ದಿಲ್ಲಿಯಲ್ಲಿ ಡಿಕೆಶಿ ಪರವಾಗಿ ಲೆಕ್ಕಾಚಾರಗಳು ನಡೀತಿವೆ, ಸಿದ್ದರಾಮಯ್ಯನವರಿಗೆ ರಾಷ್ಟ್ರೀಯ ಪಟ್ಟ ಕಟ್ಟಿ ಸಮಾಧಾನ ಮಾಡ್ತಾರೆ ಅನ್ನೋ ಗುಸುಗುಸು ಕೇಳಿಬರುತ್ತಿದೆ. ಹಾಗೇನಿಲ್ಲ ಇದು ಸುಳ್ಳು ಸುದ್ದಿ ಅಂತ ಕಾಂಗ್ರೆಸ್ ವಕ್ತಾರರು ಹೇಳ್ತಿರ್ತಾರೆ. ಇದೆಲ್ಲವೂ ರಾಜಕೀಯದ ಹಳೇ ನಾಟಕ. ಅಧಿಕೃತವಾಗಿ ಸುಳ್ಳು ಹೇಳೋದು, ಅನಧಿಕೃತವಾಗಿ ವ್ಯವಹಾರ ಮುಗಿಸೋದು!

ಆದರೆ ಸಿದ್ದರಾಮಯ್ಯ ಹೋದ್ರು, ಇನ್ನೊಬ್ಬರು ಬಂದ್ರು ಅಂತ ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಮೆಸೇಜ್ ಓದಿಕೊಂಡು ಖುಷಿ ಪಡುವ ದಡ್ಡರಿಗೆ ಅಸಲಿ ಕಥೆ ಗೊತ್ತಿಲ್ಲ. ಇಲ್ಲಿ ಸಿದ್ದರಾಮಯ್ಯ ಅನ್ನೋ ಒಬ್ಬ ವ್ಯಕ್ತಿಯ ಬದಲಾವಣೆ ಆಗ್ತಿಲ್ಲ ಇಲ್ಲಿ ಬದಲಾಗ್ತಿರೋದು ಕರ್ನಾಟಕದ ಇಡೀ Social Architecture.

ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿರೋದು ಕೇವಲ ಕಾಂಗ್ರೆಸ್ ಹೈಕಮಾಂಡ್ ಅಲ್ಲ. ಅವರು ಡಾ. ರಾಮ್‌ಮನೋಹರ್ ಲೋಹಿಯಾರ ಸಮಾಜವಾದಿ ಗರಡಿಯಲ್ಲಿ ಪಳಗಿ, ರೈತ ಕುಟುಂಬದಿಂದ ಬಂದು, ವಕೀಲಿ ವೃತ್ತಿ ಕಲಿಯುತ್ತಲೇ ಜಾತಿ ಮತ್ತು ವರ್ಗದ ರಾಜಕೀಯವನ್ನು ರಕ್ತಗತ ಮಾಡಿಕೊಂಡವರು. 2006ರಲ್ಲಿ ಜೇಡಿಎಸ್‌ನಿಂದ ಹೊರಬಂದು, ಊರೂರು ಸುತ್ತಿ ಅಹಿಂದ ಸಮಾವೇಶ ಮಾಡಿದಾಗ, ಅದೇನು ಬರೀ ಘೋಷಣೆಯಾಗಿರಲಿಲ್ಲ. ಅದೊಂದು ಮತದಾರರನ್ನು ಒಗ್ಗೂಡಿಸುವ ಮಾಸ್ಟರ್ ಪ್ಲಾನ್. ಅಂಚಿಗೆ ತಳ್ಳಲ್ಪಟ್ಟ ವರ್ಗಗಳನ್ನು ಒಂದೆಡೆ ಸೇರಿಸುವ ಐತಿಹಾಸಿಕ ಪ್ರಾಜೆಕ್ಟ್ ಅದು.

