ವಿಜಯಪುರ :ಕೊರೆಯುವ ಚಳಿ ಮಧ್ಯೆ ವೃದ್ಧರು, ಮಹಿಳೆಯರು-ಮಕ್ಕಳಿಂದ ಅಹೋರಾತ್ರಿ ಹೋರಾಟ ಉಗ್ರ ಸ್ವರೂಪದತ್ತ ಸಾಗುತ್ತಿದೆ.

ವಿಜಯಪುರ ನಗರದಲ್ಲಿ ಸರ್ಕಾರದ ಉದ್ದೇಶಿತ ವಿಜಯಪುರ ಜಿಲ್ಲಾ ಆಸ್ಪತ್ರೆ ಖಾಸಗಿಕರಣ ವಿರೋಧಿಸಿ ಪೂರ್ಣ ಪ್ರಮಾಣದ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಇಂದಿಗೆ 90ನೇ ದಿನ ಪೂರೈಸಿದೆ.

ಸರಕಾರ ಜನರ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆ ಧರಣಿ ನಿರತರು ಹೋರಾಟ ತೀವ್ರಗೊಳಿಸಿದ್ದಾರೆ.

ಎರಡು ದಿನದಿಂದ ಅಹೋರಾತ್ರಿ ಧರಣಿ ನಡೆಯುತ್ತಿದೆ. ನಗರದ ಅಂಬೇಡ್ಕರ್ ವೃತ್ತದ ಅರಾಕಿಲ್ಲಾ (ಹಂದಿ) ಗಾರ್ಡನ್ ಕಂದಕದ ನೀರಿಗೆ ಹೊಂದಿಕೊಂಡಂತೆ ಹಾಕಿರುವ ಪೆಂಡಾಲ್ ದಲ್ಲಿ ಕೊರೆಯುವ ಚಳಿಯ ಮಧ್ಯ ಹೋರಾಟ ನಡೆಯುತ್ತಿದೆ.

ಹೋರಾಟದಲ್ಲಿ ವಯೋವೃದ್ಧ ಹಿರಿಯರು, ಮಹಿಳೆಯರು, ವಿಶೇಷ ಚೇತನರು ಚಿಕ್ಕ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಹೋರಾಟ ಮುಂದುವರೆದಿದೆ.ಸರಕಾರ ಸುದೀರ್ಘ ಹೋರಾಟವನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ ಮತ್ತು ಕೇಶವಪ್ರಸಾದ್ ಅವರು ಹೋರಾಟಗಾರರ ಮತ್ತು ಜಿಲ್ಲೆಯ ಜನರ ಬೇಡಿಕೆಗೆ ಸರಕಾರ ಸ್ಪಂದಿಸಿ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಶಾಸಕರ ಪ್ರಶ್ನೆ ಗೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಉಸ್ತುವಾರಿ ಸಚಿವ ಮತ್ತು ಜಿಲ್ಲೆಯ ಶಾಸಕರ ಜೊತೆ ಚರ್ಚೆ ಮಾಡಿ ತಿಳಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಗೆ ಮೆಡಿಕಲ್ ಕಾಲೇಜ್ ಮಂಜೂರು ಮಾಡುವ ಅಧಿಕಾರ ಜಿಲ್ಲೆಯ ಜನ ಪ್ರತಿನಿಧಿಗಳ ಮೇಲೆ ಇದೆ. ಜನ ಇವರ ಜನ ವಿರೋಧಿ ಧೋರಣೆಯಿಂದ ಬೀದಿಗೆ ಬಂದಿದ್ದಾರೆ. ಕೊರೆಯುವ ಚಳಿ ಮಧ್ಯೆ ಹೋರಾಟ ನಡೆಯುತ್ತಿದೆ. ಹೋರಾಟ ನಿರತರಿಗೆ ಹೆಚ್ಚು-ಕಮ್ಮಿ ಏನಾದ್ರು ಆದರೆ ಜಿಲ್ಲೆಯ ಸಚಿವರು ಶಾಸಕರೆ ಹೊಣೆ ಹೊರಬೇಕಾಗುತ್ತದೆ. ಎಂದು ಹೋರಾಟಗಾರರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here