ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಕಂಕನಾಡಿ ನಗರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು ₹46.50 ಲಕ್ಷ ಮೌಲ್ಯದ *
465.8 ಗ್ರಾಂತೂಕದ ಎಂಡಿಎಂಎ (MDMA) ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರ ವಿವರ:
- ಪರ್ವೇಜ್ ಅಲಿಯಾಸ್ ದಾವೂದ್ ಪರ್ವೇಜ್ (40): ನಿವಾಸಿ, ಪಿಲಾರು ಹೊಸಗದ್ದೆ ಮನೆ, ಪೆರ್ಮಾನ್ನೂರು.
- ನಜರತ್ ಅಲಿ (37): ನಿವಾಸಿ, ಪಿಲಾರು, ಪೆರ್ಮಾನ್ನೂರು.
ಕಾರ್ಯಾಚರಣೆಯ ವಿವರ:
ನಗರದ ಜೆಪ್ಪಿನಮೊಗರು ಬಳಿ ದ್ವಿಚಕ್ರ ವಾಹನದಲ್ಲಿ ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಕಂಕನಾಡಿ ನಗರ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ‘ಕೆಎ 70 ಕೆ 3333’ ನೋಂದಣಿ ಸಂಖ್ಯೆಯ ಬಜಾಜ್ ಫ್ರೀಡಂ ಬೈಕ್ ಅನ್ನು ತಡೆದು ತಪಾಸಣೆ ನಡೆಸಿದಾಗ ಭಾರಿ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದೆ. ಮಾದಕ ವಸ್ತುವಿನ ಜೊತೆಗೆ ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ.
ಹಳೇ ಆರೋಪಿ ಪರ್ವೇಜ್:
ಪೊಲೀಸ್ ತನಿಖೆಯ ಪ್ರಕಾರ, ಮೊದಲನೇ ಆರೋಪಿ ಪರ್ವೇಜ್ ಓರ್ವ ರೂಢಿಗತ ಡ್ರಗ್ ಪೆಡ್ಲರ್ ಆಗಿದ್ದಾನೆ. ಈತನ ಮೇಲೆ ಈಗಾಗಲೇ ಮಂಗಳೂರಿನ ಪಾಂಡೇಶ್ವರ, ವಾಮಂಜೂರು, ಬಂದರು ಠಾಣೆಗಳಲ್ಲದೆ, ಬೆಂಗಳೂರಿನ ಅಮೃತಹಳ್ಳಿ ಮತ್ತು ಉಡುಪಿ ಸೆನ್ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿವೆ. ಈತ ಹೊರ ಜಿಲ್ಲೆಗಳಿಂದ ಬೃಹತ್ ಪ್ರಮಾಣದಲ್ಲಿ ಡ್ರಗ್ಸ್ ತಂದು ನಗರದ ಕಾಲೇಜು ವಿದ್ಯಾರ್ಥಿಗಳಿಗೆ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ. ಎರಡನೇ ಆರೋಪಿ ನಜರತ್ ಅಲಿ ಈ ವ್ಯವಹಾರದಲ್ಲಿ ಪರ್ವೇಜ್‌ಗೆ ಸಹಕರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.