2023ರ ಎಲೆಕ್ಷನ್ ರಿಸಲ್ಟ್ ಸ್ವಲ್ಪ ನೆನಪಿಸಿಕೊಳ್ಳಿ. ಕರ್ನಾಟಕದಲ್ಲಿ ಸುಮಾರು ~73% ವೋಟಿಂಗ್ ಆಗಿತ್ತು. ಕಾಂಗ್ರೆಸ್ 135 ಸೀಟುಗಳನ್ನು ಗೆದ್ದು 42.88% ವೋಟ್ ಶೇರ್ ಪಡೀತು. 1989ರ ನಂತರದ ಅತ್ಯಂತ ದೊಡ್ಡ ಗೆಲುವು. ಅಂದರೆ ಅಹಿಂದ ಬ್ಯಾಂಕ್ ಕೇವಲ ವೇದಿಕೆ ಮೇಲಿನ ಭಾಷಣಕ್ಕೆ ಸೀಮಿತವಾಗದೆ, ಬೂತ್ ಲೆವೆಲ್‌ನಲ್ಲಿ ವೋಟಾಗಿ, ಆಮೇಲೆ ಸೀಟಾಗಿ ಕನ್ವರ್ಟ್ ಆಯ್ತು. ಕಳೆದ ಬಾರಿ ವರುಣಾದಲ್ಲಿ 46,163 ವೋಟುಗಳ ಅಂತರದಿಂದ ಆತ ಗೆದ್ದಿದ್ದು ಕೇವಲ ಪಕ್ಷದ ಹೆಸರಿನಲ್ಲಲ್ಲ.. ಅದು ಸಿದ್ದರಾಮಯ್ಯನವರ ಸ್ವಂತ ವರ್ಚಸ್ಸು.

ಕುರುಬ ಸಮುದಾಯದ ಲೆಕ್ಕಾಚಾರ ನೋಡಿ. ಟೈಮ್ಸ್ ಆಫ್ ಇಂಡಿಯಾ ಅಂದಾಜಿನ ಪ್ರಕಾರ ರಾಜ್ಯದಲ್ಲಿ ~ 9%-10%% ರಷ್ಟಿರುವ ಈ ಸಮುದಾಯಕ್ಕೆ ಸಿದ್ದರಾಮಯ್ಯ ಬರೀ ಸಿಎಂ ಅಲ್ಲ, ಅವರ ಕಣ್ಮಣಿ, ಸಮುದಾಯದ ಮಾಸ್ ಲೀಡರ್. 2023ರಲ್ಲಿ 15 ಎಸ್‌ಟಿ ಮೀಸಲು ಕ್ಷೇತ್ರಗಳ ಪೈಕಿ 14ನ್ನು ಕಾಂಗ್ರೆಸ್ ಗೆದ್ದಿತು. ಇವೆಲ್ಲವೂ ಸಿದ್ದರಾಮಯ್ಯನವರ Perception ecosystem ನಿಂದ ಬಂದ ಲಾಭಗಳು.

ಹಾಗಾದರೆ ಅವರು ಕೆಳಗಿಳಿದರೆ ಏನಾಗುತ್ತೆ?
ಒಂದೇ ದಿನದಲ್ಲಿ ವಿಧಾನಸೌಧ ಕುಸಿದುಬೀಳಲ್ಲ. ಆದರೆ, ಅಹಿಂದ ಮತದಾರರ ಎದೆಯಲ್ಲಿ “ನಮ್ಮವರನ್ನ ಬದಿಗೆ ಸರಿಸಿದ್ರಾ?” ಅನ್ನೋ ಅನುಮಾನದ ಹುಳ ಬಿಟ್ಟಂತಾಗುತ್ತದೆ. ಇದು ತಕ್ಷಣವೇ ವೋಟ್ ಮೇಲೆ ಎಫೆಕ್ಟ್ ಆಗದಿದ್ದರೂ, ಬೂತ್ ಲೆವೆಲ್‌ನಲ್ಲಿ ಕಾರ್ಯಕರ್ತರ ಉತ್ಸಾಹ ಸಾಯುತ್ತದೆ, ವೋಟ್ ಟ್ರಾನ್ಸ್‌ಫರ್ ಆಗುವ ಲೆಕ್ಕಾಚಾರ ತಪ್ಪುತ್ತದೆ.

