ವಿಜಯಪುರ: ಜಿಲ್ಲೆಗೆ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡಲು ಆಗದಿದ್ದರೆ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಸೇರಿ ಜಿಲ್ಲೆಯ ಸಂಸದರು, ಶಾಸಕರು ರಾಜೀನಾಮೆ ನೀಡಿ ಹೋರಾಟಕ್ಕೆ ಬನ್ನಿ ಎಂದು ಹಿರಿಯ ಹೋರಾಟಗಾರ ಭಗವಾನ ರೆಡ್ಡಿ ಆಗ್ರಹಿಸಿದರು.

ಅವರು ವಿಜಯಪುರದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನಾ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ ಜಿಲ್ಲೆಯಲ್ಲಿ ಸರಕಾರಿ ಸಂಸ್ಥೆಗಳನ್ನು ಮುಚ್ಚಲು ಪ್ರಯತ್ನ ಮಾಡುತ್ತಿದ್ದಾರೆ.
ಅವರು ಸ್ವಾರ್ಥ ರಾಜಕೀಯದಿಂದ ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದಾರೆ.
ಮುಖ್ಯಮಂತ್ರಿಗಳ ಬಳಿ ನಿಯೋಗ ಕರೆದುಕೊಂಡು ಹೋಗಿದ್ದ ಅವರು ಜಿಲ್ಲೆಗೆ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಮಂಜೂರು ಮಾಡಿಸಲು ವಿಫಲರಾಗಿದ್ದಾರೆ. ಜೊತೆಗೆ ಹೋರಾಟಗಾರರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಏಮ್ಸ್ ಸ್ಥಾಪನೆಗೆ 2018ರಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಂತಹ ಜಿಲ್ಲಾ ಆಸ್ಪತ್ರೆಯನ್ನು ಖಾಸಗಿ ಅವರಿಗೆ ಮಾರಾಟ ಮಾಡುತ್ತಿರುವುದು ಏಕೆ? ನೀವು ಯಾರ ಪರವಾಗಿ ಇದ್ದೀರಿ ಎಂದು ಪ್ರಶ್ನೆ ಮಾಡಿದ ಅವರು ಉಸ್ತುವಾರಿ ಸಚಿವರ ಮಾತಿಗೆ ಮತ್ತು ಕೃತಿಗೆ ವ್ಯತ್ಯಾಸ ಇದೆ. ಸಚಿವರು ನಾನು ಖಾಸಗಿ ಪರವಾಗಿ ಇದ್ದೇನೆ ಎಂದು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದರು.

ಹಿರಿಯ ಹೋರಾಟಗಾರ ಅನಿಲ ಹೊಸಮನಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಹೋರಾಟ ಗಂಭೀರವಾಗಿ ನಡೆಯುತ್ತಿದೆ. ಬೆಳಗಾವಿಯಲ್ಲಿ ನಡೆಯುವ ವಿಧಾನ ಸಭೆ ಅಧಿವೇಶನದಲ್ಲಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಘೋಷಣೆ ಆಗದಿದ್ದರೆ ಮುಂದಿನ ದಿನಗಳಲ್ಲಿ ಸರದಿ ಉಪವಾಸ ಸತ್ಯಾಗ್ರಹ, ಹಮ್ಮಿಕೊಳ್ಳುತ್ತೇವೆ.
ಪ್ರಸಂಗ ಬಂದರೆ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವ ಮೂಲಕ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದರು.

ಹೋರಾಟಗಾರರು ಜಿಲ್ಲೆಯ ಜನರ ಆರೋಗ್ಯ ರಕ್ಷಣೆ ಮತ್ತು ಬಡ ಮಕ್ಕಳ ವೈದ್ಯಕೀಯ ಶಿಕ್ಷಣಕ್ಕಾಗಿ ಧರಣಿ ಮಾಡುತ್ತಿದ್ದೇವೆ, ರಕ್ತ ಸಹಿ ಸಂಗ್ರಹ, ಕಲಾವಿದರ ದೇಶಭಕ್ತಿ ಗೀತೆ, ಕವಿಗೋಷ್ಠಿ, ಪತ್ರ ಚಳುವಳಿ, ರಂಗೋಲಿ ಚಳುವಳಿಯಂತಹ ವಿಭಿನ್ನ ಹೋರಾಟ ಮಾಡಿ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೇವೆ. ಜಿಲ್ಲೆಯ ನೂರಾರು ಸಂಘಟನೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ ಇಲ್ಲಿ ಯಾರದು ವಯಕ್ತಿಕ ಸ್ವಾರ್ಥವಿಲ್ಲ ಎಂದು ಹೇಳಿದರು.

