ಬೆಂಗಳೂರು:ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ದೇಶದ ಅತಿಸಾಂದ್ರತೆ ಇರುವ 7 ಪ್ರಮುಖ ರೈಲ್ವೆ ಮಾರ್ಗಗಳನ್ನು ಚತುಷ್ಪಥ ಮಾರ್ಗಗಳನ್ನಾಗಿ ಪರಿವರ್ತಿಸುವ ಬೃಹತ್ ಯೋಜನೆಯನ್ನು ಪ್ರಕಟಿಸಿದ್ದಾರೆ. ೧),ದೆಹಲಿ – ಹೌರಾ, ೨),ಹೌರಾ – ಚೆನ್ನೈ, ೩),ಚೆನ್ನೈ – ಮುಂಬೈ, ೪),ಮುಂಬೈ – ದೆಹಲಿ, ೫),ದೆಹಲಿ – ಚೆನ್ನೈ, ೬),ಮುಂಬೈ – ಹೌರಾ,೭),ದೆಹಲಿ – ಗುವಾಹಟಿ.ಇವು ಏಳು( 7 )ರೈಲ್ವೆ ಮಾರ್ಗಗಳಾಗಿವೆ.ದೇಶದ ರೈಲ್ವೆ ಮೂಲಸೌಕರ್ಯವನ್ನು ಬಲಪಡಿಸುವ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ, ಈ ಮಹತ್ವದ ಯೋಜನೆಯಲ್ಲಿ ಕರ್ನಾಟಕದ ಮೂಲಕ ಹಾದುಹೋಗುವ ಒಂದೇ ಒಂದು ಮಾರ್ಗವೂ ಇಲ್ಲದಿರುವುದು ಅತ್ಯಂತ ಖಂಡನೀಯ.

ರಾಜ್ಯದಿಂದ ಆಯ್ಕೆಯಾದ ಶ್ರೀ ವಿ. ಸೋಮಣ್ಣನವರು ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ 20ಕ್ಕೂ ಹೆಚ್ಚು ಲೋಕಸಭಾ ಸದಸ್ಯರಿದ್ದಾರೆ. ಆದರೂ ಕರ್ನಾಟಕದ ರೈಲ್ವೆ ಹಕ್ಕುಗಳಿಗೆ ಈ ನಿರ್ಲಕ್ಷ್ಯ ಏಕೆ?ದಕ್ಷಿಣ ಭಾರತದಲ್ಲೇ ರೈಲ್ವೆ ಯೋಜನೆಗಳ ವಿಚಾರದಲ್ಲಿ ಕರ್ನಾಟಕಕ್ಕೆ ಪದೇಪದೇ ಅನ್ಯಾಯವಾಗುತ್ತಿರುವುದು ಏಕೆ? ರಾಜ್ಯ ಸರ್ಕಾರ 50:50 ವೆಚ್ಚ ಹಂಚಿಕೆಯ ಆಧಾರದಲ್ಲಿ ಸಹಕಾರ ನೀಡಲು ಸಿದ್ಧವಿದ್ದರೂ, ಕರ್ನಾಟಕದ ಬೇಡಿಕೆಗಳಿಗೆ ಕೇಂದ್ರದ ಸ್ಪಂದನೆ ನಿರೀಕ್ಷಿತ ಮಟ್ಟದಲ್ಲಿಲ್ಲ.ತುಮಕೂರು–ದಾವಣಗೆರೆ ಏಕಪಥ ರೈಲು ಮಾರ್ಗವನ್ನು ಜೋಡಿಹಳಿಯನ್ನಾಗಿ ಮಾಡುವಂತೆ ಪದೇಪದೇ ಮನವಿ ಮಾಡಿದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ.ಹೈಸ್ಪೀಡ್ ರೈಲು ಯೋಜನೆಗಳಲ್ಲಿಯೂ ಕರ್ನಾಟಕಕ್ಕೆ ನಿರೀಕ್ಷಿತ ಆದ್ಯತೆ ದೊರೆತಿಲ್ಲ.

