ಅಧಿಕಾರ, ಕಾನೂನು, ನಿಯಮಗಳ ನಡುವೆ ಇಂದಿನ ಜಗತ್ತಿನಲ್ಲಿ ಮಾನವೀಯತೆ ಎಂಬುದು ಸಂಪೂರ್ಣವಾಗಿ ಮರೆಯಾಗುತ್ತಿದೆ ಎನ್ನುವವರೇ ಹೆಚ್ಚು. ಆದರೆ, ಇಲಾಖೆಯ ಕಠಿಣ ನಿಯಮಗಳ ಆಚೆಗೂ ಕರುಣೆಯುಳ್ಳ ಹೃದಯಗಳು ಇರುತ್ತವೆ ಎಂಬುದಕ್ಕೆ ನೆರೆರಾಜ್ಯ ಕೇರಳದಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆಯೇ ಸಾಕ್ಷಿ. ಸಾಲ ವಸೂಲಾತಿಗಾಗಿ ಬಡ ಕುಟುಂಬವೊಂದರ ಮನೆ ಜಪ್ತಿ ಮಾಡಲು ಹೋದ ಸರ್ಕಾರಿ ಬ್ಯಾಂಕ್ ಅಧಿಕಾರಿಯೊಬ್ಬರು, ಅಲ್ಲಿನ ಕಡು ಬಡತನ ಕಂಡು ಮನಕರಗಿ ತಾವೇ ಸಂಪೂರ್ಣ ಸಾಲ ತೀರಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ನಿವೃತ್ತಿಯ ದಿನದಂದೇ ಆ ಬಡ ಕುಟುಂಬಕ್ಕೆ ಮನೆಯ ಮೂಲ ದಾಖಲೆಗಳನ್ನು ಹಸ್ತಾಂತರಿಸಿ ರಿಯಲ್ ಹೀರೋ ಆಗಿ ಹೊರಹೊಮ್ಮಿದ್ದಾರೆ!
ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಕಾರ, ಈ ಮನ ಮಿಡಿಯುವ ಘಟನೆ ನಡೆದಿರುವುದು ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ. ಕೊಯಿಲಾಂಡಿ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ನ ರಿಕವರಿ ಆಫೀಸರ್ ಆಗಿದ್ದ ಮರ್ಸಿ ಚೆರಿಯಾನ್ ಅವರೇ ಈ ಕಥೆಯ ಕರುಣಾಮಯಿ ಅಧಿಕಾರಿ.
ಮನೆ ಹರಾಜು ಹಾಕಲು ಬಂದಿತ್ತು ಕೋರ್ಟ್ ಆದೇಶ!
ಪುತ್ತೂರ್ವಟ್ಟಂ ನಿವಾಸಿಗಳಾದ ಜಾನು ಮತ್ತು ಅವರ ಮಗಳು ಪ್ರಮೀಳಾ ಎಂಬುವವರೇ ಈ ಮಾನವೀಯತೆಯ ಲಾಭ ಪಡೆದ ದುರ್ದೈವಿಗಳು. ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಈ ತಾಯಿ-ಮಗಳು ಅನಿವಾರ್ಯವಾಗಿ ತಮ್ಮ ಪುಟ್ಟ ಮನೆಯನ್ನು ಅಡವಿಟ್ಟು 75,000 ರೂಪಾಯಿ ಸಾಲ ಪಡೆದಿದ್ದರು. ಆದರೆ, ಕಡು ಬಡತನದ ಕಾರಣದಿಂದ ಅವರಿಗೆ ಸಾಲದ ಕಂತುಗಳನ್ನು ಸರಿಯಾಗಿ ಕಟ್ಟಲು ಸಾಧ್ಯವಾಗಲೇ ಇಲ್ಲ. ನಿಯಮಗಳ ಪ್ರಕಾರ ಬ್ಯಾಂಕ್, ಸಾಲ ವಸೂಲಾತಿಗಾಗಿ ಕಾನೂನು ಕ್ರಮಕ್ಕೆ ಮುಂದಾಗಿ ಮನೆಯನ್ನು ಹರಾಜು ಹಾಕಲು ನಿರ್ಧರಿಸಿತು.
ಜಪ್ತಿ ಮಾಡಲು ಹೋದ ಅಧಿಕಾರಿಯ ಮನ ಕರಗಿದ ಕ್ಷಣ!
ಬಾಕಿ ಉಳಿದಿದ್ದ ಸಾಲಕ್ಕಾಗಿ ಈ ಜಾಗವನ್ನು ಅಳತೆ ಮಾಡಿ, ಜಪ್ತಿ ಪ್ರಕ್ರಿಯೆ ನಡೆಸುವ ಅಧಿಕೃತ ಜವಾಬ್ದಾರಿಯನ್ನು ಬ್ಯಾಂಕ್ ಅಧಿಕಾರಿ ಮರ್ಸಿ ಚೆರಿಯಾನ್ ಅವರಿಗೆ ವಹಿಸಲಾಗಿತ್ತು. ಕರ್ತವ್ಯದ ಭಾಗವಾಗಿ ಜಾನು ಅವರ ಮನೆಗೆ ಭೇಟಿ ನೀಡಿದ ಮರ್ಸಿಗೆ, ಅಲ್ಲಿನ ಕಷ್ಟದ ಪರಿಸ್ಥಿತಿ ಮತ್ತು ತಾಯಿ-ಮಗಳ ಅಸಹಾಯಕತೆ ಕಂಡು ಕಣ್ಣಾಲಿಗಳು ತುಂಬಿ ಬಂದವು. ಆ ಬಡ ಕುಟುಂಬವನ್ನು ಬೀದಿಗೆ ತಳ್ಳಲು ಅವರ ಮನಸ್ಸು ಒಪ್ಪಲಿಲ್ಲ. ತಕ್ಷಣವೇ ಅವರು ಒಂದು ದಿಟ್ಟ ನಿರ್ಧಾರ ಮಾಡಿದರು; ಆ ಸಾಲದ ಜವಾಬ್ದಾರಿಯನ್ನು ಬ್ಯಾಂಕ್ ಅಧಿಕಾರಿಯಾಗಿ ಅಲ್ಲ, ಒಬ್ಬ ಮನುಷ್ಯಳಾಗಿ ತಾವೇ ಹೊತ್ತುಕೊಳ್ಳಲು ನಿರ್ಧರಿಸಿದರು.
