ದಾವಣಗೆರೆ – ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹೆಸರು ಬದಲಿಸುವುದರೊಂದಿಗೆ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲು ಮುಂದಾಗಬೇಕೆಂದು (ಬಿ ಕೆ ಎಂ ಯು)ಕೃಷಿ ಕಾರ್ಮಿಕರ ಸಂಘದ ರಾಜ್ಯ ಉಸ್ತುವಾರಿಗಳಾದ ಕಾಂ ಹೆಚ್ ಎಂ ಸಂತೋಷ್ ಕರೆ ನೀಡಿದರು.
ದಾವಣಗೆರೆ ಪಂಪಾಪತಿ ಭವನದಲ್ಲಿಂದು ನಡೆದ ಕೃಷಿ ಕೂಲಿ ಕಾರ್ಮಿಕರ ದಾವಣಗೆರೆ 2ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದ ಹೆಚ್ಎಂ ಸಂತೋಷ್ ರವರು, ಮನರೇಗಾ ಯೋಜನೆಯ ಹೆಸರು ಬದಲಾಯಿಸಿರುವುದನ್ನು ತೀವ್ರವಾಗಿ ವಿರೋಧಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ನಾಯಕರು ನಮಗೆ ಸ್ಪೂರ್ತಿ ನೀಡಿರುವುದನ್ನು ಮನವರಿಕೆ ಮಾಡಿಕೊಂಡು ಹೋರಾಟ ಕ್ಕಿಳಿಯಬೇಕೆಂದರು.
ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಉದ್ಯೋಗ ಭದ್ರತೆಗಾಗಿ ಯು ಪಿ ಎ 1 ಸರ್ಕಾರದಲ್ಲಿ ಮನರೇಗಾ ಜಾರಿಗೆ ಬಂದಿತು, ಸಣ್ಣ ರೈತರು ಕೃಷಿ ಕೂಲಿ ಕಾರ್ಮಿಕರು ಉದ್ಯೋಗ ಅರಸಿಕೊಂಡು ಪಟ್ಟಣಗಳಿಗೆ ವಲಸೆ ಹೋಗಬಾರದೆಂದು ಅವರು ಇರುವ ಗ್ರಾಮಗಳಲ್ಲಿಯೇ ಉದ್ಯೋಗ ದೊರಕಬೇಕೆನ್ನುವ ದೃಷ್ಟಿಯಿಂದ ಮನರೇಗಾ ಜಾರಿಗೆ ಬಂದಿತ್ತು.
ಉದ್ಯೋಗ ಖಾತ್ರಿ ಯೋಜನೆ ಕೆಲಸದ ದಿನಗಳನ್ನು ವರ್ಷಕ್ಕೆ 200 ದಿನಗಳಿಗೆ ಏರಿಸಬೇಕೆಂದು ಕೃಷಿ ಕೂಲಿ ಕಾರ್ಮಿಕರ ಸಂಘಟನೆ ದೇಶಾದ್ಯಂತ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ , ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕೆಲಸದ ದಿನಗಳನ್ನು 125 ದಿನಗಳಿಗೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅನುಪಾತವನ್ನು ಶೇಕಡಾ ಅರವತ್ತು, ನಲವತ್ತು ಮಾಡಿ ರಾಜ್ಯಗಳಿಗೆ ಆರ್ಥಿಕ ಹೊರೆ ಮಾಡಿದೆ.
ಗ್ರಾಮಗಳಿಗೆ ತೆರಳಿ ಕೃಷಿ ಕೂಲಿ ಕಾರ್ಮಿಕರನ್ನು ಸಂಘಟಿಸಿ ಅವರಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಕೊಡಿಸಲು ಮುಂದಾಗುವುದರ ಮೂಲಕ ಕಾರ್ಯಕರ್ತರು ಶ್ರಮಿಸಬೇಕೆಂದರು.
ಉದ್ಘಾಟನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೃಷಿ ಕೂಲಿ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷರಾದ ಕಾಂ ಆವರಗೆರೆ ಚಂದ್ರುರವರು ಮಾತನಾಡಿ ಕೃಷಿ ಕಾರ್ಮಿಕರ ಕಲ್ಯಾಣ ಮಂಡಳಿ ಜಾರಿ ತರುವವರೆಗೂ ಸರ್ಕಾರಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದರು.
ಸಮ್ಮೇಳನದ ಆರಂಭದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಪಕ್ಷದ ಹಿರಿಯ ಮುಖಂಡರು ಸುರೇಶ್, ಶೇಖರಪ್ಪ ಪಂಪಾಪತಿ ಟ್ರಸ್ಟ್ ನ ಖಜಾಂಚಿಗಳು ಆದ ಕಾಂ ಜಿ ಯಲ್ಲಪ್ಪ ಶುಭ ಹಾರೈಸಿ ಮಾತನಾಡಿದರು.

ಸಮ್ಮೇಳನಕ್ಕೆ ಅತಿಥಿಗಳಾಗಿ ಭಾಗವಹಿಸಿದ್ದ ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಕಾಂ ಹೆಚ್ ಜಿ ಉಮೇಶ್, ಹಾವೇರಿ ಜಿಲ್ಲಾ ಎಐಟಿಯುಸಿ ಅಧ್ಯಕ್ಷರಾದ ಕಾಂ ಹನುಮಂತಪ್ಪ ಅಗಸಿಬಾಗಿಲು, ಸಿಪಿಐ ದಾವಣಗೆರೆ ತಾಲೂಕು ಕಾರ್ಯದರ್ಶಿ ಕಾಂ ಕೆರನಹಳ್ಳಿ ರಾಜು, ರಾಷ್ಟ್ರೀಯ ಮಹಿಳಾ ಒಕ್ಕೂಟದ ಜಿಲ್ಲಾಧ್ಯಕ್ಷೆ ಕಾಂ ಸರೋಜಾ, ಸಿಪಿಐ ಜಿಲ್ಲಾ ಮಂಡಳಿ ಸದಸ್ಯೆ ಕಾಂ ಬೆಳಲಗೆರೆ ರುದ್ರಮ್ಮ ಶುಭ ಹಾರೈಸಿ ಮಾತನಾಡಿದರು.
ಸಮ್ಮೇಳನದ ಯಶಸ್ಸಿಗೆ ನರೇಗಾ ರಂಗನಾಥ್, ಎ ತಿಪ್ಪೇಶ್, ಕೆ ಬಾನಪ್ಪ ಮುಂತಾದವರು ಶ್ರಮಿಸಿದ್ದರು.

LEAVE A REPLY

Please enter your comment!
Please enter your name here