ಬೆಂಗಳೂರು: ಡಾ. ಬಿ ಆರ್ ಅಂಬೇಡ್ಕರ್ ಅವರ 135 ನೇ ಹುಟ್ಟು ಹಬ್ಬವನ್ನು ಆಚರಿಸಿದ್ದೇವೆ. ಈ ಸಂದರ್ಭದಲ್ಲಿ ಆರ್ ಎಸ್ ಎಸ್ ಮತ್ತು ಬಿಜೆಪಿಯವರು ತಾವು 1952 ಲೋಕಸಭೆ ಮತ್ತು 1954 ರ ಲೋಕಸಭೆಯ ಉಪಚುನಾವಣೆ (ಮುಂಬೈ ಮತಕ್ಷೇತ್ರ)ಯಲ್ಲಿ ಅಂಬೇಡ್ಕರ್ ಅವರಿಗೆ ಸಹಾಯ ಮಾಡಿರುವುದಾಗಿ ಹೇಳುತ್ತಾ ಬಂದಿರುವ ಕುರಿತು ಇಲ್ಲಿ ಚರ್ಚೆ ಮಾಡುವ ಅಗತ್ಯವಿದೆ. ಅಂಬೇಡ್ಕರ ಅವರು 1952 ರಲ್ಲಿ ಮುಂಬೈ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆ ಆಗಲೂ ತಾವು ನಿರ್ಣಾಯಕ ಪಾತ್ರ ವಹಿಸಿರುವುದಾಗಿ ಹೇಳುತ್ತ ಬಂದಿದ್ದಾರೆ. 2024ರಲ್ಲಿ ತಮಿಳುನಾಡಿನ ಬಿಜೆಪಿಯ ಲೋಕಸಭಾ ಅಭ್ಯರ್ಥಿಯಾಗಿದ್ದ ಅಲ್ಲಿಮುತ್ತು ಮತ್ತು ಕರ್ನಾಟಕ ಬಿಜೆಪಿಯ ಅನೇಕ ಮುಖಂಡರು ಕೂಡ ಇಂತಹ ಹೇಳಿಕೆ ನೀಡಿದ್ದಾರೆ.
ಆದರೆ, ಸ್ವತಃ ಅಂಬೇಡ್ಕರ್ ಅವರೇ ಪತ್ರವೊಂದರಲ್ಲಿ ದಾಖಲಿಸಿರುವಂತೆ ಅಂದಿನ ಹಿಂದೂ ಮಹಾ ಸಭೆಯ ಅಧ್ಯಕ್ಷ ಮತ್ತು ಇಂದು ಬಿಜೆಪಿಯ ಆರಾಧ್ಯ ದೈವ ಸಾವರ್ಕರ್ ಅವರು ಅಂಬೇಡ್ಕರ್ ಅವರ ಸೋಲಿಗೆ ಕಾರಣವಾಗಿದ್ದರು! ಆರ್ ಎಸ್ ಎಸ್, ಹಿಂದು ಮಹಾಸಭಾ ಮತ್ತು ಜನಸಂಘ (ಬಿಜೆಪಿ ಅವರ ಪೂರ್ವಾಶ್ರಮದ ಪಕ್ಷ) ಎಲ್ಲರೂ ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸುತ್ತಿದ್ದ ಅಂಬೇಡ್ಕರ್ ಅವರನ್ನು ನಖಶಿಖಾಂತ ವಿರೋಧಿಸುತ್ತಿದ್ದರು. ಆರ್ ಎಸ್ ಎಸ್ ನವರು ಸಂವಿಧಾನ ಜಾರಿಗೆ ಬಂದ ಮರುವಾರವೇ ತನ್ನ ಮುಖವಾಣಿ ‘ಆರ್ಗನೈಸರ’ ಪತ್ರಿಕೆಯಲ್ಲಿ ಸಂವಿಧಾನವನ್ನು ಕಟುವಾಗಿ ವಿರೋಧಿಸಿ ಸಂಪಾದಕೀಯ ಬರೆದಿದ್ದರು. ಅಂಬೇಡ್ಕರ ಅವರು ನೆಹರು ಸಂಪುಟದಲ್ಲಿ ಕಾನೂನು ಸಚಿವರಾಗಿ ಹಿಂದೂ ಕೋಡ್ ಬಿಲ್ ಜಾರಿಗೆ ತಂದಾಗ ಆರ್ ಎಸ್ ಎಸ್ ನವರು ಸಾರ್ವಜನಿಕವಾಗಿ ಕರಡು ಪ್ರತಿಯನ್ನು ಹರಿದು ಹಾಕಿದ್ದರಲ್ಲದೆ ಅಂಬೇಡ್ಕರ್ ಮತ್ತು ನೆಹರು ಅವರ ಪ್ರತಿಕೃತಿ ಸುಟ್ಟು ಹಾಕಿದ್ದರು.ಹೀಗೆ ಅಂಬೇಡ್ಕರ ಅವರ ವಿರುದ್ಧ ಹಲ್ಲು ಕಡಿಯುತ್ತಿದ್ದ ಈ ಕೋಮುವಾದಿ ಪಕ್ಷ ಮತ್ತು ಸಂಘಟನೆಗಳು 1952 ರ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಬೆಂಬಲಿಸಿದ್ದರು ಎಂದರೆ ನಂಬಲು ಸಾಧ್ಯವೇ?!
