ಕೊಪ್ಪಳ:
ಕೊಪ್ಪಳದ ಪವಿತ್ರ ನೆಲದಲ್ಲಿ ಭಕ್ತಿ, ಭಾವೈಕ್ಯತೆ, ಕಾಯಕ ಮತ್ತು ದಾಸೋಹದ ಪರಂಪರೆಯನ್ನು ಜಗತ್ತಿಗೆ ಸಾರುತ್ತಿರುವ ಗವಿಮಠದ ಜಾತ್ರಾ ಮಹೋತ್ಸವವೆಂದರೆ ಅದೊಂದು ಸಾಮಾನ್ಯ ಧಾರ್ಮಿಕ ಉತ್ಸವವಲ್ಲ. ಅದು ಲಕ್ಷಾಂತರ ಭಕ್ತರ ನಂಬಿಕೆಯ ಸಂಗಮ, ಮಾನವೀಯ ಮೌಲ್ಯಗಳ ಮಹಾಪರ್ವ ಹಾಗೂ ಅನ್ನದಾಸೋಹದ ಮೂಲಕ ಸೇವೆಯ ಸಾರ್ಥಕತೆಯನ್ನು ಸಾರುವ ಪುಣ್ಯಕ್ಷೇತ್ರದ ಮಹಾಸಂಭ್ರಮ.
ಪ್ರತಿವರ್ಷದAತೆ 2027ನೇ ಸಾಲಿನ ಗವಿಮಠದ ಜಾತ್ರಾ ಮಹೋತ್ಸವದ ಸಿದ್ಧತೆಗಳು ಈಗಾಗಲೇ ಆರಂಭಗೊAಡಿವೆ. ಜಾತ್ರೆಯ ದಿನಗಳಲ್ಲಿ ನಾಡಿನ ಮೂಲೆ ಮೂಲೆಗಳಿಂದ ಭಕ್ತಸಾಗರವೇ ಗವಿಮಠದತ್ತ ಹರಿದುಬರುತ್ತದೆ. ಬರುವ ಪ್ರತಿಯೊಬ್ಬ ಭಕ್ತನಿಗೂ ಅನ್ನ, ಆತಿಥ್ಯ ಹಾಗೂ ಆತ್ಮೀಯತೆಯ ಸೇವೆ ದೊರೆಯಬೇಕೆಂಬ ಮಹತ್ತರ ಸಂಕಲ್ಪದೊAದಿಗೆ ದಾಸೋಹದ ಸಿದ್ಧತೆಗಳು ನಡೆಯುತ್ತಿವೆ.
ಈ ಸಿದ್ಧತೆಯ ನಡುವೆ ಕಂಡುಬರುವ ಒಂದು ದೃಶ್ಯ ಮಾತ್ರ ಪ್ರತಿಯೊಬ್ಬರ ಮನಸ್ಸನ್ನೂ ಆಳವಾಗಿ ಸ್ಪರ್ಶಿಸುತ್ತದೆ. ಲಕ್ಷಾಂತರ ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡುವ ಪೂಜ್ಯ ಗವಿಮಠದ ಶ್ರೀಗಳೇ ಸ್ವತಃ ತಮ್ಮ ಹೆಗಲ ಮೇಲೆ ಕಟ್ಟಿಗೆಯನ್ನು ಹೊತ್ತು ಸಾಗುತ್ತಿರುವ ದೃಶ್ಯ!
ನೋಡಲು ಇದು ಕೇವಲ ಕಟ್ಟಿಗೆಯನ್ನು ಹೊತ್ತು ಸಾಗುವ ಒಂದು ಕ್ಷಣವಾಗಿರಬಹುದು. ಆದರೆ ಅದರ ಹಿಂದಿರುವ ಭಾವನೆ, ಕಾಳಜಿ ಮತ್ತು ಸೇವಾ ಸಂಕಲ್ಪವನ್ನು ಅರ್ಥಮಾಡಿಕೊಂಡಾಗ ಅದರ ಮಹತ್ವ ಅಪಾರವಾಗಿ ಗೋಚರಿಸುತ್ತದೆ.
ಒಂದು ಕಡೆ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಮತ್ತೊಂದು ಕಡೆ ಪ್ರತಿಯೊಬ್ಬ ಭಕ್ತನಿಗೂ ಯಾವುದೇ ಕೊರತೆಯಾಗದಂತೆ ಅನ್ನದಾಸೋಹ ನಡೆಯಬೇಕೆಂಬ ಕಾಳಜಿ ಶ್ರೀಗಳ ಮನಸ್ಸಿನಲ್ಲಿದೆ. ಸಾವಿರಾರು ಒಲೆಗಳು ಉರಿಯಬೇಕಾದರೆ ಅದಕ್ಕೆ ಬೇಕಾಗುವ ಕಟ್ಟಿಗೆ, ಆಹಾರ ಪದಾರ್ಥಗಳು, ಅಡುಗೆ ಸಿದ್ಧತೆಗಳು, ಸ್ವಯಂಸೇವಕರ ಪರಿಶ್ರಮ ಹೀಗೆ ಪ್ರತಿಯೊಂದು ಕಾರ್ಯದ ಹಿಂದೆಯೂ ಶ್ರೀಗಳ ದೂರದೃಷ್ಟಿ ಮತ್ತು ಮುಂಚಿತವಾದ ಯೋಜನೆ ಅಡಗಿದೆ.
