ಅದು 1985 ಸಮಯ. ಅಂದು ವಿರೋಧ ಪಕ್ಷದಲ್ಲಿದ್ದ ಬಸವಲಿಂಗಪ್ಪನವರು ಆಡಳಿತ ಪಕ್ಷದಲ್ಲಿದ್ದ ನನ್ನನ್ನು ಒಮ್ಮೆ ತಮ್ಮ ಬಳಿ ಕರೆದರು. ಮುತ್ಸದ್ಧಿ ನಾಯಕರಾಗಿದ್ದ ಅವರು ಕರೆದ ಕೂಡಲೇ ಸಹಜವಾಗಿ ಹೋಗಿ ನಿಂತೆ.

ಅವರು ಕೆಲವು ವಿಷಯಗಳನ್ನು ಹೇಳುತ್ತಾ,
“ನೋಡಯ್ಯ ನಮ್ಮ ಸಮುದಾಯದ ಜನ ಪ್ರತಿನಿಧಿಗಳು ಹೆಚ್ಚು ಹೆಚ್ಚು ಜ್ಞಾನಶೀಲರಾಗಬೇಕು. ಬಾಬಾ ಸಾಹೇಬರು ಜ್ಞಾನ ಪಡೆಯದಿದ್ದರೆ ನಾನು ನೀನು ಇವತ್ತು ಇಲ್ಲಿರಲು ಆಗುತ್ತಿತ್ತಾ” ಎಂದು ಹೇಳಿದರು.

ಆ ಹೊತ್ತಿಗಾಗಲೇ ನನಗೆ ಪುಸ್ತಕದ ಗೀಳು ಹತ್ತಿದ್ದರಿಂದ ಬಸವಲಿಂಗಪ್ಪನವರ ಮಾತು ಬಹಳಷ್ಟು ಮಹತ್ವದ ಮಾತಾಗಿ ನನಗೆ ಕಂಡಿತು. ಹೀಗಾಗಿಯೇ ನಾನು ಅಂದಿನಿಂದ ಅವರೊಡನೆ ಹೆಚ್ಚಾಗಿ ಒಡನಾಟ ಇಟ್ಟುಕೊಂಡೆ.

ಅದಾಗಿ ತುಸು ಸಮಯದ ನಂತರ ನಮ್ಮ ವರ್ಗದ ಜನ ಪ್ರತಿನಿಧಿಗಳಲ್ಲಿ ಅರಿವು ಮೂಡಿಸಲು ಹೆಚ್ಚು ಹೆಚ್ಚು ಸಭೆಗಳನ್ನು ಮಾಡಿ ಬಸವಲಿಂಗಪ್ಪನವರು ನಮ್ಮಲ್ಲಿ ಸಾರ್ವಜನಿಕ ಬದುಕು ಮತ್ತು ತಳವರ್ಗಗಳ ರಾಜಕೀಯ ಐಕ್ಯತೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದದ್ದು ನನಗೆ ಈಗಲೂ ನೆನಪಿದೆ.

ಒಂದೆರಡು ವರ್ಷಗಳ ತರುವಾಯ ಬಸವಲಿಂಗಪ್ಪನವರು ಯಾವುದೋ ಒಳ್ಳೆಯ ಉದ್ದೇಶಕ್ಕಾಗಿ ನನ್ನನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದರು. ನಮ್ಮ ಅಧಿಕೃತ ಭೇಟಿ ಮುಗಿದ ಬಳಿಕ ನನ್ನನ್ನು ದೆಹಲಿಯ ಕರೋಲ್ ಬಾಗ್ ಗೆ ಕರೆದುಕೊಂಡು ಹೋಗಿ ಅಲ್ಲಿನ ವ್ಯಾಪಾರ ಮತ್ತು ವಹಿವಾಟವನ್ನು ತೋರಿಸಿ ನಮ್ಮ ವರ್ಗದ ಜನರು ಯಾವಾಗ ಇಷ್ಟೊಂದು ಪ್ರೊಡಕ್ಟೀವ್ ಆಗೋದು? ಎಂದು ಹೇಳುತ್ತಾ ಬೇಸರ ವ್ಯಕ್ತಪಡಿಸಿದ್ದರು.

ಇಂತಹ ಬಸವಲಿಂಗಪ್ಪನವರು ಮುಂದೆ ತಲೆ ಮೇಲೆ ಮಲ ಹೊರುವ ಪದ್ದತಿಯನ್ನು ನಿಷೇಧಿಸಿ ಪರಿಶಿಷ್ಟ ಜಾತಿಯ ಬಡವರಿಗೆ ಅಪಾರವಾದ ಭೂಮಿಯನ್ನು ಹಂಚಿಕೆ ಮಾಡಿ ಅವರ ಘನತೆಯ ಬದುಕಿಗೆ ಕಾರಣರಾದರು.

ಮೌಢ್ಯತೆಯ ನೀರಿಗೆ ಕಲ್ಲು ಹೊಡೆದು ವೈಚಾರಿಕತೆಯ ಅಲೆ ಎಬ್ಬಿಸಿದ ಮೇರು ವ್ಯಕ್ತಿತ್ವದ ನಾಯಕರಾದ ಬಸವಲಿಂಗಪ್ಪವರ ಜನ್ಮದಿನವಾದ ಇಂದು ಅವರನ್ನು ಗೌರವದಿಂದ ನೆನೆಯುವೆ

LEAVE A REPLY

Please enter your comment!
Please enter your name here