ಹೋರಾಟಗಾರ ಭರತಕುಮಾರ ಎಚ್ ಟಿ ಮಾತನಾಡಿ ಸಚಿವ ಸಚಿವ ಎಂ ಬಿ ಪಾಟೀಲರ ಮನೆಗೆ ಹೋದಾಗ ಆದಷ್ಟು ಬೇಗನೆ ಉಪವಾಸ ಸತ್ಯಾಗ್ರಹ ಆರಂಭಿಸಿ ನನಗೂ ವೇಟ್ ಜಾಸ್ತಿಯಾಗಿದೆ ನಾನು ಬಂದು ಉಪವಾಸ ಕೂರುತ್ತೇನೆ ಎಂದು ಹೇಳಿದ್ದೀರಿ ನೀವು ನಿಯೋಗದಲ್ಲಿನ ಹೋರಾಟಗಾರರೊಂದಿಗೆ ಗೌರವಯುತವಾಗಿ ನಡೆದುಕೊಂಡಿಲ್ಲ ಜಿಲ್ಲೆಗೆ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಮಂಜೂರು ಮಾಡಿಸಲು ವಿಫಲವಾಗಿದ್ದೀರಿ, ಬಸವಣ್ಣನವರ ಬಗ್ಗೆ ಮಾತನಾಡುವ ನೀವು ಕೊಟ್ಟ ಮಾತಿನಂತೆ ಉಪವಾಸ ಸತ್ಯಾಗ್ರಹ ಕೂರಲು ಬನ್ನಿ ಎಂದು ಆಹ್ವಾನ ನೀಡಿದರು.

ಹೋರಾಟಗಾರ ಮಲ್ಲಿಕಾರ್ಜುನ ಬಟಗಿ ಮಾತನಾಡಿ ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಸಚಿವರು ಶಾಸಕರ ಮನೆ ಮುಂದೆ ಧರಣಿ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.

ಹೋರಾಟಗಾರ ಅಕ್ರಮ ಮಾಶಾಳಕರ ಮಾತನಾಡಿ ಡಿಸೆಂಬರ್ 1ರ ಹೋರಾಟದಲ್ಲಿ ಸಚಿವರು ಶಾಸಕರು ಭಾಗವಹಿಸಿ ಎಂದು ಆಗ್ರಹಿಸಿದ ಅವರು ಜಿಲ್ಲೆಯ ಜನರ ಬೇಡಿಕೆಗೆ ಕೂಡಲೇ ಸ್ಪಂದಿಸಬೇಕೆಂದು ಒತ್ತಾಯಿಸಿದರು.

ಇದೆ ಸಂದರ್ಭದಲ್ಲಿ
ಸರಕಾರದ ಜನ ವಿರೋಧಿ ನೀತಿ ಖಂಡಿಸಿ ಡಿಸೆಂಬರ್ 1 2025 ರಂದು ಮುಂಜಾನೆ 11 ಗಂಟೆಗೆ ವಿಜಯಪುರ ನಗರದಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಬಿತ್ತಿ ಪತ್ರವನ್ನು ಬಿಡುಗಡೆ ಮಾಡಿದರು.

ಅಂದು ನಗರದ ಶಿವಾಜಿ ವೃತ್ತದಿಂದ ಮೆರವಣಿಗೆ ಪ್ರಾರಂಭಗೊಂಡು ಸರಾಫ್ ಬಜಾರ್, ಸಿದ್ಧೇಶ್ವರ ದೇವಸ್ಥಾನ, ಗಾಂಧಿ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಡಾ. ಅಂಬೇಡ್ಕರ್ ವೃತ್ತವನ್ನು ತಲುಪಲಿದೆ. ನಂತರ ಬಹಿರಂಗ ಸಭೆ ನಡೆಯಲಿದೆ.

ಸರಕಾರ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ವಿಜಯಪುರ ನಗರದಲ್ಲಿ ಡಿಸೆಂಬರ್ 1ರಂದು ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ಜಿಲ್ಲೆಯ ಸಾಹಿತಿಗಳು, ಪ್ರಗತಿಪರ ಚಿಂತಕರು, ಎಲ್ಲ ದಲಿತ, ಮಹಿಳಾ, ಕಾರ್ಮಿಕ, ರೈತ, ಕನ್ನಡಪರ ಸಂಘಟನೆಗಳ ಕಾರ‍್ಯಕರ್ತರು, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಹೋರಾಟ ಸಮಿತಿಯ ಮುಖಂಡರು ವಿನಂತಿಸಿಕೊಂಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಹೋರಾಟಗಾರರಾದ ಲಕ್ಷ್ಮಣ ಹಂದ್ರಾಳ, ಸಿದ್ದಲಿಂಗ ಬಾಗೇವಾಡಿ, ಶ್ರೀನಾಥ ಪೂಜಾರಿ, ಸುರೇಶ ಬಿಜಾಪುರ ಲಲಿತಾ ಬಿಜ್ಜರಗಿ,ಜಗದೇವ ಸೂರ್ಯವಂಶಿ, ಬಾಬುರಾವ ಬೀರಕಬ್ಬಿ, ಸಿದ್ರಾಮ ಹಳ್ಳೂರ,ಗಿರೀಶ ಕಲಘಟಗಿ, ಗೀತಾ ಎಚ್,ಭೀಮು ಉಪ್ಪಾರ ಸಿದ್ರಾಮಯ್ಯ ಹಿರೇಮಠ, ಸಲೀಮ್ ಹೊಕ್ರಾಣಿ ಚಂದು ಜಾಧವ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here