ಜೈಲಿನಿಂದ ಹೊರಬರುತ್ತಿರುವ ಫೋಟೋದಲ್ಲಿ ಇರುವ ವ್ಯಕ್ತಿ ನ್ಯಾಯಮೂರ್ತಿ ಕರ್ಣನ್ ಚಿನ್ನಸ್ವಾಮಿ ಸ್ವಾಮಿನಾಥನ್ ಕರ್ಣನ್.ಜಸ್ಟಿಸ್ ಕರ್ಣನ್ ಮದ್ರಾಸ್ ಹೈಕೋರ್ಟ್ನ ನ್ಯಾಯಾಧೀಶರು – ಮೊದಲ ದಲಿತ ನ್ಯಾಯಾಧೀಶರು.
ಮಾನ್ಯ ನ್ಯಾಯಮೂರ್ತಿ ಸಿ ಎಸ್ ಕರ್ಣನ್ ಅವರು ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಒಂದು ವಿಶಿಷ್ಟ ಮತ್ತು ನೊಂದ ಧ್ವನಿ. ಮದ್ರಾಸ್ ಉನ್ನತ ನ್ಯಾಯಾಲಯದ ಪ್ರಥಮ ದಲಿತ ನ್ಯಾಯಾಧೀಶರಾಗಿದ್ದ ಅವರು ತಮ್ಮ ಸೇವಾ ಅವಧಿಯಲ್ಲಿ ನ್ಯಾಯಾಂಗದಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ಬಹಿರಂಗವಾಗಿ ಪ್ರಶ್ನಿಸಿದ್ದರು. 2017 ರ ಆರಂಭದಲ್ಲಿ ಅವರು ಗೌರವಾನ್ವಿತ ಪ್ರಧಾನಮಂತ್ರಿಗಳಿಗೂ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೂ ನೇರ ಪತ್ರ ಬರೆದು ಉನ್ನತ ನ್ಯಾಯಾಲಯದ ಸುಮಾರು 20 ಕ್ಕೂ ಹೆಚ್ಚು ನ್ಯಾಯಾಧೀಶರ ಮೇಲೆ ಗಂಭೀರ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿದ್ದರು. ಆದರೆ ಆ ಸಮಯದಲ್ಲಿ ಆ ಗಂಭೀರ ಪತ್ರದ ವಿಚಾರಣೆ ನಡೆಸುವ ಬದಲು ಅಥವಾ ಅದರಲ್ಲಿನ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಬದಲು ಕೇಂದ್ರ ಸರ್ಕಾರ ಮತ್ತು ವ್ಯವಸ್ಥೆ ಅದನ್ನು ಮುಚ್ಚಿಹಾಕಲು ಯತ್ನಿಸಿತು.
ಸಾಕ್ಷ್ಯಗಳಿಲ್ಲದೆ ಗಂಭೀರ ಆರೋಪ ಮಾಡಿದ್ದರೆಂದು ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲಾಯಿತು. ಸುಪ್ರೀಂ ಕೋರ್ಟ್ನ ಏಳು ನ್ಯಾಯಮೂರ್ತಿಗಳ ಪೀಠವು ಅವರಿಗೆ ಕ್ಷಮೆಯಾಚಿಸಲು ಸೂಚಿಸಿದಾಗ ತಮ್ಮ ನಿಲುವಿಗೆ ಬದ್ಧರಾಗಿದ್ದ ಜಸ್ಟಿಸ್ ಕರ್ಣನ್ ಕ್ಷಮೆ ಕೇಳಲು ಸಂಪೂರ್ಣವಾಗಿ ನಿರಾಕರಿಸಿದರು. ಪರಿಣಾಮವಾಗಿ ಅವರು ಆರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೇ ಹಾಲಿ ನ್ಯಾಯಾಧೀಶರೊಬ್ಬರು ಜೈಲು ಪಾಲಾದ ಮೊದಲ ಘಟನೆ ಇದಾಗಿತ್ತು. ಅಂದು ಅವರ ಧ್ವನಿಯನ್ನು ಅಡಗಿಸಲು ಅವರ ವಿರೋಧಿಗಳು ಮತ್ತು ವ್ಯವಸ್ಥೆಯ ಪ್ರತಿನಿಧಿಗಳು ಅವರಿಗೆ ಮಾನಸಿಕ ಅಸ್ಥಿರತೆ ಇದೆ ಎಂದು ಬಿಂಬಿಸಿ ಅಪಹಾಸ್ಯ ಮಾಡಿದರು. ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುವ ಬದಲು ಆರೋಪ ಮಾಡಿದ ನ್ಯಾಯಾಧೀಶರನ್ನೇ ಜೈಲಿಗೆ ಅಟ್ಟಿದ್ದು ನಮ್ಮ ವ್ಯವಸ್ಥೆಯ ದೊಡ್ಡ ದುರಂತ.
