ಚಿಕ್ಕೋಡಿ: ಪತ್ನಿಯ ಮರಣದ ಸುದ್ದಿ ಕೇಳಿ ತೀವ್ರ ಮನನೊಂದ ಪತಿಯೂ ಕೇವಲ ಒಂದುವರೆ ಗಂಟೆಯ ಅಂತರದಲ್ಲಿ ಪ್ರಾಣ ಬಿಟ್ಟಿರುವ ಅತ್ಯಂತ ಶೋಕದಾಯಕ ಘಟನೆ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ನಿವಾಸಿಗಳಾದ ಸುಶೀಲಾ ಸುಭಾಷ ಸಾತ್ವರ (65) ಹಾಗೂ ಸುಭಾಷ ಸಿದಲಿಂಗ ಸಾತ್ವರ (72) ಸಾವಿನಲ್ಲೂ ಒಂದಾದ ದುರ್ದೈವಿ ದಂಪತಿ.

ರಕ್ತದೊತ್ತಡ (ಬಿಪಿ) ಕಡಿಮೆಯಾಗಿದ್ದರಿಂದ ಸುಶೀಲಾ ಅವರನ್ನು ಚಿಕ್ಕೋಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮತ್ತೊಂದೆಡೆ ಅನಾರೋಗ್ಯದಿಂದ ಬಳಲುತ್ತಿದ್ದ ಪತಿ ಸುಭಾಷ ಅವರನ್ನೂ ಕೂಡ ಗುರುವಾರ ಅದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಶೀಲಾ ಅವರು ಗುರುವಾರ ರಾತ್ರಿ 8 ಗಂಟೆಗೆ ಕೊನೆಯುಸಿರೆಳೆದರು. ಪತ್ನಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಪತಿ ಸುಭಾಷ ಅವರಿಗೆ ತೀವ್ರ ಆಘಾತವಾಯಿತು. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಜೊತೆಯಾಗಿ ಬಾಳಿದ್ದ ಪತ್ನಿಯ ಅಗಲಿಕೆಯ ದುಃಖವನ್ನು ತಾಳಲಾರದೆ ಸುಭಾಷ ಅವರು ಕೂಡ ರಾತ್ರಿ 9.30ರ ಸುಮಾರಿಗೆ ಕೊನೆಯುಸಿರೆಳೆದರು.

ಅನ್ನ-ನೀರು, ಸುಖ-ದುಃಖ ಹಂಚಿಕೊಂಡು ಬಾಳಿದ ದಂಪತಿ ಒಂದೇ ಆಸ್ಪತ್ರೆಯಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ಇಹಲೋಕ ತ್ಯಜಿಸಿದ್ದು ಕುಟುಂಬಸ್ಥರು ಹಾಗೂ ಯಕ್ಸಂಬಾ ಪಟ್ಟಣದ ನಿವಾಸಿಗಳಲ್ಲಿ ತೀವ್ರ ಕಂಬನಿ ತರಿಸಿದೆ. ಮೃತರು ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here