ಕರ್ನಾಟಕದ ಕೈಗಾರಿಕಾ, ಕೃಷಿ ಹಾಗೂ ಆರ್ಥಿಕ ಸಾಮರ್ಥ್ಯವನ್ನು ಗಮನಿಸಿದರೆ, ಬೆಂಗಳೂರು–ವಿಜಯಪುರ, ಬೆಂಗಳೂರು–ಹೊಸಪೇಟೆ, ಬೆಂಗಳೂರು–ಹುಬ್ಬಳ್ಳಿ, ಬೆಂಗಳೂರು–ಶಿವಮೊಗ್ಗ, ಬೆಂಗಳೂರು–ಕಲಬುರಗಿ, ಬೆಂಗಳೂರು–ಚೆನ್ನೈ ಹಾಗೂ ಬೆಂಗಳೂರು–ಮಂಗಳೂರು ಪ್ರಮುಖ ರೈಲ್ವೆ ಮಾರ್ಗಗಳನ್ನು ಹಂತ ಹಂತವಾಗಿ ಚತುಷ್ಪಥಗೊಳಿಸುವುದು ಅತ್ಯಗತ್ಯ.ನಮ್ಮ ರೈತರು ಬೆಳೆಯುವ ದ್ರಾಕ್ಷಿ, ದಾಳಿಂಬೆ, ನಿಂಬೆ, ಕಾಫಿ, ಮೆಣಸು, ಏಲಕ್ಕಿ, ತೊಗರಿ ಸೇರಿದಂತೆ ಕೃಷಿ ಉತ್ಪನ್ನಗಳು ದೇಶದ ವಿವಿಧ ಮಾರುಕಟ್ಟೆಗಳಿಗೆ ವೇಗವಾಗಿ, ಕಡಿಮೆ ವೆಚ್ಚದಲ್ಲಿ ತಲುಪಬೇಕು. ಕೈಗಾರಿಕೆಗಳಿಗೆ ಕಚ್ಚಾ ವಸ್ತು ಮತ್ತು ಸಿದ್ಧ ಉತ್ಪನ್ನಗಳ ಸಾಗಣೆ ಸುಗಮವಾಗಬೇಕು. ಸರಕು ಸಾಗಣೆ ಹೆಚ್ಚಿದಂತೆ ರೈಲ್ವೆಯ ಆದಾಯವೂ ಹೆಚ್ಚಬೇಕು; ರಾಜ್ಯದ ಆರ್ಥಿಕತೆಯೂ ಮತ್ತಷ್ಟು ವೇಗ ಪಡೆಯಬೇಕು.ಇಂದು ಬೆಂಗಳೂರು ದೇಶದ ಆರ್ಥಿಕ ಚಟುವಟಿಕೆ, ವಿಜ್ಞಾನ–ತಂತ್ರಜ್ಞಾನ, R&D, ಬಂಡವಾಳ ಹೂಡಿಕೆ ಮತ್ತು ಅಪತ್ರತ್ಯಾಧುನಿಕ ತಯಾರಿಕಾ ವಲಯದ ಪ್ರಮುಖ ಕೇಂದ್ರವಾಗಿದೆ. ಕರ್ನಾಟಕ ದೇಶದ ಮುಂಚೂಣಿ ಕೈಗಾರಿಕಾ ರಾಜ್ಯ.ಇಂತಹ ರಾಜ್ಯಕ್ಕೆ ವಿಶ್ವದರ್ಜೆಯ ರೈಲ್ವೆ ಮೂಲಸೌಕರ್ಯ ನೀಡುವುದು ಕೇಂದ್ರದ ಕರ್ತವ್ಯವೂ ಹೌದು, ದೇಶದ ಆರ್ಥಿಕ ಹಿತಾಸಕ್ತಿಯೂ ಹೌದು.ಕರ್ನಾಟಕ ಯಾರ ಬಳಿಯೂ ವಿಶೇಷ ಸವಲತ್ತು ಕೇಳುತ್ತಿಲ್ಲ; ನಮಗೆ ಸಲ್ಲಬೇಕಾದ ನ್ಯಾಯಯುತ ಪಾಲನ್ನು ಮಾತ್ರ ಕೇಳುತ್ತಿದ್ದೇವೆ.ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಇಲಾಖೆಯ ಸಹಾಯಕ ಸಚಿವ ಶ್ರೀ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಕರ್ನಾಟಕದ ರೈಲ್ವೆ ಯೋಜನೆಗಳ ಕುರಿತು ಸ್ಪಷ್ಟವಾಗಿ ಧ್ವನಿ ಎತ್ತಲಾಗುವುದು ಎಂದು ಬೃಹತ್ ಕೈಗಾರಿಕೆ ಮತ್ತು ಮೂಲ ಸಾಕರ್ಯಾಭಿವೃದ್ಧಿಸಚಿವರಾದ ಶ್ರೀ ಎಂ.ಬಿ.ಪಾಟೀಲರು ಸುದ್ದಿ ಘೋಷ್ಟಿಯಲ್ಲಿ ತಿಳಿಸಿದ್ದಾರೆ.

.

LEAVE A REPLY

Please enter your comment!
Please enter your name here