ಮೈಸೂರು:ಮೈಸೂರು ನಗರವನ್ನು ರಾಜರ್ಷಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ನಂತರ ಅಭಿವೃದ್ಧಿಸಿದ ಹರಿಕಾರ ಯಾರಾದರೂ ಇದ್ದರೆ ಅದೂ “ಸೋಲಿಲ್ಲದ ಸರದಾರ “,”ಮಾಜಿ ಮಂತ್ರಿ “, “ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಸಂಸ್ಥಾಪಕ ” “ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಇದ್ದರೂ, ಅಧಿಕಾರ ವಂಚಿತ ” ಜನಾನುರಾಗಿ ಹಾಗೂ ಕರ್ನಾಟಕ ಕಂಡ ಪ್ರಬುದ್ಧ ರಾಜಕೀಯ ನೀತಿಜ್ಞ ಕೆ. ಪುಟ್ಟಸ್ವಾಮಿ. ಇವರು ನಮ್ಮನ್ನಗಲಿ ಕಳೆದ ಏಪ್ರಿಲ್. 30ಕ್ಕೆ 48 ವರ್ಷಗಳಾಯಿತು.
1972ರಲ್ಲಿ ದೇವರಾಜ್ ಅರಸು ಬದಲು ಅರ್ಹವಾಗಿ ಮುಖ್ಯ ಮಂತ್ರಿ ಆಗಬೇಕಿದ್ದ ಕೆ. ಪುಟ್ಟಸ್ವಾಮಿಗೆ ಮoತ್ರಿ ಪದವಿ ಕೊಡದೆ ವಂಚಿಸಿದರೂ, ಅಧಿಕಾರ ಇಲ್ಲದೇ ಇದ್ದರೂ ನಗರ ಉಳಿಸಿಕೊಡುವ ಕಾರ್ಯ ಮಾಡಿದವರು ಕೆ ಪುಟ್ಟಸ್ವಾಮಿ . ಈಗಿನ ರಂಗಾಯಣ ಮತ್ತು ಕಲಾ ಮಂದಿರ ಜಾಗವಾದ ಕುಕ್ಕರಳ್ಳಿ ಕೆರೆ ದಡವನ್ನು ಅರಸು ಸರ್ಕಾರ ಶ್ರೀಮಂತರಿಗೇ ಮಾರಿ ಬಿಟ್ಟಿತ್ತು. ಇದನ್ನು ಅಂದಿನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿದ್ದ ಮುಂದೆ ರಾಷ್ಟ್ರ ಪತಿಯಾದ ಶಂಕರ ದಯಾಳ್ ಶರ್ಮಾ ರಿಗೇ ಹೇಳಿ ತಡೆ ಹಿಡಿಸಿದರು. ಹಾಗೇ, ಎಲೆ ತೋಟದ ಜಾಗವನ್ನು ಅಂದಿನ ಸಮಾಜ ಕಲ್ಯಾಣ ಸಚಿವ ಬಸವಲಿಂಗಪ್ಪ ಯಾರ್ಯಾರಿಗೋ ದಾನ ಮಾಡಿದಾಗ, ಆ ಜಾಗದ ಮಹತ್ವ ತಿಳಿಸಿ, ಸುಯಜ್ ಫಾರ್ಮ್ ಗೆ ನೂರಾರು ಎಕರೆ ಭೂಮಿ ಉಳಿಸಿಕೊಟ್ಟರು. ಹಾಗೇ, ಇಟ್ಟಿಗೆಗೂಡಿನ ರೀಜನ್ಸಿ ಥೀಯೇಟರ್ ಸಮೀಪದ, ಈಗ ದುರ್ಗಾ ಪರಮೇಶ್ವರಿ ದೇವಸ್ಥಾನ ಪಕ್ಕದ ಥಂಡಿ ಸಡಕ್ ಸರ್ಕಾರಿ ಜಾಗವನ್ನು ಪಾಠಕ್ ಎಂಬ ರಿಯಲ್ ಎಸ್ಟೇಟ್ ನವರು ಕಬಳಿಸಲು ಹೋದಾಗ ತಡೆದವರು ಕೆ. ಪುಟ್ಟಸ್ವಾಮಿ. ಇದರ ಪರಿಣಾಮವಾಗಿ, ಅಲ್ಲೊಂದು ಗಾಂಧಿ ವನ ಎಂಬ ಮಕ್ಕಳ ಪಾರ್ಕ್ ಉಳಿದುಕೊಂಡಿದೆ.
