ಲಿಂಗಸೂಗೂರು: ಹಜರತ್ ಮೊಹಮ್ಮದ್ ಪೈಗಂಬರ್ (ಸ) ಅವರ ಪವಿತ್ರ ಜನ್ಮದಿನದ ಪ್ರಯುಕ್ತ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರು ತಾಲೂಕು ಕಮಿಟಿ ವತಿಯಿಂದ ಲಿಂಗಸೂಗೂರು ಪಟ್ಟಣದ ಸಹಬಾ ಮಸ್ಜಿದ್‌ನ ಮಕ್ತಬ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬ್ಯಾಗ್, ಬೂಟು, ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವುದು ಹಾಗೂ ಶಿಕ್ಷಣದ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಮಕ್ತಬ್‌ನ ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರು ತಾಲೂಕು ಕಮಿಟಿಯ ಅಧ್ಯಕ್ಷರಾದ ಹುಸೇನ್ ಭಾಷಾ ಅವರು, “ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಕ್ತಬ್ ಶಿಕ್ಷಣದ ಜೊತೆಗೆ ಶಾಲಾ ಶಿಕ್ಷಣಕ್ಕೂ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಬೇಕು. ಆರ್ಥಿಕವಾಗಿ ಅಥವಾ ಶೈಕ್ಷಣಿಕವಾಗಿ ಯಾವುದೇ ವಿದ್ಯಾರ್ಥಿಗೂ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ ಅಂಜುಮನ್ ಕಮಿಟಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿಯೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಾದ ಸಹಕಾರವನ್ನು ನೀಡಲು ಕಮಿಟಿ ಸದಾ ಸಿದ್ಧವಾಗಿದೆ” ಎಂದು ಹೇಳಿದರು.

ಮುಂದುವರಿದು ಅವರು, “ಇಂದಿನ ಮಕ್ಕಳು ನಾಳಿನ ಸಮಾಜದ ಭವಿಷ್ಯವಾಗಿದ್ದು, ಅವರ ಶಿಕ್ಷಣ ಮತ್ತು ಉತ್ತಮ ಭವಿಷ್ಯಕ್ಕಾಗಿ ಸಮುದಾಯದ ಹಿರಿಯರು ಹಾಗೂ ಸಂಘ-ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು. ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಶಿಸ್ತು ಹಾಗೂ ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸುವುದು ಅಗತ್ಯವಾಗಿದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲಿಂಗಸೂಗೂರು ಪಟ್ಟಣದ ಸಹಬಾ ಮಸ್ಜಿದ್ ಕಮಿಟಿಯ ಖಜಾಂಚಿ ಇಮಾಮ್ ಸಾಬ್, ಹಾಫಿಜ್ ಸಮೀರ್ ಸಾಬ್, ಹಾಫಿಜ್ ಚಾಂದ್ ಪಾಷಾ ಸಾಬ್, ಗುಲ್ಲು ಮಾಮು, ಇಕ್ಬಾಲ್ ಮೌಜ್ಜನ್ ಸಾಬ್, ಅಮೀನುದ್ದಿನ್ ರೆಡಿಯಟರ್, ಅಬ್ದುಲ್, ಇಮ್ತಿಯಾಜ್, ದಾದಾಪೀರ್, ಜಾವೀದ್ ಸೇರಿದಂತೆ 5ನೇ ವಾರ್ಡಿನ ಗುರುಹಿರಿಯರು ಹಾಗೂ ಸಹೋದರರು ಉಪಸ್ಥಿತರಿದ್ದರು.

ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರು ತಾಲೂಕು ಕಮಿಟಿಯ ಗೌರವ ಅಧ್ಯಕ್ಷರಾದ ಅನ್ಸರುದ್ದಿನ್, ಅಧ್ಯಕ್ಷರಾದ ಹುಸೇನ್ ಭಾಷಾ, ಉಪಾಧ್ಯಕ್ಷರಾದ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಸಲೀಂ ಪಾಷಾ ಕಾರ್ಪೆಂಟರ್, ವಸೀಂ ಪಾಷಾ, ಕಲೀಂ ಭಾಯಿ, ಅಮೀನುದ್ದಿನ್ ಟೈಲರ್, ರೋಹಿತ್ ಭಾಯಿ, ಪಾಪು, ವಸೀಂ ಅಕ್ರಂ, ಶೇಖ್ ಅಲಿ, ನಸೀಮ್, ಅಲ್ಲಾಬಕ್ಷ, ಉಬೆದ್ ಚೌದ್ರಿ, ಆರೀಫ್, ಆಸೀಫ್, ಆದಿಲ್, ಉಮರ್, ಸದ್ದಾಂ, ಅಬ್ಬಾಸ್, ಅಜ್ಮಿರ್, ಕೈಫ್ ಮೊಹಮ್ಮದ್ ಸೇರಿದಂತೆ ಕಮಿಟಿಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಅಗತ್ಯ ಸಹಕಾರ ನೀಡುವ ಮೂಲಕ ಸಮುದಾಯದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರು ತಾಲೂಕು ಕಮಿಟಿಯ ಪ್ರಮುಖ ಸಾಮಾಜಿಕ ಕಾಳಜಿಗಳಲ್ಲಿ ಒಂದಾಗಿದೆ ಎಂದು ಕಮಿಟಿಯ ಪದಾಧಿಕಾರಿಗಳು ತಿಳಿಸಿದರು.

LEAVE A REPLY

Please enter your comment!
Please enter your name here