– ವಿಶೇಷ-
ಹಿರಿಯ ಕಾಂಗ್ರೆಸ್ಸಿಗರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ಬಳಿಕ ಅತ್ಯಾಪ್ತ ಬಳಗದ ಒಬ್ಬೊಬ್ಬರೆ ಅವರಿಂದ ದೂರ ಸರಿಯುತ್ತಿರುವ ಹೊತ್ತಲ್ಲಿ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಕೂಡ ಅಂತವರ ಸಾಲಿಗೆ ಸೇರಿದರಾ ಎನ್ನುವ ಯಕ್ಷಪ್ರಶ್ನೆ ಬಾಗಲಕೋಟೆ ಜಿಲ್ಲಾ ರಾಜಕಾರಣದಲ್ಲಿ ಹುಟ್ಟಿಕೊಂಡಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುವ ಸುಳಿವು ಸಿಕ್ಕುತ್ತಿದ್ದಂತೆ ಅತ್ಯಾಪ್ತ ಬಳಗದಿಂದ
ಸಚಿವ ಸತೀಶ ಜಾರಕಿಹೊಳಿ, ಎಚ್.ಸಿ. ಮಹಾದೇವಪ್ಪ, ಜಮೀರ್ ಅಹ್ಮದ ದೂರವಾದರು ಎನ್ನುವುದು ಬಹಿರಂಗ ಗುಟ್ಟು.
ಇವರ ಸಾಲಿಗೆ ಈಗ ಭೀಮಸೇನ ಚಿಮ್ಮನಕಟ್ಟಿ ಕೂಡ ಸೇರಿದ್ರಾ ಎನ್ನುವ ವಿಷಯ ಜಿಲ್ಲಾ ಕಾಂಗ್ರೆಸ್ ಪಾಳೆಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಮಾಜಿ ಆದ ಬಳಿಕ ಮೊದಲ ಭೇಟಿ:
ಬಾದಾಮಿ ಶಾಸಕ ಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯ ಅವರ ಬಳಗದಿಂದ ದೂರ ಸರಿದಿದ್ದಾರೆ ಎನ್ನುವ ಸುದ್ದಿಗೆ ಇಂದಿನ ರಾಜಕೀಯ ಬೆಳವಣಿಗಳು ಪುಷ್ಠಿ ನೀಡುತ್ತಿವೆ. ಬಾದಾಮಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ವಲಯದಲ್ಲಿ ಶಾಸಕರ ವಿರೋಧಿ ಗುಂಪೊಂದು ಇದೆ. ಇದನ್ನು ಸಿದ್ದರಾಮಯ್ಯನವರ ಗುಂಪು ಎಂದೇ ಕರೆಯಲಾಗುತ್ತಿದೆ. ಈ ಗುಂಪನ್ನು ಚಿಮ್ಮನಕಟ್ಟಿ ಅವರು ದೂರವೇ ಇಟ್ಟು ರಾಜಕಾರಣ ಮಾಡುತ್ತಿರುವುದು ಹೊಸ ವಿಷಯವೆನಲ್ಲ. ಅದು ಸಿದ್ದರಾಮಯ್ಯ ಅವರಿಗೂ ಗೊತ್ತಿರದ ಸಂಗತಿ ಅಲ್ಲ. ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ವಿರೋಧಿ ಗುಂಪಿನ ಮುಖಂಡರ ಸಹಕಾರಿ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮ ಶನಿವಾರ ಆಯೋಜನೆ ಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಆಗಮಿಸಿದ್ದರು. ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ಬಳಿಕ ಬಾದಾಮಿಗೆ ನೀಡಿದ ಮೊದಲ ಭೇಟಿ ಇದಾಗಿತ್ತು. ಈ ಭೇಟಿಯ ವೇಳೆ ಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯನವರೊಂದಿಗೆ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಅನೇಕ ಊಹಾಪೋಹಗಳು ಹುಟ್ಟಿಕೊಂಡಿವೆ.
ಹಾದಿಲೇ ನಡೆಯಿತು ಸನ್ಮಾನ:
ತಮ್ಮ ರಾಜಕೀಯ ವಿರೋಧಿ ಗುಂಪಿನ ಮುಖಂಡರು ಆಯೋಜನೆ ಮಾಡಿರುವ ಕಾರ್ಯಕ್ರಮ ಎನ್ನುವ ಕಾರಣದಿಂದ ಅವರು ಬಹುಶಃ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ ಎಂದು ಹೇಳಲಾಗುತ್ತಿದೆ. ಕ್ಷೇತ್ರಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಹೆಲಿಕಾಪ್ಟರ್ ಲ್ಯಾಂಡಿಂಗ್ ಸ್ಥಳಕ್ಕಾದರೂ ಬರಬಹುದು ಎನ್ನುವುದು ಬಹುತೇಕರ ನಿರೀಕ್ಷೆ ಆಗಿತ್ತು. ಆದರೆ ಅವರು ಅಲ್ಲಿಗೂ ಬಾರದೆ ಇರುವುದರಿಂದ ಊಹಾಪೋಹಗಳಿಗೆ ರೆಕ್ಕೆಪುಕ್ಕಗಳು ಮೂಡಿಕೊಂಡಿವೆ. ವಾಸ್ತವವಾಗಿ ಚಿಮ್ಮನಕಟ್ಟಿ ಅವರು ಕಾರ್ಯ ಬಾಹುಳ್ಯದ ಕಾರಣದಿಂದಾಗಿ ಬಾದಾಮಿ ಮುಖ್ಯ ರಸ್ತೆ ಬಳಿಯ ದೇವಸ್ಥಾನ ಹತ್ತಿರ ಅವರನ್ನು ಸ್ವಾಗತಿಸಿ, ಗೌರವಿಸಿ ಅಲ್ಲಿಂದ ತಮ್ಮ ಕಾರ್ಯಕ್ಕೆ ತೆರಳಿದ್ದಾರೆ.
