ಕಲಬುರಗಿ: ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರ ಆಪ್ತ ಸಹಾಯಕ (ಪಿಎ) ರಾಜಕುಮಾರ ಪಾಟೀಲ್ ಅವರ ಮೃತದೇಹ ಯಾದಗಿರಿ ಮತ್ತು ಲಿಂಗೇರಿ ನಡುವಿನ ಮಷ್ಟುರ ಗೇಟ್ ಸಮೀಪದ ರೈಲ್ವೆ ಹಳಿಯಲ್ಲಿ ಪತ್ತೆಯಾಗಿರುವ ಘಟನೆ ಇಂದು ಬೆಳಕಿಗೆ ಬಂದಿದೆ.

ಕಲಬುರಗಿಯ ಕೈಲಾಸ ನಗರದ ನಿವಾಸಿಯಾಗಿದ್ದ ರಾಜಕುಮಾರ ಪಾಟೀಲ್ (57), ತಂದೆ ಶಿವಾನಂದ ಅವರು ಶಶೀಲ್ ಜಿ. ನಮೋಶಿ ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ನಮೋಶಿ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜಕುಮಾರ ಅವರು ಇತ್ತೀಚೆಗೆ ಬೆಂಗಳೂರಿಗೆ ತೆರಳಿದ್ದರು. ಕಾರ್ಯಕ್ರಮ ಮುಗಿದ ಬಳಿಕ ನಿನ್ನೆ ರಾತ್ರಿ ಎಲ್ಲರೂ ರೈಲಿನಲ್ಲಿ ಕಲಬುರಗಿಗೆ ವಾಪಸ್ಸಾಗುತ್ತಿದ್ದರು. ರಾಜಕುಮಾರ ಅವರು ಬಿ1 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದು, ಅವರೊಂದಿಗೆ ಇತರ ಸಹಪ್ರಯಾಣಿಕರೂ ಇದ್ದರು.

ರಾತ್ರಿ ಎಲ್ಲರೂ ಒಟ್ಟಿಗೆ ಮಾತನಾಡಿಕೊಂಡು ಬಳಿಕ ತಮ್ಮ ತಮ್ಮ ಆಸನಗಳಲ್ಲಿ ಮಲಗಿದ್ದರು. ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ಸಹಪ್ರಯಾಣಿಕರು ರಾಜಕುಮಾರ ಅವರು ತಮ್ಮ ಸೀಟಿನಲ್ಲಿ ಮಲಗಿರುವುದನ್ನು ಗಮನಿಸಿದ್ದರು ಎನ್ನಲಾಗಿದೆ.

ರೈಲು ವಾಡಿ ಸಮೀಪ ತಲುಪಿದಾಗ ಸಹಪ್ರಯಾಣಿಕರು ರಾಜಕುಮಾರ ಅವರನ್ನು ಗಮನಿಸಿದಾಗ ಅವರು ತಮ್ಮ ಆಸನದಲ್ಲಿ ಇರಲಿಲ್ಲ. ಶೌಚಾಲಯಕ್ಕೆ ತೆರಳಿರಬಹುದು ಎಂದು ಭಾವಿಸಿದ್ದ ಅವರು, ಕಲಬುರಗಿ ತಲುಪಿದ ಬಳಿಕ ಹುಡುಕಾಟ ನಡೆಸಿದ್ದಾರೆ. ಆದರೂ ರಾಜಕುಮಾರ ಪತ್ತೆಯಾಗಿರಲಿಲ್ಲ. ಈ ನಡುವೆ ಅವರ ಮೊಬೈಲ್‌ಗೆ ಕರೆ ಮಾಡಿದಾಗ, ಕರೆ ಸ್ವೀಕರಿಸಿದ ವ್ಯಕ್ತಿಯಿಂದ ರಾಜಕುಮಾರ ಅವರು ಯಾದಗಿರಿ ಸಮೀಪದ ರೈಲ್ವೆ ಹಳಿಯಲ್ಲಿ ಮೃತಪಟ್ಟಿರುವ ವಿಷಯ ತಿಳಿದುಬಂದಿದೆ ಎನ್ನಲಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಳಗಿನ ಜಾವ ಶೌಚಾಲಯಕ್ಕೆ ತೆರಳುವ ಸಂದರ್ಭದಲ್ಲಿ ನಿದ್ದೆಯ ಮಂಪರಿನಲ್ಲಿ ಆಕಸ್ಮಿಕವಾಗಿ ರೈಲಿನಿಂದ ಕೆಳಗೆ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ರೈಲಿನಿಂದ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಾಯಚೂರು ರೈಲ್ವೆ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

ರಾಜಕುಮಾರ ಪಾಟೀಲ್ ಅವರ ಸಾವು ಆಕಸ್ಮಿಕವೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ. ಕುಟುಂಬಸ್ಥರು ನೀಡುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು, ಸಾವಿನ ನಿಖರ ಕಾರಣ ಪತ್ತೆಹಚ್ಚಲು ರಾಯಚೂರು ರೈಲ್ವೆ ಠಾಣೆಯ ಪೊಲೀಸರು ಸಮಗ್ರ ತನಿಖೆ ಕೈಗೊಳ್ಳಲಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here