ಡಿ.ಕೆ. ಶಿವಕುಮಾರ್ ತೂಕವನ್ನು ಇಲ್ಲಿ ಕಡೆಗಣಿಸುವಂತಿಲ್ಲ. ಡಿಕೆಶಿ ಬಳಿ ಟೀಮ್ ಇದೆ, ಹಣದ ಬಲ ಇದೆ, ಒಕ್ಕಲಿಗರ ಸಪೋರ್ಟ್ ಇದೆ. ಆದರೆ ಸಿದ್ದರಾಮಯ್ಯನವರ ಭಾಷೆಯೇ ಬೇರೆ. ಅವರು ಸಾಮಾಜಿಕ ನ್ಯಾಯದ ಪ್ರತಿಪಾದಕರಂತೆ ಗುರುತಿಸಿಕೊಂಡವರು. 15 ಬಜೆಟ್ ಮಂಡಿಸಿದ ಆರ್ಥಿಕ ಅನುಭವ. ಬೀದಿಯಲ್ಲಿ ನಿಂತು ಹೋರಾಡುವ ತಾಕತ್ತೂ ಇದೆ, ಆಡಳಿತ ನಡೆಸುವ ಬುದ್ಧಿವಂತಿಕೆಯೂ ಇದೆ. ಇದು ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಅಪರೂಪದ ಕಾಂಬಿನೇಷನ್.

ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಅದು ಕೇವಲ ಅಧಿಕಾರ ಬದಲಾವಣೆಯಲ್ಲ.. ಅದು ಕರ್ನಾಟಕದ ಸಮಾಜವಾದಿ ಪರಂಪರೆಯಿಂದ, ಸಂಪೂರ್ಣವಾಗಿ ಕಮಾಂಡ್ ಪಾಲಿಟಿಕ್ಸ್ ಕಡೆಗೆ ಆಗುವ ದೊಡ್ಡ ಶಿಫ್ಟ್. ಕರ್ನಾಟಕದಲ್ಲಿ ಎಲ್ಲ ನಾಯಕರೂ ಅಧಿಕಾರ ಸಿಕ್ಕಮೇಲೆ ದೊಡ್ಡವರಾಗಿಲ್ಲ, ಕೆಲವರು ದೊಡ್ಡವರಾದ ಮೇಲೆ ಅಧಿಕಾರಕ್ಕೆ ಬರ್ತಾರೆ. ಸಿದ್ದರಾಮಯ್ಯ ಆ ಕ್ಯಾಟಗರಿ.

ಈಗ ಓಡುತ್ತಿರುವ ಸುದ್ದಿ ನಿಜ ಇರಲಿ, ಸುಳ್ಳಾಗಿರಲಿ. ಆದರೆ ಸಿದ್ದರಾಮಯ್ಯ ಹೋದರೆ ಖಾಲಿಯಾಗೋದು ವಿಧಾನಸೌಧದ ಕುರ್ಚಿ ಅಲ್ಲ, ಕರ್ನಾಟಕದ ರಾಜಕಾರಣದ ಒಂದು ಸಾಮಾಜಿಕ ಭಾಷೆ. ಆ ಖಾಲಿ ಜಾಗವನ್ನು ಯಾರು, ಹೇಗೆ ತುಂಬುತ್ತಾರೆ ಅನ್ನೋದೇ ಮುಂದಿನ ರಾಜಕೀಯದ ಅಸಲಿ ಆಟ.

  • (ಸಿದ್ದು ಮಠಪತಿ)

LEAVE A REPLY

Please enter your comment!
Please enter your name here