ರೋಚಕ ಇತಿಹಾಸ:
ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಇಲ್ಲದ ಕಾರ್ಯ ಅದೆಂತಹದ್ದು ಎನ್ನುವುದಿದ್ದಿರಬೇಕು ಎನ್ನುವುದು ಈಗ ಪ್ರಶ್ನೆಯಾಗಿದೆ. ಈ ಪ್ರಶ್ನೆಯ ಹಿಂದೆ ರೋಚಕ ರಾಜಕೀಯ ಇತಿಹಾಸವಿದೆ.
2018 ರ ವಿಧಾನಸಭೆ ಚುನಾವಣೆ ವೇಳೆ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರಾದರೂ ಗೆಲುವಿನ ಸಂಶಯ ಅವರನ್ನು ಕಾಡತೊಡಗಿದಾಗ ಅವರು ಮತ್ತೊಂದು ಕ್ಷೇತ್ರವಾಗಿ ಬಾದಾಮಿಯನ್ನು ಆಯ್ದುಕೊಂಡು
ನಾಮಪತ್ರ ಸಲ್ಲಿಕೆ ಕೊನೆ ಗಳಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದ್ದರು. ಆಗ ಬಾದಾಮಿ ಕ್ಷೇತ್ರದ ಶಾಸಕ ಬಿ.ಬಿ. ಚಿಮ್ಮನಕಟ್ಟಿ
ಸ್ಪರ್ಧೆಯಿಂದ ಹಿಂದೆ ಸರಿದು ಸಿದ್ದರಾಮಯ್ಯನವರಿಗೆ ಬೆಂಬಲವಾಗಿ ನಿಂತು ಅವರು ಆಯ್ಕೆ ಆಗುವಂತೆ ನೋಡಿಕೊಂಡರು ಎನ್ನುವುದು ಸುಳ್ಳಲ್ಲ. ಸಿದ್ದರಾಮಯ್ಯ ಬಾದಾಮಿ ಶಾಸಕರಾದ ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತಾದರೂ ದಿನಗಳು ಗತಿಸಿದಂತೆ ಉಭಯತರ ನಡುವೆ ಅಷ್ಟೆ ಅಲ್ಲ ಜಿಲ್ಲೆಯ ಕೆಲ ಪ್ರಮುಖರೊಂದಿಗೆ ಅಭಿಪ್ರಾಯ ಬೇಧಗಳು ಕಾಣಿಸಿಕೊಂಡು ಬಳಿಕ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ಆಗ ಜಿಲ್ಲೆಯ ಕೆಲವರ ರಾಜಕೀಯ ಮಸಕಾಗಲು ಶುರುವಾಗಿ, ರಾಜಕೀಯ ನೇಪಥ್ಯಕ್ಕೆ ಸರಿಯುವಂತೆ ಮಾಡಿತು ಎನ್ನುವುದು ಈಗ ಇತಿಹಾಸ.
ಕ್ಷೇತ್ರ ಬಿಡಲು ಎಚ್ಚರಿಕೆ:
ಇಂತಹ ಸನ್ನಿವೇಶದಲ್ಲೆ ಬಾದಾಮಿ ಕ್ಷೇತ್ರದಲ್ಲಿ
ಸಿದ್ದರಾಮಯ್ಯನವರ ಬೆಂಬಲಿಗರ ಬಣ ಹುಟ್ಟಿಕೊಂಡಿತು. ಚಿಮ್ಮನಕಟ್ಟಿ ಅವರ ವಿರುದ್ಧ ಸವಾಲಾಗಿ ನಿಂತಿತು. ಇದನ್ನು ಸಹಿಸಲಾಗದ ಅವರು ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಮಾವೇಶದಲ್ಲಿ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ಬಂಡಾಯದ ಕಹಳೆ ಮೊಳಗಿಸಿದರು. ಆಗಲೇ ಸಿದ್ದರಾಮಯ್ಯನವರು ಕೂಡ ಕ್ಷೇತ್ರ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದರು ಎನ್ನುವ ಮಾತು ಈಗಲೂ ಜನಜನಿತವಾಗಿದೆ. ಅಲ್ಲಿಂದ ಆರಂಭಗೊಂಡ ಭಿನ್ನಮತ ಆಗಾಗ್ಗೆ ಕಾಣಿಸಿಕೊಳ್ಳುತ್ತಲೇ ಬಹುದೊಡ್ಡ ಕಂದಕವಾಗಿ ಮಾರ್ಪಟ್ಟಿತು.