ಹೀಗೇ ಅಧಿಕಾರ ವಂಚಿತರಾಗಿದ್ದರೂ ಜನ ಮತ್ತು ಜಾಗ ರಕ್ಷಣೆ ಮಾಡಿದವರು ಕೆ. ಪುಟ್ಟಸ್ವಾಮಿ. 1952ರಲ್ಲಿ ಶ್ರೀರಂಗ ಪಟ್ಟಣ ಶಾಸಕರಾಗಿದ್ದರು ಸಹ 1953 ಮತ್ತು 1954 ರಲ್ಲಿ ಮೈಸೂರು ಪುರಸಭೆ ಅಧ್ಯಕ್ಷರಾಗಿ ಮೈಸೂರು ನಗರ ಅಭಿವೃದ್ದಿಸಿದ್ದರು.
ಕೆ. ಆರ್. ವೃತ್ತ, ಲಷ್ಕರ್ ಪೊಲೀಸ್ ಠಾಣೆ ಮುಂದಿನ ನೆಹರು ವೃತ್ತ ಮತ್ತು ಇವೆರಡರ ಸುತ್ತಲೂ ವರ್ತೂಲಾಕಾರದ ಕಟ್ಟಡ ನಿರ್ಮಿಸಿದ ಹೆಗ್ಗಳಿಕೆ ಕೆ. ಪುಟ್ಟಸ್ವಾಮಿಗೆ ಸಲ್ಲುತ್ತೆ. ಹಾಗೆ, 1962ರಲ್ಲಿ ನಿಜಲಿಂಗಪ್ಪ ಸಂಪುಟದಲ್ಲಿ ನಗರಾಭಿವೃದ್ಧಿ ಮಂತ್ರಿ ಆಗಿ ಅರಸು ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ, ನೀಲ ನಕ್ಷೆ ತಯಾರಿಸಿದವರು. ಸಯ್ಯಾಜಿರಾವ್, ಇರ್ವಿನ್, ಅಶೋಕ ರಸ್ತೆಗಳಿಗೆ 1960ರಲ್ಲೇ ಕಾಂಕ್ರೀಟ್ ರಸ್ತೆ ನಿರ್ಮಿಸಿದವರು. ಮೈಸೂರಿನ ಪ್ರತಿ ವೃತ್ತದ ಮಧ್ಯೆ ಫೌಂಟೈನ್ ಪಾರ್ಕ್ ನಿರ್ಮಿಸಿ ಮೈಸೂರಿನ ಅಂದ ಹೆಚ್ಚಿಸಿದವರು ಕೆ. ಪುಟ್ಟಸ್ವಾಮಿ. ಹೊಂಗಳ್ಳಿ ಜಲಾಶಯದಿಂದ ಯು ಜೀ ಡಿ ಪೈಪ್ ಮೂಲಕ ಕುಡಿಯುವ ನೀರು ಒದಗಿಸಿದವರು. ಹಳೆ ಕೆಸರೆ ಬಳಿ ಅತ್ಯಾಧುನಿಕ ತ್ಯಾಜ್ಯ ನಿರ್ಮೂಲನೆ ಘಟಕ ನಿರ್ಮಿಸಿದವರು. ವಸತಿ ಮಂತ್ರಿ ಆಗಿ, ಕರ್ನಾಟಕ ಹೌಸಿಂಗ್ ಬೋರ್ಡ್ ಸ್ಥಾಪಿಸಿ ಬಡವರಿಗೆ ಮನೆ ಕಟ್ಟಿಸಿಕೊಟ್ಟವರು. ಉತ್ತರ ಕರ್ನಾಟಕದಲ್ಲಿ ಒಳ ಚರಂಡಿ ವ್ಯವಸ್ಥೆ ಇಲ್ಲದಿರುವುದಕ್ಕೆ ಮತ್ತು ಅಲ್ಲಿನ ನಗರಗಳು ಮೈಸೂರು ಬೆಂಗಳೂರು ನಾಗರಾಗಳಂತೆ ಬೆಳೆಯಲು ನಗರಭಿವೃದ್ಧಿ ಮಂಡಳಿ ಸ್ಥಾಪಿಸಿದವರು, ಜನತಾ ಬಜಾರ್ ಸ್ಥಾಪಿಸಿ, ವ್ಯಾಪಾರಿಗಳ ದುರಾಸೆಗೆ ಕಡಿವಾಣ ಹಾಕಿದವರು. ಆರೋಗ್ಯ ಮಂತ್ರಿ ಆಗಿ ಪ್ರತಿ ಗ್ರಾಮದಲ್ಲೂ ಪ್ರಾಥಮಿಕ ಅರೋಗ್ಯ ಕೇಂದ್ರ ಮತ್ತು ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಲ್ಲೂ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿದರು.ಹೀಗೇ ಕೆ. ಪುಟ್ಟ ಸ್ವಾಮಿ ಮಾಡಿದ ಅಭಿವೃದ್ಧಿ ಕಾರ್ಯ ಹೇಳುತ್ತಾ ಹೋದರೆ, ಪಟ್ಟಿ ದೊಡ್ಡದಾಗಿ ಹೋಗುತ್ತೆ.