ಶ್ರೀಗಳ ಹೆಗಲ ಮೇಲೆ ಕಾಣುತ್ತಿರುವುದು ಕಟ್ಟಿಗೆಯ ಹೊರೆಯಾದರೂ, ಅವರ ಹೃದಯದಲ್ಲಿ ಹೊತ್ತಿರುವುದು ಲಕ್ಷಾಂತರ ಭಕ್ತರ ಹಸಿವು ನೀಗಿಸುವ ಮಹತ್ತರ ಜವಾಬ್ದಾರಿ: ನಿಜವಾದ ಮಹಾತ್ಮರು ಕೇವಲ ಉಪದೇಶ ಮಾಡುವುದಿಲ್ಲ; ತಮ್ಮ ಬದುಕಿನ ಪ್ರತಿಯೊಂದು ನಡೆಯಲ್ಲಿಯೂ ಆದರ್ಶವನ್ನು ತೋರಿಸುತ್ತಾರೆ ಎಂಬುದಕ್ಕೆ ಈ ದೃಶ್ಯವೇ ಜೀವಂತ ಉದಾಹರಣೆ.
ಸೇವೆಗೆ ಸ್ಥಾನಮಾನದ ಹಂಗಿಲ್ಲ, ದಾಸೋಹಕ್ಕೆ ಆಡಂಬರದ ಅವಶ್ಯಕತೆಯಿಲ್ಲ, ಮಾನವೀಯತೆಗೆ ಅಧಿಕಾರದ ಮಿತಿಯಿಲ್ಲ ಎಂಬ ಸಂದೇಶವನ್ನು ಪೂಜ್ಯ ಶ್ರೀಗಳು ತಮ್ಮ ಸರಳ ನಡೆ ಮತ್ತು ಕಾಯಕದ ಮೂಲಕ ಸಾರುತ್ತಿದ್ದಾರೆ.
ಇಲ್ಲಿ ಶ್ರೀಗಳ ಸರಳತೆಯನ್ನು ಮೆಚ್ಚುವುದಷ್ಟೇ ಮುಖ್ಯವಲ್ಲ; ಅದರ ಹಿಂದಿರುವ ವಿಶಾಲ ಹೃದಯವನ್ನು ಅರ್ಥಮಾಡಿಕೊಳ್ಳುವುದು ಇನ್ನೂ ಮುಖ್ಯ. ತಾವು ಕುಳಿತುಕೊಂಡು ಮಾಡಿಸಬಹುದಾದ ಕೆಲಸವನ್ನು ಸ್ವತಃ ಮುಂದೆ ನಿಂತು ಮಾಡುವ ಮನೋಭಾವ, ಪ್ರತಿಯೊಂದು ಸಿದ್ಧತೆಯನ್ನೂ ತಮ್ಮದೇ ಜವಾಬ್ದಾರಿಯೆಂದು ಭಾವಿಸುವ ಗುಣ, ಭಕ್ತರ ಸೇವೆಯಲ್ಲಿಯೇ ಭಗವಂತನನ್ನು ಕಾಣುವ ದೃಷ್ಟಿಕೋನ ಇವೆಲ್ಲವೂ ನಿಜವಾದ ಗುರುಪರಂಪರೆಯ ಶ್ರೇಷ್ಠ ಮೌಲ್ಯಗಳಾಗಿವೆ.
ಗವಿಮಠದ ಜಾತ್ರೆಗೆ ಬರುವ ಭಕ್ತರಿಗೆ ಇಲ್ಲಿ ಜಾತಿ, ಧರ್ಮ, ಭಾಷೆ, ಬಡವ, ಶ್ರೀಮಂತ ಎಂಬ ಯಾವುದೇ ಭೇದವಿಲ್ಲ. ಎಲ್ಲರಿಗೂ ಒಂದೇ ರೀತಿಯ ಅನ್ನ, ಒಂದೇ ರೀತಿಯ ಆತ್ಮೀಯತೆ ಮತ್ತು ಒಂದೇ ರೀತಿಯ ಗೌರವ. ಇದೇ ದಾಸೋಹದ ನಿಜವಾದ ತತ್ವ. ಇದೇ ಬಸವಣ್ಣನವರ ಕಾಯಕ ಮತ್ತು ದಾಸೋಹದ ಆಶಯವನ್ನು ನೆನಪಿಸುವ ಮಾನವೀಯ ಸಂದೇಶ.