ಬೆನ್ನಿಗೆ ನಿಂತ್ರಾ ಡಿಕೆಶಿ:
ಏತನ್ಮಧ್ಯೆ ರಾಜಕೀಯ ಆಂತರ್ಯದಲ್ಲಿ ಮಾಜಿ ಸಚಿವ ಚಿಮ್ಮನಕಟ್ಟಿ ಅವರು ಅಂದಿನ ಕೆಪಿಸಿಸಿ ಅಧ್ಯಕ್ಷ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೊಂದಿಗೆ ನಿಂತಾಗಿತ್ತು ಎನ್ನುವ ಗುಸುಗುಸು ಸುದ್ದಿ ರಾಜಕೀಯ ಪಡಸಾಲೆ ಇದ್ದೆ ಇತ್ತು. 2023 ರ ವಿಧಾನಸಭೆ ಚುನಾವಣೆ ವೇಳೆ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದು ವರುಣಾ ಆಯ್ದುಕೊಂಡಾಗ ಬಾದಾಮಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿ ಚಿಮ್ಮನಕಟ್ಟಿ ಅವರ ಪುತ್ರ, ಹಾಲಿ ಶಾಸಕ ಭೀಮಸೇನ ಆಯ್ಕೆಗೊಂಡಿದ್ದರು. ಇದರ ಹಿಂದೆ ಆಗಿನ ಕೆಪಿಸಿಸಿ ಅಧ್ಯಕ್ಷರ ಕೈಚಳಕ ಕೂಡ ಅಡಗಿತ್ತು ಎನ್ನುವ ಮಾತಿದೆ.
ಸಿದ್ದುಗುಂಪು ಇಂದಿಗೂ ಸಕ್ರೀಯ:
ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದ ಶಾಸಕರಾಗಿದ್ದಾಗ ಹುಟ್ಟಿಕೊಂಡಿರುವ ಅವರ ಬೆಂಬಲಿಗರ ಗುಂಪು ಇಂದಿಗೂ ರಾಜಕೀಯದಲ್ಲಿ ಸಕ್ರೀಯವಾಗಿದೆ. ಆದರೆ ಆ ಗುಂಪನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ದೂರವಿಟ್ಟು ಕ್ಷೇತ್ರ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ
ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಪರಿಣಾಮ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ ಈಗ ಮುಖ್ಯಮಂತ್ರಿ ಆಗಿದ್ದಾರೆ.
ಸಿದ್ದು ಪಟಾಲಂ ಹಾಜರ್:
ಈಗ ಮಾಜಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರ ಜನತಾ ಪರಿವಾರ ಗೆಳೆಯ ಮುಚಖಂಡಯ್ಯ ಹಂಗರಗಿ ಅವರ ನೇತೃತ್ವದ ಸಹಕಾರಿ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮ ಶನಿವಾರ ಆಯೋಜನೆಗೊಂಡಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಆಗಮಿಸಿದ್ದರು. ಈ ವೇಳೆ ಸಿದ್ದರಾಮಯ್ಯನವರ ಆಪ್ತ ಬಳಗದ ಶಾಸಕರಾದ ಆರ್.ಬಿ. ತಿಮ್ಮಾಪುರ, ಶಾಸಕರಾದ ಉಮೇಶ ಮೇಟಿ, ಜೆ. ಟಿ
ಪಾಟೀಲ. ಮಾಜಿ ಸಚಿವ ಅಜಯಕುಮಾರ ಸರನಾಯಕ ಮೊದಲಾದವರು ಸಿದ್ದರಾಮಯ್ಯ ಅವರ ಜತೆ ಕಾಣಿಸಿಕೊಂಡಾಗ ಸ್ಥಳೀಯ ಶಾಸಕರು ಕಾಣಿಸದೇ ಹೋಗಿದ್ದು ಸಹಜವಾಗಿಯೇ ಚರ್ಚೆಗೆ ಗ್ರಾಸವಾಗಿದೆ. ಇದು ಹಲವು ರೂಪಗಳನ್ನು ಪಡೆದುಕೊಂಡ ಹಿನ್ನೆಲೆಯಲ್ಲಿ ಬಾದಾಮಿ ಶಾಸಕರೂ ಕೂಡ ಸಿದ್ದರಾಮಯ್ಯನವರ ಅತ್ಯಾಪ್ತರು ದೂರಾದಂತೆ ದೂರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕ್ಯಾಂಪಿಗೆ ಸೇರಿಕೊಂಡರೋ ಹೇಗೆ ಎನ್ನುವ ಚರ್ಚೆ ಮುನ್ನೆಲೆಗೆ ಬರಲು ಪ್ರಮುಖ ಕಾರಣವಾಗಿದೆ.
- (ವರದಿ:ವಿಠ್ಠಲ ಆರ್. ಬಲಕುಂದಿ)