ಅಂಬೇಡ್ಕರ ಅವರು 1954 ರಲ್ಲಿ ಮುಂಬೈ ಲೋಕಸಭಾ ಉಪಚುನಾವಣೆಯಲ್ಲೂ ಸ್ಪರ್ಧಿಸಿದ್ದರು. ಈ ವೇಳೆಗಾಗಲೇ ಅವರು ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮ ಸೇರಲು ನಿರ್ಧರಿಸಿಯಾಗಿತ್ತು. ಈ ಕಾರಣಕ್ಕಾಗಿ ಆರ್ ಎಸ್ ಎಸ್ ಮತ್ತು ಹಿಂದೂ ಮಹಾ ಸಭೆಯವರು ಅಂಬೇಡ್ಕರ್ ಅವರನ್ನು ಹಿಗ್ಗಾಮುಗ್ಗಾ ಟೀಕಿಸತೊಡಗಿದ್ದರು.ಆರ್ ಎಸ್ ಎಸ್ ನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಬಿ ಎಸ್ ಮೂಂಜೆಯವರು ಅಂಬೇಡ್ಕರ ಅವರನ್ನು ಹಾವಿಗೆ ಹೋಲಿಸಿದ್ದರು ಮತ್ತು ಹಾವನ್ನು ಬಡಿಯದೇ ಬಿಡಬಾರದು ಎಂದು ಪ್ರತಿಪಾದಿಸಿದ್ದರು! ಇಂತಹವರು ಅಂಬೇಡ್ಕರ ಅವರನ್ನು ಬೆಂಬಲಿಸುತ್ತಾರೆಯೇ?!
ಬಿಜೆಪಿ ಮತ್ತು ಆರೆಸ್ಸೆಸ್ಸಿನ ದಾವೆಗಳನ್ನು ಸಮರ್ಥಿಸಲು ಯಾವುದೇ ಸಮಕಾಲೀನ ದಾಖಲೆಗಳು ಲಭ್ಯವಿಲ್ಲ. ಅವರು ಕೇವಲ ವಾಟ್ಸಾಪ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಸುಳ್ಳು ದಾವೆಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. 1952ರಲ್ಲಿ ಮುಂಬೈ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜನಸಂಘವು ಒಂದೇ ಒಂದು ಸ್ಥಾನವನ್ನು ಗೆಲ್ಲುವಲ್ಲೂ ವಿಫಲವಾಗಿತ್ತು. ಹಾಗಾದರೆ ಜನಸಂಘವು 1952 ರಲ್ಲಿ ಅಂಬೇಡ್ಕರ್ ಅವರು ಮುಂಬೈ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಲು ಅದ್ಹೇಗೆ ಸಹಾಯ ಮಾಡಿತು?!
