕ್ಕೂಟ ವ್ಯವಸ್ಥೆಯನ್ನು ಹಂತಹಂತವಾಗಿ ದುರ್ಬಲಗೊಳಿಸುತ್ತಾ ಬರಲಾಗುತ್ತಿದೆ. ರಾಜ್ಯಗಳ ಅಧಿಕಾರ ಮತ್ತು ಹಕ್ಕುಗಳನ್ನು ದಮನಿಸಿ ಎಲ್ಲವನ್ನೂ ಹೆಚ್ಚು ಹೆಚ್ಚು ಕೇಂದ್ರೀಕರಣಕ್ಕೆ ಒಳಪಡಿಸಲಾಗುತ್ತಿದೆ.

ಇದರಿಂದಾಗಿ ರಾಜ್ಯ ಸರ್ಕಾರಗಳ ಅಧಿಕಾರ ಕರಗಿ ನಾವೆಲ್ಲರೂ ದೆಹಲಿ ಕೇಂದ್ರ ಸರ್ಕಾರದ ಆಂತರಿಕ ವಸಾಹತುವಾಗುವ ದುಃಸ್ಥಿತಿ ಬಂದಿದೆ. ಹಿಂದಿ ಭಾಷೆಯ ಹೇರಿಕೆ, ಜಿ.ಎಸ್.ಟಿ ತೆರಿಗೆ ವಸೂಲಿ ಮತ್ತು ಹಂಚಿಗೆಯಲ್ಲಿ ಅನ್ಯಾಯ, 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ.

ಬಿಜೆಪಿ ಪಕ್ಷವು ಇಂಡಿಯಾ ಕೇಂದ್ರ ಸರ್ಕಾರದ ಅಧಿಕಾರಕ್ಕೆ ಬಂದ ನಂತರ ರಾಜ್ಯಗಳ ಅಧಿಕಾರದ ವ್ಯಾಪ್ತಿಯನ್ನು ಇನ್ನಷ್ಟು ಕುಗ್ಗಿಸಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತಾ, ಸಮಾಜದಲ್ಲಿ ಜಾತ್ಯಾತೀತ ಆಶಯಗಳಿಗೆ ಧಕ್ಕೆ ತಂದು ಕೋಮುವಾದಿ ಅಜೆಂಡಾವನ್ನು ಮುನ್ನೆಲೆಗೆ ತರಲಾಗುತ್ತಿದೆ.

ಬಿಜೆಪಿ, ಆ‌ರ್.ಎಸ್‌.ಎಸ್. ಭಜರಂಗ ದಳ ಮುಂತಾದ ಬಲಪಂಥೀಯರು ನಮ್ಮ ಸಮಾಜವನ್ನು ಹಿಂದೂ-ಮುಸ್ಲಿಂ. ಕನ್ನಡಿಗರು-ತಮಿಳರೆಂದು, ಮೇಲ್ಟಾತಿ-ಕೆಳಜಾತಿಗಳೆಂದು ವಿಭಜಿಸುತ್ತಾ ಎಲ್ಲೆಡೆ ಆಶಾಂತಿ, ಕೋಭೆ, ಹಿಂಸೆಯ ವಾತಾವರಣ ಸೃಷ್ಟಿಸುತ್ತಿದ್ದಾರೆ.

ರಾಜಕೀಯ ಅಧಿಕಾರ ಸಂಪನ್ಮೂಲ ಹಂಚಿಕೆ, ಭಾಷೆ, ಶಿಕ್ಷಣ, ಅಭಿವೃದ್ಧಿ ಯೋಜನೆಗಳಲ್ಲಿ ಉತ್ತರ ಇಂಡಿಯಾದ ರಾಜ್ಯಗಳಿಗೆ ಹೆಚ್ಚಿನ ಸವಲತ್ತು ನೀಡುತ್ತಾ ದಕ್ಷಿಣ ಇಂಡಿಯಾದ ರಾಜ್ಯಗಳನ್ನು ಕಡೆಗಣಿಸಲಾಗುತ್ತಿದೆ.