ಇಂತಹ ಅಭಿವೃದ್ಧಿಕಾರನಿಗೆ ಅಧಿಕಾರದಿಂದ ದೂರ ಇಟ್ಟ ದೇವರಾಜ್ ಅರಸು ವಿರುದ್ದ ಸಿಡಿದು 1978ರಲ್ಲಿ ಕಾಂಗ್ರೆಸ್ ಬಿಟ್ಟು ಜನತಾ ಪಕ್ಷ ಸೇರಿದರು. ಚಾಮುಂಡೇಶ್ವರಿ ಕ್ಷೇತ್ರದಿಂದ 1957ರಿಂದ ಸತತವಾಗಿ ನಾಲ್ಕು ಬಾರಿ ಗೆದ್ದು ಈಗಲೂ ಅಳಿಸಲಾಗದ ದಾಖಲೆ ನಿರ್ಮಿಸಿದವರು, 1978ರಲ್ಲಿ ಚಾಮುಂಡೇಶ್ವರಿ ಬಿಟ್ಟು,ಹೊಸದಾಗಿ ರಚಿತವಾಗಿದ್ದ ಚಾಮರಾಜ ಕ್ಷೇತ್ರದ ಮೊದಲ ಶಾಸಕರು ಆದರೂ, ಅವರ ರಾಜಕೀಯ ಲೆಕ್ಕಾಚಾರ ಮತ್ತೇ ಉಲ್ಟಾ ಆಗಿ, ದೇವರಾಜ್ ಅರಸು ಎರಡನೇ ಬಾರಿಯೂ ಮುಖ್ಯ ಮಂತ್ರಿ ಆದಾಗ, ತಾವು ಸ್ಥಾಪಿಸಿದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಪಡಿಸುವ ಬಗ್ಗೆ ಆಸಕ್ತಿವಹಿಸಿದರು.
ಈಗಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ ಓದಿದ್ದರು ಅಂತ ತಾವು ಪ್ರಿನ್ಸಿಪಾಲರಾಗಿದ್ದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕ ಕೆಲಸ ಕೊಟ್ಟರು. ರಾಜಕೀಯ ಅಪಸವ್ಯ ಗಳಿಂದ ನೊಂದಿದ್ದ ಕೆ. ಪುಟ್ಟಸ್ವಾಮಿ ತಮ್ಮ ಉಳಿದ ಜೀವನವನ್ನು ವಿದ್ಯಾರ್ಥಿಗಳೊಂದಿಗೆ ಕಳೆಯಲು ಗೋಕುಲಮ್ ನಲ್ಲಿದ್ದ 17 ಎಕರೆ ಜಾಗದಲ್ಲಿ ವಿದ್ಯಾವರ್ಧಕ ಇಂಜಿನಿಯರಿಂಗ್ ವಸತಿ ಕಾಲೇಜು ನಿರ್ಮಿಸಿ,ಅಲ್ಲೇ ವಾಸಿಸಲು ಯೋಚಿಸಿದ್ದರು. ಅಷ್ಟರಲ್ಲಿ ಚಾಮರಾಜ ಶಾಸಕರಾದ ಎರಡೇ ತಿಂಗಳಿಗೆ ಅಂದ್ರೇ, 1978ರ ಏಪ್ರಿಲ್. 