ಧರ್ಮಪುರಿ: ಚಲಿಸುತ್ತಿದ್ದ ನಾಗರ್ಕೋಯಿಲ್–ಬೆಂಗಳೂರು ಎಕ್ಸ್ಪ್ರೆಸ್ ರೈಲಿನತ್ತ ಭೂಕುಸಿತದಿಂದ ಬೃಹತ್ ಬಂಡೆಯೊಂದು ಉರುಳಿ ಬಂದಿದ್ದು, ಲೋಕೋ ಪೈಲಟ್ಗಳ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮುತ್ತಂಪಟ್ಟಿ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.
ಮುತ್ತಂಪಟ್ಟಿ ರೈಲು ಮಾರ್ಗದ ಪಕ್ಕದ ಗುಡ್ಡ ಪ್ರದೇಶದಲ್ಲಿ ಏಕಾಏಕಿ ಭೂಕುಸಿತ ಸಂಭವಿಸಿದೆ. ಪರಿಣಾಮ ಗುಡ್ಡದ ಮಣ್ಣು, ಕಲ್ಲುಗಳು ಹಾಗೂ ಬೃಹತ್ ಬಂಡೆಗಳು ರೈಲು ಹಳಿಯತ್ತ ಉರುಳಿ ಬಂದಿವೆ.
ಇದೇ ವೇಳೆ ನಾಗರ್ಕೋಯಿಲ್ನಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲು ಅಲ್ಲಿಂದ ಸಾಗುತ್ತಿತ್ತು. ಬೃಹತ್ ಬಂಡೆಯೊಂದು ರೈಲಿಗೆ ಬಡಿದು, ರೈಲಿನ ಬದಿಗೆ ತಾಗಿಕೊಂಡು ಸಾಗಿದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಹಳಿಯ ಮೇಲೆ ಬಂಡೆ ಬಿದ್ದಿರುವುದನ್ನು ಗಮನಿಸಿದ ಲೋಕೋ ಪೈಲಟ್ಗಳು ತಕ್ಷಣ ಎಚ್ಚೆತ್ತುಕೊಂಡು ರೈಲಿನ ವೇಗವನ್ನು ನಿಯಂತ್ರಿಸಿದ್ದಾರೆ. ಸಮಯಪ್ರಜ್ಞೆಯಿಂದ ರೈಲನ್ನು ನಿಯಂತ್ರಿಸಿದ್ದರಿಂದ ಹಳಿ ತಪ್ಪುವ ಸಾಧ್ಯತೆ ಹಾಗೂ ಸಂಭವಿಸಬಹುದಾಗಿದ್ದ ಭಾರೀ ದುರಂತ ತಪ್ಪಿದೆ.
ಘಟನೆ ಬಳಿಕ ರೈಲನ್ನು ಅತ್ಯಂತ ಎಚ್ಚರಿಕೆಯಿಂದ ಕಡಿಮೆ ವೇಗದಲ್ಲಿ ಧರ್ಮಪುರಿ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಯಿತು. ಅಲ್ಲಿ ರೈಲ್ವೆ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ರೈಲಿನ ತುರ್ತು ಪರಿಶೀಲನೆ ನಡೆಸಿ ಅಗತ್ಯ ದುರಸ್ತಿ ಕಾರ್ಯ ಕೈಗೊಂಡರು.
ರೈಲು ಸಂಚಾರಕ್ಕೆ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ ಬಳಿಕ ನಾಗರ್ಕೋಯಿಲ್–ಬೆಂಗಳೂರು ಎಕ್ಸ್ಪ್ರೆಸ್ ತನ್ನ ಪ್ರಯಾಣವನ್ನು ಪುನರಾರಂಭಿಸಿತು.