ಕರ್ನಾಟಕವೂ ಸಹ ಈ ತಾರತಮ್ಯಗಳಿಗೆ ಒಳಗಾಗಿದೆ ಮತ್ತೀಗ ಜಾಗೃತಗೊಳ್ಳುತ್ತಿದೆ.

ಹಿಂದಿ ಭಾಷೆಯ ಹೇರಿಕೆಯ ವಿರುದ್ದ ಇತ್ತೀಚೆಗೆ ನಡೆದ ತೀವ್ರ ಪ್ರತಿಭಟನೆಗಳೇ ಇದಕ್ಕೆ ಸಾಕ್ಷಿಯಾಗಿದೆ.

ಕರ್ನಾಟಕದ ಬಿಜೆಪಿ ಮತ್ತವರ ಸಂಘ ಪರಿವಾರವು ಕನ್ನಡಿಗರ ಮೇಲೆ ಹಿಂದಿ ಭಾಷೆಯ ಹೇರಿಕೆಗೆ ಬಹಿರಂಗ ಬೆಂಬಲ ನೀಡಿ ನಾಡದ್ರೋಹವೆಸಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಕರ್ನಾಟಕದಲ್ಲಿ ನೆಲೆಸಿರುವ ತಮಿಳು ಭಾಷಿಕರ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡುವ ಹೀನ ಕಾರ್ಯವನ್ನೂ ಮಾಡುತ್ತಾ ಬಂದಿದ್ದಾರೆ.

ಈ ಚುನಾವಣೆಯ ಸಂದರ್ಭದಲ್ಲಿ ದಕ್ಷಿಣ ಭಾರತದ ರಾಜ್ಯಗಳ ಜನತೆಯು ತಮ್ಮ ತಮ್ಮ ಭಾಷೆ, ಸಂಸ್ಕೃತಿ, ಪರಂಪರೆಗಳ ರಕ್ಷಣೆಗಾಗಿ, ಆರ್ಥಿಕ, ರಾಜಕೀಯ ಸ್ವಾಯತ್ತತೆಗಾಗಿ ಒಗ್ಗೂಡಿ ದನಿಯೆತ್ತಿ ಜೊತೆಯಾಗಿ ಹೋರಾಡುತ್ತ ನೈಜ ಒಕ್ಕೂಟದ ವ್ಯವಸ್ಥೆ ಬಲಪಡಿಸಲು ಮುನ್ನಾಗಬೇಕಿದೆ.

ಅದಕ್ಕೆ ಪೂರಕವಾದ ಜನಾಭಿಪ್ರಾಯ ರೂಪಿಸಬೇಕೆಂದರೆ ಈ ಅಪಾಯಗಳ ಸೂತ್ರಧಾರನಂತಿರುವ ಬಿಜೆಪಿ ಮತ್ತವರ ಮಿತ್ರರನ್ನು ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ನೀವು ತಿರಸ್ಕರಿಸಬೇಕೆಂದು

ಜಾಣಗೆರೆ ವೆಂಕಟರಾಮಯ್ಯ ಹಿರಿಯ ಕನ್ನಡ ಚಳವಳಿ ನಾಯಕರು

ಸಾ.ರಾ.ಗೋವಿಂದು. ಅಧ್ಯಕ್ಷರು. ಕರ್ನಾಟಕ ರಾಜ್ಯ ಡಾ||ರಾಜ್‌ ಕುಮಾರ್ ಅಭಿಮಾನಿಗಳ ಸಂಘ

ಪಾರ್ವತೀಶ ಬಿಳಿದಾಳೆ ನಾವೇ ಕರ್ನಾಟಕ ಅಧ್ಯಕ್ಷರು

ಶೇ.ಬೊ. ರಾಧಾಕೃಷ್ಣ ಕನ್ನಡ ಚಳವಳಿ ನಾಯಕರು ಮನವಿ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here