ಮಂಡ್ಯ:ನಂದಿನಿ ಮೊಸರಿನ ಪ್ಯಾಕೆಟ್‌ನಲ್ಲಿ ಜಿಯೋ ಸಿಮ್ ಸಿಕ್ಕಿದೆ ಎಂದು ಸುಳ್ಳು ಪ್ರಚಾರ ಮಾಡಿದ್ದ ಮದ್ದೂರಿನ ಅರುಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಆ ಸಿಮ್ ಆತನ ಪತ್ನಿಯದ್ದೇ ಎಂದು ತಿಳಿದುಬಂದಿದ್ದು, ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

​ಮದ್ದೂರು ನಂದಿನಿ ಮೊಸರಿನ ಪ್ಯಾಕೆಟ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಸಿಕ್ಕಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಮೂಲಕ ‘ಮನ್‌ಮುಲ್’ (ಮಂಡ್ಯ ಹಾಲು ಒಕ್ಕೂಟ) ಮಾರುಕಟ್ಟೆಯ ಪ್ರತಿಷ್ಠೆಗೆ ಧಕ್ಕೆ ತಂದಿದ್ದ ಆರೋಪಿಯನ್ನು ಮದ್ದೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

​ಬಂಧಿತ ಆರೋಪಿ ಅರುಣ್ ಕುಮಾರ್:

ತಾಲೂಕಿನ ಚನ್ನಸಂದ್ರ ಗ್ರಾಮದ ಶಿವಲಿಂಗಯ್ಯ ಅವರ ಪುತ್ರ ಅರುಣ್ ಕುಮಾರ್ (35) ಬಂಧಿತ ಆರೋಪಿ. ಮನ್‌ಮುಲ್ ಮಾರ್ಕೆಟಿಂಗ್ ಮ್ಯಾನೇಜರ್ ಪ್ರಸಾದ್ ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆಗೆ ಇಳಿದ ಮದ್ದೂರು ಠಾಣೆಯ ಸಿಪಿಐ ನವೀನ್ ಮತ್ತು ಸಿಬ್ಬಂದಿ, ಶುಕ್ರವಾರ ಸಂಜೆ ಆರೋಪಿಯ ನಿವಾಸದಲ್ಲಿ ಆತನನ್ನು ವಶಕ್ಕೆ ಪಡೆದಿದ್ದಾರೆ.

​ಆರೋಪಿ ಹೇಳಿದ್ದೇನು?

ಬಂಧಿತ ಅರುಣ್ ಕುಮಾರ್ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, “ಮಂಗಳವಾರ ಸಂಜೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿರುವ ನಂದಿನಿ ಪಾರ್ಲರ್‌ನಲ್ಲಿ ಮೊಸರಿನ ಪ್ಯಾಕೆಟ್ ಖರೀದಿಸಿದ್ದೆ. ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಒಗ್ಗರಣೆ ಹಾಕಲು ಪಾತ್ರೆಗೆ ಸುರಿಯುತ್ತಿದ್ದಾಗ, ಜಿಯೋ ಸಿಮ್ ಕವರ್‌ನಿಂದ ಜಾರಿ ಮೊಸರಿನಲ್ಲಿ ಬಿದ್ದಿತ್ತು. ಇದನ್ನು ಗಮನಿಸಿದ ನಾನು, ಮೊಸರಿನ ಪ್ಯಾಕೆಟ್‌ನಲ್ಲೇ ಸಿಮ್ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ನಿಜ” ಎಂದು ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆ ಜಿಯೋ ಸಿಮ್ ತನ್ನ ಪತ್ನಿ ಎನ್. ಸುಧಾ ಅವರ ಹೆಸರಿನಲ್ಲಿದೆ ಎಂದು ಆತ ತಿಳಿಸಿದ್ದಾನೆ.

​ಸುಳ್ಳು ಆರೋಪ:

ನಂದಿನಿ ಮೊಸರಿನ ಬ್ರ್ಯಾಂಡ್‌ಗೆ ಕಳಂಕ ತರಲು ಖಾಸಗಿ ಡೈರಿಗಳೊಂದಿಗೆ ಶಾಮೀಲಾಗಿ ಅರುಣ್ ಕುಮಾರ್ ಇಂತಹ ಸುಳ್ಳು ಆರೋಪಗಳನ್ನು ಮಾಡಿದ್ದಾನೆ ಎಂದು ಮನ್‌ಮುಲ್ ಅಧ್ಯಕ್ಷ ಹರೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here