ಕುರುಬ ಸಮುದಾಯವು ಜನಸಂಖ್ಯೆಯ ದೃಷ್ಟಿಯಿಂದ ದೊಡ್ಡದು ಹಿಂದುಳಿದ ಸಮುದಾಯಗಳ ಪೈಕಿ ಕುರುಬ ಸಮುದಾಯವು ಜನಸಂಖ್ಯೆಯ ದೃಷ್ಟಿಯಿಂದ ದೊಡ್ಡದಾಗಿದ್ದು, ಸಾಮಾಜಿಕ ಮತ್ತು ರಾಜಕೀಯವಾಗಿಯೂ ಹೆಚ್ಚಿನ ಶಕ್ತಿಯನ್ನು ಹೊಂದಿದೆ. ಈ ಶಕ್ತಿಗೆ ತಕ್ಕಂತೆ ಸಮುದಾಯದ ಮೇಲೆ ದೊಡ್ಡ ಮಟ್ಟದ ಸಾಮಾಜಿಕ ಹೊಣೆಗಾರಿಕೆಯೂ ಇದೆ. ಪ್ರತಿಯೊಬ್ಬರೂ ಕೇವಲ ತಮ್ಮ ಸ್ವಂತ ಅಥವಾ ಸ್ವ,ಸಮುದಾಯದ ಅಭಿವೃದ್ಧಿಗೆ ಮಾತ್ರ ಸೀಮಿತವಾಗದೆ, ತಮ್ಮ ಸುತ್ತಲಿನ ಎಲ್ಲಾ ಹಿಂದುಳಿದ ಮತ್ತು ಅಹಿಂದ ಸಮುದಾಯಗಳನ್ನು ಜೊತೆಯಲ್ಲಿ ಕೊಂಡೊಯ್ಯುವ ಮೂಲಕ ಸರ್ವಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸಮಾಜದಲ್ಲಿ ನೈಜ ಸಾಮಾಜಿಕ ನ್ಯಾಯವನ್ನು ತರಬೇಕಾದರೆ ಮೊದಲು ಸಮಾಜದ ನೈಜ ಸ್ಥಿತಿಗತಿಗಳ ಸ್ಪಷ್ಟ ಚಿತ್ರಣ ಲಭ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಜಾತಿಗಣತಿ ವರದಿ ಜಾರಿಯಾಗಬೇಕು ಎಂಬುದು ತಮ್ಮ ಸ್ಪಷ್ಟ ನಿಲುವಾಗಿದ್ದು, ಸಾಮಾಜಿಕ ನ್ಯಾಯದ ನೀತಿಗಳನ್ನು ರೂಪಿಸಲು ಪ್ರತಿಯೊಂದು ಸಮುದಾಯದ ನಿಖರ ಜನಸಂಖ್ಯೆ, ಸಮುದಾಯಗಳ ಆರ್ಥಿಕ ಸ್ಥಿತಿಗತಿ ಹಾಗೂ ಶಿಕ್ಷಣದ ಪ್ರಮಾಣ, ಉನ್ನತ ಶಿಕ್ಷಣದಲ್ಲಿ ಹಿಂದುಳಿದ ವರ್ಗಗಳ ಪ್ರವೇಶಾವಕಾಶ, ಸರ್ಕಾರಿ ಉದ್ಯೋಗಗಳಲ್ಲಿ ಸಮುದಾಯಗಳಿಗೆ ದೊರೆತಿರುವ ಪ್ರಾತಿನಿಧ್ಯ, ಶಾಸನಸಭೆ, ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ರಂಗದಲ್ಲಿ ಲಭಿಸಿರುವ ರಾಜಕೀಯ ಅವಕಾಶಗಳ ಬಗ್ಗೆ ತಿಳಿದುಕೊಳ್ಳಲು ಜಾತಿಗಣತಿ ವರದಿಯು ಮುಖ್ಯವಾಗಿದೆ ಎಂದರು.
ಜಾತಿಗಣತಿ ವರದಿಯು ಯಾವುದೇ ನಿರ್ದಿಷ್ಟ ಸಮುದಾಯದ ವಿರುದ್ಧವಾದುದಲ್ಲ. ಎಲ್ಲ ಜಾತಿ, ಸಮುದಾಯಗಳಿಗೂ ಸಮಾನ ಅವಕಾಶ ಮತ್ತು ನ್ಯಾಯ ಸಿಗಬೇಕು ಎಂಬುದಷ್ಟೇ ಇದರ ಮುಖ್ಯ ಉದ್ದೇಶವಾಗಿದೆ. ಅವಕಾಶಗಳ ಹಂಚಿಕೆಯಲ್ಲಿ ಯಾವುದೇ ಸಮುದಾಯವು ಶಾಶ್ವತವಾಗಿ ಹೊರಗುಳಿಯಬಾರದು. ಹಿಂದುಳಿದವರನ್ನು ಮುನ್ನೆಲೆಗೆ ತರಲು ಮತ್ತು ಅವಕಾಶಗಳಿಂದ ವಂಚಿತರಾದವರ ಕೊರತೆಯನ್ನು ಸರಿಪಡಿಸಲು ನಿಖರ ಅಂಕಿ,ಅಂಶಗಳ ಅಗತ್ಯವಿದೆ.
ಆದ್ದರಿಂದ ಜಾತಿಗಣತಿ ವರದಿಯ ವಿವರಗಳು ಬಹಿರಂಗಗೊಂಡು, ಸಾರ್ವಜನಿಕ ಚರ್ಚೆಗೆ ಬರಬೇಕು. ಸಮಾಜದ ಪ್ರತಿಯೊಂದು ವರ್ಗದ ನೈಜ ಸ್ಥಿತಿ ಸಾರ್ವಜನಿಕವಾಗಿ ತಿಳಿಯುವಂತಾಗಬೇಕು. ಆ ಅಂಕಿ,ಅಂಶಗಳ ಆಧಾರದ ಮೇಲೆಯೇ ಸರ್ಕಾರವು ಸಮಗ್ರ ಸಾಮಾಜಿಕ ನ್ಯಾಯದ ಸೂಕ್ತ ನೀತಿ ನಿಯಮಗಳನ್ನು ರೂಪಿಸಲು ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದರು.





