ನವದೇಹಲಿ:ಬ್ಯಾಂಕುಗಳಲ್ಲಿ ಅಗತ್ಯ ನೇಮಕಾತಿ ಮಾಡಬೇಕು, ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು, ಬ್ಯಾಂಕಿಂಗ್ ಕೆಲಸವನ್ನು ಹೊರಗುತ್ತಿಗೆ ನೀಡಬಾರದು ಎನ್ನುವ ಹಲವಾರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ನೇತೃತ್ವದಲ್ಲಿ ಸಾವಿರಾರು ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ನವದೆಹಲಿಯ ಸಂಸತ್ ರಸ್ತೆಯಲ್ಲಿ ಧರಣಿಯನ್ನು ಮಾಡಿ ಸರಕಾರದ ಬ್ಯಾಂಕ್ ನೌಕರರ ವಿರೋಧಿ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು ಎಂದು ಯುಎಫ್ಬಿಯು ದಾವಣಗೆರೆ ಜಿಲ್ಲಾ ಸಮಿತಿಯ ಸಂಚಾಲಕ ಕೆ.ರಾಘವೇಂದ್ರ ನಾಯರಿ ಹೇಳಿದರು.
ಮಾರ್ಚ್ 24 ಮತ್ತು 25 ರಂದು ಎರಡು ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು ಕರೆ ನೀಡಿರುವ ಹಿನ್ನಲೆಯಲ್ಲಿ ಮುಷ್ಕರಕ್ಕೆ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾದ ಅನೇಕ ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಪಾರ್ಲಿಮೆಂಟ್ ಧರಣಿಯೂ ಒಂದಾಗಿದೆ. ಬ್ಯಾಂಕುಗಳಲ್ಲಿ ಕೆಲಸ ಮಾಡುವ ತಾತ್ಕಾಲಿಕ ನೌಕರರನ್ನು ಖಾಯಂಗೊಳಿಸಬೇಕು, ನೌಕರರ ಉದ್ಯೋಗ ಭದ್ರತೆಯನ್ನು ರಕ್ಷಿಸಬೇಕು, ಬ್ಯಾಂಕ್ ಉದ್ಯೋಗಿಗಳ ಮೇಲಾಗುತ್ತಿರುವ ದಾಳಿಯಿಂದ ರಕ್ಷಿಸಬೇಕು, ಐಡಿಬಿಐ ಬ್ಯಾಂಕಿನಲ್ಲಿ ಸರಕಾರಿ ಬಂಡವಾಳವು ಶೇಕಡಾ 51 ಕ್ಕಿಂತ ಹೆಚ್ಚಿರುವಂತೆ ನೋಡಿಕೊಳ್ಳಬೇಕು ಹಾಗೂ ಇನ್ನಿತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಆಗ್ರಹಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯ ರಾಷ್ಟ್ರೀಯ ಸಮಿತಿಯು ಈ ಧರಣಿಗೆ ಕರೆ ನೀಡಿತ್ತು. ಸಂಯುಕ್ತ ವೇದಿಕೆಯ ಎಲ್ಲ 9 ಸಂಘಟನೆಗಳು ಧರಣಿಯಲ್ಲಿ ಪಾಲ್ಗೊಂಡು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದವು. ಧರಣಿಯಲ್ಲಿ ಸಂಯುಕ್ತ ವೇದಿಕೆಯ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಕರ್ನಾಟಕ ರಾಜ್ಯದಿಂದಲೂ ನೂರಾರು ನಾಯಕರು ಭಾಗವಹಿಸಿದರು. ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ನ ಅಧ್ಯಕ್ಷ ಎಂ.ಎಸ್.ಶ್ರೀನಿವಾಸನ್, ಪ್ರಧಾನ ಕಾರ್ಯದರ್ಶಿ ಎಂ.ಜಯನಾಥ್, ಉಪ ಪ್ರಧಾನ ಕಾರ್ಯದರ್ಶಿ ಕೆ.ಜಿ.ಪಣೀಂದ್ರ ಹಾಗೂ ಇತರ ಪದಾಧಿಕಾರಿಗಳಾದ ವಿನ್ಸೆಂಟ್ ಡಿಸೋಜ, ಕೆ.ರಾಘವೇಂದ್ರ ನಾಯರಿ, ಶ್ರೀಲತಾ ಕುಲಕರ್ಣಿ, ಶಿವಕುಮಾರ್, ಎಂ.ಪದ್ಮನಾಭನ್, ಸ್ಟೀಫನ್ ಜಯಚಂದ್ರ, ಕೆ.ನಾಗರಾಜ್, ಎಂ.ಸಿ.ಮಲ್ಲೇಶ್, ಆರ್.ಕೆ.ಬಲ್ಲಾಳ್, ವಿಕ್ಟರ್ ಮೆನೆಂಜಿಸ್, ದಯಾನಂದ ಅಂಬರಕರ್, ಬಸವನಗೌಡ ಪಾಟೀಲ, ಶ್ರೀನಾಥ್, ರಾಜಣ್ಣ, ಅರುಣ್ ಕುಮಾರ್ ಹಾಗೂ ಯುಎಫ್ಬಿಯು ರಾಜ್ಯ ಸಂಚಾಲಕ ಕೆ.ಎನ್.ಗಿರಿರಾಜ್, ಶಂಕರಪ್ಪ ಮೊದಲಾದವರು ಭಾಗವಹಿಸಿದ್ದರು ಎಂದು ಕಾಮ್ರೇಡ್ ರಾಘವೇಂದ್ರ ನಾಯರಿ ತಿಳಿಸಿದ್ದಾರೆ.





