ಮುಂಬಯಿ:ಆಕಸ್ಮಿಕವಾಗಿ ವಿಶೇಷಚೇತನರಿಗಾಗಿ (ಅಂಗವಿಕಲರು) ಮೀಸಲಿದ್ದ ಲೋಕಲ್ ರೈಲು ಬೋಗಿಯನ್ನು ಹತ್ತಿದ ಯುವತಿಗೆ ಕಿರುಕುಳ ನೀಡಿದ್ದಲ್ಲದೆ, ಆಕೆಯನ್ನು ಚಲಿಸುತ್ತಿರುವ ರೈಲಿನಿಂದ ಹೊರಗೆ ತಳ್ಳಿದ ಅಮಾನವೀಯ ಘಟನೆ ಮಹಾರಾಷ್ಟ್ರದ ನೈಗಾಂವ್ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಂತ್ರಸ್ತೆ ತನ್ನ ಎಡಗೈಯನ್ನು ಕಳೆದುಕೊಂಡಿದ್ದಾರೆ. ಕಳೆದ ವಾರ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಭಯಂದರ್ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ: ನೈಗಾಂವ್ ಪೂರ್ವದ ವಾಕಿಪಾಡ ನಿವಾಸಿ ಜಿತೇಂದ್ರ ಹಿರ್ಮುಖೆ (53) ಈ ಕೃತ್ಯ ಎಸಗಿದ ಆರೋಪಿ. ಸಂತ್ರಸ್ತೆ ಸುಪ್ರಿಯಾ ಶಿಂಧೆ (20) ನವೆಂಬರ್ 4ರ ಸಂಜೆ ಬೋರಿವಲಿಯಿಂದ ವಿರಾರ್‌ಗೆ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲಿನಲ್ಲಿ ವಿಪರೀತ ಜನದಟ್ಟಣೆ ಇದ್ದ ಕಾರಣ, ಸುಪ್ರಿಯಾ ಅವರು ತಪ್ಪಿ ವಿಶೇಷಚೇತನರಿಗಾಗಿ ಮೀಸಲಿದ್ದ ಬೋಗಿಯನ್ನು ಹತ್ತಿದ್ದರು. ಅದೇ ಬೋಗಿಯಲ್ಲಿದ್ದ ಆರೋಪಿ ಹಿರ್ಮುಖೆ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇದನ್ನು ಯುವತಿ ಪ್ರಶ್ನಿಸಿದಾಗ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ.

ರೈಲು ನೈಗಾಂವ್ ನಿಲ್ದಾಣ ತಲುಪಿದ ನಂತರವೂ ಜಗಳ ಮುಂದುವರಿದಿದೆ. ಈ ವೇಳೆ ಕೋಪಗೊಂಡ ಆರೋಪಿ ಆಕೆಯನ್ನು ರೈಲಿನಿಂದ ಹೊರಗೆ ತಳ್ಳಿದ್ದಾನೆ. ಪರಿಣಾಮ ಸುಪ್ರಿಯಾ ಎರಡು ಬೋಗಿಗಳ ನಡುವಿನ ಅಂತರದಲ್ಲಿ (ಗ್ಯಾಪ್) ಬಿದ್ದಿದ್ದಾರೆ. ಆಕೆ ಮೇಲೇಳಲು ಪ್ರಯತ್ನಿಸುತ್ತಿರುವಾಗಲೇ ರೈಲು ಚಲಿಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಿಕಿತ್ಸೆ ಮತ್ತು ಆರೋಪಿಯ ಬಂಧನ: ತಕ್ಷಣವೇ ಸಂತ್ರಸ್ತೆಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಗಾಯಗಳಾಗಿದ್ದರಿಂದ ಆಕೆಯ ಎಡಗೈಯನ್ನು ಮೊಣಕೈಯ ಕೆಳಭಾಗದಿಂದ ಕತ್ತರಿಸಬೇಕಾಯಿತು (ಆಂಪ್ಯುಟೇಶನ್) ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆ ನಡೆದ ತಕ್ಷಣ ಆರೋಪಿಯು ಕರವಸ್ತ್ರದಿಂದ ತನ್ನ ಮುಖವನ್ನು ಮುಚ್ಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದನು. ಆದರೆ, ರೈಲ್ವೆ ಪೊಲೀಸರು ವಿವಿಧ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಭಯಂದರ್ ರೈಲ್ವೆ ಪೊಲೀಸ್ ಠಾಣೆಯ ಹಿರಿಯ ಇನ್‌ಸ್ಪೆಕ್ಟರ್ ಗಣಪತ್ ತುಂಬಾಡ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here