30ರಂದು ಭಾನುವಾರ ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾದರು. ಆಗ ಅವರ ವಯಸ್ಸು ಕೇವಲ 61ವರ್ಷ ಅಷ್ಟೇ. ಇವರ ವಿರುದ್ದ ಸೋತಿದ್ದ ಕಾಂಗ್ರೆಸ್ ನ ಕೆಂಗೇ ಗೌಡರು ಉಪ ಚುನಾವಣೆಯಲ್ಲಿ ಗೆದ್ದರು. ಸೋತಿದ್ದ ಹೆಚ್. ಕೆಂಪೇಗೌಡರು 1983ರಲ್ಲಿ ಗೆದ್ದರೂ 1985ರಲ್ಲಿ ಜನತಾ ಟಿಕೆಟ್ ಸಿಗಲಿಲ್ಲ. ನಾಮಪತ್ರ ಸಲ್ಲಿಸಲು ಐನೂರು ರೂಪಾಯಿ ಸಹ ಇಲ್ಲದ ತಮ್ಮನ್ನು ಜಯದೇವರಾಜ್ ಅರಸು ಮೇಲಿನ ಕೋಪಕ್ಕೆ ದುಡ್ಡು ಕೊಟ್ಟು ಪಕ್ಷೇತರನಾಗಿ ಗೆಲ್ಲಿಸಿ, ಜೀವನದಲ್ಲಿ ಭಾಗ್ಯದ ಬಾಗಿಲು ತೆರೆಸಿದ ಕೆಂಪೀರೇಗೌಡರ ಋಣ ತೀರಿಸಲು ಅವರಿಗೇ ಸಿದ್ದರಾಮಯ್ಯ ಚಾಮರಾಜ ಟಿಕೆಟ್ ಕೊಡಿಸಿದರು. ಇವರು ಸಹ ಒಂದೇ ವರ್ಷಕ್ಕೆ ನಿಧನರಾದಾಗ 1986ರ ಉಪ ಚುನಾವಣೆಯಲ್ಲಿ ತಮ್ಮ ವಕೀಲಿ ಗುರು ಚಿಕ್ಕ ಬೋರಯ್ಯ ರಿಗೇ ಜನತಾ ಟಿಕೆಟ್ ಕೊಡಿಸಿದ ಸಿದ್ದರಾಮಯ್ಯ 1989ರಲ್ಲಿ ರಾಜಶೇಖರ್ ಮೂರ್ತಿ ವಿರುದ್ಧ ಸೋತು, 1994ರಲ್ಲಿ ದೇವೇಗೌಡರ ಸುಪರ್ದಿಯಲ್ಲಿ ಹಣಕಾಸು ಮಂತ್ರಿ ಆಗಿ, ಉಪಮುಖ್ಯ ಮಂತ್ರಿ ಆಗಿ, ಕಾಂಗ್ರೆಸ್ ಸೇರಿ ಮುಖ್ಯ ಮಂತ್ರಿ ಆಗಿ ಬೆಳೆದಿದ್ದು ಎಲ್ಲರಿಗೂ ತಿಳಿದ ಇತಿಹಾಸ.
ಕರ್ನಾಟಕ ಕಂಡ ಪ್ರಬುದ್ಧ ರಾಜಕಾರಣಿ ಮತ್ತು ಶಿಕ್ಷಣ ತಜ್ಞ ಹಾಗೂ ಅಭಿವೃದ್ಧಿ ಹರಿಕಾರ ಕೆ. ಪುಟ್ಟಸ್ವಾಮಿ ಅವರ ಜೀವನ ಚರಿತ್ರೆ ಪುಸ್ತಕ ವನ್ನು ಬರೆದಿದ್ದೇನೆ. ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಯ ವಿಕಸನ ಪ್ರಸಾರಂಗ ಹೊರ ತಂದಿರುವ “ಪ್ರಬುದ್ಧ ರಾಜಕೀಯ ನೀತಿಜ್ಞ ಕೆ. ಪುಟ್ಟಸ್ವಾಮಿ ” ಎಂಬ ಪುಸ್ತಕ ಶೀಘ್ರವೇ ಬಿಡುಗಡೆಯಾಗಲಿದೆ. ಓದುಗರು ಪುಸ್ತಕ ಕೊಂಡು ಓದಿ ಅಂತ ವಿನಂತಿಸುತ್ತೇನೆ 🙏