ಇನ್ನೊಬ್ಬರು ಇತ್ತೀಚೆಗೆ ದೆಹಲಿಯಲ್ಲಿ ಉನ್ನತ ನ್ಯಾಯಾಲಯದ ನ್ಯಾಯಮೂರ್ತಿ ಯಶವಂತ್ ವರ್ಮಾ
ಅವರ ಸರ್ಕಾರಿ ನಿವಾಸದಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಕೋಟ್ಯಂತರ ರೂಪಾಯಿ ಕಂತೆ ಕಂತೆ ಕಪ್ಪು ಹಣ ಮತ್ತು ಅರ್ಧ ಸುಟ್ಟ ನೋಟುಗಳು ಪತ್ತೆಯಾದವು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಹಲವು ಅಪರಾಧಿಗಳು ಮತ್ತು ಭ್ರಷ್ಟರು ದಶಕಗಳಿಂದ ವಿಚಾರಣೆಗೆ ಹಾಜರಾಗದೇ ಮುಕ್ತವಾಗಿ ಓಡಾಡುತ್ತಿರುವುದು ಮತ್ತು ನ್ಯಾಯಾಧೀಶರ ಮನೆಯಲ್ಲೇ ಕೋಟ್ಯಂತರ ರೂಪಾಯಿ ಪತ್ತೆಯಾಗುತ್ತಿರುವುದು ಅಂದು ಜಸ್ಟಿಸ್ ಕರ್ಣನ್ ಅವರು ಹೇಳಿದ್ದ ಸತ್ಯವನ್ನು ಇಂದು ಸಾಬೀತುಪಡಿಸುತ್ತಿದೆ.
ಆದರೆ ಇಲ್ಲಿ ಎದ್ದಿರುವ ದೊಡ್ಡ ಪ್ರಶ್ನೆ ಎಂದರೆ ಜಸ್ಟಿಸ್ ವರ್ಮಾ ಅವರ ಮನೆಯಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದ ನೋಟುಗಳ ಕಂತೆಗಳು ಸಿಕ್ಕರೂ ಸಹ ಇಷ್ಟರವರೆಗೆ ಅವರಿಗೆ ಯಾವುದೇ ರೀತಿಯ ಶಿಕ್ಷೆಯಾಗಿಲ್ಲ. ಸೂಕ್ತ ವಿಚಾರಣೆಯೂ ನಡೆದಿಲ್ಲ. ಇಡೀ ವ್ಯವಸ್ಥೆ ಸೇರಿಕೊಂಡು ವಿಳಂಬ ನೀತಿ ಅನುಸರಿಸುತ್ತಾ ಕಾಲಹರಣ ಮಾಡುತ್ತಿದೆ.
ದೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಯಾರಾದರೂ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸಿದರೆ ಸಾಕು ತಕ್ಷಣವೇ ಅವರ ಮೇಲೆ ಜಾರ್ಜ್ ಸೊರೋಸ್ ಫಂಡ್ ಬಂತು ವಿದೇಶಿ ಫಂಡ್ ಬಂತು ಎಂದು ದಿನವಿಡೀ ಬೊಬ್ಬೆ ಹೊಡೆಯುವ ವಾಟ್ಸಾಪ್ ಯುನಿವರ್ಸಿಟಿ ಪತ್ತೆದಾರರಿಗೆ ಮತ್ತು ವ್ಯವಸ್ಥೆಯ ಹಿತಾಸಕ್ತಿ ಕಾಯುವ ಸಾಕು ನಾಯಿ ಮಾಧ್ಯಮಗಳಿಗೆ ಈ ಪ್ರಶ್ನೆ ಕೇಳುವ ಧೈರ್ಯವಿದೆಯೇ. ಈ ಕೋಟ್ಯಂತರ ಹಣ ಎಲ್ಲಿಂದ ಬಂತು ಮತ್ತು ಇದು ಯಾರ ಹಣ ಎಂದು ಕೇಳುವ ಕನಿಷ್ಠ ನೈತಿಕತೆ ಅಥವಾ ಧೈರ್ಯ ಈ ಮಾಧ್ಯಮಗಳಿಗೆ ಮತ್ತು ಸುಳ್ಳು ಹರಡುವ ಜಾಲಗಳಿಗೆ ಏಕಿಲ್ಲ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ದಲಿತ ನ್ಯಾಯಾಧೀಶರನ್ನು ತಕ್ಷಣವೇ ಜೈಲಿಗೆ ಅಟ್ಟುವ ಈ ವ್ಯವಸ್ಥೆ ತನ್ನದೇ ಕಣ್ಣೆದುರು ಕಪ್ಪು ಹಣ ಸಿಕ್ಕಾಗ ಏಕೆ ಮೌನಕ್ಕೆ ಶರಣಾಗುತ್ತದೆ.(ಕೃಪೆ:ಹರೀಶ್ ಪೂಜಾರಿ ಫೇಸ್ಬುಕ್)
Home ಸಾರ್ವಜನಿಕ ಧ್ವನಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ದಲಿತ ನ್ಯಾಯಾಧೀಶ ಕರ್ಣನ್ ಚಿನ್ನಸ್ವಾಮಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆ!!





