ಕಲಕತ್ತ: ಸೋನಿಯಾ ಗಾಂಧಿ ತಮ್ಮ ಆತ್ಮಕಥನದಲ್ಲಿ, 2010ರಲ್ಲಿ ಪ್ರಣಬ್ ಮುಖರ್ಜಿ ಪ್ರಧಾನಿಯಾಗುವ ಆಸೆ ವ್ಯಕ್ತಪಡಿಸಿದ್ದು ತಮಗೆ ಆಘಾತ ತಂದಿತ್ತು ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಪ್ರಣಬ್ ಪುತ್ರಿ ಶರ್ಮಿಷ್ಠಾ, “ದಶಕಗಳ ಆಡಳಿತ ಅನುಭವವಿದ್ದ ನಾಯಕನಿಗೆ ಮಹತ್ವಾಕಾಂಕ್ಷೆ ಇರುವುದು ಅಪರಾಧವೇ? ಗಾಂಧಿ ಕುಟುಂಬದ ಹೊರಗಿನವರು ಈ ಕನಸು ಕಂಡಿದ್ದಕ್ಕೆ ಸೋನಿಯಾಗೆ ಆಘಾತವಾಯಿತೇ? ತಂದೆಯದ್ದು ಸ್ವಂತ ಅರ್ಹತೆಯೇ ಹೊರತು ವಂಶಪಾರಂಪರ್ಯ ಅರ್ಹತೆಯಲ್ಲ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
Belonging: A Journey of Love
ಸೋನಿಯಾ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಶರ್ಮಿಷ್ಠಾ ಮುಖರ್ಜಿ, ತಮ್ಮ ತಂದೆಯ ರಾಜಕೀಯ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. “ರಾಜಕೀಯದಲ್ಲಿ ಮಹತ್ವಾಕಾಂಕ್ಷೆ ಹೊಂದುವುದು ಅಪರಾಧವೇ? ಅದರಲ್ಲೂ ದಶಕಗಳ ಕಾಲ ಆಡಳಿತ ಅನುಭವ, ಕಠಿಣ ಪರಿಶ್ರಮ ಮತ್ತು ಅದ್ಭುತ ಜ್ಞಾನವಿದ್ದ ವ್ಯಕ್ತಿಗೆ ಅಂತಹ ಆಸೆ ಇರುವುದರಲ್ಲಿ ಆಶ್ಚರ್ಯವೇನಿದೆ? ಗಾಂಧಿ-ನೆಹರು ಕುಟುಂಬವನ್ನು ಹೊರತುಪಡಿಸಿ, ಹೊರಗಿನವರು ಯಾರಾದರೂ ಪ್ರಧಾನಿಯಾಗುವ ಆಸೆ ಹೊಂದುವುದು ಮತ್ತು ಅದನ್ನು ಸೋನಿಯಾ ಅವರ ಬಳಿ ಹೇಳಿಕೊಳ್ಳುವುದೇ ಅವರಿಗೆ ದೊಡ್ಡ ಶಾಕ್ ನೀಡಿತೇ?” ಎಂದು ಶರ್ಮಿಷ್ಠಾ ವಾಗ್ದಾಳಿ ನಡೆಸಿದ್ದಾರೆ.





