ಬೆಂಗಳೂರು : ರಾಜ್ಯದಲ್ಲಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ (Price Hike) ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ (High Court) ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸರ್ಕಾರದ ಯೋಜನೆಗಳು ಉಚಿತವಾದರೆ, ಅಗತ್ಯ ಸಾಮಗ್ರಿಗಳ ದರ ಏರಿಕೆಯಾಗುವುದು ಕೂಡ ಖಚಿತ ಎಂಬಂತಾಗಿದೆ ಎಂದು ಚಾಟಿ ಬೀಸಿರುವ ನ್ಯಾಯಪೀಠ, ಈ ರೀತಿ ಎಲ್ಲ ವಸ್ತುಗಳ ಬೆಲೆ ಹೆಚ್ಚುತ್ತಾ ಹೋದರೆ ಸಾಮಾನ್ಯ ಜನರು ಬದುಕು ಸಾಗಿಸುವುದಾದರೂ ಹೇಗೆ ಎಂದು ಕಳವಳ ವ್ಯಕ್ತಪಡಿಸಿದೆ.
ತುಪ್ಪದ ಬೆಲೆ ಹೆಚ್ಚಳ -ಯಮದೀಪ ಹಚ್ಚುವುದಾದರೂ ಹೇಗೆ? ನ್ಯಾಯಮೂರ್ತಿಗಳ ಪ್ರಶ್ನೆ
ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ನ್ಯಾಯಪೀಠವು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟುತ್ತಿರುವ ಬಗೆಯನ್ನು ನಿದರ್ಶನ ಸಹಿತ ಉಲ್ಲೇಖಿಸಿತು. ಕಳೆದ ತಿಂಗಳು 650 ರೂಪಾಯಿ ಇದ್ದ ಒಂದು ಕೆಜಿ ತುಪ್ಪದ ಪ್ಯಾಕೆಟ್ ಬೆಲೆ ಈಗ 850 ರೂಪಾಯಿಗೆ ಏರಿಕೆಯಾಗಿದೆ. ದೀಪಾವಳಿ ಹಬ್ಬಕ್ಕೆ ತುಪ್ಪದ ಯಮದೀಪ ಹಚ್ಚಲು ಹೊರಟರೆ ಇಷ್ಟೊಂದು ದುಬಾರಿ ದರ ನೀಡಬೇಕಿದೆ. ಹೀಗಿರುವಾಗ ತುಪ್ಪದ ಯಮದೀಪ ಹಚ್ಚುವ ಬದಲು ನೇರವಾಗಿ ಯಮನನ್ನೇ ಕರೆದುಕೊಂಡು ಹೋಗು ಎಂದು ಕೇಳುವಂತಾಗಿದೆ ಎಂದು ನ್ಯಾಯಮೂರ್ತಿಗಳು ವ್ಯಂಗ್ಯವಾಡಿದರು.
ದಿನಸಿ ತರಲು ಹೋದರೆ ಬಸ್ ಟಿಕೆಟ್ ದರವೂ ಹೆಚ್ಚು
ರಾಜ್ಯದಲ್ಲಿ ಅಕ್ಕಿ ದರ ಕೆಜಿಗೆ 103 ರೂಪಾಯಿ ತಲುಪಿದ್ದು, ಹಾಲಿನ ದರ ಹಾಗೂ ಬಸ್ ಟಿಕೆಟ್ ದರಗಳನ್ನೂ ಹೆಚ್ಚಿಸಲಾಗಿದೆ ಎಂದು ನ್ಯಾಯಪೀಠ ಪ್ರಸ್ತಾಪಿಸಿತು. ಸರ್ಕಾರ ಸಕ್ಕರೆ ಕಬ್ಬಿಗೆ ಪ್ರತಿ ಟನ್‌ಗೆ 3,000 ರೂಪಾಯಿಗೂ ಅಧಿಕ ಬೆಂಬಲ ಬೆಲೆ ಘೋಷಿಸಿದೆ. ದೀಪಾವಳಿ ಹಬ್ಬ ಮುಗಿದ ತಕ್ಷಣ ಸಕ್ಕರೆ ದರ ಪ್ರತಿ ಕೆಜಿಗೆ 90 ರೂಪಾಯಿ ಆದರೂ ಅಚ್ಚರಿಯಿಲ್ಲ. ಸರ್ಕಾರ ನೀಡುವ ಹಣವೇನೂ ತನ್ನ ಜೇಬಿನಿಂದ ಬರುವುದಿಲ್ಲ, ಬದಲಾಗಿ ಜನಸಾಮಾನ್ಯರು ಪಾವತಿಸುವ ತೆರಿಗೆ ಹಣದಿಂದಲೇ ನೀಡಲಾಗುತ್ತದೆ. ಒಂದು ಕಡೆ ಜನರಿಗೆ ಉಚಿತ ಎಂದು ನೀಡುತ್ತಾ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ನ್ಯಾಯಪೀಠ ಕಿಡಿಕಾರಿತು.
ಅನ್ನಭಾಗ್ಯ ಅಕ್ಕಿ-ಗೋಧಿ ಗೋಲ್ಮಾಲ್: ಕಳ್ಳಸಂತೆ ದಂಧೆಗೆ ಹೈಕೋರ್ಟ್ ಕೆಂಡ
ಮೈಸೂರಿನ ಗೋದಾಮಿನಲ್ಲಿ ಅನ್ನಭಾಗ್ಯ ಯೋಜನೆಯಡಿ ದಾಸ್ತಾನು ಮಾಡಲಾಗಿದ್ದ ಆಹಾರ ಧಾನ್ಯಗಳಲ್ಲಿ 320 ಕ್ವಿಂಟಾಲ್ ಅಕ್ಕಿ ಮತ್ತು 85 ಕ್ವಿಂಟಾಲ್ ಗೋಧಿ ಕೊರತೆ ಕಂಡುಬಂದಿತ್ತು. ಈ ಸಂಬಂಧ ಕರ್ನಾಟಕ ಅಗತ್ಯ ವಸ್ತುಗಳ ನಿಯಂತ್ರಣ ಆದೇಶ-1992 ನಿಯಮಗಳ ಅಡಿಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಗೋದಾಮಿನ ಹಿರಿಯ ವ್ಯವಸ್ಥಾಪಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ, ಅಗತ್ಯ ವಸ್ತುಗಳ ಬೆಲೆ ಹೆಚ್ಚಾದ ತಕ್ಷಣ ಹಳೆಯ ದಾಸ್ತಾನಿನ ಮೇಲೆ ಹೊಸ ದರ ಮುದ್ರಿಸಿ ಮಾರಾಟ ಮಾಡುವ ಪ್ರವೃತ್ತಿ ನಡೆಯುತ್ತಿದೆ ಎಂದು ಆಕ್ಷೇಪಿಸಿತು. ಬಡವರಿಗೆ ಉಚಿತವಾಗಿ ವಿತರಿಸಬೇಕಾದ ಆಹಾರ ಧಾನ್ಯಗಳನ್ನು ಕ್ವಿಂಟಾಲ್ ಗಟ್ಟಲೆ ಕದ್ದು ಕಾಳಸಂತೆಯಲ್ಲಿ ಮಾರಾಟ ಮಾಡುವ ಅಕ್ರಮವನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ ನ್ಯಾಯಪೀಠ, ಅರ್ಜಿಯ ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಿದೆ.





