ಚಿಕ್ಕೋಡಿ: ನಿಪ್ಪಾಣಿ ಸಮೀಪದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತವಂದಿ ಘಾಟ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಹಾಗೂ ಅವರ ಪುತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ನಿಪ್ಪಾಣಿ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್‌ಕಾನ್‌ಸ್ಟೇಬಲ್ ಪುಂಡಲಿಕ ಆರ್. ಹಟ್ಟಿ (52) ಹಾಗೂ ಅವರ ಪುತ್ರಿ ನಿಖಿತಾ ಪುಂಡಲಿಕ ಹಟ್ಟಿ (24) ಎಂದು ಗುರುತಿಸಲಾಗಿದೆ. ಇವರು ನಿಪ್ಪಾಣಿಯ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದರು.

ಸ್ಪೀಡ್ ಬ್ರೇಕರ್ ಬಳಿ ಕಂಟೇನರ್ ಡಿಕ್ಕಿ

ಮಂಗಳವಾರ (ಅ. 14) ಸಂಜೆ ಸುಮಾರು 6.30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಮೂಲತಃ ಹುಕ್ಕೇರಿ ತಾಲೂಕಿನ ಉಳಗಡ್ಡಿ ಖಾನಾಪುರ ಗ್ರಾಮದವರಾದ ಪುಂಡಲಿಕ ಹಟ್ಟಿ ಅವರು ತಮ್ಮ ಪುತ್ರಿ ನಿಖಿತಾಳನ್ನು ದ್ವಿಚಕ್ರ ವಾಹನದಲ್ಲಿ ಸ್ವಗ್ರಾಮಕ್ಕೆ ಕರೆದೊಯ್ದು, ಅಲ್ಲಿಂದ ನಿಪ್ಪಾಣಿಗೆ ಹಿಂದಿರುಗುತ್ತಿದ್ದರು.

ಈ ವೇಳೆ ತವಂದಿ ಘಾಟ್‌ನ ರಸ್ತೆಯಲ್ಲಿನ ಸ್ಪೀಡ್ ಬ್ರೇಕರ್ ಬಳಿ ಹಿಂದಿನಿಂದ ವೇಗವಾಗಿ ಬಂದ ಕಂಟೇನರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತಂದೆ-ಮಗಳು ರಸ್ತೆಗೆ ಬಿದ್ದಿದ್ದು, ಕಂಟೇನರ್ ಚಕ್ರಗಳ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಸಿಎ ಕೋರ್ಸ್ ಪೂರ್ಣಗೊಳಿಸುವ ಹಂತದಲ್ಲಿದ್ದ ನಿಖಿತಾ

ಮೃತ ನಿಖಿತಾ ಅವರು ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಕೋರ್ಸ್ ಪೂರ್ಣಗೊಳಿಸುವ ಹಂತದಲ್ಲಿದ್ದರು ಎಂದು ತಿಳಿದುಬಂದಿದೆ. ಉಜ್ವಲ ಭವಿಷ್ಯದ ಕನಸು ಕಂಡಿದ್ದ ಯುವತಿ ಹಾಗೂ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯ ಸಾವು ಕುಟುಂಬಸ್ಥರಿಗೆ ತೀವ್ರ ಆಘಾತವನ್ನುಂಟುಮಾಡಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ನಿಪ್ಪಾಣಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸಹೋದ್ಯೋಗಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಪುತ್ರಿಯ ಸಾವಿನ ಸುದ್ದಿ ತಿಳಿದು ಪೊಲೀಸ್ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಹೆಡ್‌ಕಾನ್‌ಸ್ಟೇಬಲ್ ಪುಂಡಲಿಕ ಹಟ್ಟಿ ಅವರು ಪತ್ನಿ ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ. ಒಂದೇ ಅಪಘಾತದಲ್ಲಿ ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡಿರುವ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿದೆ.

LEAVE A REPLY

Please enter your comment!
Please enter your name here