ಸ್ವಂತ ಹಣದಲ್ಲೇ 4 ವರ್ಷ ಸಾಲ ಕಟ್ಟಿದ ‘ಮರ್ಸಿ’
ಕಳೆದ 2022ರಲ್ಲಿ, 80,000 ರೂಪಾಯಿಗೆ ಆ ಸಾಲವನ್ನು ನವೀಕರಿಸಿದ ಮರ್ಸಿ ಚೆರಿಯಾನ್, ಅಂದಿನಿಂದ ಕಳೆದ ನಾಲ್ಕು ವರ್ಷಗಳಿಂದ ಪ್ರತಿ ತಿಂಗಳು ತಮ್ಮ ಸ್ವಂತ ಸಂಬಳದ ಹಣದಿಂದ 1,500 ರೂಪಾಯಿಗಳ ಕಂತನ್ನು ಬ್ಯಾಂಕ್ಗೆ ಪಾವತಿಸುತ್ತಾ ಬಂದರು. ಇತ್ತೀಚೆಗೆ ಅವರ ನಿವೃತ್ತಿಯ ದಿನ ಹತ್ತಿರ ಬಂದಾಗ, ಇನ್ನು ಮುಂದೆ ಕಂತು ಪಾವತಿ ವಿಳಂಬವಾಗಬಾರದು ಎಂದು ಯೋಚಿಸಿದ ಮರ್ಸಿ, ಬಾಕಿ ಉಳಿದಿದ್ದ ಇಡೀ 41,000 ರೂಪಾಯಿಗಳನ್ನು ಒಂದೇ ಬಾರಿಗೆ ಪಾವತಿಸಿ ಸಾಲವನ್ನು ಸಂಪೂರ್ಣವಾಗಿ ಚುಕ್ತಾ ಮಾಡಿದರು.
ನಿವೃತ್ತಿಯ ದಿನದಂದು ಕಣ್ಣೀರು ತರಿಸಿದ ಆ ಒಂದು ಗಿಫ್ಟ್!
ಬಾಕಿ ಹಣವನ್ನೆಲ್ಲಾ ಪಾವತಿಸಿದ ಮರ್ಸಿ, ಆ ಕುಟುಂಬದ ಮನೆಯ ಮೂಲ ಪತ್ರಗಳನ್ನು (ರಜಿಸ್ಟರ್ಡ್ ಡಾಕ್ಯುಮೆಂಟ್ಸ್) ಬ್ಯಾಂಕ್ನಿಂದ ಬಿಡಿಸಿ ತಂದು ತಾವೇ ಇಟ್ಟುಕೊಂಡಿದ್ದರು. ಇತ್ತೀಚೆಗೆ ತಮ್ಮ ಅಧಿಕೃತ ಸೇವೆಯ ಕೊನೆಯ ದಿನ, ಮರ್ಸಿ ಚೆರಿಯಾನ್ ಅವರು ಬ್ಯಾಂಕ್ನಿಂದ ಬೀಳ್ಕೊಡುಗೆ ಪಡೆಯುವ ಭಾವುಕ ಕ್ಷಣದಲ್ಲಿ ಜಾನು ಮತ್ತು ಪ್ರಮೀಳಾ ಕಣ್ಣೀರು ತುಂಬಿದ ಕಣ್ಣುಗಳೊಂದಿಗೆ ವೇದಿಕೆಗೆ ಬಂದಿದ್ದರು. ಆ ವೇಳೆ ಮರ್ಸಿ ಚೆರಿಯಾನ್ ಅವರು ಇಡೀ ಬ್ಯಾಂಕ್ ಸಿಬ್ಬಂದಿಯ ಎದುರೇ ಆ ಬಡ ಕುಟುಂಬಕ್ಕೆ ಅವರ ಮನೆಯ ಮೂಲ ದಾಖಲೆಗಳನ್ನು ಕೈಗಿಟ್ಟರು.
ಕೇವಲ ಕಾನೂನು ಪಾಲಿಸದೆ, ಮಾನವೀಯತೆಯನ್ನು ಎತ್ತಿಹಿಡಿದ ಮರ್ಸಿ ಚೆರಿಯಾನ್ ಅವರ ಈ ಅಪರೂಪದ ಕಾರ್ಯಕ್ಕೆ ಬ್ಯಾಂಕ್ ಸಿಬ್ಬಂದಿ ಮಾತ್ರವಲ್ಲದೆ, ಇಡೀ ದೇಶವೇ ಈಗ ತಲೆಬಾಗಿ ಸಲಾಂ ಎನ್ನುತ್ತಿದೆ.(ಸಂಗ್ರಹ ಸೋಷಿಯಲ್ ಮೀಡಿಯಾ)