ಆದರೆ, ಅಂದು ಅಂಬೇಡ್ಕರ್ ಅವರು ರಾಜ್ಯಸಭೆಗೆ ಆಯ್ಕೆಯಾಗಲು ತನು,ಮನ,ಧನದೊಂದಿಗೆ ಸಹಾಯ ಮಾಡಿದವರು ಬೆಳಗಾವಿ ಹುಲಿ ಎಂದೇ ಹೆಸರಾಗಿದ್ದ ವಸಂತ ರಾವ್ ಪಾಟೀಲ ಆಭಾ (ಅಣ್ಣಾ) ಅವರು! ನನಗೆ ಅವರೊಂದಿಗೆ ಒಳ್ಳೆಯ ಒಡನಾಟವಿತ್ತು. ನಾವು ಘಟಪ್ರಭಾದ ಕೆಎಚ್ಆಯ್ ನಲ್ಲಿ ವಾಸಿಸುತ್ತಿದ್ದ ಅವರನ್ನು ಭೇಟಿ ಆಗಲು ಹೋದಾಗ ಅವರು ಅಂಬೇಡ್ಕರ ಅವರೊಂದಿಗೆ ತಮಗಿದ್ದ ಅನ್ಯೋನ್ಯತೆಯನ್ನು ಬಿಡಿ ಬಿಡಿಯಾಗಿ ವಿವರಿಸಿ ಹೇಳುತ್ತಿದ್ದರು. ತಾವು 1952 ರ ರಾಜ್ಯ ಸಭೆ ಚುನಾವಣೆಯಲ್ಲಿ ಅಂಬೇಡ್ಕರ ಅವರಿಗೆ ಕೊಲ್ಹಾಪುರ, ಬೆಳಗಾವಿ, ವಿಜಾಪುರ ಮತ್ತು ಧಾರವಾಡ ಭಾಗದ 20 ಕ್ಕೂ ಮಿಕ್ಕಿ ಶಾಸಕರ ಬೆಂಬಲ ದೊರಕಿಸಿ ಕೊಟ್ಟಿದ್ದಾಗಿ ಹೇಳುತ್ತಿದ್ದರು.
2005 ಅಥವಾ 2006 ರ ಸುಮಾರಿಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜರುಗಿದ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ವಸಂತರಾವ ಪಾಟೀಲ, ಹಿರಿಯ ಕಾಂಗ್ರೆಸ್ ನಾಯಕಿ ಮೋಟಮ್ಮ ಮತ್ತು ನಾನು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದೆವು. ಆ ಸಂದರ್ಭದಲ್ಲಿ ವಸಂತರಾವ ಪಾಟೀಲ ಅವರು ತಾವು ಅಂಬೇಡ್ಕರ ಅವರು ರಾಜ್ಯ ಸಭೆಗೆ ಆಯ್ಕೆಯಾಗಲು ಶ್ರಮಿಸಿದುದನ್ನು ಎಳೆ ಎಳೆಯಾಗಿ ವಿವರಿಸಿದ್ದರು. ಆಗಲೇ ಉಲ್ಲೇಖಿಸಿದ ಜಿಲ್ಲೆಗಳ ಸುಮಾರು 20 ಶಾಸಕರು ತಮ್ಮ ಪ್ರಯತ್ನದಿಂದಾಗಿ ಅಂಬೇಡ್ಕರ ಅವರಿಗೆ ಮತಚಲಾಯಿಸಿದ್ದರು ಎಂದು ಅವರು ಆ ವೇದಿಕೆಯಿಂದ ಘಂಟಾಘೋಷವಾಗಿ ಸಾರಿದ್ದರು.
ಆದರೆ, ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಬಂಡಾಯ ಗಾರನಾಗಿದ್ದ ‘ಬೆಳಗಾವಿ ಹುಲಿ’ ಯ ಸಾಹಸಗಳು ಇತಿಹಾಸದಲ್ಲಿ ದಾಖಲಾಗಲೇ ಇಲ್ಲ. ಹೀಗಾಗಿ ಇಂದು ಸ್ವಯಂ ಘೋಷಿತ ಕಲಿಗಳಾದ ಆರ್ ಎಸ್ ಎಸ್ ಮತ್ತು ಬಿಜೆಪಿ ಅವರು ಇತಿಹಾಸದ ಖಾಲಿ ಪುಟಗಳಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಇತಿಹಾಸ ರಚಿಸುತ್ತಿದ್ದಾರೆ!(ಕೃಪೆ:ಅರವಿಂದ್ ಎಮ್ ದಳವಾಯಿ ಫೇಸ್‌ಬುಕ್)