ವರ್ಷದಿAದ ವರ್ಷಕ್ಕೆ ಭಕ್ತಸಾಗರ ಹೆಚ್ಚಾಗುತ್ತಿದ್ದರೂ, ದಾಸೋಹದ ಸೇವಾ ಮನೋಭಾವ ಮಾತ್ರ ಇನ್ನಷ್ಟು ವಿಶಾಲವಾಗುತ್ತಿದೆ. ಈ ಮಹಾಸೇವೆಯ ಹಿಂದೆ ಅನೇಕ ಭಕ್ತರ ಸಹಕಾರ, ಸ್ವಯಂಸೇವಕರ ಪರಿಶ್ರಮ ಮತ್ತು ಶ್ರೀಗಳ ಮಾರ್ಗದರ್ಶನ ಒಂದಾಗಿ ಬೆರೆತಿವೆ.
ನನ್ನ ದೃಷ್ಟಿಯಲ್ಲಿ ಈ ಒಂದು ಚಿತ್ರ ಸಾವಿರಾರು ಮಾತುಗಳಿಗಿಂತ ಹೆಚ್ಚಿನ ಸಂದೇಶವನ್ನು ನೀಡುತ್ತದೆ. ಏಕೆಂದರೆ ಇಲ್ಲಿ ಕಾಣುವುದು ಕೇವಲ ಒಬ್ಬ ಶ್ರೀಗಳ ಚಿತ್ರವಲ್ಲ; ಸೇವೆಯೇ ಸಾಧನೆ, ಕಾಯಕವೇ ಕೈಲಾಸ, ಹಸಿದವರಿಗೆ ಅನ್ನ ನೀಡುವುದೇ ಪರಮಧರ್ಮ ಎಂಬ ತತ್ವದ ಪ್ರತಿಬಿಂಬ.
ಒAದು ಕ್ಷಣ ಯೋಚಿಸಿ: ದೇವರ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಮಠಕ್ಕೆ ಬರುತ್ತಾರೆ. ಆದರೆ ಆ ಭಕ್ತರ ಹಸಿವು ನೀಗಿಸಲು ದೇವರ ಸೇವಕನಂತೆ ಸ್ವತಃ ಕಟ್ಟಿಗೆ ಹೊತ್ತು ಸಾಗುವ ಶ್ರೀಗಳ ಮನಸ್ಸಿನಲ್ಲಿರುವ ಭಕ್ತಿ ಎಷ್ಟೊಂದು ವಿಶಾಲವಾಗಿರಬಹುದು!
ಇಂತಹ ದೃಶ್ಯಗಳು ಕೇವಲ ಛಾಯಾಚಿತ್ರಗಳಾಗಿ ಉಳಿಯಬಾರದು; ನಮ್ಮ ಬದುಕಿನ ಆದರ್ಶಗಳಾಗಿ ಮೂಡಿಬರಬೇಕು. ಸೇವೆ ಮಾಡಲು ದೊಡ್ಡ ಸ್ಥಾನಮಾನ ಬೇಕಿಲ್ಲ, ದೊಡ್ಡ ಮನಸ್ಸಿದ್ದರೆ ಸಾಕು ಎಂಬುದನ್ನು ಮುಂದಿನ ಪೀಳಿಗೆಗೆ ತಿಳಿಸುವಂತಹ ಅಪರೂಪದ ಕ್ಷಣಗಳಿವು.
ಪೂಜ್ಯ ಶ್ರೀಗಳ ಇಂತಹ ಸೇವಾ ಸಂಕಲ್ಪಕ್ಕೆ, ದಾಸೋಹದ ಕಾಳಜಿಗೆ, ಸರಳತೆಗೆ ಮತ್ತು ಮಾನವೀಯ ಮೌಲ್ಯಗಳಿಗೆ ನನ್ನ ಹೃತ್ಪೂರ್ವಕ ಶರಣು ಶರಣಾರ್ಥಿಗಳು.
ಗವಿಮಠದ ಈ ಮಹಾದಾಸೋಹ ಪರಂಪರೆ ಯುಗಯುಗಾಂತರಗಳವರೆಗೆ ಹೀಗೆ ಮುಂದುವರಿಯಲಿ. 2027ನೇ ಸಾಲಿನ ಜಾತ್ರಾ ಮಹೋತ್ಸವವು ಭಕ್ತಿ, ಶ್ರದ್ಧೆ, ಸೇವೆ ಮತ್ತು ಸಮರ್ಪಣೆಯ ಹೊಸ ಇತಿಹಾಸವನ್ನು ನಿರ್ಮಿಸಲಿ. ನಾಡಿನ ಎಲ್ಲ ಭಕ್ತರಿಗೂ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ. ಶರಣು ಶರಣಾರ್ಥಿಗಳು… ಜೈ ಗವಿಸಿದ್ಧೇಶ್ವರ!

 (ಲೇಖನ:
ಶಂಕರ್ ಚಾಗಿ
ಪ್ರಥಮ ದರ್ಜೆ ಸಹಾಯಕರು
ಜಿಲ್ಲಾ ವಿಮಾ ಇಲಾಖೆ, ಕೊಪ್ಪಳ.)

LEAVE A REPLY

Please enter your comment!
Please enter your name here